More

    ಗುರಿಮುಟ್ಟದ ವಿವೇಕ ಯೋಜನೆ

    ಮಂಜುನಾಥ ಅಂಗಡಿ ಧಾರವಾಡ

    ಸ್ವಾಮಿ ವಿವೇಕಾನಂದರ 160ನೇ ಜನ್ಮ ವರ್ಷಾಚರಣೆ ಅಂಗವಾಗಿ ಬಿಜೆಪಿ ಸರ್ಕಾರ ‘ವಿವೇಕ’ ಯೋಜನೆ ಆರಂಭಿಸಿತ್ತು. ಈ ಯೋಜನೆಯಡಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಉದ್ದೇಶಿತ ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಧಿಕಾರಿಗಳು ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲರಾಗಿದ್ದಾರೆ.

    ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚುವರಿ ಕೊಠಡಿಗಳನ್ನು ಒದಗಿಸಲು ರಾಜ್ಯ ಸರ್ಕಾರವು ‘ವಿವೇಕ’ ಎಂಬ ಹೊಸ ಯೋಜನೆ ಜಾರಿಗೊಳಿಸಿತ್ತು. ಇದರ ಅಡಿ ಜಿಲ್ಲೆಗೆ 295 ಕೊಠಡಿಗಳನ್ನು ಸರ್ಕಾರ ಮಂಜೂರು ಮಾಡಿದೆ. ನಿರ್ಮಾಣ ಕಾಮಗಾರಿಯನ್ನು ಪಂಚಾಯತ್ ರಾಜ್ ಹಾಗೂ ಲೋಕೋಪಯೋಗಿ ಇಲಾಖೆಗಳು ನಿರ್ವಹಿಸುತ್ತಿವೆ. ಶೈಕ್ಷಣಿಕ ವರ್ಷ ಆರಂಭವಾಗುವ ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ಕೊಠಡಿಗಳ ನಿರ್ಮಾಣ ವಿಳಂಬದಿಂದ ಜಿಲ್ಲೆಯ ಹಲವು ಗ್ರಾಮಗಳ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗುತ್ತಿದೆ.

    ಏನಿದು ವಿವೇಕ ಯೋಜನೆ?: ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಕೊರತೆಯಿಂದ ಹಲವೆಡೆ 2- 3 ತರಗತಿಯ ಮಕ್ಕಳು ಒಂದೇ ತರಗತಿಯಲ್ಲಿ ಕುಳಿತು ಪಾಠ ಆಲಿಸಬೇಕಾಗಿದೆ. ಇಂಥ ಸಮಸ್ಯೆಗಳನ್ನು ಹೋಗಲಾಡಿಸಲು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 30 ಶಾಲೆಗಳಿಗೆ ಹೊಸ ಕೊಠಡಿಗಳನ್ನು ಮಂಜೂರು ಮಾಡಲು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ನ. 14ರಂದು ಹೊಸ ಕೊಠಡಿಗಳನ್ನು ನಿರ್ಮಿಸುವ ವಿವೇಕ ಯೋಜನೆಯನ್ನು ೋಷಿಸಿದ್ದರು.

    ಜಿಲ್ಲೆಯ 295 ಶಾಲೆಗಳ ಪೈಕಿ 271 ಶಾಲೆಗಳಲ್ಲಿ ಕಟ್ಟಡ ಕಾಮಗಾರಿ ಆರಂಭಗೊಂಡಿದೆ. 42 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಬೆರಳೆಣಿಕೆಯಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ವಿಳಂಬದ ಬಗ್ಗೆ ಶಾಲಾ ಸುಧಾರಣಾ ಸಮಿತಿ, ಪಾಲಕರಿಂದ ದೂರುಗಳು ಕೇಳಿಬಂದಿವೆ. ಕಾಮಗಾರಿ ಸ್ಥಳಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪಾ ಟಿ.ಕೆ. ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತ್ವರಿತಗೊಳಿಸಲು ಸೂಚಿಸಿದ್ದಾರೆ.

    ಜಿಲ್ಲೆಗೆ 295 ಕೊಠಡಿ ಮಂಜೂರು: ವಿವೇಕ ಯೋಜನೆಯಡಿ ಜಿಲ್ಲೆಗೆ 295 ಕೊಠಡಿಗಳು ಮಂಜೂರು ಆಗಿವೆ. ಮತ್ತೊಂದೆಡೆ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ 20, ಧಾರವಾಡ ಶಹರದಲ್ಲಿ 31, ಧಾರವಾಡ ಗ್ರಾಮೀಣದಲ್ಲಿ 79, ಹುಬ್ಬಳ್ಳಿ ಶಹರದಲ್ಲಿ 48, ಹುಬ್ಬಳ್ಳಿ ಗ್ರಾಮೀಣದಲ್ಲಿ 47, ಕಲಘಟಗಿಯಲ್ಲಿ 75, ಕುಂದಗೋಳದಲ್ಲಿ 82, ನವಲಗುಂದದಲ್ಲಿ 66 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 44 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಒಟ್ಟು 492 ಸರ್ಕಾರಿ ಶಾಲಾ ಕೊಠಡಿಗಳು ಬಳಕೆಗೆ ಯೋಗ್ಯವಲ್ಲ ಎಂದು ಗುರುತಿಸಲಾಗಿದ್ದರೂ ನೆಲಸಮಗೊಳಿಸುವ ಪ್ರಕ್ರಿಯೆ ನಡೆದಿಲ್ಲ.

    ಜಿಲ್ಲೆಯ ಹಲವೆಡೆ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ್ದೇನೆ. ಆಗಸ್ಟ್ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ, ರಾಜ್ಯ ವಿಧಾನಸಭೆ ಚುನಾವಣೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಸದ್ಯ ಬಹುತೇಕ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡು ಪೂರ್ಣಗೊಳಿಸುವಂತೆ ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

    I ಸ್ವರೂಪಾ ಟಿ.ಕೆ., ಜಿಲ್ಲಾ ಪಂಚಾಯಿತಿ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts