More

    ಬೇಡಿಕೆ ಈಡೇರದಿದ್ದಲ್ಲಿ ಮತದಾನ ಬಹಿಷ್ಕಾರ: ತೀ.ನ.ಶ್ರೀನಿವಾಸ್ ಎಚ್ಚರಿಕೆ

    ಶಿವಮೊಗ್ಗ: ಮಲೆನಾಡಿನ ರೈತರು, ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ. ಲೋಕಸಭೆ ಚುನಾವಣೆಯೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಮತದಾನವನ್ನೇ ಬಹಿಷ್ಕರಿಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.

    ಶರಾವತಿ ಮುಳುಗಡೆ ಸಂತ್ರಸ್ತರು ಸೇರಿ ಮುಳುಗಡೆ ರೈತರ ಸಮಸ್ಯೆಯನ್ನು ಎರಡೂ ಸರ್ಕಾರಗಳು ಬಗೆಹರಿಸದೇ ಮಾತಿಗೆ ತಪ್ಪಿವೆ. ಮಧು ಬಂಗಾರಪ್ಪ ನೇತೃತ್ವದಲ್ಲಿ ಮುಳುಗಡೆ ಸಂತ್ರಸ್ತರ ಪರವಾಗಿ ಪಾದಯಾತ್ರೆ ಮಾಡಿದ್ದರು. ಮತ್ತೊಂದೆಡೆ ಈಡಿಗರ ಭವನದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಂತ್ರಸ್ತರ ಸಮಸ್ಯೆಯನ್ನು 15 ದಿನದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಬ್ಬರೂ ಸಮಸ್ಯೆಗಳನ್ನು ಬಗೆಹರಿಸಲೇ ಇಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
    ಮಲೆನಾಡು ಭಾಗದಲ್ಲಿ ರೈತರ ಭೂಮಿ ಹಕ್ಕಿನ ಸಮಸ್ಯೆಯೇ ತೀವ್ರವಾಗಿದೆ. ಕಂದಾಯ ಭೂಮಿಗಳೆಲ್ಲ ಅರಣ್ಯ ಭೂಮಿಗಳಾಗಿ ಪರಿವರ್ತನೆಯಾಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ನೋಟಿಸ್ ಕೊಟ್ಟು ಕಿರುಕುಳ ನೀಡಲಾಗುತ್ತಿದೆ. ಕಾಯ್ದೆಗಳ ಅಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ಈ ಸಮಸ್ಯೆ ಬಗೆಹರಿಸಬಹುದು. ಆದರೆ ಇಚ್ಛಾಶಕ್ತಿ ಯಾರಿಗೂ ಇಲ್ಲ ಎಂದು ಕಿಡಿಕಾರಿದರು.
    ಎನ್‌ಇಎಸ್ ಮೈದಾನದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ನಡೆಸಿ ಮಲೆನಾಡು ಭಾಗದಲ್ಲಿ ಕಮಿಟಿ ಮಾಡಿ ವರದಿ ಪಡೆದಿದ್ದರು. ಪಕ್ಷ ಅಧಿಕಾರಕ್ಕೆ ಬಂದರೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಬಿಜೆಪಿಗೂ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸಾಕಷ್ಟು ಅವಕಾಶವಿತ್ತು. ಆದರೆ ಎರಡೂ ಪಕ್ಷಗಳು ವಿಧಾನಸೌಧವನ್ನೇ ವಂಚನೆ ತಾಣವನ್ನಾಗಿ ಮಾಡಿಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
    ಇನ್ಮುಂದೆಯಾದರೂ ಸಿಎಂ ಸಿದ್ದರಾಮಯ್ಯ ಅವರು ಲೋಕಸಭೆ ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನ ಒಂದು ದಿನ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದಲ್ಲಿ ಎಲ್ಲ ಸಂತ್ರಸ್ತರು ಮತದಾನವನ್ನೇ ಬಹಿಷ್ಕಾರ ಮಾಡುವರು. ಇಲ್ಲವಾದಲ್ಲಿ ಸಂತ್ರಸ್ತರ ನೆರವಿಗೆ ನಿಲ್ಲುವ ಪಕ್ಷಕ್ಕೆ ಬೆಂಬಲ ನೀಡುವರು ಎಂದು ಹೇಳಿದರು. ಅಂಬೇಡ್ಕರ್ ಕ್ರಾಂತಿ ಸೇನೆ ಮುನಿಯಪ್ಪ, ಕಣಿಯಪ್ಪ, ಮಹೇಶ್, ಅರ್ಮನ್, ವೇದಮೂರ್ತಿ, ಶರವಣ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts