More

    ಅಮೃತಧಾರೆ: ವ್ಯಸನಗಳಿಂದ ನಿಜಕ್ಕೂ ಮುಕ್ತಿಯೇ ಇಲ್ಲವೇ?

    ಅಮೃತಧಾರೆ: ವ್ಯಸನಗಳಿಂದ ನಿಜಕ್ಕೂ ಮುಕ್ತಿಯೇ ಇಲ್ಲವೇ?ಭಾರತದ ಗ್ರಂಥಗಳು ಮಾತ್ರ ಪರಮಾನಂದದ ಕುರಿತು ಉಲ್ಲೇಖಿಸಿವೆ. ಪ್ರಪಂಚದಲ್ಲಿರುವ ಬೇರೆ ಯಾವುದೇ ಧರ್ಮ ಆನಂದವನ್ನು ಕುರಿತು ಹೇಳುವುದಿಲ್ಲ. ಧರ್ಮಗಳು ಪಾಪದ ಕುರಿತು ಹೇಳುತ್ತವೆ, ಭಯ, ತಪ್ಪು, ಶಿಕ್ಷೆಗಳ ಕುರಿತು ಹೇಳುತ್ತವೆ. ಆದರೆ ಬೇರೆ ಯಾವುದೇ ಧರ್ಮ ಪರಮಾನಂದದ ಕುರಿತು ಉಲ್ಲೇಖಿಸುವುದಿಲ್ಲ.ಅದು ಯಾವ ರೀತಿಯ ವ್ಯಸನಿಗಳ ಬಗ್ಗೆ ಮಾತನಾಡುತ್ತಿದ್ದೀರೋ ಅದರ ಮೇಲೆ ಅವಲಂಬಿಸಿದೆ.

    ಕೆಲವರಿಗೆ ಆಹಾರದ ಗೀಳು, ಕೆಲವರಿಗೆ ಮಾದಕ ದ್ರವ್ಯಗಳ ಗೀಳು, ಮದ್ಯ, ಲೈಂಗಿಕತೆ ಗೀಳು, ವೇದನೆಯ ಗೀಳು, ಗೊಡ್ಡು ಹರಟೆಯ ಚಟ- ವಿವಿಧ ವಿಷಯಗಳ ಕುರಿತು ಬಹಳಷ್ಟು ವಿವಶತೆಯಿಂದ ಕೂಡಿದ ವರ್ತನೆಗಳು; ಉದಾಹರಣೆಗೆ ಕಾಡುಹರಟೆಯನ್ನೇ ತೆಗೆದುಕೊಳ್ಳೋಣ- ಅವರನ್ನು ಸುಧಾರಿಸ ಲಾಗುತ್ತದೆಯೇ? ಕೇವಲ ವಿಷಯವನ್ನು ಬದಲಾಯಿಸುವಂತೆ ಮಾಡಬಹುದಷ್ಟೆ. ಅವರ ಹರಟೆ ಒಂದು ರೀತಿಯಲ್ಲಿ ಬೇರೆಯವರಿಗೆ ನೋವಾಗುವಂತಿದ್ದರೆ, ಉಪಯೋಗವಾಗುವಂತಹ ವಿಷಯದ ಕುರಿತು ಮಾತನಾಡುವಂತೆ ಮಾಡಬಹುದು. ಆದ್ದರಿಂದ ಈ ಚಟಗಳು ಒಂದು ರೋಗವೇ? ವಿವಶತೆಯಿಂದ ಕೂಡಿದ ಯಾವುದೇ ಸ್ಥಿತಿ ನಿಮ್ಮಿಂದ ಶಾಂತತೆಯನ್ನು ಕಿತ್ತುಕೊಳ್ಳಬಹುದು- ಆ ಅರ್ಥದಲ್ಲಿ ಅದೊಂದು ಕಾಯಿಲೆಯಾಗುತ್ತದೆ.

    ಅದು ಶಾಶ್ವತವೇ? ಅಲ್ಲ. ಇದೊಂದು ವೈಯಕ್ತಿಕ ಅವ್ಯವಸ್ಥೆ: ವ್ಯಸನವು ಒಂದು ಶಾಶ್ವತವಾದ ರೋಗವೆಂದು ಹೇಳಿ ಅದಕ್ಕೆ ಚಿಕಿತ್ಸೆ ಕೊಡುವ ಜನರೇ ಒಂದು ರೀತಿಯ ಚಟದ ಸ್ಥಿತಿಯಲ್ಲಿರುತ್ತಾರೆ- ಅವರು ಕೆಲಸವೊಂದನ್ನು ಇದೇ ರೀತಿಯಲ್ಲಿ ಮಾಡಬೇಕೆಂಬ ವಿವಶತೆಯಲ್ಲಿರುತ್ತಾರೆ. ಪ್ರತಿಯೊಬ್ಬ ವ್ಯಕ್ತಿ, ಅವನದೇ ರೀತಿಯಲ್ಲಿ ಈ ಅವ್ಯವಸ್ಥೆಯೊಳಗೆ ಸಿಲುಕಿಕೊಂಡಿದ್ದಾನೆ. ಸ್ವಲ್ಪ ಮಟ್ಟಿಗೆ ಮಾತ್ರ ಒಂದು ಸಾಮಾನ್ಯವಾದ ಚಿಕಿತ್ಸೆ ಇರಬಹುದು,

    ಆದರೆ ಸಂಪೂರ್ಣವಾಗಿ ಅಲ್ಲ. ಪ್ರತಿಯೊಬ್ಬ ವ್ಯಕ್ತಿಯನ್ನು ಪರೀಕ್ಷಿಸಿ ಅವರ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಪ್ರತ್ಯೇಕವಾಗಿ ಅವರ ಅಗತ್ಯತೆಗೆ ಅನುಸಾರವಾಗಿ ಗಮನ ಕೊಡುವಷ್ಟು ವ್ಯವಧಾನವಾಗಲಿ, ಆಸ್ಥೆಯಾಗಲಿ ನಮಗೆ ಇದೆಯೇ? ಅದನ್ನು ಪರಿಶೀಲಿಸಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಯಾವಾಗಲೂ ಯಾವುದಾದರೂ ಸಮಸ್ಯೆಯ ಸನ್ನಿವೇಶಗಳಿಗೆ ಸಿಲುಕಿಕೊಂಡು, ಬೇರೆಯವರು ತಮಗೆ ಚಿಕಿತ್ಸೆ ನೀಡಬೇಕೆನ್ನುವುದು ಜನರ ಹಕ್ಕೇ? ಇದರ ಕುರಿತೂ ಗಮನಹರಿಸಬೇಕು. ಅಮೆರಿಕದ ಬಹುತೇಕ ಜನರು ತಾವು ಅವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ತಮ್ಮ ಹಕ್ಕೆಂದೇ ಭಾವಿಸಿಕೊಂಡು, ಸರ್ಕಾರ ಅದನ್ನು ಸರಿಪಡಿಸಬೇಕೆಂದು ಎದುರು ನೋಡುತ್ತಾರೆ. ಜನರು ತಮ್ಮ ಯೋಗಕ್ಷೇಮದ ಕುರಿತು ತಾವೇ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ, ಈ ಭೂಮಿ ಮೇಲಾಗಲಿ ಅಥವಾ ಸ್ವರ್ಗದಲ್ಲಾಗಲಿ ಅದನ್ನು ಸರಿಪಡಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ.ಮಾದಕ ವ್ಯಸನ: ಅವರ ಬದುಕಿಗೆ ಅವರೇ ಜವಾಬ್ದಾರಿ ತೆಗೆದುಕೊಳ್ಳುವ ಈ ‘ಜವಾಬ್ದಾರಿ ಪ್ರಜ್ಞೆ’ಯನ್ನು ಸ್ಥಾಪಿಸಿ, ಅವರಿಗೆ ಮಾದಕ ವ್ಯಸನಕ್ಕಿಂತ ಉತ್ತಮವಾದ ಆಯ್ಕೆ ತೋರಿಸಿಕೊಡುವುದು ಬಹಳ ಮುಖ್ಯ. ಇಲ್ಲದಿದ್ದಲ್ಲಿ ಅವರನ್ನು ಮದ್ಯ ಮತ್ತು ಮಾದಕ ದ್ರವ್ಯಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ. ಈಗ ಅವರ ಬದುಕಿನಲ್ಲಿ ಇದೊಂದು ಮಹತ್ತಾದ ಅನುಭವವಾಗಿರುತ್ತದೆ.

    ಅವರು ಆ ಅಭ್ಯಾಸವನ್ನು ಬಿಡುವುದಿಲ್ಲ, ಏಕೆಂದರೆ ಅವರಿಗೆ ಯಾವುದೋ ಮತೀಯ ಪರಿಹಾರವನ್ನೋ ಅಥವಾ ಇನ್ನೇನೋ ಹೇಳುವಿರಿ. ಅವರಿಗೆ ಯಾವುದಾದರೂ ಉತ್ತಮವಾದುದನ್ನು ತೋರಿಸಬೇಕು. ಜನರಿಗೆ ಈ ಹಿಂದೆ ತಿಳಿದಿದುಕ್ಕಿಂತಲೂ ಶ್ರೇಷ್ಠ ಅನುಭವದ ಕಡೆ ಬರುವ ಮಾರ್ಗ ತೋರಿಸಿದರೆ, ಅವರು ಈ ಅವಿವೇಕವನ್ನು ತ್ಯಜಿಸುತ್ತಾರೆ. ನೀವು ನನ್ನ ಕಣ್ಣುಗಳನ್ನು ನೋಡಿ, ‘ನಾನು ನನ್ನ ಜೀವನದಲ್ಲಿ ಎಂದಿಗೂ ಯಾವುದೇ ಮಾದಕ ವಸ್ತುಗಳನ್ನು ಸೇವಿಸದಿದ್ದರೂ, ನಾನು ಅಮಲೇರಿದವನಂತಿರುತ್ತೇನೆ’. ಎಲ್ಲರೂ ಇದೇ ರೀತಿ ಯಾವಾಗಲೂ ಮತ್ತೇರಿದವರಂತೆ ಇರಬಹುದು. ಇದಕ್ಕೆ ಯಾವ ಬೆಲೆಯನ್ನೂ ತೆರಬೇಕಾಗಿಲ್ಲ- ಹಣ ಅಥವಾ ಆರೋಗ್ಯವನ್ನಾಗಲಿ ವ್ಯಯ ಮಾಡಬೇಕಾಗಿಲ್ಲ. ಬೇಕಾದರೆ ಜಾಗೃತರಾಗಿ ಕೂಡ ಇರಬಹುದು, ಎಷ್ಟು ಜಾಗೃತವಾಗಿ ಎಂದರೆ, ಕೆಲ ದಿನಗಳ ಕಾಲ ನಿದ್ದೆ ಮಾಡುವ ಅವಶ್ಯಕತೆಯೂ ಇಲ್ಲದಷ್ಟು.ಜನರಿಗೆ ಯಾವುದಾದರೂ ಉತ್ಕೃಷ್ಟವಾದುದನ್ನು ಕಲಿಸದಿದ್ದರೆ, ಕಲಿತ ದುರಭ್ಯಾಸವನ್ನು ಅವರು ಬಿಡುವುದಿಲ್ಲ. ಅದು ಅವರ ಶರೀರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದರೂ, ದಿನ ಪೂರ್ತಿ ಕೆಲಸ ಮಾಡಿ, ಮನೆಗೆ ಹಿಂದಿರುಗಿ, ಆಹಾರ ಸೇವಿಸಿ, ಮಲಗಿ ಮತ್ತೆ ಕೆಲಸಕ್ಕೆ ಹೋಗುವ ಜನರಿಗಿಂತಲೂ, ಅವರಿಗೇ ಹೆಚ್ಚು ಅನುಭವವಿರುವಂತೆ ಭಾವಿಸುವರು. ಅವರು ಇದೆಲ್ಲ ಅವಿವೇಕತನದಿಂದ ಮಾಡುತ್ತಾರೆ ಮತ್ತು ತಾವು ಮಾಡುತ್ತಿರುವುದೇ ಉತ್ತಮ ಎಂದು ಭಾವಿಸುವರು.

    ಅವರು ನಿಸ್ಸಹಾಯಕರಾದಾಗ, ದುರ್ಬಲಗೊಂಡಾಗ, ನೀವು ಅವರನ್ನು ಕೀಳಾಗಿ ಕಾಣಬಹುದು. ಆದರೆ ಅವರು ಮತ್ತಿನಲ್ಲಿರುವಾಗ, ನಿಮ್ಮನ್ನು ಅವರು ಕೀಳಾಗಿ ಕಾಣುತ್ತಾರೆ. ತಮ್ಮ ಸುತ್ತಲೂ ದೊರಕುವ ಬೇರೆಯದಕ್ಕಿಂತಲೂ ಇದು ಉತ್ತಮವೆಂದು ಅವರು ಯೋಚಿಸದೇ ಇದ್ದಲ್ಲಿ, ಅವರು ಹಾಗೆ ಮಾಡುತ್ತಿರಲಿಲ್ಲ. ಅವರ ದೃಷ್ಟಿಯಲ್ಲಿ ಅದು ಸರಿಯಾಗಿದೆ. ಪರಿಸ್ಥಿತಿಗಳು ಕೆಟ್ಟಾಗ, ಶರೀರಕ್ಕೆ ಹಾನಿಯುಂಟಾದಾಗ, ಅವರು ನಿಮ್ಮ ಬಳಿ ಬರುತ್ತಾರೆ.ಯಾರಾದರೂ, ‘ಇಂತಹ ಮಾದಕ ದ್ರವ್ಯ ಶರೀರಕ್ಕೆ ಹೆಚ್ಚು ಹಾನಿಕರವಲ್ಲ. ಆದರೆ, ಅದು ಎಲ್ಲ ಸಮಯದಲ್ಲಿಯೂ ನಿಮ್ಮನ್ನು ಒಂದು ಭ್ರಮೆಯ ಸ್ಥಿತಿಯಲ್ಲಿರಿಸುತ್ತದೆ’ ಎಂದು ಹೇಳಿದರೆ, ಇಡೀ ಜನಸಮೂಹವೇ ಅದರ ಹಿಂದೆ ಹೋಗುತ್ತದೆ. ಮಾನವ ಸಮಾಜವು, ‘ಬದುಕಿನ ಅನುಭವವು ಜನರಿಗೆ ಅಮೂಲ್ಯವಾದುದು’ ಎಂದು ತಿಳಿಸುವಲ್ಲಿ ಒಂದು ರೀತಿಯಾಗಿ ಸೋತಿದೆ, ಆದ್ದರಿಂದ ಅವರು ಏನನ್ನೋ ಹೊಂದಲು ಎಲ್ಲ ರೀತಿಯ ಅಡ್ಡ ಹಾದಿಗಳನ್ನು ಹಿಡಿಯುತ್ತಿದ್ದಾರೆ. ನಾವು ಅವರಿಗೆ ಮಾದಕ ದ್ಯವ್ಯಗಳಿಗಿಂತಲೂ ಶಕ್ತಿಯುತವಾದ ಮತ್ತೇನನ್ನಾದರೂ ಒದಗಿಸಬೇಕು, ಆಗ ಅದು ಪ್ರತಿಯೊಬ್ಬರನ್ನು ಯೋಗಕ್ಷೇಮದ ಕಡೆಗೆ ಒಯ್ಯುತ್ತದೆ.ಮಿದುಳಿನಲ್ಲೊಂದು ಮಾದಕ ತೋಟ!: ಇತ್ತೀಚಿನ ಮಾನವನ ಮಿದುಳಿನ ಸಂಶೋಧನೆಗಳು ಕೆಲವು ಅಚ್ಚರಿ ಪಡಿಸುವಂಥ ಫಲಿತಾಂಶಗಳನ್ನು ಹೊರಗೆಡಹಿವೆ. ವಿಜ್ಞಾನಿಗಳು ಕಂಡುಕೊಂಡ ವಿಷಯವೆಂದರೆ ಮಾನವನ ಮಿದುಳಿನಲ್ಲಿ ಲಕ್ಷಾಂತರ ಗಾಂಜಾ ಗ್ರಾಹಕ (ಕೆನಾಬಿಸ್ ರಿಸೆಪ್ಟರ್ಸ್)ಗಳಿವೆ! ಮತ್ತು ದಿನದ ಬೇರೆ ಬೇರೆ ಸಮಯಗಳಲ್ಲಿ, ಶರೀರವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಿದುಳಿನ ರಾಸಾಯನಿಕ ಕ್ರಿಯೆಯಲ್ಲಿ ಏನಾಗುತ್ತದೆ ಎಂಬುದನ್ನು ಗಮನಿಸಿದಾಗ, ದೇಹವು ತನ್ನದೇ ಆದ ಮಾದಕ ದ್ರವ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಮಿದುಳಿನಲ್ಲಿರುವ ಗ್ರಾಹಕಗಳನ್ನು ತೃಪ್ತಿಗೊಳಿಸುತ್ತದೆ ಎಂಬುದನ್ನು ನರ ವಿಜ್ಞಾನಿಗಳನ್ನು ಕಂಡುಕೊಂಡರು. ಒಬ್ಬ ವ್ಯಕ್ತಿ ಪರಮಾನಂದದ ಸ್ಥಿತಿ ಅಥವಾ ಭಾವೋತ್ಕೃಷ್ಟ ಸ್ಥಿತಿಯಲ್ಲಿ ಇರುವಾಗ, ಅವನು ಈ ರಾಸಾಯನಿಕಗಳನ್ನು ಉತ್ಪಾದಿಸುತ್ತಾನೆ, ಇದಕ್ಕಾಗಿ ಮಿದುಳು ಸದಾ ಎದುರು ನೋಡುತ್ತಿರುತ್ತದೆ.

    ನಿಮ್ಮ ಮಿದುಳು ಸಹ ನೀವು ಆನಂದದ ಸ್ಥಿತಿಯಲ್ಲಿರುವುದಕ್ಕಾಗಿ ಕಾಯುತ್ತಿರುತ್ತದೆ- ಲಕ್ಷಾಂತರ ಗಾಂಜಾ ಗ್ರಾಹಕಗಳು ಅಲ್ಲಿ ಸ್ಥಿತವಾಗಿ ಕಾಯುತ್ತಿರುತ್ತವೆ-ಧೂಮಪಾನ ಅಥವಾ ಮದ್ಯಪಾನ ಅಥವಾ ಮಾದಕ ದ್ಯವ್ಯಗಳನ್ನು ಸೇವಿಸಲೆಂದಲ್ಲ, ಆದರೆ ನೀವು ಆನಂದದಿಂದ ಇರುವುದಕ್ಕಾಗಿ.ಗ್ರಾಹಕಗಳೆಡೆಗೆ ಹೋಗುವ ಈ ರಾಸಾಯನಿಕವನ್ನು ಕಂಡು ಹಿಡಿದಾಗ ಅದಕ್ಕೊಂದು ಹೆಸರಿರಲಿಲ್ಲ. ಹೊಸದಾಗಿ ಕಂಡುಕೊಂಡ ಈ ರಾಸಾಯನಿಕ ವಸ್ತುವಿಗೆ ವಿಜ್ಞಾನಿ ಯಾವುದೇ ಹೆಸರನ್ನು ಇಡುವ ಸ್ವಾತಂತ್ರ್ಯ ಹೊಂದಿದ್ದ. ಆದರೆ ಅದಕ್ಕೆ ನಿಜವಾಗಲೂ ಹೊಂದುವ ಹೆಸರನ್ನು ಇಡಲು ಇಚ್ಛಿಸಿದ. ಅವನು ಭಾರತದ ಪವಿತ್ರ ಗ್ರಂಥಗಳನ್ನು ಪರಿಶೀಲಿಸಿದಾಗ ಆಶ್ಚರ್ಯವೆಂಬಂತೆ ಭಾರತದ ಗ್ರಂಥಗಳು ಮಾತ್ರ ಪರಮಾನಂದದ ಕುರಿತು ಉಲ್ಲೇಖಿಸಿದ್ದವು. ಪ್ರಪಂಚದಲ್ಲಿರುವ ಬೇರೆ ಯಾವುದೇ ಧರ್ಮ ಆನಂದವನ್ನು ಕುರಿತು ಹೇಳುವುದಿಲ್ಲ. ಧರ್ಮಗಳು ಪಾಪದ ಕುರಿತು ಹೇಳುತ್ತವೆ, ಭಯ, ತಪು್ಪ, ಶಿಕ್ಷೆಗಳ ಕುರಿತು ಹೇಳುತ್ತವೆ. ಆದರೆ ಬೇರೆ ಯಾವುದೇ ಧರ್ಮ ಪರಮಾನಂದದ ಕುರಿತು ಉಲ್ಲೇಖಿಸುವುದಿಲ್ಲ. ಆದ್ದರಿಂದ ಈ ‘ರಾಸಾಯನಿಕ ವಸ್ತು’ವನ್ನು ‘ಆನಂದಮೈಡ್’ ಎಂದು ಹೆಸರಿಸಿದರು.

    ಆದ್ದರಿಂದ ನಾವೆಲ್ಲರೂ ಮಾಡಬೇಕಾದದ್ದು ಏನೆಂದರೆ, ಸ್ವಲ್ಪ ಮಟ್ಟಿನ ‘ಆನಂದಮೈಡ್’ ಅನ್ನು ಉತ್ಪಾದಿಸಬೇಕು, ಏಕೆಂದರೆ, ನಮ್ಮೊಳಗೆ ಒಂದು ಮಾದಕ ದ್ರವ್ಯದ ತೋಟವೇ ಇದೆ. ಇದನ್ನು ಸರಿಯಾಗಿ ಪೋಷಿಸಿದರೆ, ಸದಾ ಕಾಲವೂ ಅಮಲಿನಲ್ಲೇ ಇರಬಹುದು, ಆದರೆ ಮಾನಸಿಕ ಸಾಮರ್ಥ್ಯಗಳು ಕುಗ್ಗುವುದಿಲ್ಲ. ಪ್ರಶಾಂತವಾಗಿ ಇರಬೇಕಾದರೆ, ಎಲ್ಲ ವೇಳೆಯಲ್ಲಿಯೂ ಅತಿ ಹೆಚ್ಚಿನ ಸಂತೋಷದಲ್ಲಿರಬೇಕಾದರೆ, ಪ್ರತಿಯೊಬ್ಬ ಮಾನವನು ತನ್ನದೇ ಶರೀರವನ್ನು ಸ್ವಲ್ಪ ಹೆಚ್ಚಾಗಿ ಒಳಹೊಕ್ಕು ಪರಿಶೋಧಿಸಿಕೊಳ್ಳಬೇಕು. ಯೋಗ ವಿಜ್ಞಾನ ಈ ಸಂತೋಷವನ್ನು ನೀಡುತ್ತದೆ. ಯೋಗಿಗಳು ಸಂತೋಷಕ್ಕೆ ವಿರೋಧಿಗಳಲ್ಲ. ಅವರು ಕೇವಲ ಅಲ್ಪಸ್ವಲ್ಪ ಸಂತೋಷವನ್ನು ಇಷ್ಟಪಡುವುದಿಲ್ಲ. ಅವರು ಆ ವಿಷಯದಲ್ಲಿ ಲೋಭಿಗಳಾಗಿದ್ದಾರೆ. ನೀವೊಂದು ಗ್ಲಾಸ್ ಮದ್ಯ ಸೇವಿಸಿದರೆ, ನಿಮಗದು ಸ್ವಲ್ಪ ಗಲಿಬಿಲಿಯನ್ನುಂಟು ಮಾಡುತ್ತದೆ ಮತ್ತು ನಾಳೆ ಬೆಳಗ್ಗೆ ನಿಮಗೆ ತಲೆನೋವು ಮತ್ತು ಬೇರೆ ಸಮಸ್ಯೆಗಳು ಉಂಟಾಗುತ್ತವೆ ಎನ್ನುವುದು ಅವರಿಗೆ ತಿಳಿದಿದೆ. ಅವರು ಅದನ್ನು ಇಷ್ಟ ಪಡುವುದಿಲ್ಲ. ಆದರೆ ಈಗ ಅವರು ಎಲ್ಲ ಸಮಯದಲ್ಲಿಯೂ ಸಂಪೂರ್ಣವಾಗಿ ಅಮಲಿನಲ್ಲಿರುತ್ತಾರೆ, ಆದರೂ ನೂರಕ್ಕೆ ನೂರರಷ್ಟು ಸ್ಥಿಮಿತದಲ್ಲಿ ಹಾಗೂ ಜಾಗೃತರಾಗಿ ಇರುತ್ತಾರೆ. ಏಕೆಂದರೆ, ಅಮಲನ್ನು ಆನಂದಿಸಬೇಕು ಎಂದರೆ ಜಾಗೃತರಾಗಿರಬೇಕು. ಆದ್ದರಿಂದ ಸಂಪೂರ್ಣವಾಗಿ ಅಮಲಿನಲ್ಲಿರುವುದು, ಆದರೂ ಸಂಪೂರ್ಣ ಜಾಗೃತಿಯಿಂದಿರುವುದು; ಆಗ ಮಾತ್ರ ಅದನ್ನು ಆನಂದಿಸಬಹುದು. ಪ್ರಕೃತಿ ಈ ಸಾಧ್ಯತೆಯನ್ನು ನಿಮಗೆ ನೀಡಿದೆ.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts