More

    ಸಾವಯವ ಕೃಷಿಯಲ್ಲೇ ಸಿಕ್ತು ಭರಪೂರ ಖುಷಿ

    ಸಾವಯವ ಕೃಷಿಯಲ್ಲೇ ಸಿಕ್ತು ಭರಪೂರ ಖುಷಿ

    ತರೀಕೆರೆ: ಹೆಚ್ಚು ಇಳುವರಿ ಬಯಸಿ ರಾಸಾಯನಿಕ ಬಳಸುವ ಕೃಷಿಕರು ನಂತರ ನಿರೀಕ್ಷಿತ ಲಾಭ ಇಲ್ಲವೆಂದು ಅದರಿಂದಲೂ ವಿಮುಖರಾಗಿದ್ದೂ ಇದೆ. ಆದರೆ ಅಮೃತಾಪುರ ಹೋಬಳಿ ವಿಠ್ಠಲಾಪುರ ಗ್ರಾಮದಲ್ಲಿ ಸಾವಯವ ಕೃಷಿಯಿಂದಲೇ ಹೆಚ್ಚಿನ ಇಳುವರಿ ಪಡೆಯುತ್ತಿರುವ ರೈತ 16 ಎಕರೆ ಪ್ರದೇಶದಲ್ಲಿ ಬಹು ಬೆಳೆ ಬೆಳೆದು ಯಶಸ್ಸು ಕಂಡಿದ್ದಾರೆ.

    ವಿಠ್ಠಲಾಪುರ ಗ್ರಾಮದ ಪ್ರಗತಿಪರ ಕೃಷಿಕ ಜಿ.ವೀರಪ್ಪ ಕಳೆದ 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮೊದಲು ಟೈಲರ್ ಆಗಿದ್ದ ವೀರಣ್ಣ ಕುಟುಂಬ ನಿರ್ವಹಣೆಗಾಗಿ ಕೃಷಿಗೆ ಒತ್ತು ನೀಡಿದರು. ಮಕ್ಕಳು, ಮೊಮ್ಮೊಕ್ಕಳು ಸೇರಿ 15 ಜನರಿರುವ ಅವಿಭಕ್ತ ಕುಟುಂಬಕ್ಕೆ ಇವರೇ ಆಸರೆ. ಇವರ ಕಾಯಕಕ್ಕೆ ಅಣ್ಣ ರುದ್ರಪ್ಪ ಜತೆಗೂಡಿದ್ದಾರೆ.

    ಆರಂಭದಲ್ಲಿ ರಾಸಾಯನಿಕ ಬಳಸುವ ಮನಸ್ಸಿತ್ತಾದರೂ, ಗೊಬ್ಬರ ಖರೀದಿಸಲು ಸಾಧ್ಯವಾಗದೇ ಸಾವಯವದ ಮೊರೆ ಹೋದರು. ಇಂದು ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ ಅವರ ಸಾವಯವ ಕೃಷಿ ಮೇಲಿನ ಪ್ರೀತಿ ಕೊಂಚವೂ ಕಡಿಮೆಯಾಗಿಲ್ಲ. ಮನೆ ಮಂದಿಯೆಲ್ಲ ಬೆಳಗ್ಗೆ ದೇಸಿ ಆಕಳ ಹಾಲು, ಸಾವಯುವ ಬೆಲ್ಲ ಸೇರಿಸಿ ಮಾಡುವ ಕಷಾಯ ಕುಡಿಯುವುದರಿಂದ ಹಿಡಿದು ಊಟಕ್ಕೂ ಸಾವಯವ ಪಾದರ್ಥಗಳನ್ನೇ ಬಳಸುತ್ತಾರೆ.

    ಏಕರೂಪ ಬೆಳೆಗೆ ಜೋತುಬೀಳದೆ ಅವಿಭಕ್ತ ಕುಟುಂಬದ ಪಾಲಿಗಿರುವ 16 ಎಕರೆ ಭೂಮಿಯಲ್ಲಿ ಅಡಕೆ, ತೆಂಗು, ಬಾಳೆ, ಕೋಕೊ, ಜಾಯಿಕಾಯಿ, ಕಾಳುಮೆಣಸು, ಭತ್ತ, ಕಬ್ಬು, ರಾಗಿ, ಹುರುಳಿ, ಅರಿಶಿಣ, ಉದ್ದು, ಹೆಸರು, ಈರುಳ್ಳಿ, ಶುಂಠಿ ಬೆಳೆಯುತ್ತಿದ್ದಾರೆ.

    ಅರಣ್ಯ ಕೃಷಿಗೂ ಒತ್ತು ನೀಡಿರುವ ಅವರು ಕಲ್ಲು ಬಂಡೆಗಳಿಂದ ಕೂಡಿರುವ ಖರಾಬು ಜಮೀನಿನಲ್ಲಿ ಬೀಟೆ, ಸಾಗವಾನಿ, ಹೊನ್ನೆ, ಶ್ರೀಗಂಧ, ವಿವಿಧ ಜಾತಿಯ ಹಲಸು, ಹಳದಿ ಬಿದಿರು, ಮಾರಿಹಾಳ, ಭೀಮಾ, ಕೊಳಲು, ಟೋಲ್ಟ್ ಬಿದಿರು ಬೆಳೆಯುತ್ತಿದ್ದಾರೆ.

    ಕೃಷಿ ಭೂಮಿಯಲ್ಲಿ 40ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಲಾಗಿದೆ. ಇದರಲ್ಲಿ ಒಂದೆರಡು ಕೊಳವೆ ಬಾವಿ ಹೊರತು ಇನ್ನಾವುದರಲ್ಲೂ ಹನಿ ನೀರಿಲ್ಲ. ಹಾಗಾಗಿ ವೀರಣ್ಣ ಬಚ್ಚಲು ಮನೆ, ದನದ ಕೊಟ್ಟಿಗೆ ತೊಳೆಯುವ ಸುಮಾರು 4 ಸಾವಿರ ಲೀಟರ್​ನಷ್ಟು ನೀರನ್ನು ಪೈಪ್​ಲೈನ್ ಮೂಲಕ ಜಮೀನಿನಲ್ಲಿರುವ ಎರೆಹುಳು ಗೊಬ್ಬರದ ತೊಟ್ಟಿಗೆ ಪೂರೈಕೆ ಮಾಡಿ ಅಲ್ಲಿಂದ ಮೋಟಾರ್ ಮೂಲಕ ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಗಿಡಕ್ಕೂ ನಿಯಮಿತವಾಗಿ ಉಣಿಸುತ್ತಿದ್ದಾರೆ.

    ಸಾಕಿದ ಎಳೇ ಕರುಗಳು ಮೃತಪಟ್ಟರೆ ಅವುಗಳ ಮೂಲಕವೇ ಗೋನಂದ ಜಲ ತಯಾರಿಸುವ ಕಲೆ ಕಲಿತುಕೊಂಡಿದ್ದಾರೆ. ಈ ವಿಧಾನದಿಂದ ಉತ್ಪಾದಿಸುವ 50 ಮಿ.ಲೀ. ಗೋನಂದ ಜಲ ಅರ್ಧ ಟನ್ ಕೊಟ್ಟಿಗೆ ಗೊಬ್ಬರಕ್ಕೆ ಸಮನಾಗಿದೆ ಎನ್ನುತ್ತಾರೆ ವೀರಣ್ಣ. ಕೃಷಿ ಮಾಹಿತಿಗೆ ವೀರಣ್ಣ ಅವರ ಮೊ. 7676420047, 9448247730 ಸಂರ್ಪಸಬಹುದು.

    ಅರಸಿ ಬಂದ ಪ್ರಶಸ್ತಿಗಳು: ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಅಸಾಮಾನ್ಯ ಸಾಧನೆ ಮಾಡಿದ ವೀರಣ್ಣ ಅವರಿಗೆ ರಾಜ್ಯ ಅರಣ್ಯ ಇಲಾಖೆ ಪರಿಸರ ಪ್ರೇಮಿ ಪ್ರಶಸ್ತಿ,ಬೆಂಗಳೂರಿನ ಜಲಸಂಪನ್ಮೂಲ ಸಚಿವಾಲಯದಿಂದ ಪ್ರಗತಿಪರ ರೈತ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಗತಿಶೀಲ ರೈತ, ದೆಹಲಿ ಆಕಾಶವಾಣಿ ಕೇಂದ್ರದಿಂದ ಮಾದರಿ ರೈತ ಹೀಗೆ ಹಲವು ಪ್ರಶಸ್ತಿಗಳು ಅರಸಿಬಂದಿವೆ.

    ಹೈನುಗಾರಿಕೆ ಬದುಕಿನ ಅವಿಭಾಜ್ಯ ಅಂಗ: ಕೃಷಿಗೆ ಪೂರಕವಾಗಿ ವೀರಣ್ಣ ಮನೆಯಲ್ಲಿ ಗೀರ್, ಸಾಯಿವಾಲಾ, ಅಮೃತ್​ವುಹಲ್, ಹಳ್ಳಿಕಾರ್, ಕಾಂಕ್ರೇಜ್ ಮತ್ತಿತರ ದೇಸಿ ತಳಿಯ 30 ಆಕಳನ್ನು ಸಾಕಿದ್ದಾರೆ. ಜಾನುವಾರು ಮೂತ್ರದಿಂದ ಜೀವಾಮೃತ ಸಿದ್ಧಪಡಿಸುತ್ತಾರೆ. ಅದನ್ನು ವಿವಿಧ ಪೈರಿಗೆ ಸಿಂಪಡಿಸಿ ಸಮೃದ್ಧ ಬೆಳೆ ತೆಗೆಯುತ್ತಾರೆ.

    ಗೋಕಟ್ಟೆ ನಿರ್ವಣ: ಪ್ರಾಣಿಪ್ರಿಯ ವೀರಣ್ಣ ಊರಿನ ಜಾನುವಾರು, ಕಾಡುಪ್ರಾಣಿಗಳಿಗಾಗಿ ಕಾಡಂಚಿನ ಗೋಮಾಳದ ಒಂದು ಎಕರೆ ಜಾಗದಲ್ಲಿ ಗೋಕಟ್ಟೆ ನಿರ್ವಿುಸಿದ್ದಾರೆ. ಗೋಕಟ್ಟೆ ನಿರ್ವಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 1 ಲಕ್ಷ ರೂ. ದೇಣಿಗೆ ಜತೆ ಸಾರ್ವಜನಿಕರಿಂದ ನೆರವು ಪಡೆದಿದ್ದಾರೆ. ಅದರ ಹೊರತಾಗಿ ತಗಲಿರುವ 15 ಲಕ್ಷ ರೂ. ವೆಚ್ಚವನ್ನು ಸ್ವತಃ ಭರಿಸಿದ್ದಾರೆ.

    ಕೃಷಿ ಸಾಧನೆ ಒಬ್ಬರಿಂದ ಸಾಧ್ಯವಾಗುವುದಿಲ್ಲ. ಮನೆ ಮಂದಿ ಕೈಜೋಡಿಸಿದರೆ ಸುಲಭವಾಗುವುದು. ಜಮೀನಿನ ಶೇ.90ರಷ್ಟು ಕೆಲಸ ನನ್ನ ಕುಟುಂಬಸ್ಥರೆಲ್ಲರೂ ಸೇರಿ ಮಾಡುತ್ತಿದ್ದಾರೆ. 30 ವರ್ಷಗಳಿಂದಲೂ ಅಡಕೆ ಸಿಪ್ಪೆಯನ್ನು ಗೊಬ್ಬರವಾಗಿಸಿ ಬಳಸುತ್ತಿದ್ದೇನೆ. ಜಮೀನಿನಲ್ಲಿ ಉಳುಮೆ ಮಾಡದೆ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ ಎನ್ನುತ್ತಾರೆ ಜಿ.ವೀರಣ್ಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts