More

    ಮೊಹಾಲಿ ಟೆಸ್ಟ್‌ನಲ್ಲಿ ಪಂತ್ ಬಿರುಸಿನ ಬ್ಯಾಟಿಂಗ್, ಬೃಹತ್ ಮೊತ್ತದತ್ತ ಭಾರತ

    ಮೊಹಾಲಿ: ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 100ನೇ ಮತ್ತು ರೋಹಿತ್ ಶರ್ಮ ನಾಯಕತ್ವದ ಚೊಚ್ಚಲ ಟೆಸ್ಟ್ ಎಂಬ ವಿಶೇಷತೆಯೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬರೆಯುತ್ತಿರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಆರಂಭ ಕಂಡಿದೆ. ವಿಕೆಟ್ ಕೀಪರ್-ಎಡಗೈ ಬ್ಯಾಟರ್ ರಿಷಭ್ ಪಂತ್ (96 ರನ್, 97 ಎಸೆತ, 9 ಬೌಂಡರಿ, 4 ಸಿಕ್ಸರ್) ಅವರ ಶತಕವಂಚಿತ ಬಿರುಸಿನ ಬ್ಯಾಟಿಂಗ್ ನಿರ್ವಹಣೆಯಿಂದ ಭಾರತ ಪಂದ್ಯದ ಮೊದಲ ದಿನ ಏಕದಿನ ಶೈಲಿಯಲ್ಲಿ ರನ್‌ಪ್ರವಾಹ ಹರಿಸಿದ್ದು, ಬೃಹತ್ ಮೊತ್ತದತ್ತ ಮುನ್ನಡೆದಿದೆ.

    ಪಿಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, ಶ್ರೀಲಂಕಾ ತಂಡದ ಕರಾರುವಾಕ್ ದಾಳಿಯನ್ನು ದಿಟ್ಟವಾಗಿಯೇ ಎದುರಿಸಿ ನಿಂತಿತು. ಸುದೀರ್ಘ ಜತೆಯಾಟಗಳು ಬರದಿದ್ದರೂ ಭಾರತ ಬಿರುಸಿನ ಗತಿಯಲ್ಲಿ ರನ್ ಪೇರಿಸಿತು. ಲಂಕಾ ಓವರ್‌ಗತಿ ಕಾಯ್ದುಕೊಳ್ಳದ ಕಾರಣ 5 ಓವರ್ ಮುಂಚಿತವಾಗಿಯೇ ಮುಕ್ತಾಯಗೊಂಡ ಮೊದಲ ದಿನದಾಟದಲ್ಲಿ ಭಾರತ ತಂಡ, 4.20ರ ಸರಾಸರಿಯಲ್ಲಿ 6 ವಿಕೆಟ್‌ಗೆ 357 ರನ್ ಪೇರಿಸಿದೆ. ಸ್ಪಿನ್ ಜೋಡಿಯಾದ ರವೀಂದ್ರ ಜಡೇಜಾ (45*ರನ್, 82 ಎಸೆತ, 5 ಬೌಂಡರಿ) ಮತ್ತು ಆರ್. ಅಶ್ವಿನ್ (10*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಭಾರತ 400-450 ಮೊತ್ತದ ನಿರೀಕ್ಷೆಯಲ್ಲಿದೆ.

    ಬಿರುಸಿನ ಆರಂಭ
    ನಾಯಕ ರೋಹಿತ್ ಶರ್ಮ (29 ರನ್, 28 ಎಸೆತ, 6 ಬೌಂಡರಿ) ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ (33ರನ್, 49 ಎಸೆತ, 5 ಬೌಂಡರಿ) ಜೋಡಿ ಭಾರತಕ್ಕೆ ಬಿರುಸಿನ ಆರಂಭ ಒದಗಿಸಿತು. ಲಂಕಾದ ರಕ್ಷಣಾತ್ಮಕ ಫೀಲ್ಡಿಂಗ್ ವ್ಯೆಹದ ಎದುರು 61 ಎಸೆತಗಳಲ್ಲೇ 52 ರನ್ ಕೂಡಿಹಾಕಿದ ಈ ಜೋಡಿಯನ್ನು ವೇಗಿ ಲಹಿರು ಕುಮಾರ ಬೇರ್ಪಡಿಸಿದರು. ಶಾರ್ಟ್ ಪಿಚ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ರೋಹಿತ್, ಲಾಂಗ್ ಲೆಗ್‌ನಲ್ಲಿ ಲಕ್ಮಲ್‌ಗೆ ಕ್ಯಾಚ್ ನೀಡಿದರು. ಬಳಿಕ ಮಯಾಂಕ್, ಸ್ಪಿನ್ನರ್ ಎಂಬುಲ್ಡೆನಿಯ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು.

    ಹನುಮ ವಿಹಾರಿ ಅರ್ಧಶತಕ
    ಚೇತೇಶ್ವರ ಪೂಜಾರ ಅವರ ವನ್‌ಡೌನ್ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹನುಮ ವಿಹಾರಿ (58 ರನ್ , 128 ಎಸೆತ, 5 ಬೌಂಡರಿ) ಅರ್ಧಶತಕ ಸಿಡಿಸಿ ಗಮನಸೆಳೆದರು. ವಿಹಾರಿ 3ನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜತೆಗೆ 90 ರನ್ ಜತೆಯಾಟವಾಡಿದರು. ಆದರೆ, ದೊಡ್ಡ ಇನಿಂಗ್ಸ್ ಆಡುವ ಪ್ರಯತ್ನದಲ್ಲಿದ್ದಾಗಲೇ ವಿಶ್ವ ಫೆರ್ನಾಂಡೊ ಎಸೆತದಲ್ಲಿ ಡ್ರೈವ್ ಮಾಡಲು ಯತ್ನಿಸಿ ಬೌಲ್ಡಾದರು. ಅಜಿಂಕ್ಯ ರಹಾನೆ ಸ್ಥಾನದಲ್ಲಿ ಅವಕಾಶ ಪಡೆದ ಶ್ರೇಯಸ್ ಅಯ್ಯರ್ (27) ಕಳೆದ ಟಿ20 ಸರಣಿಯ ರನ್‌ಪ್ರವಾಹ ಮುಂದುವರಿಸಲು ವಿಫಲರಾದರು.

    ಕೊಹ್ಲಿಗೆ ನೂರನೇ ಟೆಸ್ಟ್‌ನಲ್ಲೂ ನೂರಿಲ್ಲ!
    ಮಯಾಂಕ್ ಔಟಾದ ಬೆನ್ನಲ್ಲೇ ಕ್ರೀಸ್‌ಗೆ ಇಳಿದ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿದ್ದರು. ಇದರಿಂದ ಅವರು, ಕಳೆದ 2 ವರ್ಷಗಳಿಂದ ಕಾಡುತ್ತಿರುವ ಶತಕದ ಬರವನ್ನು ನೀಗಿಸುವ ನಿರೀಕ್ಷೆ ಹರಡಿತ್ತು. ಆದರೆ ಎಡಗೈ ಸ್ಪಿನ್ನರ್ ಎಂಬುಲ್ಡೆನಿಯ ಅವರ ಫುಲ್ಲರ್ ಲೆಂತ್ ಎಸೆತವನ್ನು ಬ್ಯಾಕ್ ಫುಟ್‌ನಲ್ಲಿ ಆಡಲು ಯತ್ನಿಸುವ ಮೂಲಕ ಕೊಹ್ಲಿ ಎಡವಟ್ಟು ಮಾಡಿಕೊಂಡರು. ನೇರವಾಗಿ ಬಂದ ಚೆಂಡು ಆಫ್​ ಸ್ಟಂಪ್ ಉರುಳಿಸಿತು. ಇದರಿಂದ ಕೊಹ್ಲಿ 45 ರನ್‌ಗೆ (76 ಎಸೆತ, 5 ಬೌಂಡರಿ) ತೃಪ್ತಿಪಟ್ಟು ಪೆವಿಲಿಯನ್‌ಗೆ ಮರಳಿದರು.

    ಪಂತ್ ಭರ್ಜರಿ ಬ್ಯಾಟಿಂಗ್
    ಲಂಕಾ ವೇಗಿಗಳು ಹೊಸ ಚೆಂಡಿನಲ್ಲಿ ಪಿಚ್‌ನಿಂದ ಉತ್ತಮ ನೆರವು ಪಡೆದರೆ, ಬಳಿಕ ಸ್ಪಿನ್ನರ್‌ಗಳಿಗೂ ಕೆಲ ಅನಿರೀಕ್ಷಿತ ತಿರುವುಗಳು ಸಿಕ್ಕವು. ಆದರೆ ರಿಷಭ್ ಪಂತ್ ಬ್ಯಾಟಿಂಗ್‌ಗೆ ಇಳಿದ ಬಳಿಕ ಲಂಕಾ ಬೌಲಿಂಗ್ ದಾಳಿ ನೀರಸವೆನಿಸಿತು. ಎಡಗೈ ಸ್ಪಿನ್ನರ್ ಲಸಿತ್ ಎಂಬುಲ್ಡೆನಿಯ ಅವರ ಓವರ್ ಒಂದರಲ್ಲಿ 22 ರನ್ ಸಿಡಿಸಿದ ಪಂತ್, ನೆರೆದಿದ್ದ 5 ಸಾವಿರ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಒದಗಿಸಿದರು. ಕೊಹ್ಲಿ ಔಟಾದ ಬೆನ್ನಲ್ಲೇ ಕ್ರೀಸ್‌ಗೆ ಇಳಿದ ಪಂತ್, ಆಕ್ರಮಣಕಾರಿ ಆಟದ ಮೂಲಕ ವಿಜೃಂಭಿಸಿದರು. ಪ್ರೇಕ್ಷಕರ ಬೇಡಿಕೆಗೆ ತಕ್ಕಂತೆ ಒಂಟಿ-ಕೈ ಸಿಕ್ಸರ್ ಕೂಡ ಸಿಡಿಸಿದರು. ಆದರೆ 4ನೇ ಟೆಸ್ಟ್ ಶತಕದಂಚಿನಲ್ಲಿ ಪಂತ್, ವೃತ್ತಿಜೀವನದ ಕೊನೇ ಟೆಸ್ಟ್ ಸರಣಿ ಆಡುತ್ತಿರುವ ಅನುಭವಿ ವೇಗಿ ಸುರಂಗ ಲಕ್ಮಲ್ ಎಸೆತದಲ್ಲಿ ಬೌಲ್ಡಾದರು. ಜಡೇಜಾ ಅವರಿಂದ ಉತ್ತಮ ಬೆಂಬಲ ಪಡೆದ ಪಂತ್ 6ನೇ ವಿಕೆಟ್‌ಗೆ 118 ಎಸೆತಗಳಲ್ಲೇ 104 ರನ್ ಜತೆಯಾಟವಾಡಿದರು.

    ಕೊಹ್ಲಿಗೆ ಕೋಚ್ ದ್ರಾವಿಡ್ ಸನ್ಮಾನ
    ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನ ಮೊಹಾಲಿ ಮೈದಾನದಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿಶೇಷ ಕ್ಯಾಪ್ ಅನ್ನು ಸ್ಮರಣಿಕೆ ನೀಡುವ ಮೂಲಕ ಸನ್ಮಾನಿಸಿದರು. ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲೂ ಭಾರತವನ್ನು ಪ್ರತಿನಿಧಿಸಿ, ಐಪಿಎಲ್‌ನಲ್ಲೂ ಆಡುವ ಜತೆಗೆ 100 ಟೆಸ್ಟ್ ಪಂದ್ಯ ಆಡಿರುವ ತಮ್ಮ ವೃತ್ತಿಜೀವನದಿಂದ ಮುಂದಿನ ಪೀಳಿಗೆ ಸ್ಫೂರ್ತಿ ಪಡೆಯುವಂತಾಗಲಿ ಎಂದು ಕೊಹ್ಲಿ ಬಿಸಿಸಿಐ ಏರ್ಪಡಿಸಿದ್ದ ಸಮಾರಂಭದಲ್ಲಿ ಹೇಳಿದರು. ಬಾಲ್ಯದಲ್ಲಿ ಕ್ರಿಕೆಟ್ ಆಡಲಾರಂಭಿಸಿದಾಗ ನಿಮಗೆ ಭಾರತ ಪರ ಒಂದು ಟೆಸ್ಟ್ ಆಡುವ ಆಸೆಯಷ್ಟೇ ಇರಬಹುದು. ಆದರೀಗ 100ನೇ ಟೆಸ್ಟ್ ಆಡಲು ಸಜ್ಜಾಗಿದ್ದೀರಿ. ಇದರ ಹಿಂದೆ ಸಾಕಷ್ಟು ಬೆವರು, ಶಿಸ್ತು, ಧೈರ್ಯ, ಕೌಶಲ, ಬದ್ಧತೆ, ತುಡಿತ, ಏಕಾಗ್ರತೆ ಎಲ್ಲವೂ ಇದೆ. ನಿಜಕ್ಕೂ ಇದು ಶ್ರೇಷ್ಠ ಜರ್ನಿ ಎಂದು ದ್ರಾವಿಡ್ ಕ್ಯಾಪ್ ನೀಡುವ ಮುನ್ನ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts