More

    ಹಳ್ಳಿ-ಪಟ್ಟಣ ಅಭಿವೃದ್ಧಿಗೆ ಬಿಜೆಪಿ ಬದ್ಧ

    ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳೇ ಆಡಳಿತದಲ್ಲಿರುವುದರಿಂದ ಎಲ್ಲ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಕರೆ ನೀಡಿದರು.

    ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಗಾರ್ಡನ್‌ನಲ್ಲಿ ಶುಕ್ರವಾರ ಜರುಗಿದ ಬೈಲಹೊಂಗಲ ಮತಕ್ಷೇತ್ರದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 900 ಕೋಟಿ ರೂ. ವೆಚ್ಚದ ಬೆಳಗಾವಿ-ಧಾರವಾಡ ರೈಲ್ವೆ, ಬೆಳಗಾವಿ-ಬೆಂಗಳೂರು ನೇರ ರೈಲ್ವೆಯನ್ನು ದಿ. ಅಂಗಡಿ ಅವರು ಕೊಡುಗೆಯಾಗಿ ನೀಡಿದ್ದಾರೆ. ಕರೊನಾ ಸಂಕಷ್ಟ ಸಮಯದಲ್ಲಿ ತಮ್ಮ ಆರೋಗವನ್ನೂ ಲೆಕ್ಕಿಸದೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದರು. ಸುರೇಶ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಪತ್ನಿ ಮಂಗಲ ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕು.

    ಕಾಂಗ್ರೆಸ್‌ಗಿಲ್ಲ ನೈತಿಕತೆ: ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ನಾಯಕರು ಈ ಕಾಯ್ದೆಗಳ ಕುರಿತು ತಪ್ಪು ತಿಳಿವಳಿಕೆ ನೀಡಿ ಜನರ ಹಾಗು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆಗಳಲ್ಲಿ ಮತ ಕೇಳುವ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜನಪರ ಯೋಜನೆಗಳು ಜನಮಾನಸ ಗೆದ್ದಿವೆ.

    ಮಹಾದಾಯಿ ಯೋಜನೆಗಾಗಿ 1,600 ಕೋಟಿ ರೂ. ಮೀಸಲಿಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಅವಸಾನದತ್ತ ಸಾಗಿದ್ದು, ತನ್ನ ಅಸ್ತಿತ್ವದ ಉಳಿವಿಗೆ ಹೆಣಗಾಡುತ್ತಿದೆ. ಕಿತ್ತೂರು ಚನ್ನಮ್ಮನ, ಸಂಗೊಳ್ಳಿ ರಾಯಣ್ಣನ ನಾಡಿನ ಬೈಲಹೊಂಗಲದ ಜನತೆ ಸುರೇಶ ಅಂಗಡಿ ಅವರಿಗೆ 4 ಸಲ ಆಶೀರ್ವದಿಸಿದ್ದಾರೆ. ಅದೆ ರೀತಿ ಮಂಗಲ ಅಂಗಡಿ ಅವರಿಗೂ ಆಶೀರ್ವದಿಸಿ, ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಲು ಸಹಕರಿಸಬೇಕು ಎಂದು ಶೆಟ್ಟರ್ ಹೇಳಿದರು.

    ಬಿಜೆಪಿಗೇ ಮತ ನೀಡಿ: ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ದೇಶದ ಸಮಸ್ತ ಜನತೆಯ ನೂರಾರು ವರ್ಷದ ಕನಸಾಗಿದ್ದ ರಾಮಮಂದಿರ ನಿರ್ಮಾಣ ಇದೀಗ ನನಸಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ದೀನ-ದಲಿತರ ಉದ್ಧಾರಕ್ಕಾಗಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕಾಗಿ ಬಿಜೆಪಿಗೆ ಮತ ನೀಡಬೇಕು. ಅಲ್ಲದೆ, ದಿ. ಸುರೇಶ ಅಂಗಡಿ ಅವರ ಅಭಿವೃದ್ಧಿಪರ ಕಾರ್ಯ ಮುಂದುವರಿಸಲು ನಮ್ಮ ಅಭ್ಯರ್ಥಿ ಮಂಗಲ ಅವರ ಆಯ್ಕೆ ಮಾಡಲೇಬೇಕು ಎಂದರು.

    ಎಲ್ಲರಿಗೂ ಅಂಗಡಿ ಅಚ್ಚುಮೆಚ್ಚು: ಉಪಸಭಾಪತಿ ಆನಂದ ಮಾಮನಿ ಹಾಗೂ ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ದಿ. ಅಂಗಡಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಕೊಡುಗೆ ಜಿಲ್ಲೆಗೆ ಅಮೋಘವಾಗಿದೆ. ಅವರಿಂದ ತೆರವಾದ ಆ ಸ್ಥಾನಕ್ಕೆ ಮಂಗಲ ಅಂಗಡಿ ಅವರನ್ನು ಆಯ್ಕೆ ಮಾಡಬೇಕಿದೆ ಎಂದರು. ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಮತಕ್ಷೇತ್ರದಿಂದ ಸುಮಾರು 50 ಸಾವಿರ ಮುನ್ನಡೆ ನೀಡುವ ಗುರಿ ಇದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಶ್ರಮಿಸಿ, ಸರ್ಕಾರದ ಯೋಜನೆಗಳನ್ನು ಮನೆ, ಮನೆಗೆ ಮುಟ್ಟಿಸಬೇಕು ಎಂದರು.

    ಶಾಸಕರಾದ ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಮುಕ್ತಾರ ಪಠಾಣ, ಪ್ರಭಾರಿ ಶಶಿಕಾಂತ ನಾಯಕ, ರೇಷ್ಮೆ ನಿಗಮ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ವಿಜಯ ಮೆಟಗುಡ್ಡ, ಮಲ್ಲಿಕಾರ್ಜುನ ತುಬಾಕಿ, ಎಂ.ಬಿ. ಝಿರಲಿ, ಮುರಳೀಧರ ಮಾಳೋದೆ, ಗುರಪಾದ ಕಳ್ಳಿ, ರುದ್ರಪ್ಪ ಹೊಸಮನಿ, ಗುರು ಮೆಟಗುಡ್ಡ, ಮಡಿವಾಳಪ್ಪ ಹೋಟಿ, ಬಸವರಾಜ ನೇಸರಗಿ, ರತ್ನಾ ಗೋದಿ, ಲಕ್ಕಪ್ಪ ಕಾರಗಿ, ಎಫ್.ಎಸ್. ಸಿದ್ದನಗೌಡರ, ವಾಣಿ ಪತ್ತಾರ, ಶಾಂತಾ ಮಡ್ಡಿಕರ ಇತರರು ಇದ್ದರು. ಮಡಿವಾಳಪ್ಪ ಚಳಕೊಪ್ಪ ಸ್ವಾಗತಿಸಿದರು. ಮಲ್ಲನಗೌಡ ಗೌಡತಿ ನಿರೂಪಿಸಿದರು. ವೀರೇಶ ಹಲಕಿ ವಂದಿಸಿದರು.

    ಭಾರತಕ್ಕೆ ಶಾಪವಾದ ಕಾಂಗ್ರೆಸ್

    ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, 60 ವರ್ಷ ದೇಶವನ್ನಾಳಿದ ಕಾಂಗ್ರೆಸ್, ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ. ಅವರ ದುರಾಡಳಿತ, ಸ್ವಾರ್ಥದಿಂದ ಈ ದೇಶ ಅಧೋಗತಿಗೆ ತಲುಪಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ದೇಶದಲ್ಲಾದ ಬದಲಾವಣೆ ಮೂಲೆ-ಮೂಲೆಗಳಲ್ಲಿ ಕಾಣಸಿಗುತ್ತಿದೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರ ಕೈಯನ್ನು ಇನ್ನಷ್ಟು ಬಲ ಪಡಿಸಬೇಕು ಎಂದು ಕರೆ ನೀಡಿದರು.

    ದಿ.ಸುರೇಶ ಅಂಗಡಿ ಅವರು ಕೈಗೊಂಡ ಶಾಶ್ವತ ಯೋಜನೆಗಳು ಜನಮಾಸದಲ್ಲಿ ನೆಲೆಯೂರಿದ್ದು, ಏ. 17ರಂದು ನಡೆಯಲಿರುವ ಚುನಾವಣೆಯಲ್ಲಿ ಅವರ ಪತ್ನಿ ಮಂಗಲ ಅವರಿಗೆ ಮತ ನೀಡಿ, ಅಭೂತಪೂರ್ವ ಗೆಲುವಿಗೆ ಶ್ರಮಿಸಬೇಕು.
    | ಉಮೇಶ ಕತ್ತಿ ಆಹಾರ ಸಚಿವ

    ಬೆಳಗಾವಿ ಪುಣ್ಯಭೂಮಿಯಾಗಿದ್ದು, ನಾಡಿನ ಅಭಿವೃದ್ಧಿಗೆ ನನ್ನ ಪತಿಯ ಕೊಡುಗೆ ಅಪಾರವಾಗಿದೆ. ಬಿಜೆಪಿ ವರಿಷ್ಠರು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನನಗೂ ಮತಾಶೀರ್ವಾದ ನೀಡಿ. ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
    | ಮಂಗಲ ಅಂಗಡಿ ಬಿಜೆಪಿ ಅಭ್ಯರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts