More

    ನಮ್ಮ ನಡೆ ಮತಗಟ್ಟೆಯ ಕಡೆ : ಮೈಸೂರಿನಲ್ಲಿ ಮತದಾನ ಜಾಗೃತಿ

    ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕರೆ ನೀಡಿದರು.

    ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕುವೆಂಪುನಗರದ ಜ್ಞಾನಗಂಗ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರತಿಯೊಬ್ಬ ಮತದಾರನ ಹಕ್ಕು. ಹಾಗಾಗಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಚುನಾವಣೆಯ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

    ಲೋಕಸಭಾ ಕ್ಷೇತ್ರ ವ್ಯಾಪ್ತಿಯ 2925 ಮತಗಟ್ಟೆಗಳಲ್ಲಿ ಮತದಾರರಿಗೆ ಮತಗಟ್ಟೆಗಳಲ್ಲಿ ಸಿಗುವ ಸೌಲಭ್ಯಗಳು ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ‘ನಮ್ಮ ನಡೆ ಮತಗಟ್ಟೆಗಳ ಕಡೆ’ ಕಾರ್ಯಕ್ರಮ ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳಿಗೆ ಭೇಟಿ ನೀಡಿ ಧ್ವಜಾರೋಹಣ ನೆರವೇರಿಸಿ ಮತಗಟ್ಟೆಗಳ ಬಗ್ಗೆ ಜನರಲ್ಲಿ ಹಾಗೂ ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಮತದಾರರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗದಂತೆ ಮತದಾನದ ದಿನ ಬೇಕಾಗುವಂತಹ ಮೂಲಸೌಲಭ್ಯಗಳಾದ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಹಿರಿಯರು ಮತ್ತು ಅಂಗವಿಕಲರಿಗೆ ವೀಲ್ಚೇರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಬಿಸಿಲು ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಆಸನದ ವ್ಯವಸ್ಥೆ ಇರುವ ವೈಟಿಂಗ್ ರೂಂ ವ್ಯವಸ್ಥೆ ಮಾಡಲಾಗಿದೆ. ಇದನ್ನು ಪ್ರತಿಯೊಬ್ಬ ಮತದಾರರು ಉಪಯೋಗಿಸಿಕೊಂಡು ಮತದಾನ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

    ಕ್ಯೂ ಮ್ಯಾನೇಜ್ಮೆಂಟ್ ಆ್ಯಪ್ ಮೂಲಕ ಸರದಿ ಸಾಲುಗಳಿಂದ ಜನರಿಗೆ ಆಗುವ ತೊಂದರೆ ತಪ್ಪಿಸಲು ಪ್ರತ್ಯೇಕ ಸಾಲುಗಳ ನಿರ್ಮಾಣ ಮಾಡಲಾಗುವುದು. ಮೂರು ಬೂತ್‌ಗಿಂತ ಹೆಚ್ಚಾಗಿರುವಲ್ಲಿ ವೋಟರ್ ಅಸಿಸ್ಟೆಂಟ್ ಬೂತ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಇದರಿಂದ ಮತದಾರರಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.

    ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಆಯುಕ್ತೆ ಡಾ.ಎನ್.ಎನ್. ಮಧು, ಚುನಾವಣಾ ರಾಯಭಾರಿ ತನಿಷ್ಕಾ ಮೂರ್ತಿ, ಪ್ಯಾರಾ ಅಥ್ಲೆಟಿಕ್ಸ್ ಆಟಗಾರ ಎಂ. ಮಹೇಂದ್ರ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts