More

    ಹಳ್ಳಿ ಹಕ್ಕಿ ಶೋಕ ರಾಗ: ಬಿಎಸ್​ವೈ ಮಾತು ಕೇಳದ ವಿಶ್ವನಾಥ್​ಗೆ ಸಂಕಷ್ಟ

    ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿದ್ದ ಅಡಗೂರು ಎಚ್. ವಿಶ್ವನಾಥ್ ಆಸೆಗೆ ತಣ್ಣೀರೆರಚಿರುವ ಹೈಕೋರ್ಟ್, ಸಂವಿಧಾನಬದ್ಧವಾಗಿ ಮರುಆಯ್ಕೆಯಾಗದ ಕಾರಣ ಸಚಿವರಾಗಲು ಅನರ್ಹರಾಗಿದ್ದಾರೆಂದು ಸ್ಪಷ್ಟಪಡಿಸಿದೆ. ಈ ಬೆಳವಣಿಗೆಯಿಂದಾಗಿ ವಿಶ್ವನಾಥ್ ಅವರ ರಾಜಕೀಯ ಜೀವನದಲ್ಲಿ ಅತಿ ದೊಡ್ಡ ಹಿನ್ನಡೆಯಾದಂತಾಗಿದೆ. ಜತೆಯಲ್ಲೇ ‘ಅನರ್ಹತೆ’ ಹಣೆಪಟ್ಟಿ ಬಾಕಿ ಉಳಿದಂತಾಗಿದೆ. ಮತ್ತೊಂದೆಡೆ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್​ಗೆ ಬಿಗ್ ರಿಲೀಫ್ ಸಿಕ್ಕಿರುವುದರಿಂದ ಮಂತ್ರಿಗಿರಿಗೆ ವಿಘ್ನ ದೂರವಾದಂತಾಗಿದೆ.

    ಕಾಂಗ್ರೆಸ್​ನಿಂದ ಜೆಡಿಎಸ್​ಗೆ: ಜಿಗಿದು ಪಕ್ಷದ ಅಧ್ಯಕ್ಷರೂ ಆಗಿದ್ದ ವಿಶ್ವನಾಥ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದರು. ಬಳಿಕ ಅನರ್ಹತೆ ಪಟ್ಟ ಕಟ್ಟಿಕೊಂಡು ಉಪ ಚುನಾವಣೆಯಲ್ಲಿ ಈಜಲು ಸಾಧ್ಯವಾಗದೆ ಸೋಲಿನ ಸುಳಿಗೆ ಸಿಲುಕಿದ್ದರು. ಹಾಗೂ ಹೀಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವನಾಥ್ ಅವರಿಗೆ ವಿಧಾನಪರಿಷತ್​ಗೆ ನಾಮನಿರ್ದೇಶನ ಮಾಡಿದ್ದರು. ಈ ನಡುವೆ ಮಂತ್ರಿ ಸ್ಥಾನವೂ ಬೇಕೆಂದು ಹಠಕ್ಕೆ ಬಿದ್ದು ಒತ್ತಡ ತರುತ್ತಿದ್ದ ಅವರಿಗೆ ನ್ಯಾಯಾಲಯದ ತೀರ್ಪು ಆಘಾತ ತಂದಿದೆ. ಈ ಬೆಳವಣಿಗೆ ಮುಂದೆ ಅವರ ಪರಿಷತ್ ಸದಸ್ಯ ಸ್ಥಾನಕ್ಕೂ ಕುತ್ತು ತರುವ ಸಾಧ್ಯತೆ ಇದೆ ಎಂಬ ವಾದವಿದೆ. ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್​ಗೆ ಸಚಿವ ಸ್ಥಾನ ನೀಡದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಬೆಂಗಳೂರಿನ ವಕೀಲ ಎ. ಹರೀಶ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕುರಿತು ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿದೆ.

    ಎಂಟಿಬಿ, ಶಂಕರ್ ನಿರಾಳ: ವಿಧಾನ ಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅಮಾನತುಗೊಂಡಿದ್ದರೂ ವಿಧಾನಸಭೆಯಿಂದ ಪರಿಷತ್​ಗೆ ಆಯ್ಕೆಯಾಗಿದ್ದಾರೆ. ಸಂವಿಧಾನದ ಪರಿಚ್ಛೇದ 164 (1ಬಿ) ಯಲ್ಲಿ ಅನರ್ಹಗೊಂಡ ಶಾಸಕರು ಸಚಿವರಾಗಬೇಕಿದ್ದರೆ ಅವರು ವಿಧಾನ ಸಭೆ ಅಥವಾ ವಿಧಾನ ಪರಿಷತ್​ಗೆ ಮರು ಆಯ್ಕೆಯಾಗಿರಬೇಕು ಎಂದು ಹೇಳಿದೆ. ನಾಗರಾಜ್ ಹಾಗೂ ಶಂಕರ್ ಪರಿಷತ್​ಗೆ ಆಯ್ಕೆಯಾಗಿರುವುದರಿಂದ ಸಚಿವ ಸ್ಥಾನ ನೀಡದಂತೆ ಕೋರಿರುವ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಪೀಠ, ಅರ್ಜಿ ಕುರಿತು ಅಂತಿಮ ತೀರ್ಪು ಪ್ರಕಟಿಸುವವರೆಗೂ ಈ ಮಧ್ಯಂತರ ಆದೇಶ ಜಾರಿಯಲ್ಲಿಂದು ಸ್ಪಷ್ಟಪಡಿಸಿದೆ.

    ಸಿಎಂ ನಿಯಮ ಪಾಲಿಸಬೇಕು: ರಾಜ್ಯಪಾಲರು ಸಾಂವಿಧಾನಿಕವಾಗಿ ಹಲವು ವಿನಾಯಿತಿ ಪಡೆದಿದ್ದಾರೆ. ಯಾವುದೇ ನ್ಯಾಯಾಲಯ ಅವರ ವಿಚಾರಣೆ ನಡೆಸಲು ಅಥವಾ ಅವರಿಗೆ ನಿರ್ದೇಶನ ನೀಡಲು ಅವಕಾಶವಿಲ್ಲ. ಆದ್ದರಿಂದಲೇ, ರಾಜ್ಯಪಾಲರನ್ನು ಅರ್ಜಿಯಿಂದ ಕೈಬಿಡಲಾಗಿದೆ. ಆದರೆ, ಸಿಎಂ ಸಂವಿಧಾನದ ಅಡಿಯಲ್ಲಿ ಹುದ್ದೆ ಪಡೆದಿರುವುದರಿಂದ ಅವರು ಸಚಿವ ಸ್ಥಾನಕ್ಕೆ ಹೆಸರುಗಳನ್ನು ಸೂಚಿಸುವ ಮುನ್ನ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.

    ಸಂವಿಧಾನ ಹೇಳುವುದೇನು?
    ಪರಿಚ್ಛೇದ 164(1ಬಿ) : ಯಾವುದೇ ಪಕ್ಷಕ್ಕೆ ಸೇರಿದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಅನರ್ಹತೆಗೊಳಗಾದರೆ, ಆತ ಅನರ್ಹಗೊಂಡ ದಿನದಿಂದ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅಥವಾ ಚುನಾವಣೆಗಳನ್ನು ಎದುರಿಸಿ ವಿಧಾನಸಭೆ ಅಥವಾ ವಿಧಾನಪರಿಷತ್​ಗೆ ಮರು ಆಯ್ಕೆಯಾಗುವವರೆಗೆ ಸಚಿವ ಸ್ಥಾನ ಪಡೆಯಲು ಸಾಧ್ಯವಿಲ್ಲ.
     ಪರಿಚ್ಛೇದ 361 (ಬಿ): ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯ ಅನರ್ಹಗೊಂಡಲ್ಲಿ ಮರು ಆಯ್ಕೆಯಾಗುವವರೆಗೆ ಸಂಭಾವನೆ ಪಡೆಯುವಂಥ ರಾಜಕೀಯ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ವೇತನ ಅಥವಾ ಸಂಭಾವನೆಯಾಗಿ ನೀಡುವಂತಹ ಹುದ್ದೆಗಳಿಗೆ ಅವರನ್ನು ನೇಮಕ ಮಾಡುವಂತಿಲ್ಲ.

    ಏನಿದು ಪ್ರಕರಣ?: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಎಂಟಿಬಿ ನಾಗರಾಜ್, ಆರ್.ಶಂಕರ್, ವಿಶ್ವನಾಥ್ ಸೇರಿ ಒಟ್ಟು 17 ಶಾಸಕರನ್ನು ಹಾಲಿ ವಿಧಾನಸಭೆ ಮುಗಿಯುವವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿ ಹಿಡಿದಿತ್ತಾದರೂ, ವಿಧಾನಸಭೆ ಮುಗಿಯುವರೆಗೂ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಅನರ್ಹರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸಿ ಮರು ಆಯ್ಕೆಯಾಗಬಹುದು ಎಂದು ತೀರ್ಪು ನೀಡಿತ್ತು. ಇದರಿಂದ, ವಿಶ್ವನಾಥ್ ಹುಣಸೂರಿನಿಂದ ಹಾಗೂ ಎಂಟಿಬಿ ನಾಗರಾಜ್ ಹೊಸಕೋಟೆಯಿಂದ ಸ್ಪರ್ಧಿಸಿದ್ದರಾದರೂ, ಚುನಾವಣೆಯಲ್ಲಿ ಸೋತಿದ್ದರು. ಆರ್. ಶಂಕರ್ ಯಾವುದೇ ಚುನಾವಣೆ ಎದುರಿಸಿರಲಿಲ್ಲ. ಬಳಿಕ ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್ ಅವರನ್ನು ಬಿಜೆಪಿಯಿಂದ ಪರಿಷತ್​ಗೆ ಆಯ್ಕೆ ಮಾಡಲಾಗಿತ್ತು. ವಿಶ್ವನಾಥ್ ಸಾಹಿತಿ ಕೋಟಾ ಅಡಿ ನಾಮನಿರ್ದೇಶನಗೊಂಡಿದ್ದರು.

    ಸಿಎಂ ಮಾತು ಕೇಳದ ವಿಶ್ವನಾಥ್! :ಉಪ ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಖುದ್ದು ಸಿಎಂ ಯಡಿಯೂರಪ್ಪ ಅವರೇ ಎಚ್.ವಿಶ್ವನಾಥ್ ಜತೆ ಮಾತನಾಡಿ, ಮುಂದೆ ವಿಧಾನ ಪರಿಷತ್​ಗೆ ಟಿಕೆಟ್ ಕೊಟ್ಟು ಆಯ್ಕೆ ಮಾಡಿಕೊಳ್ಳುವುದು ನನ್ನ ಜವಾಬ್ದಾರಿ. ಈ ಚುನಾವಣೆಗೆ ಸ್ಪರ್ಧೆ ಬೇಡ. ಅಲ್ಲಿ ಸಿ.ಪಿ. ಯೋಗೇಶ್ವರ್ ಸ್ಪರ್ಧಿಸಲು ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ ಹೇಳಿದ್ದರು. ಆದರೆ ಆ ಮಾತನ್ನು ವಿಶ್ವನಾಥ್ ಒಪ್ಪಿರಲಿಲ್ಲ. ಕೊನೆಗೆ ತನ್ನ ಮಗನಿಗೆ ಟಿಕೆಟ್ ನೀಡುವುದಾದರೆ, ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಷರತ್ತು ಹಾಕಿದರು. ಆದರೆ ಅದನ್ನು ಪಕ್ಷ ಒಪ್ಪಲಿಲ್ಲ. ಬದಲಿಗೆ ಸ್ಪರ್ಧೆ ಮಾಡುವುದಾದರೆ ನೀವೇ ನಿಲ್ಲಬೇಕು. ಇಲ್ಲದಿದ್ದರೆ ಪಕ್ಷದ ಆಯ್ಕೆಗೆ ಕ್ಷೇತ್ರ ಬಿಟ್ಟು ಬಿಡಿ ಎಂದು ಕಟ್ಟುನಿಟ್ಟಿನ ಸಂದೇಶ ಪಕ್ಷದಿಂದ ಹೊರಬಿದ್ದ ಬಳಿಕ, ಅನಿವಾರ್ಯ ಸಂದರ್ಭದಲ್ಲಿ ವಿಶ್ವನಾಥ್ ಸ್ಪರ್ಧೆಗೆ ಒಪ್ಪಿ ಕಣಕ್ಕಿಳಿದಿದ್ದರು. ಒಮ್ಮೆ ಕ್ಷೇತ್ರ ತನ್ನ ಹಿಡಿತದಿಂದ ಕೈ ತಪ್ಪಿದರೆ, ಮತ್ತೆಂದು ಅಲ್ಲಿ ರಾಜಕಾರಣ ಮಾಡುವುದು ಕಷ್ಟ ಎನ್ನುವುದು ವಿಶ್ವನಾಥ್ ಲೆಕ್ಕಾಚಾರವಾಗಿತ್ತು. ಆದರೆ, ಅವರನ್ನು ಮತದಾರ ಬೆಂಬಲಿಸಲಿಲ್ಲ. ಅಲ್ಲಿಗೆ ವಿಶ್ವನಾಥ್ ರಾಜಕೀಯ ಕೊನೆಗೊಂಡಿತ್ತು.

    ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಚಿವ ಸಂಪುಟ ಸೇರಲು ಅನರ್ಹ ಎಂಬ ರಾಜ್ಯ ಹೈಕೋರ್ಟ್ ತೀರ್ಪಿನಿಂದ ನೋವಾಗಿದೆ. ಈ ಬಗ್ಗೆ ವಿಶ್ವನಾಥ್ ಜತೆ ರ್ಚಚಿಸುತ್ತೇವೆ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗಿದೆ. ಶೀಘ್ರವೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ.
    | ಆರ್.ಅಶೋಕ್ ಕಂದಾಯ ಸಚಿವ

    ನ್ಯಾಯಾಲಯ ಹೇಳಿದ್ದೇನು?
    ಯಾವುದೇ ಶಾಸಕ ಅನರ್ಹಗೊಂಡ ಬಳಿಕ, ಮರು ಆಯ್ಕೆಯಾಗುವವರೆಗೂ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಾರದೆಂದು ಸಂವಿಧಾನದ ಪರಿಚ್ಛೇದ 164 (1ಬಿ) ಹಾಗೂ 361 (ಬಿ) ಸ್ಪಷ್ಟವಾಗಿ ಹೇಳಿವೆ. ವಿಶ್ವನಾಥ್ ವಿಧಾನಸಭೆಗಾಗಲಿ, ಪರಿಷತ್ತಿಗಾಗಲಿ ಮರು ಆಯ್ಕೆಯಾಗಿಲ್ಲ. ಬದಲಿಗೆ ನಾಮನಿರ್ದೇಶನಗೊಂಡಿದ್ದಾರೆ. ಆದ್ದರಿಂದ, ಸಚಿವ ಸ್ಥಾನಕ್ಕೆ ಪರಿಗಣಿಸುವಂತಿಲ್ಲ. ಸಚಿವ ಸ್ಥಾನಕ್ಕೆ ಹೆಸರುಗಳನ್ನು ಸೂಚಿಸುವಾಗ ವಿಶ್ವನಾಥ್ ಅವರ ಅನರ್ಹತೆ ವಿಚಾರವನ್ನು ಮುಖ್ಯಮಂತ್ರಿಗಳು ಪರಿಗಣಿಸಬೇಕು.

    https://www.vijayavani.net/jds-meeting-kona-reddy-nikhil-kumaraswamy-hdd-hd-revanna/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts