More

    ವಿಪ್ರರು ಒಗ್ಗಟ್ಟು ಪ್ರದಶಿರ್ಸಲಿ


    ಹುಬ್ಬಳ್ಳಿ: ಸಮಸ್ತ ಬ್ರಾಹ್ಮಣರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ರಾಜ್ಯ ಸರ್ಕಾರದ ಅನುದಾನ ಹಾಗೂ ವಿವಿಧ ಯೋಜನೆಗಳನ್ನು ಸಮಾಜದ ಅರ್ಹ ವ್ಯಕ್ತಿಗೆ ಮುಟ್ಟಿಸಬೇಕು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಹೇಳಿದರು.
    ಮಂಡಳಿ ವತಿಯಿಂದ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡಳಿಯಿಂದ ಜಾರಿಗೊಳಿಸಿದ ವಿವಿಧ ಯೋಜನೆಗಳಡಿ ನಿಗದಿಪಡಿಸಿದ ಗುರಿಗಿಂತ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತಿವೆ. ಬೇರೆ ಸಮಾಜದಲ್ಲಿ ನೋಡಿದರೆ ನಿಗದಿಪಡಿಸಿದ ಗುರಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತವೆ ಎಂದರು.
    ಬ್ರಾಹ್ಮಣ ಸಮಾಜದವರು ತಾವೇ ಪ್ರವೀಣರು, ಬುದ್ಧಿವಂತರು ಎಂಬ ಅಹಂನಿಂದ ಆಚೆ ಬರಬೇಕು. 2015ರ ಜಾತಿ ಗಣತಿ ಪ್ರಕಾರ ರಾಜ್ಯದಲ್ಲಿ ನಮ್ಮ ಜನಸಂಖ್ಯೆ 17.3 ಲಕ್ಷ ಇದೆ. ಆದರೆ, ನಾವು 42 ಲಕ್ಷ ಇದ್ದೇವೆ. ಜಾತಿ ಕಾಲಂನಲ್ಲಿ ನಾವು ಸ್ಮಾರ್ತ, ಮಧ್ವ, ಇತ್ಯಾದಿ 44 ಉಪ ಜಾತಿಗಳನ್ನು ನಮೂದಿಸಿದ್ದರ ಪರಿಣಾಮ ಇದು. ಜಾತಿ ಕಾಲಂನಲ್ಲಿ ಎಲ್ಲರೂ ಬ್ರಾಹ್ಮಣ ಎಂದು ನಮೂದಿಸಿ ಎಂದು ಕರೆ ನೀಡಿದರು.
    ಬಡವರಿಗೆ ನೆರವಾಗಿ: ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಬ್ರಾಹ್ಮಣರಲ್ಲಿ ಬಹಳಷ್ಟು ಜನ ಬಡವರಿದ್ದಾರೆ. ಬಡತನದ ಕಾರಣದಿಂದಾಗಿ ಶಿಕ್ಷಣದಿಂದ ವಂಚಿತರಾದವರೂ ಇದ್ದಾರೆ. ಸಮಾಜದಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವವರು ಬಡವರಿಗೆ ನೆರವಾಗಬೇಕು ಎಂದರು.
    ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಉಪ ಮೇಯರ್ ಉಮಾ ಮುಕುಂದ, ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಲ್.ಎ. ಓಕ್, ಮಂಡಳಿ ನಿರ್ದೇಶಕರಾದ ಎ.ಜೆ. ರಂಗವಿಠ್ಠಲ, ವತ್ಸಲಾ ನಾಗೇಶ, ಪಿ.ಸಿ. ಶ್ರೀನಿವಾಸ ಇತರರು ಇದ್ದರು. ವಿವಿಧ ಕ್ಷೇತ್ರಗಳ ಸಾಧಕರಾದ ಎಚ್.ಎನ್. ನಂದಕುಮಾರ, ಗೋವಿಂದ ಜೋಶಿ, ರಾಜಾ ದೇಸಾಯಿ, ಅನಂತ ಐತಾಳ, ಜಿ.ಆರ್. ಭಟ್, ತೇಜಸ್ವಿನಿ ಶ್ರೀಹರಿ ಇತರರನ್ನು ಸನ್ಮಾನಿಸಲಾಯಿತು.
    ಸಮ್ವನಿತ ಮಠದ ಪ್ರಾರ್ಥನೆ ಹಾಡಿದರು. ಮಂಡಳಿ ಸಂಚಾಲಕ ಡಿ.ಪಿ. ಪಾಟೀಲ ಸ್ವಾಗತಿಸಿದರು. ನಿರ್ದೇಶಕ ವಸಂತ ನಾಡಜೋಶಿ ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts