More

    ಏ.26ರಂದು ತಪ್ಪದೇ ಮತದಾನ ಮಾಡಿ: ಜಿಲ್ಲಾಧಿಕಾರಿ ಡಾ.ಕುಮಾರ ಮನವಿ

    ಮಂಡ್ಯ: ಅರ್ಹ ಮತದಾರರು ಏ.26ರಂದು ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
    ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರು ಕೂಡ ಪ್ರಜ್ಞಾವಂತ ಹಾಗೂ ಬುದ್ದಿವಂತ ಮತದಾರರಾಗಿ ಬೇರೆಯವರ ಮಾತಿಗೆ ಕಿವಿಕೊಡದೇ ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ. ಪ್ರತಿ ಮತವು ಅಮೂಲ್ಯ. ನಮ್ಮ ಮತ ನಮ್ಮ ವ್ಯಕ್ತಿತ್ವವನ್ನು ಹಿಮ್ಮಡಿಸಗೊಳಿಸುವ ರೀತಿಯಲ್ಲಿ ಇರಬೇಕು. ಪಾರದರ್ಶಕತೆ ಮತ್ತು ನೈತಿಕತೆಯಿಂದ ಮತದಾನ ಮಾಡಬೇಕು ಎಂದು ಹೇಳಿದರು.
    ಕಳೆದ ಸಾಲಿನಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯು ಮತದಾನ ಪ್ರಕ್ರಿಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಅದನ್ನು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಪಾರದರ್ಶಕ, ನಿಭೀರ್ತಿಯಿಂದ ಪ್ರತಿಯೊಬ್ಬರಿಗೂ ಮತದಾನ ಮಾಡಲು ಅವಕಾಶ ನೀಡಿ ಚುನಾವಣೆ ನಡೆಸುವುದನ್ನು ನಾವು ನಮ್ಮ ದೇಶದಲ್ಲಿ ನೋಡಬಹುದು ಎಂದರು.
    ಚುನಾವಣೆ ನಡೆಸುವ ಬಗ್ಗೆ ಭಾರತದಲ್ಲಿ 75 ವರ್ಷದ ಇತಿಹಾಸವಿದೆ. 1952ರಲ್ಲಿ ಸಾರ್ವಜನಿಕರಲ್ಲಿ ವಿದ್ಯಾಭ್ಯಾಸದ ಕೊರತೆ ಇತ್ತು. ಬಹಳಷ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದರೂ ಸಹ 1952ರಲ್ಲಿ ನಡೆದ ಚುನಾವಣೆಯಲ್ಲಿ ಅಂದಾಜು ಶೇ.55ರಷ್ಟು ಮತದಾನವಾಗಿತ್ತು. ಇಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಜನರು ಮುಂದಿದ್ದರೂ ಕೆಲವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬುದು ಯೋಚಿಸುವ ವಿಷಯವಾಗಿದೆ ಎಂದರು.
    ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಬಾರದು ಎಂದು ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿ ಕೆಲವು ದಿನ 24 ಗಂಟೆ ಕಾರ್ಯನಿರ್ವಹಿಸಿರುವ ಉದಾಹರಣೆಗಳಿವೆ. ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಲು ಗರಿಷ್ಟ 2 ಗಂಟೆಗಳು ಬೇಕಾಗಬಹುದು. ಜಿಲ್ಲೆಯ ಎಲ್ಲ ಮತದಾರರು ತಮ್ಮ ಕೆಲಸಗಳನ್ನು ಬದಿಗಿಟ್ಟು ತಪ್ಪದೇ ಮತದಾನ ಮಾಡಿ. ಮನುಷ್ಯನ ಅಂದಾಜು ಜೀವಿತ ಅವಧಿ 70 ವರ್ಷ ಎಂದು ಇಟ್ಟುಕೊಂಡರೆ ಅವರ ಜೀವಿತ ಅವಧಿಯಲ್ಲಿ 11 ರಿಂದ 12 ಬಾರಿ ಮತದಾನದ ಅವಕಾಶ ಸಿಗುತ್ತದೆ. ಯುವ ಜನರು ಮತದಾನದ ಮಹತ್ವವನ್ನು ತಿಳಿದುಕೊಂಡು ತಪ್ಪದೇ ಮತದಾನ ಮಾಡಿ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.
    ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಮತದಾನದ ಹಕ್ಕು ಸಂವಿಧಾನ ನೀಡಿದೆ. ನೀವು ಮತ ಚಲಾಯಿಸಿ ಉತ್ತಮ ನಾಯಕರನ್ನು ಆಯ್ಕೆ ಮಾಡಿ. ನೀವು ಆಯ್ಕೆ ಮಾಡುವ ನಾಯಕರು ನಿಮ್ಮ ಪರವಾಗಿ ಮಾತನಾಡುತ್ತಾರೆ ಎಂಬುದನ್ನು ಮರೆಯದಿರಿ. ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ಮಾಡಿ ಎಂದರು.
    ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ಸಂಜೀವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts