More

    ನೊಂದವರ ಧ್ವನಿಯಾಗಿ ಹೋರಾಟ ನಡೆಸಲು ಮತ ನೀಡಿ

    ಮಡಿಕೇರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ದುಡಿಯುವ ವರ್ಗವನ್ನು ನಿರ್ಲಕ್ಷ್ಯಿಸುತ್ತಲೇ ಬರುತ್ತಿರುವುದರಿಂದ ನೊಂದವರ ಧ್ವನಿಯಾಗಿ ಹೋರಾಟ ನಡೆಸಲು ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ನನಗೆ ಜನರು ಮತ ನೀಡಿ ಗೆಲುವು ತಂದುಕೊಡಬೇಕೆಂದು ಅಭ್ಯರ್ಥಿ ಹೆಚ್.ಎಂ.ಸೋಮಪ್ಪ ಮನವಿ ಮಾಡಿದ್ದಾರೆ.


    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಯಂತ್ರದಲ್ಲಿ ೧೧ನೇ ಸಂಖ್ಯೆಯಲ್ಲಿರುವ ಕುಡುಗೋಲು, ತೆನೆ ಗುರುತಿಗೆ ಮತ ನೀಡಿ ಜನಸೇವೆಗೆ ಅವಕಾಶ ನೀಡಬೇಕೆಂದು ಕೋರಿದರು.


    ಕಳೆದ ೨೦ ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಸಿಪಿಐ ಮತ್ತು ಎಐಟಿಯುಸಿ ಸಂಘಟನೆ ಜಂಟಿಯಾಗಿ ದುಡಿಯುವ ವರ್ಗದ ಪರ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಕಾರ್ಮಿಕ ವರ್ಗ ನಿತ್ಯ ಅನುಭವಿಸುತ್ತಿರುವ ಸಂಕಷ್ಟ, ರೈತರ ಸಮಸ್ಯೆಗಳು, ವನ್ಯ ಜೀವಿ ದಾಳಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದೆ.


    ಸೂರಿಲ್ಲದವರಿಗೆ ಸೂರು ಕಲ್ಪಿಸುವುದಕ್ಕಾಗಿ ಸೂರಿಗಾಗಿ ಸಮರ ಘೋಷ ವಾಕ್ಯದೊಂದಿಗೆ ಬೃಹತ್ ಹೋರಾಟವನ್ನು ನಡೆಸಲಾಗಿತ್ತು. ಆದರೆ ಆಡಳಿತ ನಡೆಸುವವರಿಂದ ಕೇವಲ ಭರವಸೆ ಮಾತ್ರ ದೊರೆಯಿತೇ ಹೊರತು ಇಲ್ಲಿಯವರೆಗೆ ನಿವೇಶನ ರಹಿತರಿಗೆ ಸೂರು ಸಿಕ್ಕಿಲ್ಲ್ಲ ಎಂದು ಟೀಕಿಸಿದರು.


    ಆಡಳಿತ ವ್ಯವಸ್ಥೆ ಯಾವುದೇ ಹೋರಾಟಕ್ಕೆ ಸ್ಪಂದನೆ ನೀಡದೆ ಇರುವುದರಿಂದ ಅನಿವಾರ್ಯವಾಗಿ ಸಿಪಿಐ ಪಕ್ಷ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯಬೇಕಾಗಿದೆ. ಹಣ ಇರುವ ಪಕ್ಷಗಳು ಹಣ ನೀಡಿ ಶಕ್ತಿ ಪ್ರದರ್ಶನ ಮಾಡುತ್ತಿವೆ. ಆದರೆ, ದುಡಿಯುವ ವರ್ಗದ ಪಕ್ಷವಾಗಿರುವ ಸಿಪಿಐ ಹಣ ನೀಡಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಬಡವರೇ ಈ ಪಕ್ಷದ ಬೆನ್ನೆಲುಬಾಗಿದ್ದು, ಎಲ್ಲರೂ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


    ತೋಟದ ಕಾರ್ಮಿಕರು, ತಲೆಹೊರೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಸ್ಪತ್ರೆಗಳ ಸ್ಪಚ್ಛತಾ ಸಿಬ್ಬಂದಿಗಳು, ಗ್ರಾ.ಪಂ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ನನಗೆ ಮತ ನೀಡಿ ಗೆಲ್ಲಿಸಬೇಕೆಂದು ಸೋಮಪ್ಪ ಮನವಿ ಮಾಡಿದರು.


    ಭರವಸೆ ಈಡೇರಿಲ್ಲ: ಒಂಭತ್ತು ವರ್ಷಗಳ ಹಿಂದೆ ಪ್ರಧಾನಮಂತ್ರಿಗಳು ಎರಡು ಕೋಟಿ ಉದ್ಯೋಗ ಮತ್ತು ಪ್ರತೀ ಕುಟುಂಬದ ಖಾತೆಗೆ ವಶಪಡಿಸಿಕೊಳ್ಳಲಾದ ಕಪ್ಪು ಹಣದಲ್ಲಿ ತಲಾ ೧೫ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಈ ಭರವಸೆಗಳು ಈಡೇರಿಲ್ಲ. ಆದ್ದರಿಂದ ಈ ದೇಶ ಮತ್ತು ರಾಜ್ಯಕ್ಕೆ ಪರ್ಯಾಯ ಶಕ್ತಿಯ ಅಗತ್ಯವಿದೆ. ಉತ್ತಮ ಆಡಳಿತ ನೀಡುವ ಚಿಂತನೆಯೊಂದಿಗೆ ಕಣಕ್ಕಿಳಿದಿರುವ ನನಗೆ ಮತದಾನ ಮಾಡಿ ಸಹಕರಿಸಬೇಕೆಂದು ಅವರು ಹೇಳಿದರು.


    ಸುದ್ದಿಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಹೆಚ್.ಎಂ.ಶಬಾನ ಹಾಗೂ ಎಐಟಿಯುಸಿ ಕಾರ್ಯದರ್ಶಿ ಪಿ.ಟಿ.ಸುಂದರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts