ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿರುವ ಭಾರತದ ಏಕೈಕ ಮಹಿಳಾ ರೆಸ್ಲರ್ ವಿನೇಶ್ ಪೋಗಟ್, ಕರೊನಾ ವೈರಸ್ ಭೀತಿಯಿಂದಾಗಿ ಸೆಪ್ಟೆಂಬರ್ 1 ರಿಂದ ಲಖನೌದಲ್ಲಿ ಆರಂಭಗೊಳ್ಳಲಿರುವ ರಾಷ್ಟ್ರೀಯ ಶಿಬಿರದಿಂದ ಹೊರಗುಳಿದಿದ್ದಾರೆ. ವಿನೇಶ್ ಅವರ ತೀರ್ಮಾನದಿಂದಾಗಿ ರಾಷ್ಟ್ರೀಯ ಫೆಡರೇಷನ್‌ಗೆ ಇರುಸುಮುರುಸು ಉಂಟಾಗಿದೆ. ಸೆಪ್ಟೆಂಬರ್ 1 ರಿಂದ ಮಹಿಳೆಯರಿಗೆ ಲಖನೌದಲ್ಲಿ ಹಾಗೂ ಸೊನೆಪತ್‌ನಲ್ಲಿ ಪುರುಷರಿಗೆ ಶಿಬಿರ ಆರಂಭಗೊಳ್ಳಲಿದೆ. ಲಖನೌಗೆ ಪ್ರಯಾಣಿಸಲು ಸೂಕ್ತವಾದ ಸಮಯವಲ್ಲ. ಹೀಗಾಗಿ ತರಬೇತಿ ಶಿಬಿರದಿಂದ ಹೊರಗುಳಿಯಲಿದ್ದೇನೆ ಎಂದು ವಿನೇಶ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಧೋನಿಗೆ ಭಾರತರತ್ನ ನೀಡಬೇಕೆಂದ ಕಾಂಗ್ರೆಸ್ ಶಾಸಕ
ಕೋವಿಡ್-19 ಮಹಾಮಾರಿಗೆ ಹೆದರಿರುವ ವಿನೇಶ್, ಸದ್ಯಕ್ಕೆ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿಯೇ ತರಬೇತಿ ಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ನಾನು ಪ್ರತಿದಿನ ಕೋಚ್ ಓಂ ಪ್ರಕಾಶ್ ಅವರ ಮಾರ್ಗದರ್ಶನದಂತೆ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ವೈಯಕ್ತಿಕ ಕೋಚ್ ವೊಲ್ಲೆರ್ ಅಕೊಸ್ ನೀಡುವ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಲಖನೌಗೆ ತೆರಳುವುದು ಸೂಕ್ತವಲ್ಲ ಎಂದು 2019ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತೆ ವಿನೇಶ್ ತಿಳಿಸಿದ್ದಾರೆ. ಆದರೆ, ವಿನೇಶ್ ಪೋಗಟ್ ನೀಡುವ ಕಾರಣವನ್ನು ಭಾರತೀಯ ರೆಸ್ಲಿಂಗ್ ಫೆಡರೇಷನ್ (ಡಬ್ಲ್ಯುಎಫ್ ಐ) ಅತೃಪ್ತಿ ವ್ಯಕ್ತಪಡಿಸಿದೆ. ವಿನೇಶ್‌ಗೆ ಆಯ್ಕೆ ಸಮಿತಿ ವಿನಾಯಿತಿ ನೀಡುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಡಬ್ಲ್ಯುಎಫ್ ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.
ಇದನ್ನೂ ಓದಿ: VIDEO | ಆರ್ಸಿಬಿ ಕ್ವಾರಂಟೈನ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಚಾಹಲ್!
ಮಹಿಳೆಯರ 50 ಕೆಜಿ, 53 ಕೆಜಿ, 57 ಕೆಜಿ, 62 ಕೆಜಿ, 68 ಕೆಜಿ ವಿಭಾಗದಲ್ಲಿ ತರಬೇತಿ ಶಿಬಿರ ನಡೆಯಲಿದೆ. ವಿನೇಶ್ ಪೋಗಟ್ ಕೂಡ ಶಿಬಿರದಲ್ಲಿ ಹಾಜರಾಗಬೇಕು ಎಂದು ಬಯಸುತ್ತೇವೆ. 2024 ಕೂಟದ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ಶಿಬಿರದಲ್ಲಿ ಹಾಜರಿರಬೇಕು ಎಂದು ತೋಮರ್ ತಿಳಿಸಿದ್ದಾರೆ. ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಮತ್ತು ಕುಸ್ತಿ ತಾರೆ ವಿನೇಶ್ ಪೋಗಟ್ ಸಹಿತ ಐವರು ಕ್ರೀಡಾಪಟುಗಳ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾಗೌರವವಾದ ಖೇಲ್‌ರತ್ನ ಪ್ರಶಸ್ತಿಗೆ ಮಂಗಳವಾರವಷ್ಟೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಒಳಗೊಂಡ 12 ಸದಸ್ಯರ ಆಯ್ಕೆ ಸಮಿತಿ ಶಿಫಾರಸು ಮಾಡಿದೆ.
https://www.instagram.com/p/CAhP3HcHHCf/?utm_source=ig_web_copy_link