More

    15 ವಯೋಮಿತಿ ಕ್ರಿಕೆಟ್‌ನಿಂದಲೂ ದ್ರಾವಿಡ್ ಜತೆ ಕೊಹ್ಲಿ ವಿಶೇಷ ನಂಟು!

    ಮೊಹಾಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನ ಮೊಹಾಲಿ ಮೈದಾನದಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಕ್ಯಾಪ್ ಅನ್ನು ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಿದರು. 100ನೇ ಪಂದ್ಯದ ಸ್ಮರಣಿಕೆಯನ್ನು ದಿಗ್ಗಜ ದ್ರಾವಿಡ್‌ರಿಂದ ಪಡೆದಿದ್ದು ವಿರಾಟ್ ಕೊಹ್ಲಿ ಪಾಲಿಗೆ ವಿಶೇಷ ಕ್ಷಣವೆನಿಸಿತು.

    15 ವಯೋಮಿತಿ ಕ್ರಿಕೆಟ್ ಆಡುತ್ತಿದ್ದಾಗ ಎನ್‌ಸಿಎಯಲ್ಲಿ ದ್ರಾವಿಡ್ ಜತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದನ್ನು ನೆನಪಿಸಿಕೊಂಡ ಕೊಹ್ಲಿ, ‘ಆ ಚಿತ್ರ ಇನ್ನೂ ನಮ್ಮ ಮನೆಯಲ್ಲಿದೆ. ಹೀಗಾಗಿ 100ನೇ ಟೆಸ್ಟ್ ಪಂದ್ಯದ ಕ್ಯಾಪ್ ನನಗೆ ನೀಡಲು ನಿಮ್ಮಿಂದ ಉತ್ತಮ ವ್ಯಕ್ತಿ ಇಲ್ಲ. ಇದೊಂದು ಶ್ರೇಷ್ಠ ಜರ್ನಿ. ಇದೇ ರೀತಿ ಮುಂದುವರಿಯುವ ಭರವಸೆ ಇದೆ’ ಎಂದರು.

    ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲೂ ಭಾರತವನ್ನು ಪ್ರತಿನಿಧಿಸಿ, ಐಪಿಎಲ್‌ನಲ್ಲೂ ಆಡುವ ಜತೆಗೆ 100 ಟೆಸ್ಟ್ ಪಂದ್ಯ ಆಡಿರುವ ತಮ್ಮ ವೃತ್ತಿಜೀವನದಿಂದ ಮುಂದಿನ ಪೀಳಿಗೆ ಸ್ಫೂರ್ತಿ ಪಡೆಯುವಂತಾಗಲಿ ಎಂದು ಕೊಹ್ಲಿ ಬಿಸಿಸಿಐ ಏರ್ಪಡಿಸಿದ್ದ ಸಮಾರಂಭದಲ್ಲಿ ಹೇಳಿದರು.

    ಬಾಲ್ಯದಲ್ಲಿ ಕ್ರಿಕೆಟ್ ಆಡಲಾರಂಭಿಸಿದಾಗ ನಿಮಗೆ ಭಾರತ ಪರ ಒಂದು ಟೆಸ್ಟ್ ಆಡುವ ಆಸೆಯಷ್ಟೇ ಇರಬಹುದು. ಆದರೀಗ 100ನೇ ಟೆಸ್ಟ್ ಆಡಲು ಸಜ್ಜಾಗಿದ್ದೀರಿ. ಇದರ ಹಿಂದೆ ಸಾಕಷ್ಟು ಬೆವರು, ಶಿಸ್ತು, ಧೈರ್ಯ, ಕೌಶಲ, ಬದ್ಧತೆ, ತುಡಿತ, ಏಕಾಗ್ರತೆ ಎಲ್ಲವೂ ಇದೆ. ನಿಜಕ್ಕೂ ಇದು ಶ್ರೇಷ್ಠ ಜರ್ನಿ ಎಂದು ದ್ರಾವಿಡ್ ಕ್ಯಾಪ್ ನೀಡುವ ಮುನ್ನ ಹೇಳಿದರು.

    ಕೊಹ್ಲಿ ಕುಟುಂಬ ಹಾಜರಿ
    ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯಕ್ಕೆ ಕುಟುಂಬದ ಸದಸ್ಯರೂ ಕ್ರೀಡಾಂಗಣದಲ್ಲಿ ಸಾಕ್ಷಿಯಾಗಿದ್ದರು. ಬಯೋಬಬಲ್ ಕಾರಣದಿಂದಾಗಿ ಬಿಸಿಸಿಐ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ವೇಳೆ ಪತ್ನಿ ಅನುಷ್ಕಾ ಶರ್ಮ ಮಾತ್ರ ಕೊಹ್ಲಿ ಜತೆಗಿದ್ದರು. ಅವರ ಅಣ್ಣ ವಿಕಾಸ್ ಕೊಹ್ಲಿ ಮತ್ತಿತರರು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಷಾ, ಖಜಾಂಚಿ ಅರುಣ್ ಧುಮಾಲ್ ಕೂಡ ಹಾಜರಿದ್ದರು.

    ಮೊಹಾಲಿ ಟೆಸ್ಟ್‌ನಲ್ಲಿ ಪಂತ್ ಬಿರುಸಿನ ಬ್ಯಾಟಿಂಗ್, ಬೃಹತ್ ಮೊತ್ತದತ್ತ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts