More

    ವಿವೇಕ ವಾಣಿಯಂತೆ ನಡೆಯಿರಿ

    ಜಮಖಂಡಿ(ಗ್ರಾ): ಸ್ವಾಮಿ ವಿವೇಕಾನಂದರು ಹೇಳಿದಂತೆ ನಾವೆಲ್ಲರೂ ಭೂತ, ಪಿಶಾಚಿಗಳೆಂಬ ಅಜ್ಞಾನದ ವಿಷಯಕ್ಕೆ ಕಿವಿಗೊಡದೆ ಸಾಧನೆ ಮಾಡುವ ಕೌಶಲವನ್ನು ಬೆಳೆಸಿಕೊಳ್ಳೋಣ ಎಂದು ಜಮಖಂಡಿ ವಿವೇಕಾನಂದ ಆಶ್ರಮದ ಸ್ವಾಮಿ ಗಿರಿಜೇಶಾನಂದ ಮಹಾರಾಜರು ಹೇಳಿದರು.

    ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕ ಮಂಡಳಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿ, ಜೀವನದ ದೌರ್ಬಲ್ಯವೇ ಮರಣ. ಏಳಿ, ಎದ್ದೇಳಿ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿ, ಗುಲಾಮಗಿರಿಯನ್ನು ತೊಲಗಿಸೋಣ ಎಂಬ ವಿವೇಕಾನಂದರ ವಾಣಿಯಂತೆ ನಡೆದುಕೊಳ್ಳುವಂತೆ ಯುವಕರಿಗೆ ಸಲಹೆ ನೀಡಿದರು.

    ಶಿವಪುತ್ರಯ್ಯ ಸಿದ್ಧಗಿರಿಮಠ ಸಾನ್ನಿಧ್ಯ ವಹಿಸಿದ್ದರು. ವಿಶ್ವನಾಥ ಕೊಣ್ಣೂರಮಠ ಶಾಸ್ತ್ರಿಗಳು ಧ್ವಜಾರೋಹಣ ನೆರವೇರಿಸಿದರು. ಉದ್ಯಮಿ ಚನ್ನಪ್ಪ ಬಿರಾದಾರ, ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ, ಪಿಎಚ್.ಡಿ ಪದವೀಧರೆ ಚನಾಳ, ಹಿರಿಯ ಸಾಹಿತಿ ವಸಂತ ಅಗಸಿಮನಿ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು.

    ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಜನವಾಡ, ಗ್ರಾಮದ ಹಿರಿಯರಾದ ಬಸವಂತಪ್ಪ ಹನಗಂಡಿ, ಚಂದ್ರಶೇಖರ ಸಾವಳಗಿ, ಮಲ್ಲಪ್ಪ ಸಾವಳಗಿ, ಧರೆಪ್ಪ ತೇಲಿ, ಶ್ರೀಶೈಲ ತೇಲಿ, ನಿಂಗಪ್ಪ ಘಟ್ನಟ್ಟಿ ಇತರರಿದ್ದರು.

    ಬನಶಂಕರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ಪ್ರಾರ್ಥಿಸಿ, ಸ್ವಾಗತ ಗೀತೆ ಹಾಡಿದರು. ಹಾರ್ಮೋನಿಯಂ ಕಲಾವಿದ ಶಿವಾಜಿ ಜಾಧವ, ತಬಲಾ ವಾದಕ ಮಲ್ಲಪ್ಪ ನಾವಿ ಹಾಗೂ ಚುಟುಕು ಸಾಹಿತಿ ಕೆ.ಆರ್.ಮಹಾಲಿಂಗ ಅವರು ಸಂಗೀತ ಸೇವೆ ಸಲ್ಲಿಸಿದರು.

    ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮದ ಸಾಧಕರನ್ನು ಸನ್ಮಾನಿಸಲಾಯಿತು. ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಉಪನ್ಯಾಸಕ ಮುರಿಗೆಪ್ಪ ಅಥಣಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸಿ.ಕೆ.ಚನಾಳ ಅವರು ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts