More

    ಸನಾತನ ಧರ್ಮ ಅಳಿದರೆ ದೇಶವೇ ಸರ್ವನಾಶವಾಗುತ್ತದೆ

    ಯಲ್ಲಾಪುರ:ಎಲ್ಲರನ್ನೂ ಒಪ್ಪುವ, ಅಪ್ಪುವ ಸಂಸ್ಕೃತಿ ನಮ್ಮದು. ಜಗತ್ತನ್ನು ಉಳಿಸುವ ಮಹತ್ತರವಾದ ಹೊಣೆ ಇದರ ಮೇಲಿದೆ ಎಂದು ಬಂಟ್ವಾಳದ ಶ್ರೀರಾಮ ವಿದ್ಯಾ ಕೇಂದ್ರದ ಮುಖ್ಯಸ್ಥ ಡಾ.ಪ್ರಭಾಕರ ಭಟ್ಟ ಕಲ್ಲಡ್ಕ ಹೇಳಿದರು.

    ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ‘ವಿಶ್ವದರ್ಶನ ಸಂಭ್ರಮ-2023-24’ ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ನಮ್ಮ ಜೀವನಕ್ಕೆ ಆಧಾರವಾದವರಿಗೆ ಮಾತೃ ಸ್ಥಾನ ನೀಡಿದ ಸಂಸ್ಕೃತಿ ನಮ್ಮದು. ಭಾರತ ಎಲ್ಲ ಹಂತದಲ್ಲಿಯೂ ಸರ್ವಶ್ರೇಷ್ಠವಾದ ದೇಶ. ಅದರ ಮಹತ್ವ ಅರಿಯದೇ, ನಾವು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಮೂಲಕ, ನಮ್ಮತನವನ್ನು ಕಳೆದುಕೊಳ್ಳುತ್ತ ಕುಬ್ಜರಾಗುತ್ತಿರುವುದು ದುರಂತದ ಸಂಗತಿ. ಮೆಕಾಲೆ ಶಿಕ್ಷಣದಿಂದ ದೂರ ಬಂದು ನಮ್ಮ ಸಂಸ್ಕೃತಿಯನ್ನು ಮಕ್ಕಳಲ್ಲಿ ಅಳವಡಿಸುವ ಕಾರ್ಯ ಆಗಬೇಕು ಎಂದರು.

    ಸಂಸ್ಕೃತಿಯನ್ನು ನಶಿಸದಂತೆ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ಸನಾತನ ಧರ್ಮ ಅಳಿದರೆ ದೇಶವೇ ಸರ್ವನಾಶವಾಗುತ್ತದೆ. ಪ್ರತಿ ಮನೆಯೂ ಧರ್ಮದ ಕೇಂದ್ರವಾಗಬೇಕು. ತಾಯಂದಿರು ಚಿಂತನೆ ನಡೆಸಿ, ಧರ್ಮ ಪ್ರಜ್ಞೆಯನ್ನು ಪ್ರತಿಯೊಬ್ಬರಲ್ಲೂ ಜಾಗೃತಗೊಳಿಸುವುದಕ್ಕೆ ಮುಂದಾದರೆ ಮಾತ್ರ ಈ ಧರ್ಮ, ಸಂಸ್ಕೃತಿಯ ಉಳಿವು ಸಾಧ್ಯವೆಂದರು.

    vishwadarshana-Sambrama.

    ಸಂಸ್ಕೃತ ಅಧ್ಯಾಪಕಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ.ಎಸ್.ಆರ್. ಲೀಲಾ ಹಾಗೂ ನಾಟಿ ವೈದ್ಯ ಹನುಮಂತ ಗೌಡ ಬೆಳಂಬರ ಅವರಿಗೆ ಈ ಬಾರಿಯ ವಿಶ್ವದರ್ಶನ ಪುರಸ್ಕಾರವನ್ನು ನೀಡಿ, ಗೌರವಿಸಲಾಯಿತು. ಪುರಸ್ಕಾರ ಸ್ವೀಕರಿಸಿದ ಡಾ.ಎಸ್.ಆರ್.ಲೀಲಾ ಮಾತನಾಡಿ, ಆತ್ಮನಿರ್ಭರತೆಯ ಶಿಕ್ಷಣ ನೀಡಲು ವಿಶ್ವದರ್ಶನ ಸಂಸ್ಥೆ ಮುಂದಾಗಿರುವುದು ಸಂತಸದ ಸಂಗತಿ. ಎಲ್ಲ ಭಾಷೆಗಳಿಗೆ ಸಮಾನ ಮಹತ್ವ ನೀಡುವ ಸಂಸ್ಥೆಯ ಆಶಯ ಮಾದರಿಯಾಗಿದೆ ಎಂದರು. ಸಂಸ್ಕೃತ ಕೇವಲ ಭಾಷೆಯಲ್ಲ. ಅದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಸತ್ವವಾಗಿದೆ. ಮಕ್ಕಳಿಗೆ ಸಂಸ್ಕೃತ ಶಿಕ್ಷಣ ನೀಡುವುದು ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ ಎಂದರು. 

    ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿ ಬಿಸಿಎ ಕೋರ್ಸ್ ಆರಂಭಿಸಲಾಗಿದೆ. ಡಾ.ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ, ಸಂಕೇಶ್ವರ ಅವರ ಪ್ರೋತ್ಸಾಹ ಹಾಗೂ ಸಹಕಾರದೊಂದಿಗೆ ಮೀಡಿಯಾ ಸ್ಕೂಲ್ ನ್ನು ವಿಶ್ವದರ್ಶನ ಸಂಸ್ಥೆಯಲ್ಲಿ ಆರಂಭಿಸಲಾಗಿದೆ. ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಪ್ರಾಧಾನ್ಯತೆ ನೀಡುತ್ತಿದ್ದೇವೆ. ಶಿಕ್ಷಣ, ಪದವಿ ಜತೆಗೆ ಉತ್ತಮ ನಾಗರಿಕರ ನಿರ್ಮಾಣ ನಮ್ಮ ಪ್ರಮುಖ ಉದ್ದೇಶ ಎಂದರು. 

    ಸಿದ್ದಾಪುರ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಕುಮಟಾದ ಕೆನರಾ ಹೆಲ್ತ್ ಕೇರ್ ಮುಖ್ಯಸ್ಥ ಡಾ.ಜಿ.ಜಿ.ಹೆಗಡೆ, ಹೊನ್ನಾವರದ ಎಂಪಿಇ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ, ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಅಂಕೋಲಾದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ ನಾಯಕ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ಇತರರಿದ್ದರು.

    ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಸೆಪ್ಟೆಂಬರ್‌ ತಿಂಗಳಿಗೇ ಸ್ಟ್ರಕ್‌!!

    ಸಂಸ್ಥೆಯ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕ್ಷಿತಿಜ, ಬ್ಲೂಮ್, ವಿಶ್ವಪಥ, ದರ್ಶನ ಕೈಪಿಡಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ವರದಿ ವಾಚಿಸಿದರು. ಪಿಯು ಕಾಲೇಜ್ ಪ್ರಾಂಶುಪಾಲ ಡಾ.ಡಿ.ಕೆ.ಗಾಂವ್ಕರ ನಿರ್ವಹಿಸಿದರು. 

       

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts