More

    ಶ್ರೀಮಂತಿಕೆ, ಜನಪ್ರಿಯತೆ ಹಿಂದೆ ಹೋಗಬೇಡಿ: ಎನ್​ಆರ್​ಐ ಆನ್​ಲೈನ್​ ಸಂವಾದದಲ್ಲಿ ಡಾ. ವಿಜಯ ಸಂಕೇಶ್ವರ

    ಹುಬ್ಬಳ್ಳಿ: ದಸರಾ ಹಿನ್ನೆಲೆಯಲ್ಲಿ ಎನ್​ಆರ್​ಐ ಕನ್ನಡ ಬಳಗ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಸ್ಪೂರ್ತಿದಾಯಕ ಮಾತುಗಳ ಮೂಲಕ ವಿವಿಧ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಮನಗೆದ್ದರು.

    ಝುೂಮ್ ಆ್ಯಪ್​ ಮೂಲಕ ಸುಮಾರು ಎರಡೂವರೆ ತಾಸು ನಡೆದ ನೇರ ಸಂವಾದದಲ್ಲಿ 20ಕ್ಕೂ ಹೆಚ್ಚು ದೇಶಗಳ ಕನ್ನಡಿಗರು ಪಾಲ್ಗೊಂಡಿದ್ದರು. ಸಾರಿಗೆ, ಮಾಧ್ಯಮ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಡಾ. ಸಂಕೇಶ್ವರ ಅವರಿಗೆ ಅಭೂತಪೂರ್ವ ಸಾಧನೆಗೆ ಕಾರಣವಾದ ಅಂಶಗಳನ್ನು ಅವರಿಂದಲೇ ಕೇಳಿ ಪುಳಕಿತರಾದರು. ಐರ್ಲೆಂಡ್, ಓಮನ್, ಸಿಡ್ನಿ (ಆಸ್ಟ್ರೇಲಿಯಾ), ನ್ಯೂಜಿಲೆಂಡ್, ಅಮೆರಿಕ, ಇಂಗ್ಲೆಂಡ್, ಇಂಡೋನೇಷ್ಯಾ, ನೆದರಲ್ಯಾಂಡ್, ಮಸ್ಕತ್, ಸೌದಿ ಅರೇಬಿಯ, ಯುರೋಪಿಯನ್, ಏಷ್ಯನ್ ದೇಶಗಳ ಕನ್ನಡಿಗರು ಪಾಲ್ಗೊಂಡು ಸಂಕೇಶ್ವರ ಅವರೊಂದಿಗೆ ಮಾತನಾಡಿ ಮಾರ್ಗದರ್ಶನ ಪಡೆದುಕೊಂಡರು.

    ಇವರೆಲ್ಲರ ಮೂಲ ನೆಲೆ ಉತ್ತರ ಕರ್ನಾಟಕ. ವೃತ್ತಿ ನಿಮಿತ್ತ ಪರ ದೇಶಗಳಲ್ಲಿ ನೆಲೆಸಿದ್ದರೂ ಹೆಮ್ಮೆಯಿಂದಲೇ ಸ್ಥಳೀಯ ಪರಿಚಯ ಹೇಳಿಕೊಂಡು ಡಾ. ಸಂಕೇಶ್ವರ ಅವರೊಂದಿಗೆ ಮಾತಿಗೆ ಇಳಿದಿದ್ದರು. ಸಾರಿಗೆ ಉದ್ಯಮದಲ್ಲಿ ವಿಆರ್​ಎಲ್ ಸಾಧನೆಯನ್ನು ತಮ್ಮ ಸಾಧನೆಯೆಂಬಂತೆ ಆತ್ಮೀಯತೆ ವ್ಯಕ್ತಪಡಿಸಿದ್ದು ಗಮನಾರ್ಹವಾಗಿತ್ತು. ಡಾ.ಸಂಕೇಶ್ವರ ಅವರೂ ಅಷ್ಟೇ ಉತ್ಸಾಹ, ಲವಲವಿಕೆಯಿಂದ ಜಾಗತಿಕ ಕನ್ನಡಿಗರ ಪ್ರಶ್ನೆಗಳಿಗೆ ಉತ್ತರಿಸಿದರು.

    ಆರಂಭದಲ್ಲಿ ಬೆಂಬಲ ಸಿಗದು: ಉದ್ಯಮದಲ್ಲಿ ನಾನು ಅನೇಕ ಯಶಸ್ವಿ ಜನರನ್ನು ಗಮನಿಸಿದ್ದೇನೆ. ಆರಂಭದಲ್ಲಿ ಅವರೆಲ್ಲ ಬೈಗುಳ ಎದುರಿಸಿದವರೇ ಆಗಿದ್ದಾರೆ. ದೂರದವರು ನಿಮ್ಮ ನೆರವಿಗೆ ಬರಬಹುದು. ಹತ್ತಿರದವರು ಖಂಡಿತ ಬೆಂಬಲ ನೀಡುವುದಿಲ್ಲ. ಅವರೆಲ್ಲರೂ ನಮ್ಮ ಮೇಲಿನ ಕಳಕಳಿಯಿಂದಲೇ ಹಾಗೇ ಹೇಳುತ್ತಾರೆಂದು ಭಾವಿಸಿದ್ದೇನೆ ಎಂದು ಡಾ. ಸಂಕೇಶ್ವರ ಹೇಳಿದರು. ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಬಹುದು. ಆದರೆ, ಅದನ್ನು ಹೃದಯಕ್ಕೆ ಹಾಗೂ ಮಿದುಳಿಗೆ ತೆಗೆದುಕೊಳ್ಳಬಾರದು. ಶ್ರೀಮಂತಿಕೆ ಹಾಗೂ ಜನಪ್ರಿಯತೆ ಹಿಂದೆ ಹೋಗಬಾರದು ಎಂದು ಯುವಕರಿಗೆ ಸಲಹೆ ನೀಡಿದರು.

    ಪುನಃ ಸಕ್ರಿಯ ರಾಜಕಾರಣಕ್ಕೆ ಬರುವ ಯೋಚನೆ ಇದೆಯಾ? ಎಂದು ಮಸ್ಕತ್ ನಿವಾಸಿ ಅಂಬರೀಶ ಒಡ್ಡಗಲ ಕೇಳಿದ ಪ್ರಶ್ನೆಗೆ, ನಾನು ಮೂಲತಃ ರಾಜಕಾರಣಿಯಲ್ಲ. ಆದರೆ 3 ಬಾರಿ ಸಂಸದನಾಗಿ ರಾಜಕೀಯವನ್ನು ಆನಂದಿಸಿದ್ದೇನೆ. ಆಗ ಸಂಸತ್ತಿನಲ್ಲಿ ನನ್ನ ಅಕ್ಕ ಪಕ್ಕ ಕುಳಿತುಕೊಂಡಿದ್ದ ಯೋಗಿ ಆದಿತ್ಯನಾಥ ಹಾಗೂ ಶಿವರಾಜ ಸಿಂಗ್ ಚವ್ಹಾಣ ಇಂದು ಮುಖ್ಯಮಂತ್ರಿ ಯಾಗಿದ್ದಾರೆ. ರಾಷ್ಟ್ರಪತಿ ಅಬ್ದುಲ್ ಕಲಾಂ ಹಾಗೂ ಬಿಜು ಪಟ್ನಾಯಕ್ ಅವರೊಂದಿಗೆ ಸಮಯ ಕಳೆದಿದ್ದು ನನ್ನ ಪಾಲಿನ ಹೆಮ್ಮೆಯ ಸಂಗತಿ. ನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ವಹಿಸಿದರೆ ನಿಭಾಯಿಸಲು ತಯಾರಿದ್ದೇನೆ ಎಂದು ಡಾ.ಸಂಕೇಶ್ವರ ಸ್ಪಷ್ಟ ಪಡಿಸಿದರು.

    ಶ್ರೀಮಂತಿಕೆ, ಜನಪ್ರಿಯತೆ ಹಿಂದೆ ಹೋಗಬೇಡಿ: ಎನ್​ಆರ್​ಐ ಆನ್​ಲೈನ್​ ಸಂವಾದದಲ್ಲಿ ಡಾ. ವಿಜಯ ಸಂಕೇಶ್ವರ

    ನನ್ನ ಪಾಲಿನ ಸುದೈವ

    ‘ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಜಗತ್ತಿನ ಅನೇಕ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಸಾಮರ್ಥ್ಯ, ಪರಿಶ್ರಮ, ನಿಷ್ಠೆಯಿಂದ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಇಷ್ಟು ದೂರವಿದ್ದರೂ ತಾವೆಲ್ಲ ಕನ್ನಡ ಮರೆತಿಲ್ಲ. ಎನ್​ಆರ್​ಐ ಕನ್ನಡ ಬಳಗ ಜಗತ್ತಿನ ವಿವಿಧೆಡೆ ನೆಲೆಸಿರುವ ಕನ್ನಡಿಗರಿಗೆ ನೆರವಾಗುತ್ತಿರುವುದು ಒಳ್ಳೆಯ ಸಂಗತಿ. ತಮ್ಮ ಜತೆ ಮಾತನಾಡುತ್ತಿರುವುದು ನನ್ನ ಪಾಲಿನ ಸುದೈವ’ ಎಂದು ಡಾ.ಸಂಕೇಶ್ವರ ಹೇಳಿದ್ದು ಸ್ಮರಣೀಯವೆನಿಸಿತ್ತು. ಶ್ರೀಮತಿ ಲಲಿತಾ ಸಂಕೇಶ್ವರ ಪಾಲ್ಗೊಂಡು ಪರಿಚಯಿಸಿದ್ದು, ಹೊರ ದೇಶದ ಮಹಿಳೆಯರ ಮೆಚ್ಚುಗೆ ಗಳಿಸಿತು. ಎನ್​ಆರ್​ಐ ಕನ್ನಡ ಬಳಗದ ರಾಜೀವ ಮೇತ್ರಿ ನಿರೂಪಿಸಿದರು. ಬೆಲ್​ಫಾಸ್ಟ್​ದಿಂದ ಅಮಿತಾ ರವಿಕಿರಣ ದೇವಿಸ್ತುತಿ ಹಾಡಿದರು. ಬೆಳಗಾವಿಯಿಂದ ಮಹೇಶ ಜಾಧವ ನೇತೃತ್ವದ ಎಂ. ಸ್ಟೈಲ್ ತಂಡದ ಸದಸ್ಯರು ನೃತ್ಯ ಪ್ರದರ್ಶಿಸಿದರು. ಇಂಗ್ಲೆಂಡ್​ನ ವೀರೇಂದ್ರ ಕೋಲ್ಹಾರ ವಂದಿಸಿದರು.

    ವಿಮಾನಯಾನ, ಪ್ರವಾಸೋದ್ಯಮ ಕಷ್ಟ

    ಶ್ರೀಮಂತಿಕೆ, ಜನಪ್ರಿಯತೆ ಹಿಂದೆ ಹೋಗಬೇಡಿ: ಎನ್​ಆರ್​ಐ ಆನ್​ಲೈನ್​ ಸಂವಾದದಲ್ಲಿ ಡಾ. ವಿಜಯ ಸಂಕೇಶ್ವರ
    ಆನಂದ ಸಂಕೇಶ್ವರ, ಎಂಡಿ, ವಿಆರ್​ಎಲ್ ಸಮೂಹ ಸಂಸ್ಥೆಗಳು

    ಜಾಗತಿಕ ಬಿಕ್ಕಟ್ಟಿನ ಕಾರಣಕ್ಕೆ ಮುಂದಿನ 10 ವರ್ಷಗಳ ಕಾಲ ನಾಗರಿಕ ವಿಮಾನಯಾನ, ಪ್ರವಾಸೋದ್ಯಮಕ್ಕೆ ಭವಿಷ್ಯವಿಲ್ಲ. ಕೆಲ ವರ್ಷಗಳ ಹಿಂದೆ ನಾವು ಸಹ ವಾಯುಯಾನ ಕ್ಷೇತ್ರಕ್ಕೆ ಕಾಲಿಡಬೇಕೆಂದು ಪ್ರಯತ್ನ ಮಾಡಿದ್ದೆವು. ಅದಕ್ಕೆ ಸೂಕ್ತವಾದ ಪ್ಲ್ಯಾನ್ ರೆಡಿ ಇತ್ತು. ಆದರೆ, ಸುಮಾರು 34 ಸಾವಿರ ಷೇರುದಾರರ ಹಿತದೃಷ್ಟಿಯಿಂದ ಹಿಂದೆ ಸರಿಯಬೇಕಾಯಿತು. ದೇಶದಲ್ಲಿಯೇ ಸಾರಿಗೆ ಉದ್ಯಮದಲ್ಲಿ ವಿಆರ್​ಎಲ್ ಇನ್ನಷ್ಟು ಬೆಳವಣಿಗೆ ಹೊಂದಲು ಸಾಕಷ್ಟು ಅವಕಾಶವಿದೆ. ಸಂಸ್ಥೆಯ ಎಂ.ಡಿ. ಆಗಿರುವ ತಮ್ಮ ಪುತ್ರ ಅನಂದ ಸಂಕೇಶ್ವರ ಈ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಸಮರ್ಥರಿದ್ದಾರೆ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

    ಕರೊನಾ ವೈರಸ್ ಬಗ್ಗೆ ಭಯ ಬೇಡ

    ಕೋವಿಡ್​ಗೆ ಭಯ ಪಡುವ ಅಗತ್ಯವಿಲ್ಲ. ನಿತ್ಯ 300-400 ಜನರನ್ನು ಭೇಟಿಯಾಗುತ್ತೇನೆ. ದೇಶಾದ್ಯಂತ ಕಚೇರಿ ಕೆಲಸಕ್ಕಾಗಿ ಓಡಾಟ ಮಾಡುತ್ತಿದ್ದೇನೆ. ಬಟ್ಟೆಯ ಮಾಸ್ಕ್ ಬಳಸುತ್ತೇನೆ. 3-4 ತಾಸಿಗೊಮ್ಮೆ ಬದಲಾಯಿಸುತ್ತೇನೆ. ದೈಹಿಕ ಅಂತರ ಕಾಪಾಡಿಕೊಂಡರೆ, ಸುರಕ್ಷಾ ಕ್ರಮ ಪಾಲಿಸಿದರೆ ಸೋಂಕಿನಿಂದ ದೂರ ಇರಬಹುದು. ಕರೊನಾ ಕಾರಣಕ್ಕೆ ಜನರನ್ನು ಭೇಟಿಯಾಗದೆ ಇರಲು ಸಾಧ್ಯವಿಲ್ಲ ಎಂದು ಡಾ. ಸಂಕೇಶ್ವರ ಹೇಳಿದರು.

    ಶ್ರೀಮಂತಿಕೆ, ಜನಪ್ರಿಯತೆ ಹಿಂದೆ ಹೋಗಬೇಡಿ: ಎನ್​ಆರ್​ಐ ಆನ್​ಲೈನ್​ ಸಂವಾದದಲ್ಲಿ ಡಾ. ವಿಜಯ ಸಂಕೇಶ್ವರ

    ಕೆಲಸದ ಮೇಲಿನ ಬದ್ಧತೆಯಿಂದ ಯಶಸ್ಸು

    ರಾಜು ಗದಗ (ಓಮನ್): ಲಾರಿ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಾಗ ನಿಮಗೆ ಧೈರ್ಯ, ಪ್ರೋತ್ಸಾಹ ತುಂಬಿದವರು ಯಾರು? ನಿಮ್ಮ ಲಾರಿಗಳ ಬಣ್ಣ ಹಳದಿ ಏಕೆ?

    ವಿಜಯ ಸಂಕೇಶ್ವರ: ಲಾರಿ ಉದ್ಯಮದಲ್ಲಿ ವಾಮಮಾರ್ಗ ಅನುಸರಿಸಿದರೆ ಮಾತ್ರ ಯಶಸ್ಸು ಸಿಗುತ್ತದೆಂಬ ಭಾವನೆ ಅಂದು ಇತ್ತು. ಈಗಲೂ ಕೆಲವರಲ್ಲಿ ಅದೇ ಭಾವನೆ ಇದೆ. ಈ ಉದ್ಯಮ ಬೇಡ ಎಂದು ಅನೇಕರು ಹೇಳಿದರೂ ನನ್ನಲ್ಲಿನ ಛಲ, ಕೆಲಸದ ಮೇಲಿನ ಪ್ರೀತಿ ಯಶಸ್ಸು ಕಾಣುವಂತೆ ಮಾಡಿತು. ಯುವ ಉದ್ಯಮಿಗಳು ತಮಗೆ ಉತ್ಪನ್ನ ಪೂರೈಸುವವರನ್ನು ನೇರ ಭೇಟಿಯಾಗಬೇಕು. ಸಾಮಾಜಿಕ ಜಾಲತಾಣದ ಮೂಲಕವೇ ಎಲ್ಲ ವ್ಯವಹಾರ ಮಾಡುವುದು ಸರಿಯಲ್ಲ. ಇದು ಸಹ ಯಶಸ್ಸಿನ ಮೆಟ್ಟಿಲು. ಕನ್ನಡ ಬಾವುಟದಲ್ಲಿ ಕೆಂಪು ಮತ್ತು ಹಳದಿ ಬಣ್ಣಗಳಿವೆ. ಮುತೆôದೆಯರು ಹಚ್ಚಿಕೊಳ್ಳುವ ಕುಂಕುಮ ಕೆಂಪು ಹಾಗೂ ಅರಿಶಿಣ ಹಳದಿ. ಹಳದಿ ಬಣ್ಣ ಜನರನ್ನು ಸೆಳೆಯುತ್ತದೆ. ಹಲವು ಮ್ಯಾಗಜಿನ್​ಗಳನ್ನು ತಿರುವಿ ಹಾಕಿ ಜನರ ಕಣ್ಣು ಸೆಳೆೆಯುವ ಬಣ್ಣದ ಬಗ್ಗೆ ಅಧ್ಯಯನ ಮಾಡಿದಾಗ ‘ಹಳದಿ’ ಅಪ್ಯಾಯಮಾನವೆನಿಸಿತು.

    ಪೂರ್ಣಾನಂದ ಉಪ್ಪಿನ್ (ಇಂಡೋನೇಷಿಯಾ): ವಿದೇಶದಲ್ಲಿ ಸಾರಿಗೆ ಉದ್ಯಮ ಪ್ರಾರಂಭಿಸುವ ಉದ್ದೇಶ ಇದೆಯೆ?

    ವಿಜಯ ಸಂಕೇಶ್ವರ: ಈಗಿನ ಕೋವಿಡ್ ಪರಿಸ್ಥಿತಿಯಲ್ಲಿ ಅಂತಹ ಯಾವುದೇ ಉದ್ದೇಶ ಇಲ್ಲ. ಪ್ರವಾಸೋದ್ಯಮ ಮೊದಲಿನಂತಾಗಲು 4-5 ವರ್ಷಗಳು ಬೇಕು. ವಿದೇಶಗಳಲ್ಲಿಯೂ ಸಾರಿಗೆ ಉದ್ಯಮ ಮೊದಲಿನಂತಿಲ್ಲ. ಕೋವಿಡ್ ನಂತರ ಸ್ವಂತ ವಾಹನ ಖರೀದಿ ಹೆಚ್ಚಾಗಿದೆ.

    ಶರತ್ ಪಾಟೀಲ (ಇಂಗ್ಲೆಂಡ್): ಭಾರತ ಭ್ರಷ್ಟಾಚಾರ ಮುಕ್ತವಾಗಲು ಸಾಧ್ಯವಿಲ್ಲವೇ?

    ವಿಜಯ ಸಂಕೇಶ್ವರ: ಪ್ರಧಾನಿ ನರೇಂದ್ರ ಮೋದಿಯಂಥವರು ಇನ್ನೂ 500 ಜನ ಬರಬೇಕು. ಆಗಷ್ಟೇ ಭ್ರಷ್ಟಾಚಾರದಿಂದ ಮುಕ್ತವಾಗಲು ಸಾಧ್ಯ. ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಹಗರಣಗಳಲ್ಲಿ ಸಿಲುಕಿದವರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಆಡಳಿತ ವ್ಯವಸ್ಥೆ ಬಲಗೊಳ್ಳಬೇಕು.

    ಅಶೋಕ ಕಟ್ಟಿ (ನೆದರ್​ಲ್ಯಾಂಡ್): ನಿಮ್ಮ ಕನಸಿನ ಹುಬ್ಬಳ್ಳಿ ಹೇಗಿರಬೇಕು? ಹುಬ್ಬಳ್ಳಿ ಇನ್ನೂ ಪ್ರಗತಿ ಕಾಣುತ್ತಿಲ್ಲವೇಕೆ?

    ವಿಜಯ ಸಂಕೇಶ್ವರ: ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಹುಬ್ಬಳ್ಳಿಯ ಅಭಿವೃದ್ಧಿ ಕಷ್ಟ. ಆದರೆ ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾದ ನಂತರ ಒಂದಿಷ್ಟು ಉತ್ತಮ ಕೆಲಸಗಳು ಆಗುತ್ತಿವೆ. ಇನ್ನೂ 3-4 ವರ್ಷದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಬಹುದು. ನಾವೂ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ ರಚಿಸಿ, ರಚನಾತ್ಮಕ ಯೋಜನೆ ರೂಪಿಸಿದ್ದೇವೆ.

    ಕೃಷಿಯೂ ಉದ್ದಿಮೆಯಂತಾಗಬೇಕು…

    ಚಿಕ್ಕ ಚಿಕ್ಕ ಸಾಗುವಳಿಯಿಂದಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಯನ್ನೂ ಕಾಪೋರೇಟ್ ಉದ್ದಿಮೆ ತರಹ ನಿರ್ವಹಿಸಬೇಕು. ಅಂದಾಗ ಲಾಭ ಹೆಚ್ಚು ಎಂದು ಡಾ. ವಿಜಯ ಸಂಕೇಶ್ವರ ಎನ್​ಆರ್​ಐ ಕನ್ನಡಿಗರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ಕೃಷಿಗೆ ಸರ್ಕಾರ ಹಲವಾರು ರೀತಿಯ ಸಾಲ ಹಾಗೂ ಸೌಲಭ್ಯ ನೀಡುತ್ತಿದೆ. ಸರ್ಕಾರದ ಯೋಜನೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ರೈತರು ವರ್ಷಕ್ಕೆ ಕನಿಷ್ಠ 3 ಬೆಳೆ ಬೆಳೆಯಬೇಕು. ರೈತರನ್ನು ರಾಜಕೀಯ ಮಂದಿ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಸಂಕೇಶ್ವರ ಅವರು ಹೇಳಿದರು.

    ರಾಮದೇವ್ ನಿಜವಾದ ಯೋಗ ಗುರು!

    ‘ಯೋಗ ಗುರು ಬಾಬಾ ರಾಮದೇವ್ ಅವರೊಂದಿಗೆ 14 ವರ್ಷಗಳಿಂದ ನಿಕಟ ಸಂಪರ್ಕ ಹೊಂದಿದ್ದೇನೆ. ಅವರೇ ನಿಜವಾದ ಯೋಗ ಗುರು. ಅವರೊಬ್ಬ ಅದ್ಭುತ ಶಕ್ತಿ. ಆಹಾರ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಿರುವ ಅವರು ಯೋಗ ಮತ್ತು ಪ್ರಾಣಾಯಾಮದಿಂದ ಕೋವಿಡ್ ನಿಯಂತ್ರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜಗತ್ತಿಗೆ ಯೋಗದ ಮಹತ್ವ ಸಾರಿದವರಲ್ಲಿ ಮೊದಲಿಗರು ರಾಮದೇವ್ ಗುರೂಜಿ, ಎರಡನೆ ಯವರು ಪ್ರಧಾನಿ ನರೇಂದ್ರ ಮೋದಿ’ ಎಂದು ಡಾ.ವಿಜಯ ಸಂಕೇಶ್ವರ ಅವರು ನ್ಯೂಜಿಲೆಂಡ್​ನ ಗಣಪತಿ ಪಾಟೀಲ ಪ್ರಶ್ನೆಗೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts