More

    26ರ ತಾಳ್ಮೆಗೆ ಇದೆ ಭಾರತ ಕಟ್ಟುವ ಶಕ್ತಿ!; ವಿಶ್ವಗುರು ಅಂಕಣ

    26ರ ತಾಳ್ಮೆಗೆ ಇದೆ ಭಾರತ ಕಟ್ಟುವ ಶಕ್ತಿ!; ವಿಶ್ವಗುರು ಅಂಕಣಅಮೆರಿಕದ ಹೊಸ ಅಧ್ಯಕ್ಷರ ಬಳಗವೂ ಬಾಯ್ಮುಚ್ಚಿಕೊಂಡೇ ಕೇಂದ್ರ ಸರ್ಕಾರದ ನೀತಿಗಳನ್ನು ಸಮರ್ಥಿಸಬೇಕಾಯ್ತು. ಕೆನಡಾ ಅಧ್ಯಕ್ಷ ಟ್ರುಡೋರಿಂದ ಮಾತೇ ಹೊರಡಲಿಲ್ಲ. ಸ್ವತಃ ಇಂಗ್ಲೆಂಡು ‘ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ’ ಎಂದುಬಿಟ್ಟಿತು. ಎಲ್ಲ ದೇಶದ್ರೋಹಿಗಳು ಈಗ ಒಂದೇ ಕಡೆ ಸಿಕ್ಕಿಬಿದ್ದಿದ್ದಾರೆ. ಇನ್ನು ಆಟ ಸಲೀಸು.

    ಮೊನ್ನೆಯ ಜನವರಿ 26 ಭಾರತದ ಇತಿಹಾಸದಲ್ಲಿ ಅತ್ಯಂತ ಕರಾಳ ದಿವಸವೇ ಸರಿ. ಈ ಎಡಪಂಥೀಯರು, ಜಿಹಾದಿಗಳು ಈ ದೇಶದಲ್ಲಿ ನಡೆಸುವ ಕುಕೃತ್ಯಗಳನ್ನು ತಕ್ಷಣಕ್ಕೆ ಮರೆತುಬಿಡುವ ವಿಶಾಲ ಹೃದಯ ನಮ್ಮದಾಗಿರುವುದರಿಂದ ಮತ್ತೊಮ್ಮೆ ನೆನಪಿಸಿಕೊಡುತ್ತಿದ್ದೇನೆ ಅಷ್ಟೇ. ಅಂದಿನ ಪರೇಡ್​ಗೆ ನುಗ್ಗುತ್ತೇವೆಂದು ಟ್ರ್ಯಾಕ್ಟರ್​ಗಳೊಂದಿಗೆ ಬಂದ ಸಿಖ್ಖರ ವೇಷದಲ್ಲಿದ್ದ ಒಂದಷ್ಟು ಜಿಹಾದಿಗಳು ದೊಡ್ಡದ್ದನ್ನೇ ನಿರೀಕ್ಷಿಸುತ್ತ ಕುಳಿತಿದ್ದರು. ಕೊಟ್ಟ ಸಮಯಕ್ಕಿಂತ ಮುಂಚಿತವಾಗಿ ರ‍್ಯಾಲಿ ಶುರುಮಾಡಿದರು, ನಿಗದಿತ ಮಾರ್ಗವನ್ನು ಬಿಟ್ಟು ತಮ್ಮದ್ದೇ ಬೇರೊಂದು ಮಾರ್ಗ ಆರಿಸಿಕೊಂಡರು, ಕೆಂಪುಕೋಟೆಯನ್ನು ಏರಿಹೋಗುವ ಅಮೆರಿಕ ಮಾದರಿಯ ಹೋರಾಟದ ರೂಪು-ರೇಷೆಯನ್ನು ತಮ್ಮದಾಗಿಸಿಕೊಂಡರು. ಎಲ್ಲವೂ ಅವರಂದುಕೊಂಡಂತೆ ನಡೆದಿತ್ತು. ಒಂದೇ ಬದಲಾವಣೆ ಎಂದರೆ ದೆಹಲಿ ಪೊಲೀಸರು ತಲ್ವಾರ್​ಗಳಿಗೆದುರಾಗಿ ಬಂದೂಕು ಬಳಸದೇ ಲಾಠಿಯನ್ನು ಉಪಯೋಗಿಸಿದರು. ತಾವು ಏಟು ತಿಂದರು, ಆದರೆ ಪ್ರತಿಭಟನಾಕಾರರಿಗೆ ತಮ್ಮಿಂದ ಒಂದು ಗೆರೆಯೂ ಬೀಳದಂತೆ ನೋಡಿಕೊಂಡರು. ಉದ್ರಿಕ್ತ ಗುಂಪಿನ ಮುಂದೆ ಯಾವ ರಕ್ಷಣೆಯೂ ಇಲ್ಲದೇ ತಮ್ಮನ್ನು ತಾವು ಕಾಯ್ದುಕೊಳ್ಳುವ ಸಾಹಸವಿದೆಯಲ್ಲ, ಅದು ಸಾಮಾನ್ಯವಾದದ್ದಲ್ಲ. ಎಡಪಂಥೀಯ ವಿಚಾರಗಳ ಮಂದಿಯ ಮೇಲೆ ಈ ತಾಳ್ಮೆ ಪ್ರಹಾರವಾಗಿ ಬಿತ್ತು. ಬಹುಶಃ ಅವರ ಜಾಗದಲ್ಲಿ ಬಲಪಂಥೀಯರಿದ್ದಿದ್ದರೆ, ಕೈಚೆಲ್ಲಿ ಕುಳಿತುಬಿಡುತ್ತಿದ್ದರೇನೋ! ತಮ್ಮವರನ್ನೇ ವಿರೋಧಿಸುತ್ತ, ಮುಂದಿನ ನಾಲ್ಕೈದು ವರ್ಷಗಳ ಕಾಲ ಈ ರೀತಿಯ ಘಟನೆಗಳೇ ನಡೆಯದಂತೆ ಮಾಡಿಬಿಡುತ್ತಿದ್ದರೇನೋ. ಅವರುಗಳು ಹಾಗಲ್ಲ. ತಮಗಾದ ಹಿನ್ನಡೆಯಿಂದ ಮೈಕೊಡವಿಕೊಂಡೆದ್ದು ಹಿಂದಿನ ಯೋಜನೆಗಳಂತೆ ಕೆಲಸ ಮುಂದುವರಿಸಿದರು.

    ಈ ಇಡಿಯ ಹೋರಾಟದಲ್ಲಿ ಆದ ಅವಮಾನವನ್ನು ಸರಿದೂಗಿಸಿಕೊಳ್ಳಲೆಂದು ಭಾರತದ ಬಹುತೇಕರಿಗೆ ಗೊತ್ತೇ ಇರದಿದ್ದ, ಅಮೆರಿಕದ ಸೆಲೆಬ್ರಿಟಿಯೊಬ್ಬಳಿಂದ ಟ್ವೀಟ್ ಮಾಡಿಸಿಬಿಟ್ಟರು. ನಿಜಕ್ಕೂ ಇದು ಉಲ್ಕಾಪಾತವೇ. ಈ ಟ್ವೀಟ್ ಮಾಡಿದ ರಿಹಾನಾ ಟ್ವಿಟರ್​ನಲ್ಲಿ ಒಂದು ಕೋಟಿ ಅನುಯಾಯಿಗಳನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಜಗತ್ತಿನ ಮೂಲೆ-ಮೂಲೆಗೂ ಸಂದೇಶವನ್ನು ತಲುಪಿಸಬಲ್ಲ ಸಾಮರ್ಥ್ಯವನ್ನೂ ಪಡೆದಿದ್ದಾಳೆ. ಭಾರತದ ರೈತರ, ಇಲ್ಲಿನ ಬೆಳೆಗಳ, ಇಲ್ಲಿನ ಪರಿಸ್ಥಿತಿಯ ಕಿಂಚಿತ್ತೂ ಅರಿವಿರದ ಆಕೆ ರೈತ ಹೋರಾಟದ ಕುರಿತಂತೆ ‘ನಾವ್ಯಾಕೆ ಮಾತನಾಡುತ್ತಿಲ್ಲ?’ ಎಂದು ಕೇಳುವ ಮೂಲಕ ಹಳ್ಳ ಹಿಡಿದಿದ್ದ ಹೋರಾಟಕ್ಕೆ ಜೀವ ತುಂಬಿಬಿಟ್ಟಳು. ಅದರ ಹಿಂದು-ಹಿಂದೆಯೇ ಬಾಲ್ಯಾವಸ್ಥೆಯಲ್ಲಿಯೇ ಪರಿಸರ ಕಾಳಜಿಯ ಕಣ್ಣೀರಿನ ಮೂಲಕ ಜಗತ್ತಿನ ಗಮನ ಸೆಳೆದ ಸ್ವೀಡನ್ನಿನ ಗ್ರೆಟಾ ಥನ್​ಬರ್ಗ್ ಕೂಡ ಟ್ವೀಟ್ ಮಾಡಿ, ಜಗತ್ತು ಭಾರತದ ಈ ರೈತ ಹೋರಾಟದ ಕುರಿತಂತೆ ಮಾತನಾಡುವ ಅನಿವಾರ್ಯತೆ ಸೃಷ್ಟಿಸಿಬಿಟ್ಟಳು. ಅಲ್ಲಿಗೆ ಗಣರಾಜ್ಯೋತ್ಸವ ದಿನದಂದು ರೈತರ ಹೆಸರಿನಲ್ಲಿ ಖಲಿಸ್ತಾನಿ-ಜಿಹಾದಿಗಳು-ನಕ್ಸಲರು ತಿರಂಗಾಕ್ಕೆ ಮಾಡಿದ ಅಪಮಾನವೆಲ್ಲ ತೊಳೆದುಹೋಗಿಬಿಟ್ಟಿತು. ಇಲ್ಲಿಂದ ಇನ್ನು ಪಾರಾಗುವುದು ಕಷ್ಟವೆಂದೇ ಭಾವಿಸಲಾಗಿತ್ತು. ಇನ್ನು ನಿಧಾನವಾಗಿ ಕೆಲವು ರಾಷ್ಟ್ರದ ಪ್ರಮುಖರು ಮಾತನಾಡುತ್ತಾರೆ. ಜಾಗತಿಕ ಸೆಲೆಬ್ರಿಟಿಗಳು ಬಾಯ್ಬಿಡುತ್ತಾರೆ. ಅದನ್ನನುಸರಿಸಿ ಇಲ್ಲಿನ ಸಿನಿಮಾ ನಟರು, ಕ್ರಿಕೆಟ್ ಸ್ಟಾರುಗಳು ರೈತ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುತ್ತಾರೆ. ಸಹಜವಾಗಿಯೇ ದೇಶದೆಲ್ಲೆಡೆ ಇವರುಗಳ ಅಭಿಮಾನಿಗಳು ಬೀದಿಗೆ ಬಂದು ರೈತ ಕಾಯ್ದೆ ಸರಿಯೋ-ತಪ್ಪೋ ಗೊಡವೆಗೆ ಹೋಗದೇ ಗಲಾಟೆ ಆರಂಭಿಸಿಬಿಡುತ್ತಾರೆ ಎಂಬೆಲ್ಲ ಚಿತ್ರಗಳು ಒಮ್ಮೆ ಕಣ್ಮುಂದೆ ಹಾದುಹೋದವು. ದೇಶದ ಮೂಲೆ-ಮೂಲೆಗಳಲ್ಲೂ ಅಶಾಂತಿ ತಾಂಡವವಾಡುವುದನ್ನು ಒಂದು ಕ್ಷಣ ಎಲ್ಲರೂ ಊಹಿಸಿಕೊಂಡಿರಲು ಸಾಕು. ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಕೆಟ್ಟ ಅಧ್ಯಾಯವಾಗಿ ಈ ಘಟನೆ ಗುರುತಿಸಲ್ಪಡುತ್ತದೆಯಲ್ಲದೆ ಇದು ಅವರ ಪತನದ ಮುನ್ಸೂಚನೆಯೂ ಆಗಿರುತ್ತಿತ್ತು!

    ಏನೇ ಹೇಳಿ, ನರೇಂದ್ರ ಮೋದಿಯವರಿಗೆ ಭಗವತ್​ಕೃಪೆ ಅಸಾಧಾರಣ ವಾಗಿಯೇ ಇದೆ. ಇನ್ನೇನು ಅವರು ತಮ್ಮ ನಿಂತ ನೆಲವನ್ನೇ ಕಳೆದುಕೊಳ್ಳಲಿದ್ದಾರೆ ಎಂದೆನಿಸುವಾಗಲೇ ಭಗವಂತನೇ ಅವರ ಹೊತ್ತು ನಿಂತುಬಿಡುತ್ತಾನೆ. ಇಲ್ಲೂ ಹಾಗೇ ಆಯ್ತು. 18ರ ಗ್ರೆಟಾ ಥನ್​ಬರ್ಗ್ ರೈತ ಹೋರಾಟದ ಪರವಾಗಿ ಮಾತನಾಡಿ ಸುಮ್ಮನಾಗಿದ್ದರೆ ಸಾಕಿತ್ತು. ಸ್ವಲ್ಪ ಬುದ್ಧಿವಂತಿಕೆ ತೋರಿಸಲು ಹೋಗಿ ಎಲ್ಲರೂ ಹೇಗೆ ಸಹಕರಿಸಬಹುದು ಎನ್ನುವ ವಿಚಾರವಾಗಿ ತಾವೇ ತಯಾರಿಸಿಕೊಂಡ ಟೂಲ್ಕಿಟ್ (ಸಲಕರಣಾ ಜೋಳಿಗೆ) ಹಂಚಿಕೊಂಡುಬಿಟ್ಟಳು. ಇದು ಎಷ್ಟು ಭಯಾನಕವಾಗಿತ್ತೆಂದರೆ ಜನವರಿ 26ರ ಆಕ್ರಮಣದ ಮುನ್ಸೂಚನೆಯನ್ನು ಜನವರಿ 3ಕ್ಕೂ ಮುನ್ನ ದಾಖಲಿಸಲಾಗಿತ್ತು. ಜ. 3ರಂದು ಏನು ಮಾಡಬೇಕು ಎಂಬುದರಿಂದ ಆರಂಭವಾಗುವ ಈ ಟೂಲ್ಕಿಟ್ ಫೆಬ್ರವರಿ 6ರ ಚಕ್ಕಾ ಜಾಮ್ ಹೇಗೆ ನಡೆಯಬೇಕೆಂಬುದರ ಕುರಿತಂತೆಯೂ ಸೂಕ್ಷ್ಮವಾಗಿ ಉಲ್ಲೇಖಿಸಿತ್ತು. ಇದರಲ್ಲಿನ ಒಂದಷ್ಟು ಅಂಶಗಳಂತೂ ಭಾರತವನ್ನು ಆಂತರಿಕವಾಗಿ ಒಡೆಯಲು ಬೇಕಾದ ಸಿದ್ಧತೆಗಳ ಕುರಿತಂತೆಯೇ ಇತ್ತು. ಮೊದಲನೆಯದ್ದು ಕೃಷಿಕಾಯ್ದೆಯನ್ನು ಹಿಂದೆಗೆಸುವುದು. ಎರಡನೆಯದು ಯಾವುದಾದರೂ ವಿಚಾರವನ್ನು ಒಪ್ಪಿಕೊಳ್ಳದವರ ಮೇಲೆ ಫ್ಯಾಸಿಸ್ಟ್ ಶಕ್ತಿಗಳು ಹೇಗೆ ಆಕ್ರಮಣ ಮಾಡುತ್ತವೆ ಎಂದು ತೋರಿಸುವುದು. ಮೂರನೆಯದ್ದು ಭಾರತದ ದೊಡ್ಡ ವ್ಯಾಪಾರೋದ್ಯಮಿಗಳ ಮತ್ತು ಮಾಧ್ಯಮದ ಭ್ರಷ್ಟಾಚಾರ ವನ್ನು ಬಯಲಿಗೆಳೆಯುವುದು. ನಾಲ್ಕನೆಯದು ಭಾರತ ಗಳಿಸಿರುವ ಯೋಗ ಮತ್ತು ಚಾಯ್ ಗೌರವವನ್ನು ನಾಶ ಮಾಡುವುದು. ಐದನೆಯದ್ದು ಪಂಜಾಬಿನ ದಕ್ಷಿಣ ಏಷ್ಯಾದ ಜನಾಂಗಗಳಿಗೆ ಈ ವಿಚಾರದ ಕುರಿತಂತೆ ಹೆಚ್ಚು-ಹೆಚ್ಚು ಅರಿವು ಮೂಡಿಸುವುದು ಮತ್ತು ಕೊನೆಯದಾಗಿ ಜನವರಿ 26ಕ್ಕೆ ಜಾಗತಿಕ ಮಟ್ಟದಲ್ಲಿ ಎಲ್ಲ ಕಡೆಯೂ ಭಾರತದ ವಿರುದ್ಧ ಆಂದೋಲನ ಮಾಡುವುದು.

    ಉದ್ದೇಶದ ಒಂದೊಂದು ಅಂಶಗಳೂ ಬಲು ಭಯಾನಕವೇ. ಕೃಷಿಕಾಯ್ದೆ ಹಿಂತೆಗೆದುಕೊಳ್ಳುವಂತೆ ಮಾಡುವುದೇಕೆ ಎಂಬ ಪ್ರಶ್ನೆಗೆ ಈವರೆಗೂ ಯಾರಲ್ಲೂ ಉತ್ತರವಿಲ್ಲ. ಕೃಷಿಕಾಯ್ದೆಯಿಂದ ಒಳಿತಾಗುತ್ತದೆ ಎಂದು ಹೇಳಿದವರೇ, ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಾಗ ವಿರೋಧಕ್ಕೆ ನಿಂತಿದ್ದು ಸಂಶಯವನ್ನೇ ಹುಟ್ಟಿಸುವಂಥದ್ದು. ಸಿಎಎ, ಆರ್ಟಿಕಲ್ 370 ಕುರಿತ ಪ್ರತಿಭಟನೆಗಳಿಗೆ, ಟ್ರಿಪಲ್ ತಲಾಕ್ ಕದನಗಳಿಗೆಲ್ಲ ಜಗ್ಗದ ಕೇಂದ್ರ ಸರ್ಕಾರ ಕೃಷಿಕರ ವಿಚಾರ ಬಂದಾಗ ಸಾಕಷ್ಟು ಬಗ್ಗಿತ್ತು. ಒಂದೂವರೆ ವರ್ಷಗಳ ಕಾಲ ಈ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂಬ ಭರವಸೆಯನ್ನೂ ನೀಡಿತ್ತು. ಅಷ್ಟಕ್ಕೇ ತೃಪ್ತಿಯಾಗಿ ರೈತರು ಮರಳಿದ್ದರೆ ಹೆಚ್ಚು-ಕಡಿಮೆ ಗೆದ್ದಂತೆಯೇ ಆಗಿರುತ್ತಿತ್ತು. ಆದರೆ ಇವರಿಗೆ ಹಣ ಪೂರೈಸುತ್ತಿದ್ದ ಮಂದಿಗೆ ಚರ್ಚೆಯಾಗಬೇಕಾಗಿದ್ದ ವಿಚಾರ, ಕೃಷಿಕಾಯ್ದೆ ಅಲ್ಲವೇ ಅಲ್ಲ. ಇವರು ಭಾರತದ ನಾಶವನ್ನು ನೋಡಬೇಕೆಂದು ಬಯಸುವವರಾಗಿದ್ದರಲ್ಲ; ಸಮಸ್ಯೆಯಿರೋದು ಅಲ್ಲಿ. ಆ ಕಾರಣಕ್ಕಾಗಿಯೇ ಪ್ರತಿಭಟನೆಗೆ ಮೋದಿಯಂತಹ ಶಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಜಗತ್ತಿಗೆ ತೋರ್ಪಡಿಸಲೆಂದೇ 26ರ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದೆಂದು ಎರಡನೇ ಉದ್ದೇಶ ಸ್ಪಷ್ಟಪಡಿಸುತ್ತದೆ. ಮೋದಿಯ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಅಂದು ಪೊಲೀಸರ ಪ್ರತಿಕ್ರಿಯೆ ಹಾಗಿರುತ್ತಿರಲಿಲ್ಲ. ಒಂದಿಬ್ಬರಿಗಾದರೂ ಗುಂಡು ಬಿದ್ದಿರುತ್ತಿತ್ತು. ಅದ್ಯಾವ ಪರಿಯ ತಾಳ್ಮೆ ಸರ್ಕಾರವನ್ನು ಹೊಕ್ಕಿತ್ತೋ ದೇವರೇ ಬಲ್ಲ. ಈ ರೀತಿಯ ಕೆರಳಿಸಬಲ್ಲ ಆಂದೋಲನಕಾರಿಗಳನ್ನು ರೈತರೆಂಬ ಒಂದೇ ಕಾರಣಕ್ಕೆ ಸರ್ಕಾರ ಸಹಿಸಿಕೊಂಡಿತು. ಈ ಒಟ್ಟಾರೆ ಆಂದೋಲನವನ್ನು ರೂಪಿಸಿದವರು ಮೋದಿಯೊಂದಿಗೆ ಯೋಗಿ ಆದಿತ್ಯನಾಥರ ಹೆಸರನ್ನೂ ಕೆಡಿಸಬೇಕೆಂದು ನಿಶ್ಚಯ ಮಾಡಿದ್ದರೆನಿಸುತ್ತದೆ. ಹೀಗಾಗಿಯೇ ಯೋಗ ಮತ್ತು ಚಾಯ್ ಕುರಿತ ಗೌರವವನ್ನು ಧ್ವಂಸ ಮಾಡಬೇಕೆಂದು ಅವರು ಸ್ಪಷ್ಟವಾದ ದನಿಯಲ್ಲಿ ಹೇಳಿದ್ದರು.

    ಜಾಗತಿಕ ಮಟ್ಟದಲ್ಲಿ ಭಾರತದ ಯೋಗಕ್ಕೆ ಅಪಾರವಾದ ಮೌಲ್ಯ ಬಂದಿದೆ. ಮತ್ತದು ನರೇಂದ್ರ ಮೋದಿಯವರ ಮಹತ್ವದ ಸಾಧನೆಯೇ. ಹಾಗೆಂದು ಮೇಲ್ನೋಟಕ್ಕೆ ಅನಿಸಿದರೂ ಯೋಗ ಮತ್ತು ಚಾಯ್ಗಳ ಗೂಢಾರ್ಥ ಯೋಗಿ ಮತ್ತು ಮೋದಿ ಎಂದೇ ಆಗಿರಬೇಕು ಅನಿಸುತ್ತದೆ. ಮೋದಿ ಟೀ ಮಾರಾಟ ಮಾಡುತ್ತಿದ್ದ ಒಬ್ಬ ಸಾಮಾನ್ಯ ಬಾಲಕನಾಗಿ ಬೆಳೆದವರು. ಭಾರತೀಯ ಪ್ರಜಾಪ್ರಭುತ್ವದ ವೈಶಿಷ್ಟ್ಯವೆಂದರೆ ಅಂತಹ ಸಾಮಾನ್ಯ ವ್ಯಕ್ತಿಯೂ ಶ್ರೇಷ್ಠ ಜಾಗತಿಕ ನಾಯಕನಾಗಿ ಬೆಳೆಯಬಲ್ಲ ವಾತಾವರಣವಿದೆ. ಇದಕ್ಕಿಂತ ಒಳ್ಳೆಯ ಪ್ರಜಾಪ್ರಭುತ್ವವನ್ನು ಜಗತ್ತಿನಲ್ಲಿ ಕಾಣುವುದು ಸಾಧ್ಯವೇ ಇಲ್ಲ. ಈಗ ಇದೇ ವ್ಯಕ್ತಿಯಿಂದಾಗಿ ಭಾರತದ ಶ್ರೇಷ್ಠ ಪ್ರಜಾಪ್ರಭುತ್ವ ಉಧ್ವಸ್ಥಗೊಳ್ಳುತ್ತಿದೆ ಎಂದು ಸಾಬೀತುಪಡಿಸಬೇಕಿತ್ತು. ಜೊತೆಗೆ ಮೋದಿಯ ಕನಸುಗಳಿಗೆ ಬೆಂಬಲವಾಗಿ ನಿಂತು ಚೀನಾದ ಕಣ್ಣಲ್ಲಿ ನೀರು ಹಾಕಿಸುತ್ತಿರುವ

    ರಿಲಯನ್ಸ್​ನ ಅಂಬಾನಿಗೂ, ಅದಾನಿಗೂ ಪಾಠ ಕಲಿಸಬೇಕೆಂದು ಈ ಮಂದಿ ನಿಶ್ಚಯಿಸಿಬಿಟ್ಟಿದ್ದರು. ಅವರ ಉದ್ದೇಶಗಳ ಮೂರನೇ ಅಂಶ ಅದನ್ನೇ ಹೇಳುತ್ತದೆ. ಇವರಿಗೆದುರಾಗಿ ನಿಂತಿರುವ ಅರ್ನಬ್ ಗೋಸ್ವಾಮಿ ಮೇಲೂ ಇವರ ಕಣ್ಣಿರಲು ಸಾಕು. ಅವರನ್ನು ಮಹಾರಾಷ್ಟ್ರ ಸರ್ಕಾರ ಜೈಲಿಗೆ ಕಳಿಸಿದ್ದು ಇದೇ ಷಡ್ಯಂತ್ರದ ಭಾಗವಿರಬೇಕೆಂದು ಈಗ ಅನಿಸುತ್ತಿದೆ. ಇವೆಲ್ಲಕ್ಕಿಂತಲೂ ಕೆಟ್ಟ ಸಂಗತಿ ಎಂದರೆ ಈ ಆಂದೋಲನಾಕಾರಿಗಳು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಕೆಡಿಸಿ ಕರೊನಾ ನಂತರ ಭಾರತಕ್ಕೆ ಗುಳೆ ಹೊರಡುತ್ತಿರುವ ಕಂಪನಿಗಳನ್ನು ಹೋಗದಂತೆ ತಡೆಯುವ ಪ್ರಯತ್ನವನ್ನೂ ಮಾಡಿದ್ದರು. ಆದರೆ ಯಾವುದೂ ಅಂದುಕೊಂಡಂತಾಗಲಿಲ್ಲ ಅಷ್ಟೇ.

    ನೀವು ನಂಬಲಾರಿರಿ. ಗ್ರೆಟಾ ಹಂಚಿಕೊಂಡಿರುವ ಮಾಹಿತಿಗಳಲ್ಲಿ ರಿಹಾನಾ ಎಂದು, ಯಾವ ಟ್ವೀಟನ್ನು ಮಾಡಬೇಕೆಂಬ ಉಲ್ಲೇಖವೂ ಇತ್ತು. ಆಕೆಯೂ ಅಚ್ಚುಕಟ್ಟಾಗಿ ಇವರು ಹೇಳಿರುವುದನ್ನೇ ಟ್ವೀಟ್ ಮಾಡುವ ಮೂಲಕ ತಾನು ಹಣ ಪಡೆದೇ ಈ ಕೆಲಸ ಮಾಡಿದ್ದೇನೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾಳೆ. ಈ ಟ್ವೀಟಿಗಾಗಿ ಆಕೆ 18 ಕೋಟಿ ರೂಪಾಯಿ ಪಡೆದಿದ್ದಾಳೆ! ಈ ಇಡಿಯ ಷಡ್ಯಂತ್ರದ ಹಿಂದಿರುವ ಪೊಯೆಟಿಕ್ ಜಸ್ಟಿಸ್ ಎಂಬ ಸಂಸ್ಥೆ ಖಲಿಸ್ತಾನಿಗಳ ದನಿಯಾಗಿರುವಂಥದ್ದು. ಇಡಿಯ ಆಂದೋಲನಕ್ಕೆ ಬೇಕಾದ ಹಣ, ವ್ಯವಸ್ಥೆ, ದೇಶದ ಹೊರಗೆ ನಿಂತು ಅವರೇ ಮಾಡುತ್ತಿದ್ದಾರೆ. ಇದು ಇವರಿಂದ ಸಂಚಾಲಿತವಾದ್ದರಿಂದಲೇ ಪಂಜಾಬ್, ಹರಿಯಾಣಗಳಿಂದ ಆಚೆ ಹಬ್ಬಲೇ ಇಲ್ಲ. ಇದು ಮೊನ್ನೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಅಡ್ಡಗಟ್ಟುವ ಆಂದೋಲನ, ಚಕ್ಕಾಜಾಮ್ ಅಪಯಶಸ್ಸು ಕಂಡಾಗಲೇ ಸಾಬೀತಾಗಿಹೋಯ್ತು. ಪಂಜಾಬ್​ನಲ್ಲೇ ಈ ಆಂದೋಲನಕ್ಕೆ ಬೆಂಬಲ ಇಲ್ಲದಿದ್ದುದ್ದು ಎದ್ದು ಕಾಣುತ್ತಿತ್ತು. ಅನೇಕ ಕಡೆಗಳಲ್ಲಿ ಕಾಂಗ್ರೆಸ್ಸಿನ, ಕಮ್ಯುನಿಸ್ಟರ ಎಂಟ್ಹತ್ತು ಕಾರ್ಯಕರ್ತರು ರಸ್ತೆಗೆ ಬಂದು ಘೊಷಣೆಗಳನ್ನು ಕೂಗಿ ಹೊರಟಿದ್ದು ಬಿಟ್ಟರೆ ಮತ್ತೇನೂ ನಡೆಯಲಿಲ್ಲ. ಖಲಿಸ್ತಾನಿಗಳ ದೇಶವಿರೋಧಿಕೃತ್ಯ ಸಮಾಧಿಯಾಗಿ ಹೋಯ್ತು.

    ದುರಂತವೇನು ಗೊತ್ತೇ? ಇಷ್ಟೆಲ್ಲ ಬಗೆಯಲ್ಲಿ ಇವರು ನಗ್ನವಾಗಿ ತೆರಕೊಂಡರೂ ಅವರ ಬೆಂಬಲಿಗರ ಅರಚಾಟ ಮಾತ್ರ ನಿಂತಿಲ್ಲ. ಪತ್ರಕರ್ತರು, ಲೇಖಕರು, ಒಂದಷ್ಟು ಸಿನಿಮಾ-ಕ್ರಿಕೆಟ್ ಸ್ಟಾರುಗಳು ಅರಚಾಡುತ್ತಲೇ ಇದ್ದಾರೆ. ಸೋತ ನಂತರವೇ ಇಷ್ಟು ಮೆರೆಯುವ ಈ ಮಂದಿ, ಇನ್ನು ಗ್ರೆಟಾ ಈ ಟೂಲ್ಕಿಟ್ ಹಂಚಿಕೊಳ್ಳದಿದ್ದಿದ್ದರೆ ಏನು ಮಾಡಿಬಿಡುತ್ತಿದ್ದರೋ ದೇವರೇ ಬಲ್ಲ!

    ವಿದೇಶಾಂಗ ಸಚಿವ ಜೈಶಂಕರ್ ಅವರ ಆಕ್ರಮಣಕಾರಿ ಮನೋವೃತ್ತಿಯನ್ನು ಈ ಹೊತ್ತಲ್ಲಿ ಅಭಿನಂದಿಸಲೇಬೇಕು. ವಿದೇಶಿಗರು ಭಾರತದ ವಿರುದ್ಧವಾಗಿ ಮಾತನಾಡಿ ಒಂದು ವಾತಾವರಣವನ್ನು ಸೃಷ್ಟಿಸುವ ಮುನ್ನವೇ ಭಾರತದಲ್ಲಿರುವ, ಜಗತ್ತನ್ನು ಪ್ರಭಾವಿಸಬಲ್ಲ, ಸೆಲೆಬ್ರಿಟಿಗಳ ಮೂಲಕ ಭಾರತ ಪರವಾದ ಟ್ವೀಟ್​ಗಳನ್ನು ಮಾಡಿಸುವ ಮೂಲಕ, ಅವರ ಉದ್ದೇಶವನ್ನು ನುಚ್ಚುನೂರುಗೊಳಿಸಿದರು. ಅದರ ಪರಿಣಾಮವಾಗಿ ಸ್ವೀಡನ್ ಗ್ರೆಟಾ ಮಾತಿಗೂ ತನಗೂ ಸಂಬಂಧವಿಲ್ಲವೆಂದಿತು. ಈ ಎಲ್ಲದರ ಹಿಂದೆ ಕಾಣದ ಕೈಯಂತೆ ಇದ್ದ ಅಮೆರಿಕದ ಹೊಸ ಅಧ್ಯಕ್ಷರ ಬಳಗವೂ ಬಾಯ್ಮುಚ್ಚಿಕೊಂಡೇ ಕೇಂದ್ರ ಸರ್ಕಾರದ ನೀತಿಗಳನ್ನು ಸಮರ್ಥಿಸಬೇಕಾಯ್ತು. ಕೆನಡಾ ಅಧ್ಯಕ್ಷ ಟ್ರುಡೋರಿಂದ ಮಾತೇ ಹೊರಡಲಿಲ್ಲ. ಸ್ವತಃ ಇಂಗ್ಲೆಂಡು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ ಎಂದುಬಿಟ್ಟಿತು. ಭಾರತದ ವಿರುದ್ಧ ಒಟ್ಟಾಗಿದ್ದ ಎಲ್ಲರ ಕೆನ್ನೆಗಳು ಈಗ ಊದಿಕೊಂಡುಬಿಟ್ಟಿವೆ. ಕಪಾಳಕ್ಕೆ ಬಿದ್ದ ಈ ಏಟಿನಿಂದ ಸುಧಾರಿಸಿಕೊಳ್ಳಲು ಇನ್ನೂ ಒಂದು ವರ್ಷವೇ ಬೇಕಾಗಬಹುದೇನೋ. ಆದರೆ ಹಣದ ಹರಿವಂತೂ ಜೋರಾಗಿಯೇ ಆಗುತ್ತಿದೆ. ಅತ್ತ ಮೋದಿ ಸರ್ಕಾರವೂ ಸುಮ್ಮನೇ ಕುಳಿತಿಲ್ಲ. ವಿದೇಶದಿಂದ ಯಾರ್ಯಾರ ಖಾತೆಗೆ ಹಣ ಬಂದು ಬೀಳುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತ ಅಂಥವರನ್ನು ಚೆನ್ನಾಗಿಯೇ ರುಬ್ಬುತ್ತಿದೆ. 26ರಂದು ಮೆರೆದ ಅನೇಕರು ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಶಶಿ ತರೂರ್, ರಾಜದೀಪ್ ಸರ್​ದೇಸಾಯಿಯ ಮೇಲೂ ಎಫ್​ಐಆರ್​ನ ತೂಗುಕತ್ತಿಯಿದೆ. ಹೀಗಾಗಿಯೇ ಅನೇಕರು ಬಾಲ ಮುದುರಿಕೊಂಡಿದ್ದಾರೆ. ಇವೆಲ್ಲ ಸಾಧ್ಯವಾಗಿದ್ದು ಏಕೆ ಗೊತ್ತೇ? ಗಣರಾಜ್ಯೋತ್ಸವದಂದು ದೆಹಲಿ ಪೊಲೀಸರು ಕೆಲವು ಗಂಟೆಗಳ ಕಾಲ ತಾಳ್ಮೆ ಕಾಯ್ದುಕೊಂಡಿದ್ದರಿಂದ! ಎಲ್ಲ ದೇಶದ್ರೋಹಿಗಳು ಈಗ ಒಂದೇ ಕಡೆ ಸಿಕ್ಕಿಬಿದ್ದಿದ್ದಾರೆ. ಇನ್ನು ಆಟ ಸಲೀಸು.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts