More

    ಗ್ರಾಮಗಳಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಸಹಕರಿಸಿ

    ಖಾನಾಪುರ: ಗ್ರಾಮೀಣ ಭಾಗಗಳ ನಾಗರಿಕರು ತಮ್ಮ ಮನೆಯ ಬಳಿ ಬಚ್ಚಲುನೀರು ಇಂಗಲು ಇಂಗುಗುಂಡಿ ನಿರ್ಮಿಸಿಕೊಂಡಲ್ಲಿ ಸರ್ಕಾರದ ನರೇಗಾ ಯೋಜನೆಯಡಿ 14,000 ರೂ. ಸಹಾಯಧನ ಪಡೆಯಬಹುದು ಎಂದು ಖಾನಾಪುರ ತಾಪಂ ಇಒ ಬಸವರಾಜ ಅಡವಿಮಠ ಹೇಳಿದ್ದಾರೆ.

    ತಾಲೂಕಿನ ಗೋಟಗಾಳಿ ಗ್ರಾಮ ಪಂಚಾಯಿತಿ ವತಿಯಿಂದ ಶನಿವಾರ ಬಚ್ಚಲುಗುಂಡಿ ನಿರ್ಮಾಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಬಚ್ಚಲು ಮನೆಯಿಂದ ಹೊರಬರುವ ಸ್ನಾನ ಮಾಡಿದ, ಬಟ್ಟೆ ಒಗೆದ ಮತ್ತು ಪಾತ್ರೆ ತೊಳೆದ ಕಲುಷಿತ ನೀರನ್ನು ರಸ್ತೆಯ ಮೇಲೆ ಹರಿಯಲು ಬಿಡುವ ಕಾರಣ ಕೊಳಚೆ ಹೆಚ್ಚುತ್ತಿದೆ. ಇದು ಸಾಂಕ್ರಾಮಿಕ ರೋಗ-ರುಜಿನಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಆದ್ದರಿಂದ ಮನೆಗೊಂದು ಬಚ್ಚಲುಗುಂಡಿ ನಿರ್ಮಿಸಿಕೊಳ್ಳುವುದರ ಮೂಲಕ ಕೊಳಚೆ ನೀರನ್ನು ಭೂಮಿಯಲ್ಲಿಯೇ ಇಂಗುವಂತೆ ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆಯ ವತಿಯಿಂದ ಬಚ್ಚಲುಗುಂಡಿ ನಿರ್ಮಾಣ ಅಭಿಯಾನ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಎಂ.ಜಿ.ದೇವರಾಜ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಬದುನಿರ್ಮಾಣ ಮಾಸಾಚರಣೆಯ ಮೂಲಕ ರೈತರ ಹೊಲಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಿಸಲು ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಗ್ರಾಮೀಣ ಭಾಗದ ನಾಗರಿಕರು ತಮ್ಮ ಮನೆಯ ಅಕ್ಕಪಕ್ಕ, ಮುಂಭಾಗ ಅಥವಾ ಹಿತ್ತಲಿನಲ್ಲಿ ಬಚ್ಚಲುಗುಂಡಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಡಿ ಸಹಾಯ-ಸೌಲಭ್ಯ ಒದಗಿಸಲು ಹೊಸದಾಗಿ ಕಾರ್ಯಯೋಜನೆ ರೂಪಿಸಲಾಗಿದೆ. ಈ ವಿಚಾರವಾಗಿ ತಮ್ಮ ಸಮೀಪದ ಗ್ರಾಪಂ ಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯುಂತೆ ಕರೆ ನೀಡಿದರು.

    ಪಿಡಿಒ ಆನಂದ ಬಿಂಗೆ ಮಾತನಾಡಿದರು. ಅಭಿಯಾನದ ಅಂಗವಾಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಚರಿಸಲು ಸಿದ್ಧಗೊಳಿಸಿದ ಜಾಗೃತಿ ರಥಕ್ಕೆ ಗಣ್ಯರು ಚಾಲನೆ ನೀಡಲಾಯಿತು. ಬಳಿಕ ಗ್ರಾಪಂ ವ್ಯಾಪ್ತಿಯ ಅರ್ಹ ಲಾನುಭವಿಗಳಿಗೆ ಬಚ್ಚಲುಗುಂಡಿ ನಿರ್ಮಾಣ ಕಾಮಗಾರಿ ಆದೇಶ ಪತ್ರ ವಿತರಿಸಿ ಕಾಮಗಾರಿಯೊಂದರ ಭೂಮಿಪೂಜೆ ನೆರವೇರಿಸಲಾಯಿತು. ಗ್ರಾಪಂ ಸಿಬ್ಬಂದಿ, ನರೇಗಾ ಉದ್ಯೋಗ ಬಂಧುಗಳು, ಲಾನುಭವಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ರಜತ್ ಅಲಿ ಪಾಟೀಲ ಸ್ವಾಗತಿಸಿದರು, ಮಹಾದೇವ ದೇಸಾಯಿ ನಿರೂಪಿಸಿದರು. ಸುಹಾಸ ಚೌರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts