More

    ಮಲಪ್ರಭಾ ನದಿ ಅಬ್ಬರಕ್ಕೆ ಮುಳುಗಿದ ಗ್ರಾಮಗಳು – ನದಿ ತೀರದ ಜಮೀನಿನಲ್ಲಿನ ಬೆಳೆಗಳು ಜಲಾವೃತ

    ಕೂಡಲಸಂಗಮ: ಬೆಣ್ಣೆ ಹಳ್ಳ, ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಳೆ ಸುರಿದ ಪರಿಣಾಮ ನಾರಾಯಣಪುರ ಜಲಾಶಯದ ಹಿನ್ನೀರಿನ ಮಲಪ್ರಭಾ ನದಿ ದಡದ ಹುನಗುಂದ ತಾಲೂಕಿನ ವಿವಿಧ ಗ್ರಾಮಗಳು ಜಲಾವೃತಗೊಂಡಿದ್ದು, ಗ್ರಾಮಸ್ಥರು ಆಸರೆಗಾಗಿ ಸರ್ಕಾರಿ ಕಟ್ಟಡ, ಬಂಧುಗಳ ಮನೆಗೆ ತೆರಳುತ್ತಿರುವುದು ಬುಧವಾರ ಬೆಳಗ್ಗೆ ಸಾಮಾನ್ಯವಾಗಿತ್ತು.

    ಕಜಗಲ್ಲ, ಕೆಂಗಲ್ಲ, ವರಗೊಡದಿನ್ನಿ, ಹೂವನೂರ, ಗಂಜಿಹಾಳ ಸೇರಿ ವಿವಿಧ ಗ್ರಾಮಗಳಲ್ಲಿ ಸಂಪೂರ್ಣ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಬೆಳಗ್ಗೆ ನದಿಯಲ್ಲಿ ಗಂಟೆ ಗಂಟೆಗೂ ಅಧಿಕ ನೀರು ಬರುತ್ತಿದ್ದರಿಂದಾಗಿ ಗ್ರಾಮಸ್ಥರು ಮನೆಯಲ್ಲಿನ ಅಗತ್ಯ ವಸ್ತುಗಳು ಸೇರಿ ಜಾನುವಾರದೊಂದಿಗೆ ಸರ್ಕಾರಿ ಕಟ್ಟಡಗಳಿಗೆ ತೆರಳಿದರು.

    2007, 2009, 2019ರ ಪ್ರವಾಹಕ್ಕೆ ಈ ಗ್ರಾಮಗಳು ಮುಳುಗಿದಾಗ ಸರ್ಕಾರ ತಾತ್ಕಾಲಿಕ ಶೆಡ್ ನಿರ್ಮಿಸಿತ್ತು. 2020ರಲ್ಲಿ ಈ ಶೆಡ್‌ಗಳನ್ನು ತೆರವುಗೊಳಿಸಿದ್ದಾಗಿ ಸದ್ಯ ಪ್ರವಾಹಕ್ಕೆ ತುತ್ತಾದ ಗ್ರಾಮದ ಜನರು ಆಸರೆಗಾಗಿ ಪರದಾಡುವಂತಾಗಿದೆ. ನೀರಿನಲ್ಲಿ ಮುಳುಗಿದ ಕುಟುಂಬಸ್ಥರಿಗೆ ಸರ್ಕಾರ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಿಸಿ, ಗಂಜಿ ಕೇಂದ್ರ ಆರಂಭಿಸಬೇಕೆಂದು ವರಗೊಡದಿನ್ನಿಯ ಭೀಮಪ್ಪ ಪೂಜಾರಿ ಹೇಳಿದರು.

    ಬೆಳಗ್ಗೆ ಮನೆಗೆ ನೀರು ನುಗ್ಗಿತು. ಅಗತ್ಯ ವಸ್ತು, ಮಕ್ಕಳನ್ನು ಕರೆದುಕೊಂಡು ಶಾಲೆ ಆವರಣದಲ್ಲಿ ಆಶ್ರಯ ಪಡೆದಿದ್ದೇವೆ. ಇರಲು ಜಾಗವಿಲ್ಲ. ಅಡುಗೆ ಮಾಡಲು ಉರುವಲು ಇಲ್ಲ. ಹೋಟೆಲ್‌ನಲ್ಲಿ ತಿಂಡಿ ತಂದು ತಿಂದಿದ್ದೇವೆ. ಕೂಡಲೇ ಸರ್ಕಾರ ಆಸರೆ ಕಲ್ಪಿಸಿ ಗಂಜಿಕೇಂದ್ರ ಸ್ಥಾಪಿಸಬೇಕೆಂದು ಕಜಗಲ್ಲ ಗ್ರಾಮಸ್ಥರು ಆಗ್ರಹಿಸಿದರು.

    ಮಲಪ್ರಭಾ ನದಿ ದಡದ ಕೂಡಲಸಂಗಮ, ನಂದನೂರ, ಚಿತ್ತರಗಿ, ಬೆಳಗಲ್ಲ, ಬಿಸನಾಳಕೊಪ್ಪ, ಇದ್ದಲಗಿ, ಅಡವಿಹಾಳ, ಕಮದತ್ತ, ಎಮ್ಮೆಟ್ಟಿ, ಧನ್ನೂರ ಸೇರಿ ವಿವಿಧ ಗ್ರಾಮಗಳ ನದಿ ದಡದ ಜಮೀನಿನಲ್ಲಿ ಅಪಾರ ನೀರು ನುಗ್ಗಿ ಸೂರ್ಯಕಾಂತಿ, ಇರುಳ್ಳಿ, ಕಬ್ಬು, ತೊಗರಿ, ಮೆಕ್ಕೆಜೋಳ ಮುಂತಾದ ಬೆಳೆಗಳು ಸಂಪೂರ್ಣ ಹಾಳಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts