More

    ದೇಶದ ಸಂಸ್ಕೃತಿ ತಿಳಿಸುವ ಶಿಲ್ಪಕಲೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

    ಮಂಡ್ಯ: ಶತಮಾನದಿಂದ ಜನರಿಗೆ ಮಾರ್ಗದರ್ಶನವಾಗಿರುವ ಭವ್ಯ ಪರಂಪರೆಯನ್ನು ಹೊಂದಿರುವ ಶಿಲ್ಪ ಕಲೆಯನ್ನು ನಾವು ಪ್ರಧಾನವಾಗಿ ದೊಡ್ಡ ದೇವಾಲಯಗಳಲ್ಲಿ ನೋಡಬಹುದು. ಮಾತ್ರವಲ್ಲದೆ ಶಿಲ್ಪಕಲೆ ದೇಶದ ಇತಿಹಾಸವನ್ನು, ಜನರ ಸಂಸ್ಕೃತಿ, ಆಚಾರ-ವಿಚಾರವನ್ನು ತಿಳಿಸುತ್ತದೆ. ಆದ್ದರಿಂದ ಸೂರ್ಯ ಚಂದ್ರ ಇರುವ ತನಕ ಜಕಣಾಚಾರಿ ಅವರ ಸ್ಮರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
    ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣ ದಿನಾಚರಣೆಯಲ್ಲಿ ಮಾತನಾಡಿದರು. ಶಿಲ್ಪಕಲೆಯಲ್ಲಿ ಕೆತ್ತನೆಯ ಜತೆಗೆ ಭಕ್ತಿ, ಭಾವ ದೈವತ್ವ ತುಂಬುವ ಶಕ್ತಿ ಶಿಲ್ಪಿಗಳಿಗಿದೆ. ಚರಿತ್ರೆಗಳನ್ನು ನೋಡಿದರೆ ಶಿಲ್ಪಕಲೆಯಲ್ಲಿ ಜಕಣಚಾರಿ ಅವರ ಸಾಧನೆ ಅಪಾರ. ಇವರ ಕಲೆಯನ್ನು ಮೀರಿಸಲು ಯಾರಿಗೂ ಸಾದ್ಯವಾಗುವುದಿಲ್ಲ ಎಂಬ ದೃಷ್ಟಿಯಿಂದ ಅಮರಶಿಲ್ಪಿ ಎಂಬ ಹೆಸರು ಅವರಿಗೆ ಬಂದಿದೆ ಎಂದರು.
    ದಕ್ಷಿಣ ಭಾರತದಲ್ಲಿ ವಾಸ್ತು ಶಿಲ್ಪ ಸಂಸ್ಕೃತಿ ಹಾಗೂ ಭವ್ಯತೆಯಲ್ಲಿ ಅಮರಶಿಲ್ಪಿ ಜಕಣಚಾರಿ ಅವರು ವಿಶೇಷ ಸಾಧನೆ ಮಾಡಿದ್ದಾರೆ. ಪ್ರಪಂಚದಲ್ಲಿ ವಾಸ್ತುಶಿಲ್ಪದ ತೊಟ್ಟಿಲು ಎಂದರೆ ಅದು ಬೇಲೂರಿನ ಚನ್ನಕೇಶವ ದೇವಾಲಯ. ಇಂತಹ ಅದ್ಭುತವಾದ ಶಿಲ್ಪಕಲೆ ಪ್ರಪಂಚದ ಎಲ್ಲ ಭಾಗದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇಲೂರಿನಲ್ಲಿರುವ ಚನ್ನಕೇಶವ ದೇವಾಲಯ ಕರ್ನಾಟಕದಲ್ಲಿ ಇದೆ ಎಂಬುದು ಹೆಮ್ಮೆಯ ವಿಷಯ ಎಂದರು.
    ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಜಕಣಾಚಾರಿ ಅವರು ಪ್ರಸಿದ್ಧ ಶಿಲ್ಪಿಯಾದರೂ ತಮ್ಮ ಕೆತ್ತನೆಗಳಲ್ಲಿ ಎಲ್ಲಿಯೂ ಅವರ ಹೆಸರನ್ನು ಬರೆದುಕೊಳ್ಳಲಿಲ್ಲ. ಹಿಂದಿನ ಕಾಲದಲ್ಲಿ ಯಾವುದೋ ಒಂದು ಅಗಲವಾದ ಕಲ್ಲಿನ ಮೇಲೆ ನೀಲಿನಕ್ಷೆಯನ್ನ ತಯಾರು ಮಾಡಿಕೊಂಡು ದೇವಾಲಯಗಳ ಕೆತ್ತನೆ ಮಾಡುತ್ತಿದ್ದ ಚಾತುರ್ಯಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.
    ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ತಿರುಮಲಚಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ನಗರಸಭಾ ಸದಸ್ಯರಾದ ನಾಗೇಶ್, ಕುಮಾರ್, ಲಲಿತಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts