More

    ಭಾರತೀಯ ಕ್ರಿಕೆಟ್‌ನಲ್ಲಿ ಈಗ ವಿರಾಟ್ ಕೊಹ್ಲಿ V/s ಸೌರವ್ ಗಂಗೂಲಿ!

    ಮುಂಬೈ: ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದ ವಿವರಣೆಗಳಿಗೆ ವ್ಯತಿರಿಕ್ತವಾದ ಹೇಳಿಕೆಗಳನ್ನು ನೀಡುವ ಮೂಲಕ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಟಿ20 ನಾಯಕತ್ವ ತೊರೆಯುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಬಿಸಿಸಿಐ ನನಗೆ ಸೂಚಿಸಿರಲಿಲ್ಲ. ಏಕದಿನ ತಂಡದ ನಾಯಕತ್ವದಿಂದ ವಜಾಗೊಳಿಸುವ ಬಗ್ಗೆಯೂ ಮಂಡಳಿ ಅಥವಾ ಆಯ್ಕೆ ಸಮಿತಿಯಿಂದ ನನಗೆ ಮೊದಲೇ ಮಾಹಿತಿಯೂ ಬಂದಿರಲಿಲ್ಲ ಎಂದು ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುವ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಮೂಲಕ ಬಿಸಿಸಿಐ ಮತ್ತು ಆಯ್ಕೆ ಸಮಿತಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದು, ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ವಿವಾದವೊಂದು ಸೃಷ್ಟಿಯಾಗಿದೆ.

    ಸವಾಲಿನ ಪ್ರವಾಸಕ್ಕೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಹಲವು ಕಠಿಣ ಪ್ರಶ್ನೆಗಳನ್ನು ಎದುರಿಸಿದ ಕೊಹ್ಲಿ ಕೆಲವು ಗೊಂದಲಗಳನ್ನು ಬಗೆಹರಿಸಿದರೆ, ಮತ್ತೆ ಕೆಲವು ಹೊಸ ಗೊಂದಲಗಳನ್ನು ಎಬ್ಬಿಸುವ ಹೇಳಿಕೆಗಳನ್ನು ನೀಡಿದರು.

    ‘ನಾಯಕತ್ವ ಬದಲಾವಣೆಯ ನಿರ್ಧಾರದ ಬಗ್ಗೆ ನನಗೆ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬ ಹೇಳಿಕೆಗಳು ನಿಜವಲ್ಲ’ ಎನ್ನುವ ಮೂಲಕ ಕೊಹ್ಲಿ, ಗಂಗೂಲಿ ಹೇಳಿಕೆಯನ್ನು ಸಾರಸಗಟಾಗಿ ತಳ್ಳಿಹಾಕಿದರು. ‘ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಗೆ ತಂಡ ಆಯ್ಕೆಗಾಗಿ ಡಿಸೆಂಬರ್ 8ರಂದು ಆಯ್ಕೆ ಸಮಿತಿ ಸಭೆಗೆ ಒಂದೂವರೆ ಗಂಟೆ ಮುನ್ನ ನನ್ನನ್ನು ಸಂಪರ್ಕಿಸಲಾಗಿತ್ತು. ಮುಖ್ಯ ಆಯ್ಕೆಗಾರರು (ಚೇತನ್ ಶರ್ಮ) ಟೆಸ್ಟ್ ತಂಡದ ಬಗ್ಗೆ ಚರ್ಚಿಸಿದರು. ಕರೆಯನ್ನು ಮುಕ್ತಾಯಗೊಳಿಸುವುದಕ್ಕೆ ಮುನ್ನ, ನಾನು ಏಕದಿನ ತಂಡದ ನಾಯಕನಾಗಿ ಮುಂದುವರಿಯುವುದಿಲ್ಲ ಮತ್ತು ಐವರೂ ಆಯ್ಕೆಗಾರರು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು. ನಾನದಕ್ಕೆ, ಆಯಿತು ಒಳ್ಳೆಯದು ಎಂದೆ. ಟಿ20 ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಯಾರೂ ನನ್ನೊಂದಿಗೆ ಏಕದಿನ ನಾಯಕತ್ವದ ಬಗ್ಗೆ ಮಾತನಾಡಿರಲಿಲ್ಲ’ ಎಂದು ಕೊಹ್ಲಿ ವಿವರಿಸಿದ್ದಾರೆ.

    ‘ನಾನು ಟಿ20 ತಂಡದ ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮಂಡಳಿಯ ಪದಾಧಿಕಾರಿಗಳಿಗೆ ತಿಳಿಸಿದಾಗ ಅವರು ಅದನ್ನು ಉತ್ತಮವಾಗಿಯೇ ತೆಗೆದುಕೊಂಡಿದ್ದರು. ನನ್ನ ಕಾರಣಗಳನ್ನು ಸ್ಪಷ್ಟವಾಗಿ ಅವರಿಗೆ ವಿವರಿಸಿದ್ದೆ. ಅದನ್ನು ಸ್ವೀಕರಿಸುವಲ್ಲಿ ಯಾವುದೇ ಹಿಂಜರಿಕೆ ತೋರಿರಲಿಲ್ಲ. ಟಿ20 ನಾಯಕತ್ವ ತ್ಯಜಿಸಬೇಡ ಎಂದು ಯಾರೂ ಹೇಳಿರಲಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.
    2023ರವರೆಗೆ ಮುಂದುವರಿಯುವ ಆಸೆ ಇತ್ತು: 2023ರ ವಿಶ್ವಕಪ್‌ವರೆಗೆ ಏಕದಿನ ತಂಡದ ನಾಯಕನಾಗಿ ಮುಂದುವರಿಯುವ ಆಸೆ ಇತ್ತು ಎಂಬುದನ್ನು ಒಪ್ಪಿಕೊಂಡಿರುವ ಕೊಹ್ಲಿ, ಆಯ್ಕೆ ಸಮಿತಿ ಮತ್ತು ಮಂಡಳಿ ಅಧಿಕಾರಿಗಳ ಯೋಚನೆ ಬೇರೆ ಇತ್ತು ಎಂದಿದ್ದಾರೆ.

    ಗಂಗೂಲಿ ಹೇಳಿದ್ದೇನು?
    ಟಿ20 ನಾಯಕತ್ವವನ್ನು ತೊರೆಯದಂತೆ ಕೊಹ್ಲಿಯನ್ನು ಕೇಳಿಕೊಂಡಿದ್ದೆವು. ಆದರೆ ಅವರು ಒಪ್ಪಿರಲಿಲ್ಲ. ಆದರೆ ಏಕದಿನ-ಟಿ20ಗೆ ಪ್ರತ್ಯೇಕ ನಾಯಕತ್ವ ಆಯ್ಕೆಗಾರರಿಗೆ ಇಷ್ಟವಿಲ್ಲದ ಕಾರಣ, ರೋಹಿತ್ ಅವರನ್ನೇ ಏಕದಿನ ತಂಡಕ್ಕೂ ನಾಯಕರನ್ನಾಗಿ ಆರಿಸಲಾಯಿತು. ನಾನು ವಿರಾಟ್ ಜತೆಗೆ ವೈಯಕ್ತಿಕವಾಗಿ ಮಾತನಾಡಿದ್ದೆ. ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ ಕೂಡ ಈ ಬಗ್ಗೆ ಮಾತನಾಡಿದ್ದರು.

    ಏಕದಿನ ಸರಣಿಗೆ ಲಭ್ಯ, ವಿಶ್ರಾಂತಿ ಕೇಳಿಲ್ಲ
    ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಆಡಲು ನಾನು ಲಭ್ಯನಿದ್ದೇನೆ. ಬಿಸಿಸಿಐ ಬಳಿ ವಿಶ್ರಾಂತಿಯನ್ನು ಕೇಳಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ಮೂಲಕ, ಏಕದಿನ ತಂಡದ ನಾಯಕತ್ವ ಕಳೆದುಕೊಂಡ ಬಗ್ಗೆ ಸಿಟ್ಟಾಗಿರುವುದು ಅಥವಾ ರೋಹಿತ್ ಸಾರಥ್ಯದಲ್ಲಿ ಆಡಲು ಹಿಂದೇಟು ಹಾಕಿರುವ ವರದಿಗಳನ್ನು ತಳ್ಳಿಹಾಕಿದ್ದಾರೆ. ‘ಭಾರತ ಪರ ಆಡಲು ನಾನು ಯಾವಾಗಲೂ ಲಭ್ಯನಿರುತ್ತೇನೆ. ನನಗೆ ವಿಶ್ರಾಂತಿ ಬೇಕೆಂದು ಬಿಸಿಸಿಐ ಬಳಿ ಕೇಳಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ. ರೋಹಿತ್ ಗಾಯದಿಂದಾಗಿ ಟೆಸ್ಟ್ ಸರಣಿಗೆ ಗೈರಾದ ಬೆನ್ನಲ್ಲೇ, ಕೊಹ್ಲಿ ಪುತ್ರಿಯ ಜನ್ಮದಿನದ ಕಾರಣ ನೀಡಿ ಏಕದಿನ ಸರಣಿ ತಪ್ಪಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.

    ವಿರಾಟ್ ಕೊಹ್ಲಿ ಉವಾಚ
    *ತಾರ್ಕಿಕ ಆಧಾರದಲ್ಲಿ ಬಿಸಿಸಿಐ ನಿರ್ಧಾರ ತೆಗೆದುಕೊಂಡಿದೆ. ನಾನದನ್ನು ಅರ್ಥಮಾಡಿಕೊಳ್ಳಬಲ್ಲೆ. ನಾವು ಐಸಿಸಿ ಟ್ರೋಫಿ ಗೆದ್ದಿಲ್ಲ. ನಾನು ಈ ಆಟವನ್ನು ಆಡುತ್ತಿರುವವರೆಗೆ ಭಾರತೀಯ ಕ್ರಿಕೆಟ್‌ಗೆ ಅಗೌರವ ತರುವಂತೆ ನಡೆದುಕೊಳ್ಳಲಾರೆ. ಇದು ಭಾರತೀಯ ಕ್ರಿಕೆಟ್‌ಗೆ ನನ್ನ ಬದ್ಧತೆ.
    *ನಾನೆಂದಿಗೂ, ಎಲ್ಲ ಸಮಯದಲ್ಲೂ ಆಯ್ಕೆಗೆ ಲಭ್ಯನಿರುತ್ತೇನೆ. ಸುಳ್ಳನ್ನು ಬರೆಯುತ್ತಿರುವವರು ವಿಶ್ವಾಸಾರ್ಹರಲ್ಲ.
    *ರೋಹಿತ್ ಜತೆಗೆ ಮನಸ್ತಾಪವಿಲ್ಲವೆಂದು ಕಳೆದ ಎರಡೂವರೆ ವರ್ಷಗಳಿಂದ ಸ್ಪಷ್ಟನೆಗಳನ್ನು ನೀಡಿ ಸಾಕಾಗಿದೆ. ಪದೇಪದೆ ಇದನ್ನೇ ಕೇಳಲಾಗುತ್ತಿರುತ್ತದೆ.
    *ಯಾವಾಗಲೂ ನನ್ನ ಶ್ರೇಷ್ಠ ಬ್ಯಾಟಿಂಗ್ ತೋರಿರುವ ಬಗ್ಗೆ ಹೆಮ್ಮೆ ಇದೆ. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ನಾಯಕತ್ವ ನಿರ್ವಹಿಸುವಾಗಲೂ ನನ್ನ ಶ್ರೇಷ್ಠವಾದುದನ್ನೇ ನೀಡಿರುವೆ. ನನಗೆ ಪ್ರೇರಣೆಯಲ್ಲಿ ಯಾವುದೇ ಕುಸಿತ ಉಂಟಾಗುವುದಿಲ್ಲ.
    *ದಕ್ಷಿಣ ಆಫ್ರಿಕಾದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮರನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಯಾಕೆಂದರೆ ಇಂಗ್ಲೆಂಡ್ ಅವರು ಉತ್ತಮ ಲಯದಲ್ಲಿದ್ದರು.
    *ತಂಡಕ್ಕೆ ಸರಿಯಾದ ದಿಕ್ಕು ತೋರುವುದು ನನ್ನ ಜವಾಬ್ದಾರಿ. ನಾನು ನಾಯಕನಾಗುವುದಕ್ಕೆ ಮುನ್ನವೂ ಅದೇ ಕೆಲಸವನ್ನು ಮಾಡುತ್ತಿದ್ದೆ. ನನ್ನ ಈ ನಿಲುವು ಎಂದೂ ಬದಲಾಗಿಲ್ಲ, ಬದಲಾಗುವುದೂ ಇಲ್ಲ.

    ರೋಹಿತ್ ಸಾರಥ್ಯಕ್ಕೆ ಶೇ. 100 ಬೆಂಬಲ
    ಏಕದಿನ ತಂಡದ ಹೊಸ ನಾಯಕ ರೋಹಿತ್ ಶರ್ಮ ಜತೆಗೆ ಯಾವುದೇ ಮನಸ್ತಾಪವಿಲ್ಲವೆಂದು ಭಿನ್ನಮತದ ವರದಿಯನ್ನು ಸಾರಸಗಟಾಗಿ ತಳ್ಳಿಹಾಕಿರುವ ವಿರಾಟ್ ಕೊಹ್ಲಿ, ತಮ್ಮ ಉತ್ತರಾಧಿಕಾರಿಗೆ ಶೇ. 100 ಬೆಂಬಲ ನೀಡುವುದಾಗಿ ಹೇಳಿದ್ದಾರೆ. ‘ರೋಹಿತ್ ಶರ್ಮ ಸಮರ್ಥ ನಾಯಕ. ಕಾರ್ಯತಂತ್ರ ನಿಪುಣ. ಭಾರತ ಪರ ಮತ್ತು ಐಪಿಎಲ್‌ನಲ್ಲಿ ಅದನ್ನು ನೋಡಿದ್ದೇವೆ. ಅವರೊಂದಿಗೆ ದ್ರಾವಿಡ್ ಭಾಯ್‌ಗೂ (ಕೋಚ್ ರಾಹುಲ್ ದ್ರಾವಿಡ್) ನನ್ನ ಪೂರ್ಣ ಬೆಂಬಲವಿದೆ. ದ್ರಾವಿಡ್ ಅತ್ಯಂತ ಸಮತೋಲನದ ಕೋಚ್, ಶ್ರೇಷ್ಠ ಮ್ಯಾನ್ ಮ್ಯಾನೇಜರ್. ಇಲ್ಲಿಂದ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನಾನೂ ಪ್ರಯತ್ನಿಸುವೆ’ ಎಂದಿದ್ದಾರೆ.

    ಈ ಬಾರಿ ಆಫ್ರಿಕಾದಲ್ಲಿ ವಿಶೇಷ ಸಾಧನೆ
    ದಕ್ಷಿಣ ಆಫ್ರಿಕಾ ಹೊರತಾಗಿ ಟೆಸ್ಟ್ ಆಡುವ ಎಲ್ಲ ದೇಶಗಳಲ್ಲಿ ಭಾರತ ತಂಡ ಟೆಸ್ಟ್ ಸರಣಿ ಜಯಿಸಿದೆ. ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ವಿಶೇಷ ಸಾಧನೆ ತೋರಲಿದ್ದೇವೆ ಎನ್ನುವ ಮೂಲಕ ವಿರಾಟ್ ಕೊಹ್ಲಿ, ಹರಿಣಗಳ ನಾಡಿನಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಭಾರತ ತಂಡ ಗುರುವಾರ ಜೊಹಾನ್ಸ್‌ಬರ್ಗ್‌ಗೆ ಪ್ರಯಾಣ ಬೆಳೆಸಲಿದೆ. ‘ನಾವು ಈ ಬಾರಿ ಅನುಭವಿ ಮತ್ತು ಆತ್ಮವಿಶ್ವಾಸದ ತಂಡ ಹೊಂದಿದ್ದು, ವಿಶೇಷ ಸಾಧನೆ ತೋರಲಿದ್ದೇವೆ. ತಂಡವಾಗಿ ನಾವು ಬಯಸಿದ ಫಲಿತಾಂಶವನ್ನು ಪಡೆಯಲಿದ್ದೇವೆ. ಅತ್ಯಂತ ಕಠಿಣ ವಾತಾವರಣದಲ್ಲೂ ಸರಣಿ ಗೆದ್ದು ತೋರಿಸಲಿದ್ದೇವೆ. ನಾವೀಗ ಬರೀ ಟೆಸ್ಟ್ ಪಂದ್ಯವನ್ನು ಗೆಲ್ಲುವ ಬಗ್ಗೆ ಯೋಚಿಸುತ್ತಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 20 ಟೆಸ್ಟ್ ಆಡಿರುವ ಭಾರತ ಕೇವಲ 3ರಲ್ಲಿ ಗೆದ್ದು, 10ರಲ್ಲಿ ಸೋತಿದೆ. 7ರಲ್ಲಿ ಡ್ರಾ ಸಾಧಿಸಿದೆ. ಟೆಸ್ಟ್ ಇತಿಹಾಸದಲ್ಲಿ ಇದುವರೆಗೆ 3 ಪ್ರವಾಸಿ ತಂಡಗಳಷ್ಟೇ (ಇಂಗ್ಲೆಂಡ್, ಆಸ್ಟ್ರೇಲಿಯಾ, ಶ್ರೀಲಂಕಾ) ದಕ್ಷಿಣ ಆಫ್ರಿಕಾದಲ್ಲಿ ಸರಣಿ ಜಯಿಸಿವೆ.
    ಜಡೇಜಾ ಮಿಸ್ ಮಾಡಿಕೊಳ್ಳಲಿದ್ದೇವೆ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ರವೀಂದ್ರ ಜಡೇಜಾ ಸೇವೆಯನ್ನು ಮಿಸ್ ಮಾಡಿಕೊಳ್ಳಲಿದ್ದೇವೆ. ಆದರೆ ಅವರ ಗೈರು ನಿರ್ಣಾಯಕವಾಗಿರುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

    ಸುಳ್ಳು ಹೇಳುತ್ತಿರುವವರಾರು?
    ಗಂಗೂಲಿ-ಕೊಹ್ಲಿ ಅವರ ವ್ಯತಿರಿಕ್ತ ಹೇಳಿಕೆಗಳು ಕ್ರಿಕೆಟ್ ಪ್ರೇಮಿಗಳಿಗೆ ಗೊಂದಲಗಳನ್ನು ಸೃಷ್ಟಿಸಿವೆ. ನಿಜಕ್ಕೂ ಸುಳ್ಳು ಹೇಳುತ್ತಿರುವವರು ಯಾರು? ಯಾರ ಮಾತು ಸತ್ಯವಾದುದು ಎಂಬ ಗೊಂದಲ ಕಾಡಲಾರಂಭಿಸಿದೆ. ಇಬ್ಬರಲ್ಲಿ ಒಬ್ಬರಷ್ಟೇ ಸತ್ಯ ಹೇಳುತ್ತಿದ್ದಾರೆ. ಇಬ್ಬರೂ ಭಾರತೀಯ ಕ್ರಿಕೆಟ್ ಕಂಡ ಆಕ್ರಮಣಕಾರಿ ನಾಯಕರು. ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಐತಿಹಾಸಿಕ ಸಾಧನೆ ತೋರುವತ್ತ ಗಮನಹರಿಸಬೇಕಾದ ಸಮಯದಲ್ಲಿ ಈ ಅನಗತ್ಯ ವಿವಾದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆಯಾಗಿದೆ. ಎದುರಾಳಿಯ ಸವಾಲು ಹಿಮ್ಮೆಟ್ಟಿಸುವ ಬದಲಾಗಿ ತಮ್ಮೊಳಗೇ ಬಡಿದಾಡಿಕೊಳ್ಳುತ್ತಿರುವುದು ಭಾರತೀಯ ಕ್ರಿಕೆಟ್‌ಗೆ ಶೋಭೆ ತರುತ್ತಿಲ್ಲ ಎಂಬುದು ಕ್ರಿಕೆಟ್ ಪ್ರೇಮಿಗಳ ಅಭಿಪ್ರಾಯವಾಗಿದೆ.

    ಕೊಹ್ಲಿ 71ನೇ ಶತಕವಿದು!
    ಬಿಸಿಸಿಐಗೆ ಸೆಡ್ಡು ಹೊಡೆಯುವಂಥ ಹೇಳಿಕೆಯಿಂದ ಕೊಹ್ಲಿ ತಮ್ಮ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ‘ಇದನ್ನು ಕೊಹ್ಲಿ ಅವರ 71ನೇ ಶತಕವೆಂದು ಪರಿಗಣಿಸಬೇಕು’ ಎಂಬುದಾಗಿಯೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ದಿಟ್ಟ ನುಡಿಯನ್ನು ಪ್ರಶಂಸಿಸಿದ್ದಾರೆ. ಜತೆಗೆ ಗಂಗೂಲಿ ಮೇಲೆಯೂ ಕೊಹ್ಲಿ ಅಭಿಮಾನಿಗಳು ಕಿಡಿಕಾರಿದ್ದಾರೆ. ಏಕದಿನ ಸರಣಿ ತಪ್ಪಿಸಿಕೊಳ್ಳುವರು ಎಂಬ ವರದಿಯಿಂದ ಕೊಹ್ಲಿ ‘ಅಹಂಕಾರಿ’ಯಂತೆ ಕಂಡಿದ್ದರೆ, ಬುಧವಾರದ ಸುದ್ದಿಗೋಷ್ಠಿಯ ಬಳಿಕ ಅವರು ಮತ್ತೆ ‘ಕಿಂಗ್ ಕೊಹ್ಲಿ’ಯಾಗಿ ತಮ್ಮ ಅಭಿಮಾನಿಗಳ ಮನಗೆದ್ದಿದ್ದಾರೆ.

    ಬಿಬಿಎಲ್‌ನಲ್ಲಿ ಡಬಲ್ ಮೀನಿಂಗ್ ಕಾಮೆಂಟರಿಯಿಂದ ಸುದ್ದಿಯಾದ ಇಶಾ ಗುಹಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts