More

    ಕಾಡು ಶುದ್ಧಗೊಳಿಸುವ ಹದ್ದುಗಳಿವು!

    ‘ಭವಿಷ್ಯಕ್ಕಾಗಿ ರಣಹದ್ದುಗಳು ಘೊಷವಾಕ್ಯದೊಂದಿಗೆ ವನ್ಯಜೀವಿ ಸಪ್ತಾಹ | ಸಾಂಕ್ರಾಮಿಕ ರೋಗ ತಡೆಯುವ ಪಕ್ಷಿಗಳು

    ಶಿವು ಹುಣಸೂರು
    ರಣಹದ್ದು ನಮ್ಮ ಒಳಿತಿಗಾಗಿ, ನಮ್ಮ ಆರೋಗ್ಯಕ್ಕಾಗಿ ಕರ್ತವ್ಯ ನಿರ್ವಹಿಸುತ್ತಿವೆ ಎಂದರೆ ನೀವು ನಂಬಲೇಬೇಕು. ಗಳು ಅರಣ್ಯದಲ್ಲಿ ಮತ್ತು ಅರಣ್ಯೇತರ ಭಾಗಗಳಲ್ಲಿ ಯಾವುದೇ ಜೀವಿಯ ಸತ್ತ ದೇಹ ಅದೆಷ್ಟೇ ಕೊಳೆತು ನಾರುತ್ತಿರಲಿ, ಅದನ್ನು ತಿಂದು ಜೀರ್ಣಿಸಿಕೊಂಡು ಬದುಕುತ್ತವೆ. ಆ ಮೂಲಕ ಕೊಳೆತ ಶವದ ಮೂಲಕ ಹರಡಬಹುದಾದ ರೋಗರುಜಿನಗಳನ್ನು ನಿಯಂತ್ರಿಸಿ ಶುದ್ಧ ಪರಿಸರ ನಿರ್ವಣಕ್ಕೆ ಸಹಾಯ ಮಾಡುತ್ತವೆ. ರಣಹದ್ದುಗಳು ಅರಣ್ಯದಲ್ಲಿ ಪೌರಕಾರ್ವಿುಕರಂತೆ ಕಾರ್ಯ ನಡೆಸಿವೆ ಎಂದರೆ ಅತಿಶಯೋಕ್ತಿಯಲ್ಲ.

    ಅರಣ್ಯ ಇಲಾಖೆ ವತಿಯಿಂದ ಅ.2ರಿಂದ 8ರವರೆಗೆ ರಾಜ್ಯಾದ್ಯಂತ 66ನೇ ವನ್ಯಜೀವಿ ಸಪ್ತಾಹ ಆಯೋಜಿಸಿದ್ದು, ‘ಭವಿಷ್ಯಕ್ಕಾಗಿ ರಣಹದ್ದುಗಳು’ ಘೊಷವಾಕ್ಯದೊಂದಿಗೆ ಈ ಬಾರಿ ಅರಣ್ಯ ಸಂರಕ್ಷಣೆಯಲ್ಲಿ ರಣಹದ್ದುಗಳ ಪಾತ್ರವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಇಲಾಖೆ ಮುಂದಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ರಣಹದ್ದುಗಳ ಜೀವನ ಚಕ್ರ, ಸಂಖ್ಯೆ, ಅರಣ್ಯ ಅಭಿವೃದ್ಧಿಯಲ್ಲಿ ಅವುಗಳ ಪಾತ್ರದ ಕುರಿತು ರಾಜ್ಯದ ವಿವಿಧ ಫಾರೆಸ್ಟ್ರಿ ಕಾಲೇಜಿನ ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದಾರೆ.

    ಇದನ್ನೂ ಓದಿ: ಬಿಹಾರ ಚುನಾವಣೆ | ಎಲ್​ಜೆಪಿ ಇಲ್ಲದ ಎನ್​ಡಿಎಯಲ್ಲಿ 50:50 ಸೀಟು ಹಂಚಿಕೆ ?

    ರಣಹದ್ದಿನ ಭಯ: ಸತ್ತ ಪ್ರಾಣಿಗಳು ಮತ್ತು ಮನುಷ್ಯರ ದೇಹವನ್ನು ತಿಂದು ಬದುಕುವ ಕ್ರೂರ ಪಕ್ಷಿ ರಣಹದ್ದು ಎಂಬ ಧೋರಣೆ ಮನುಷ್ಯರಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಣಹದ್ದುಗಳ ಬಗ್ಗೆ ಭಯ ಹೊಂದಿರುವುದಲ್ಲದೆ, ಸಹಜವಾಗಿಯೇ ಅಂತರ ಕಾಪಾಡಿಕೊಳ್ಳುತ್ತಾರೆ. ಆದರೆ, ಜೀವಸಂಕುಲದ ಒಳಿತಿಗಾಗಿ ರಣಹದ್ದುಗಳು ಬದುಕುತ್ತಿವೆ ಎನ್ನುವುದನ್ನು ಅರಿಯಬೇಕಿದೆ.

    ಕೋವಿಡ್ ಕಾಕತಾಳೀಯ

    ಪ್ರಸ್ತುತ ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದರಿಂದಾಗಿ ವಿಶ್ವದ ಆರ್ಥಿಕ ಸ್ಥಿತಿಯೇ ಪಾತಾಳಕ್ಕೆ ಇಳಿದಿದೆ. ಸತ್ತ ದೇಹಗಳನ್ನು ತಿನ್ನುವ ಏಕೈಕ ಪಕ್ಷಿ ರಣಹದ್ದು. ಅದರ ಹೊಟ್ಟೆಯಲ್ಲಿ ಅಸಿಡಿಕ್ ನೇಚರ್(ಆಮ್ಲೀಯ ಗುಣ) ಹೆಚ್ಚಾಗಿದ್ದು, ಎಂಥ ಕೊಳೆತ ದೇಹವನ್ನೂ ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿದೆ. ಹೀಗಾಗಿ ಸತ್ತ ದೇಹದಿಂದ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ತಡೆಯುತ್ತದೆ. ರಣಹದ್ದುಗಳು ಕಾಡಿನಲ್ಲಿ ಮತ್ತು ಊರಿನಲ್ಲಿ ಕೊಳೆತ ದೇಹಗಳನ್ನು ಹುಡುಕಿ ಹೆಕ್ಕಿ ತಿನ್ನದೇ ಇದ್ದರೆ ಇಂದು ಕಾಡಿನಿಂದಲೇ ಸಾಕಷ್ಟು ರೋಗರುಜಿನಗಳು ಊರಿಗೂ ಬರುವ ಪರಿಸ್ಥಿತಿ ಇರುತ್ತಿತ್ತು.

    ಎರಡನೇ ಬಾರಿ ಪಕ್ಷಿ ಪ್ರಧಾನ ಸಪ್ತಾಹ
    ಇಷ್ಟು ವರ್ಷಗಳ ಕಾಲ ಅರಣ್ಯದಲ್ಲಿ ದೊಡ್ಡ ವನ್ಯಜೀವಿಗಳ ಕುರಿತಾಗಿ ಹೆಚ್ಚಿನ ಆಸ್ಥೆ ತೋರುತ್ತಿದ್ದ ಇಲಾಖೆ, ಇದೀಗ ಕಾಡಿನ ಸಣ್ಣಪುಟ್ಟ ಪ್ರಾಣಿಗಳಾದ ಚಿಪ್ಪುಹಂದಿ, ಕೂರ, ನಾಲ್ಕು ಕೊಂಬಿನ ಹುಲ್ಲೆ, ನೀರುನಾಯಿ, ಹಾರುವ ಅಳಿಲಿನಂತಹ ಸಣ್ಣ ಪ್ರಾಣಿ-ಪಕ್ಷಿಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ. ಕಳೆದ ಸಾಲಿನಲ್ಲಿ ‘ಗ್ರೇಟ್ ಇಂಡಿಯನ್ ಬಸ್ಟಾರ್ಡ್ ಬರ್ಡ್’ ಘೊಷವಾಕ್ಯದೊಂದಿಗೆ ಬಸ್ಟಾರ್ಡ್ ಪಕ್ಷಿಯ ಪ್ರಾಮುಖ್ಯತೆಯನ್ನು ತಿಳಿಸಿತ್ತು. ಅಂತೆಯೆ, ಈ ಬಾರಿ ರಣಹದ್ದುಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದು ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

    ಇದನ್ನೂ ಓದಿ: ಬರೋಬ್ಬರಿ 6.6 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 21 ಕಿಲೋ ಚಿನ್ನ ಕಸ್ಟಮ್ಸ್ ವಶಕ್ಕೆ!

    ನಾಗರಹೊಳೆಯಲ್ಲಿ 4 ಜಾತಿಯ ರಣಹದ್ದು

    ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆ ತಿಳಿಸಿದಂತೆ ನಾಲ್ಕು ಜಾತಿಯ ರಣಹದ್ದುಗಳು ಇವೆ. ಈಜಿಪ್ತಿಯನ್ ವಲ್ಚರ್, ಲಾಂಗ್ ಬಿಲ್ಲಡ್ ವಲ್ಚರ್, ರೆಡ್ ಹೆಡೆಡ್ ವಲ್ಚರ್ ಮತ್ತು ವೈಟ್ ರಂಫಡ್ ವಲ್ಚರ್ ಎನ್ನುವ ಜಾತಿಯ ರಣಹದ್ದುಗಳಿವೆ. ಅಲ್ಲದೆ, ಹಿಮಾಲಯನ್ ಗ್ರಿಫಿನ್ಸ್ ವಲ್ಚರ್(ಹಿಮಾಲಯದ ತಪ್ಪಲಿನಲ್ಲಿ ಕಾಣಸಿಗುತ್ತವೆ) ಹಾಗೂ ಸಿನೋರಸ್ ವಲ್ಚರ್ (ರಷ್ಯಾ ಮತ್ತು ಏಷ್ಯಾ ಖಂಡದಲ್ಲಿ ಕಾಣಸಿಗುತ್ತವೆ) ಎಂಬ ವಲಸೆ ರಣಹದ್ದುಗಳನ್ನು ಇಲ್ಲಿ ಗುರುತಿಸಲಾಗಿದೆ.

    ಇದನ್ನೂ ಓದಿ: ಶಿರಾ ಉಪ ಚುನಾವಣೆ ಜೆಡಿಎಸ್ ಟಿಕೆಟ್‌ಗೆ ಟ್ವಿಸ್ಟ್ -ಸಹೋದರನಿಗೆ ಟಿಕೆಟ್ ಕೇಳಿರುವ ಶಾಸಕ ಗೌರಿಶಂಕರ್ -ನನಗೆ ಬೇಡ, ಮಗನಿಗೆ ನೀಡಿ, ಸತ್ಯನಾರಾಯಣ ಪತ್ನಿ ಬೇಡಿಕೆ

    ಬೆಳಗ್ಗೆ 10ರ ನಂತರ ಹುಡುಕಾಟ: ರಣಹದ್ದುಗಳು ಹೆಚ್ಚಾಗಿ ಅರಣ್ಯದಲ್ಲಿ ಒಂದೇ ಮರದಲ್ಲಿ ಆಶ್ರಯ ಪಡೆದಿರುತ್ತವೆ. ರಾತ್ರಿಯಿಡೀ ಒಂದೇ ಮರದಲ್ಲಿ ನಿದ್ದೆ ಮಾಡಿ ಬೆಳಗ್ಗೆ 10 ಗಂಟೆಯ ನಂತರ ಆಕಾಶದಲ್ಲಿ ಎತ್ತರಕ್ಕೆ ಹಾರಿ ಆಹಾರಕ್ಕಾಗಿ ಹುಡುಕಾಟ ಆರಂಭಿಸುತ್ತವೆ. ಸತ್ತ ಪ್ರಾಣಿಯ ದೇಹ ಕಣ್ಣಿಗೆ ಬಿದ್ದಲ್ಲಿ ಎಲ್ಲವೂ ಅಲ್ಲಿಗೆ ಇಳಿದು ಇಡೀ ದೇಹದ ಒಂದೇ ಒಂದು ತ್ಯಾಜ್ಯವನ್ನೂ ಬಿಡದಂತೆ ತಿಂದು ಮುಗಿಸಿ ಹೊರಡುತ್ತವೆ. ರಣಹದ್ದುಗಳು ಜೀವಂತವಿರುವ ಯಾವುದೇ ಜೀವಿಯ ಬಳಿಯೂ ಬರುವುದಿಲ್ಲ. ಸತ್ತರೆ ಮಾತ್ರ ಬಿಡುವುದಿಲ್ಲ.

    ಇದನ್ನೂ ಓದಿ: ದೇವದತ್ ಪಡಿಕಲ್​​ಗೆ ಸವಾಲೆಸೆದ ಯುವರಾಜ್​! ಕನ್ನಡಿಗನ ಉತ್ತರವೇನು ಗೊತ್ತೇ ?

    ವರ್ಷಕ್ಕೆ ಒಂದೇ ಮೊಟ್ಟೆ

    ರಣಹದ್ದುಗಳು ವಾರ್ಷಿಕ ಒಂದು ಮೊಟ್ಟೆಯನ್ನು ಮಾತ್ರ ಇಟ್ಟು ಸಂತಾನಾಭಿವೃದ್ಧಿ ನಡೆಸುತ್ತವೆ. ಉತ್ತರ ಭಾರತದ ವಿವಿಧೆಡೆ ರಣಹದ್ದುಗಳಿಗಾಗಿ ಮರಗಳನ್ನು ಸಂರಕ್ಷಿಸಿ, ಅವುಗಳ ಸಂತಾನಾಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.

    ಪಾರ್ಸಿಗಳ ಪದ್ಧತಿ: ಪಾರ್ಸಿ ಜನಾಂಗದಲ್ಲಿ ಮೃತ ವ್ಯಕ್ತಿಯ ದೇಹವನ್ನು ಊರ ಹೊರಗಿನ ಎತ್ತರದ ಪ್ರದೇಶದಲ್ಲಿ ಇಟ್ಟು ಬರುತ್ತಾರೆ. ಮೃತ ಶರೀರವನ್ನು ರಣಹದ್ದುಗಳು ತಿನ್ನಲಿ ಎನ್ನುವುದು ಅವರ ಇಂಗಿತ. ಈ ಪದ್ಧತಿಯನ್ನು ಇಂದಿಗೂ ಕೆಲವಡೆ ಅನುಸರಿಸುತ್ತಾರೆ ಎನ್ನಲಾಗಿದೆ.

    ಕಾಡು ಶುದ್ಧಗೊಳಿಸುವ ಹದ್ದುಗಳಿವು!ನಾಗರಹೊಳೆ ಉದ್ಯಾನವನದಲ್ಲಿ ರಣಹದ್ದುಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಕಾಡಿನಲ್ಲಿ ಸಮತೋಲನ ಕಾಯ್ದುಕೊಳ್ಳಲು ಬಹುಮುಖ್ಯ ಪಾತ್ರ ವಹಿಸುತ್ತವೆ. ರೋಗರುಜಿನಗಳಿಂದ ಪ್ರಾಣಿ ಮತ್ತು ಮನುಷ್ಯ ಸಂಕುಲವನ್ನು ಕಾಪಾಡುವ ಮಹತ್ತರ ಕಾರ್ಯವನ್ನು ರಣಹದ್ದುಗಳು ಮಾಡುತ್ತಿವೆ.
    | ಎನ್.ಜೆ.ಕಾರ್ತಿಕ್ ಎಂಎಸ್ಸಿ, ವೈಲ್ಡ್​ಲೈಫ್ ಆಂಡ್ ಮ್ಯಾನೇಜ್​ವೆುಂಟ್, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
    ಕಾಡು ಶುದ್ಧಗೊಳಿಸುವ ಹದ್ದುಗಳಿವು!ರಣಹದ್ದುಗಳು ಕಾಡಿನಲ್ಲಿ ಪ್ರಾಣಿಗಳ ಆಹಾರ ಚಕ್ರ ಮತ್ತು ಆಹಾರ ಕೇಂದ್ರದ ಪ್ರಮುಖ ಕೊಂಡಿಯಾಗಿವೆ. ಸಸ್ಯಾಹಾರಿಗಳನ್ನು ಮಾಂಸಾಹಾರಿಗಳು ತಿಂದರೆ, ಮಾಂಸಾಹಾರಿ ಪ್ರಾಣಿ ಸತ್ತಾಗ ತಿನ್ನುವ ಪ್ರಮುಖ ಪ್ರಾಣಿ ರಣಹದ್ದು. ಆ ಮೂಲಕ ಇಡೀ ಪರಿಸರ, ದೇಶ, ದೇಶದ ಆರ್ಥಿಕತೆ, ಆರೋಗ್ಯವನ್ನು ಕಾಪಾಡುವ ಮಹತ್ತರ ಕಾರ್ಯವನ್ನು ರಣಹದ್ದುಗಳ ಮಾಡಿವೆ. ಇಂತಹ ಅನೇಕ ಸಣ್ಣಪುಟ್ಟ ಪ್ರಾಣಿಗಳು ತಮ್ಮದೇ ಆದ ಕೊಡುಗೆಯನ್ನು ಅರಣ್ಯ ಸಂರಕ್ಷಣೆಯಲ್ಲಿ ನೀಡುತ್ತಿವೆ.
    | ಡಿ.ಮಹೇಶ್​ಕುಮಾರ್ ಡಿಸಿಎಫ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಹುಣಸೂರು

    ಬಿಹಾರ ಚುನಾವಣೆ | ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts