More

    ಬಾಳೆ ಗ್ರಾಮಪಂಚಾಯಿತಿಯ ವಗ್ಗಡೆ ಕ್ಷೇತ್ರದ ಫಲಿತಾಂಶ ಇತ್ಯರ್ಥ 24ಕ್ಕೆ

    ಎನ್.ಆರ್.ಪುರ: ಹೈಕೋರ್ಟ್ ಮೆಟ್ಟಿಲೇರಿದ್ದ ಬಾಳೆ ಗ್ರಾಪಂನ ವಗ್ಗಡೆ ಕ್ಷೇತ್ರದ ಫಲಿತಾಂಶ ಪ್ರಕಟಣೆಗೆ ಜು.24ರಂದು ದಿನಾಂಕ ನಿಗದಿಪಡಿಸಿ ಎನ್.ಆರ್.ಪುರ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದೆ.
    ಬಾಳೆ ಗ್ರಾಪಂಗೆ ನಡೆದ ಚುನಾವಣೆಯಲ್ಲಿ ವಗ್ಗಡೆ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಲಾವತಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತ್ನಮ್ಮ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಕಲಾವತಿ 187 ಹಾಗೂ ರತ್ನಮ್ಮ 186 ಮತ ಪಡೆದಿದ್ದರು. ಒಂದು ಮತ ಅಧಿಕ ಪಡೆದ ಕಲಾವತಿ ಅವರನ್ನು ಜಯಶಾಲಿ ಎಂದು ಘೋಷಿಸಲಾಗಿತ್ತು. ನಂತರ ರತ್ನಮ್ಮ ಅವರು ಮರು ಎಣಿಕೆಗಾಗಿ ಎನ್.ಆರ್.ಪುರದ ಹಿರಿಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.
    ವಿಚಾರಣೆ ನಡೆದು ನ್ಯಾಯಾಲಯದಲ್ಲೇ ಮರು ಎಣಿಕೆ ನಡೆಯಿತು. ಆಗ ಕಲಾವತಿ ಹಾಗೂ ರತ್ನಮ್ಮ ಇಬ್ಬರೂ 186 ಮತ ಪಡೆದು ಸಮಬಲ ಸಾಧಿಸಿದರು. ನ್ಯಾಯಾಲಯ ಕಲಾವತಿ ಅವರ ಸದಸ್ಯತ್ವವನ್ನು ಅಸಿಂಧು ಎಂದು ಘೋಷಿಸಿತು. ಈ ಆದೇಶದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ನಿಗದಿಗೊಳಿಸಿ ಚುನಾವಣೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ವಗ್ಗಡೆ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಡಿಸಿತು.
    ಕಲಾವತಿ ಎನ್.ಆರ್.ಪುರ ಹಿರಿಯ ಸಿವಿಲ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು. ಇದರಿಂದ ಉಚ್ಚ ನ್ಯಾಯಾಲಯ ಜು.12ರಂದು ಆದೇಶ ಹೊರಡಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ 1993ರ ಕಲಂ 21ರನ್ವಯ ಫಲಿತಾಂಶ ಘೋಷಿಸುವಂತೆ ಆದೇಶಿಸಿದೆ. ಇದಕ್ಕೆ ಎನ್.ಆರ್.ಪುರ ಹಿರಿಯ ಸಿವಿಲ್ ನ್ಯಾಯಾಲಯವು ಜು.24ರ ಬೆಳಗ್ಗೆ 11 ಗಂಟೆಗೆ ನಿಗದಿಪಡಿಸಿದೆ.
    ವಗ್ಗಡೆ ಕ್ಷೇತ್ರದ ಉಪ ಚುನಾವಣೆಯ ಮುಂದಿನ ಪ್ರಕ್ರಿಯೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ. ಮತ್ತು ಕ್ಷೇತ್ರದ ಉಪಚುನಾವಣೆ ಮುಂದುವರಿಸದಂತೆ ಹಾಗೂ ಜು.15, 2023ರವರೆಗೆ ನಡೆದಿರುವ ಉಪಚುನಾವಣಾ ಪ್ರಕ್ರಿಯೆಗೆ ಸಂಬಂಧಪಟ್ಟ ದಾಖಲೆಗಳನ್ನು ಮುಂದಿನ ಆದೇಶದವರೆಗೆ ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಿಡುವಂತೆ ಬಾಳೆ ಗ್ರಾಪಂ ಚುನಾವಣಾಧಿಕಾರಿಗೆ ಆದೇಶ ಹೊರಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts