More

    ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವೆ

    ವಿಜಯಪುರ: ನಮ್ಮ ಸಮಾಜದ ಹಿರಿಯರು ದೇಶದ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದವರ‌್ಯಾರೂ ಅತ್ಯುತ್ತಮ ಆಡಳಿತ ನೀಡುವ ಜೊತೆಗೆ ಹಲವಾರು ಸಮಾಜಮುಖಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

    ಬಬಲೇಶ್ವರ ತಾಲೂಕಿನ ಕೃಷ್ಣಾ ನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆ.ಎಚ್. ಪಾಟೀಲ ಮೆಮೋರಿಯಲ್ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘದ ತಾಲೂಕು ಘಟಕ ಬಬಲೇಶ್ವರ ಹಾಗೂ ಬೀಳಗಿ ತಾಲೂಕು ಘಟಕದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆ ಬಣಜಿಗ ಸಮಾಜ ಸಂಘಟನಾ ಸಮಾವೇಶ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾ ಪುರಸ್ಕಾರ ಮತ್ತು ಬಣಜಿಗ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ನಾವೆಲ್ಲರೂ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಜೊತೆಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ಅದನ್ನು ನಿಭಾಯಿಸುವ ಶಕ್ತಿ ನಮ್ಮ ಸಮಾಜದವರಿಗಿದೆ. ನಮ್ಮ ತಂದೆಯವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಹಾಗೆಯೇ ನಾನೂ ಮಾಡುವೆ ಎಂದು ಹೇಳಿದರು.

    ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಎಲ್ಲಾ ಜನಾಂಗದವರಿ ದೀನ-ದಲಿತ, ಬಡವ-ಬಲ್ಲಿದ ಭೇದಭಾವ ಮಾಡದೆ ಎಲ್ಲರನ್ನೂ ಒಗ್ಗೂಡಿಸಿ ಆಡಳಿತ ಯಾವ ರೀತಿ ನಡೆಸಬೇಕು ಎಂಬುದನ್ನು ‘ಪ್ರಥಮ ಪಾರ್ಲಿಮೆಂಟ್’ ಮಾಡಿ ತೋರಿಸಿದವರು. ನನಗೆ ದೊರೆತ ಅಧಿಕಾರದ ಅವಧಿಯಲ್ಲಿ ಸಮಾಜ ಹಾಗೂ ನಾಡಿಗೆ ಹತ್ತು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದರು.

    ರಾಮದುರ್ಗ ಶಾಸಕ, ವಿಧಾಸಭೆ ಮುಖ್ಯ ಸಚೇತನ ಅಶೋಕ ಪಟ್ಟಣ ಮಾತನಾಡಿ, ಹಣ ಗಳಿಸುವುದಕ್ಕಿಂತ ಗುಣವಂತರಾಗಿ ಬದುಕಬೇಕು. ದುಡಿದ ಹಣವನ್ನು ಸಮಾಜ ಕಾರ್ಯಗಳಿಗೆ ಬಳಕೆ ಮಾಡಿದರೆ ಶರಣರಂತೆ ಆನಂದದಿಂದ ಬದುಕು ಸಾಗಿಸಬಹುದು ಎಂದು ಹೇಳಿದರು.

    ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಎಂ.ಕೆ. ಪಟ್ಟಣಶೆಟ್ಟಿ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಗುರುಲಿಂಗಪ್ಪ ಅಂಗಡಿ ಮಾತನಾಡಿದರು.

    ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ನಿರ್ದೇಶಕ ಉಮೇಶ ಮಲ್ಲನ್ನವರ, ಬಿಜೆಪಿ ಮುಖಂಡ ಆನಂದ ಇಂಗಳಗಾವಿ, ಕಾಖಂಡಕಿ ಹಿರಿಯರಾದ ಈಶ್ವರಪ್ಪ ಕೋರಿ. ಶಿಕ್ಷಣ ಪ್ರೇಮಿ ಬಸವರಾಜ ಖೋತ, ಶಿವಾನಂದ ಉದಪುಡಿ, ಅಂದಪ್ಪ ಜವಳಿ, ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ, ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ಶರಣಪ್ಪ ಗುಳೇದ, ವೀರಣ್ಣ ಮಳಗಿ, ಅಶೋಕ ವಾರದ ವೇದಿಕೆಯಲ್ಲಿದ್ದರು.

    ಬಣಜಿಗ ರತ್ನ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿಗಳಾದ ರಾಜು ಬಿಜ್ಜರಗಿ, ಗುರುರಾಜ ಉದಪುಡಿ, ಸುರೇಶ ಬಾಗೇವಾಡಿ, ಶರತ್ ರೂಢಗಿ, ನಾಗಪ್ಪ ಗುರುಬಸಪ್ಪ ಬಿದರಿ, ರವಿ ಕುಚನೂರ ಅವರನ್ನು ಸತ್ಕರಿಸಿ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಉದ್ಯಮಿಗಳು, ಅವಳಿ ಜಿಲ್ಲೆಯ ಸಮಾಜ ಬಾಂಧವರು, ವಿವಿಧ ತಾಲೂಕಿನ ಅಧ್ಯಕ್ಷರು ನಿರ್ದೇಶಕರು, ಪದಾಧಿಕಾರಿಗಳು ಇದ್ದರು. ಅಶೋಕ ತಿಮಶೆಟ್ಟಿ ಸ್ವಾಗತಿಸಿದರು. ಬಸವರಾಜ ಮಂಟೂರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts