More

    ವಿಶ್ವೇಶತೀರ್ಥರ ಶಿಲಾಮಯ ವೃಂದಾವನ ಸಿದ್ಧ

    ಉಡುಪಿ: ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನಿರ್ಯಾಣ ಹೊಂದಿ ವರ್ಷವಾಗುತ್ತಿದೆ. ಶ್ರೀಗಳ ಇಚ್ಛೆಯಂತೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಸಮಾಧಿ ನಿರ್ಮಾಣವಾಗಿದ್ದು, ಸಂಪ್ರದಾಯದಂತೆ ಪ್ರಥಮ ಆರಾಧನೆಯ ದಿನ (ಡಿ.17) ವೃಂದಾವನ ಪ್ರತಿಷ್ಠೆಗೆ ಸಕಲ ಸಿದ್ಧತೆ ನಡೆಯುತ್ತಿದೆ. 40 ಲಕ್ಷ ರೂ. ವೆಚ್ಚದಲ್ಲಿ ಸುಂದರ ಶಿಲಾಮಯ ವೃಂದಾವನ ನಿರ್ಮಾಣ ಕಾಮಗಾರಿಗೆ ಇದೀಗ ಅಂತಿಮ ಸ್ಪರ್ಶ ನೀಡಲಾಗುತ್ತಿದೆ.
    234 ಚದರ ಅಡಿ ವಿಸ್ತೀರ್ಣದಲ್ಲಿ 13 ಅಡಿ ಎತ್ತರದ ಗುಡಿಯಲ್ಲಿ ನಾಲ್ಕು ಅಡಿ ಎತ್ತರ ವೃಂದಾವನ ಪ್ರತಿಷ್ಠಾಪಿಸಲಾಗುತ್ತದೆ. ಶ್ರೀಗಳ ವೃಂದಾವನದ ಬಲಭಾಗದಲ್ಲಿ ಪಲಿಮಾರು ಮತ್ತು ಭಂಡಾರಕೇರಿ ಮಠಾಧೀಶರಾಗಿದ್ದ, ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನವನ್ನೂ ಸ್ಥಾಪಿಸಲಾಗುತ್ತದೆ. ಒಂದೇ ಸಂಕೀರ್ಣದೊಳಗೆ ಏಕ ಪಾಣಿಪೀಠದಲ್ಲಿ ಗುರು-ಶಿಷ್ಯರ ವೃಂದಾವನ ಪ್ರತಿಷ್ಠೆ ಇಲ್ಲಿನ ವಿಶೇಷ.

    ಮೂರು ಶಿಲೆಗಳ ಸಮುಚ್ಛಯ: ಮೂರು ತಿಂಗಳಿಂದ ನಾಲ್ಕೈದು ತಂಡಗಳಲ್ಲಿ 20 ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಡಿ.10ಕ್ಕೆ ವೃಂದಾವನದ ಕಾಮಗಾರಿ ಪೂರ್ಣಗೊಳ್ಳಲಿದೆ. ಮುರ್ಡೇಶ್ವರದಲ್ಲಿ ಇಳಕಲ್ಲಿನ ಕೆಂಪು ಕಲ್ಲಿನ ಕೆತ್ತನೆ, ನೆಲ್ಲಿಕಾರಿನಲ್ಲಿ ಕಪ್ಪು ಕಲ್ಲು, ಎಲ್ಲೂರಿನಲ್ಲಿ ಬೂದು ಬಣ್ಣದ ಕಲ್ಲುಗಳ ಕೆತ್ತನೆ ಕೆಲಸ ನಡೆದಿದೆ. ಎರಡು ವೃಂದಾವನಗಳಲ್ಲಿಯೂ ಕಣ್ಣಿಗೆ ಕಾಣುವಂತೆ ದೇವತಾ ವಿಗ್ರಹಗಳನ್ನು ಕೆತ್ತಲಾಗಿದೆ. ವೃಂದಾವನಗಳಲ್ಲಿ ದಶಾವತಾರ, ಹನುಮ-ಭೀಮ-ಮಧ್ವ-ವಾಯು, ವಾಸುದೇವಾದಿ ಭಗವದ್ರೂಪಗಳ ಸಹಿತ 75 ಪ್ರತಿಮೆಗಳಿವೆ.

    ಶ್ರೀಗಳಿಲ್ಲದ ವರ್ಷ: 89ರ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲವಾಗಿದ್ದ ಪೇಜಾವರ ಶ್ರೀಗಳು, 2019ರ ಡಿಸೆಂಬರ್ 19ರಂದು ಆಸ್ಪತ್ರೆಗೆ ದಾಖಲಾಗುವ ಕೆಲವೇ ಗಂಟೆ ಮುನ್ನ ರಾಜಾಂಗಣದಲ್ಲಿ ಮಹಾಭಾರತದ ಪ್ರವಚನ ನೀಡಿದ್ದರು. ಡಿ.20ರ ಬೆಳಗ್ಗೆ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಾದ ಶ್ರೀಗಳು 9 ದಿನ ತೀವ್ರ ನಿಗಾ ಘಟಕದಲ್ಲಿದ್ದು, 29ರಂದು ಬೆಳಗ್ಗೆ ನಿರ್ಯಾಣ ಹೊಂದಿದ್ದರು. ನಂತರ ಶ್ರೀಗಳ ಮನದಾಸೆಯಂತೆ ಕರ್ಮಭೂಮಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಪಾರ್ಥಿವಶರೀರವನ್ನು ಭೂಗತ ಮಾಡಲಾಗಿತ್ತು. ಈ ಪ್ರದೇಶ ತೀರ್ಥಕ್ಷೇತ್ರವಾಗಿ ಮಾರ್ಪಾಡಾಗಿತ್ತು. ನಿತ್ಯ ನೂರಾರು ಭಕ್ತರು, ಶಿಷ್ಯರು ಆಗಮಿಸಿ ಶ್ರೀಗಳ ಸೇವೆ ಮಾಡುತ್ತಿದ್ದಾರೆ.

    ಗುರುಗಳ ಪ್ರಥಮ ಆರಾಧನೋತ್ಸವ ಅದ್ದೂರಿಯಾಗಿ ನಡೆಸುವ ಬಯಕೆ ಇತ್ತು. ಆದರೆ ಕೊರೊನಾ ಕಾರಣದಿಂದ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಧಾರ್ಮಿಕ ರೀತಿ ರಿವಾಜುಗಳಿಗೆ ಚ್ಯುತಿ ಬಾರದಂತೆ ವೃಂದಾವನ ಪ್ರತಿಷ್ಠೆಯನ್ನು ಡಿ.17ರಂದು ನಡೆಸಲಾಗುವುದು. ಕಾರ್ಯಕ್ರಮವನ್ನು ಭಕ್ತರು ಆನ್‌ಲೈನ್ ಮೂಲಕ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗುವುದು.
    – ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts