More

    ಜಿಲ್ಲೆಯ ವೈದ್ಯಾಧಿಕಾರಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮ

    ಮೈಸೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಲೋಕಸಭಾ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವೈದ್ಯಾಧಿಕಾರಿಗಳಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳನ್ನು ಆನ್‌ಲೈನ್ ಆ್ಯಪ್ ಮೂಲಕವೇ ತಿಳಿಯಬಹುದಾಗಿದೆ. ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿ ತಿಳಿದುಕೊಳ್ಳಬಹುದಾಗಿದೆ. ಎಲ್ಲರೂ ಏಪ್ರಿಲ್ 26ರ ಮತದಾನ ದಿನದಂದು ತಪ್ಪದೆ ಮತದಾನದಲ್ಲಿ ಭಾಗವಹಿಸುವ ಜತೆಗೆ, ನಿಮ್ಮ ಕುಟುಂಬದ ಸದಸ್ಯರು ಪಾಲ್ಗೊಳ್ಳುವಂತೆ ಅರಿವು ಮೂಡಿಸಿ ಎಂದು ತಿಳಿಸಿದರು.
    ಆರೋಗ್ಯ ಇಲಾಖೆಯಿಂದ ನಡೆಯುವ ಆರೋಗ್ಯ ಶಿಬಿರಗಳಲ್ಲೂ ಚುನಾವಣಾ ಜಾಗೃತಿ ಅರಿವು ಮೂಡಿಸಲು ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರಿಗೂ ಮತದಾನದ ಅರಿವು ಮೂಡಿಸಬೇಕು. ಆ ಮೂಲಕ ಸಾರ್ವಜನಿಕರಿಗೂ ಜಾಗೃತಿ ತಲುಪುವಂತಾಗಲಿ ಎಂದು ಸಲಹೆ ನೀಡಿದರು.
    ಎಲ್ಲ ವೈದ್ಯರು ತಾವು ನೀಡುವ ಹೊರ ರೋಗಿಗಳ ವಿಭಾಗ ಚೀಟಿಯಲ್ಲಿ ಕಡ್ಡಾಯವಾಗಿ ಪ್ರಸ್ತುತ ಲೋಕಸಭಾ ಚುನಾವಣೆಯ ಘೋಷ ವಾಕ್ಯ ‘ಚುನಾವಣಾ ಪರ್ವ, ದೇಶದ ಗರ್ವ’ ಎನ್ನುವ ಪದವನ್ನು ಮುದ್ರಿಸಿ ಬಳಕೆ ಮಾಡಲು ಸೂಚಿಸಿದರು. ಜಿಲ್ಲೆಯ ಎಲ್ಲ ಮೆಡಿಕಲ್ ಸ್ಟೋರ್‌ಗಳಲ್ಲಿ ಚುನಾವಣಾ ಜಾಗೃತಿ ಮೂಡಿಸುವ ಸಂದೇಶಗಳನ್ನು ಬಳಕೆ ಮಾಡಿ ಜನರಲ್ಲಿ ಅರಿವು ಮೂಡಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು.
    ಸಹಾಯಕ ಸ್ವೀಪ್ ನೋಡಲ್ ಅಧಿಕಾರಿ ಎಂ.ಶಾಂತಾ ಮಾತನಾಡಿ, ಸಂಪೂರ್ಣ ಚುನಾವಣಾ ಪ್ರಕ್ರಿಯೆ ಮೊಬೈಲ್ನಲ್ಲಿಯೇ ನೋಡಬಹುದಾಗಿದೆ. ವೋಟರ್ ಹೆಲ್ಪ್ಲೈನ್ ಆ್ಯಪ್‌ನಲ್ಲಿ ಮತದಾರರ ನೋಂದಣಿ, ಮತದಾನ ಗುರುತಿನ ಚೀಟಿ ತಿದ್ದುಪಡಿ ಇದ್ದರೆ, ಇವಿಎಂ ವಿವಿ ಪ್ಯಾಟ್‌ಗಳ ಬಗ್ಗೆ ಹಾಗೂ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಅರಿಯಬಹುದಾಗಿದೆ ಎಂದರು.
    ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೆ ಅಂತಹ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸಿ ಸಿವಿಜಿ ಆ್ಯಪ್‌ನಲ್ಲಿ ಕಳುಹಿಸಬಹುದು. ಇದರಲ್ಲಿ ದೂರು ಸಲ್ಲಿಸುವವರ ಯಾವುದೇ ವಿವರವನ್ನು ಬಹಿರಂಗ ಪಡಿಸುವುದಿಲ್ಲ. ಇದರಿಂದಾಗಿ ನೈತಿಕ ಮತದಾನ ಮಾಡಲು ಪ್ರೇರೇಪಿಸಬಹುದಾಗಿದೆ ಎಂದರು.
    18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ತಮ್ಮ ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿ. ಎಲ್ಲರೂ ತಪ್ಪದೆ ಮತದಾನದಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ಡಿಎಲ್ಒ ಡಾ.ಬಿ.ಬೃಂದಾ ಸೇರಿದಂತೆ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರ ಸಿಬ್ಬಂದಿ ಇದ್ದರು. ಇದೇ ವೇಳೆ ಎಲ್ಲ ವೈದ್ಯಾಧಿಕಾರಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts