More

    ಲೋಪ ಇಲ್ಲದಂತೆ ಮತದಾರರ ಪಟ್ಟಿ ಪರಿಷ್ಕರಿಸಲು ತುಷಾರ್ ಗಿರಿನಾಥ್ ಸೂಚನೆ

    ಬೆಂಗಳೂರು: ಮತದಾರ ಪಟ್ಟಿ ಪರಿಷ್ಕರಣೆ ಸಂಬಂಧ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡು ಕುರಿತು ಮನೆ ಮನೆ ಪರಿಶೀಲನೆ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸೋಮವಾರ ರಾಜಾಜಿನಗರ ಹಾಗೂ ಯಶವಂತಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಪರಿಶೀಲಿಸಿದರು.

    ಸಂಬಂಧಪಟ್ಟ ಅಧಿಕಾರಿಗಳ ಜತೆ ಭೇಟಿ ನೀಡಿದ ಪಾಲಿಕೆ ಆಯುಕ್ತರು, ರಾಜಾಜಿನಗರ ವ್ಯಾಪ್ತಿಯ ಏಳು ಮನೆಗಳಿಗೆ ಭೇಟಿ ನೀಡಿ ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡು ಮಾಡಿರುವ ನಮೂನೆ ಪರಿಶೀಲಿಸಿ, ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಪಾಲನೆ ಮಾಡುತ್ತಿದ್ದಾರೆಯೇ ಅಥವಾ ಇಲ್ಲವೋ ಎಂಬುದನ್ನು ಗಮನಿಸಿ ನಮೂನೆ ಸಲ್ಲಿಸಿರುವವರಿಂದ ಸಹಿ ಪಡೆದುಕೊಂಡರು.

    ಮೊದಲು ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಮನೆಗೆ ಹಾಗೂ ಶಿವನಹಳ್ಳಿ ವ್ಯಾಪ್ತಿಯ 5 ಮನೆಗಳಿಗೆ ಭೇಟಿ ನೀಡಿ ನಮೂನೆಗಳನ್ನು ಪರಿಶೀಲಿಸಿ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಬೇಕು. ಸೇರ್ಪಡೆ, ರದ್ದತಿ ಹಾಗೂ ಮಾರ್ಪಾಡುಗಳಲ್ಲಿ ಯಾವುದೇ ಲೋಪಗಳಿಲ್ಲದಂತೆ ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹೇರೋಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಮೂರು ಮನೆಗಳಿಗೆ ಭೇಟಿ ನೀಡಿದ ತುಷಾರ್ ಗಿರಿನಾಥ್, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನೀಡುವ ನಮೂನೆಯನ್ನು ಪರಿಶೀಲಿಸಿದರು.

    ಒತ್ತುವರಿ ತೆರವು:
    ರಾಜಾಜಿನಗರ ವಾರಿಯರ್ ಬೇಕರಿ ಬಳಿಯ ಬ್ರಿಡ್ಜ್ ಸ್ಟೋನ್ ಟಯರ್ ಮಾರಾಟ ಮಳಿಗೆ ಒತ್ತುವರಿ ಮಾಡಿಕೊಂಡಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಸೂಚಿಸಿದ ತುಷಾರ್ ಗಿರಿನಾಥ್, 3ನೇ ಹಂತದ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಕೂಡಲೆ ತೆರವುಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಕಟ್ಟಡ ಮಾಲೀಕರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಾಗಡಿ ಮುಖ್ಯ ರಸ್ತೆ ಹೇರೋಹಳ್ಳಿಯ ಬಳಿ ರಸ್ತೆ ದುರಸ್ತಿಯಲ್ಲಿದ್ದು, ಅದನ್ನು ಸರಿಪಡಿಸಬೇಕು. ಮಾಗಡಿ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಬೇಕು. ಹೇರೋಹಳ್ಳಿ ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಗುಣಮಟ್ಟ ರಸ್ತೆಗಳನ್ನು ನಿರ್ಮಿಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts