More

    ರಷ್ಯಾದ ಲಾಪ್ಸನ್ ವಿರುದ್ಧ ಇಂದು ವಿಜೇಂದರ್ ಕಾದಾಟ, ಸತತ 13ನೇ ಜಯದ ನಿರೀಕ್ಷೆ

    ಪಣಜಿ: ಭಾರತದ ಅತ್ಯಂತ ಯಶಸ್ವಿ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್ ಕರೊನಾ ಕಾಲದ ಮೊದಲ ಕಾದಾಟಕ್ಕೆ ಸಜ್ಜಾಗಿದ್ದು, ಶುಕ್ರವಾರ ನಡೆಯಲಿರುವ ತಮ್ಮ ವೃತ್ತಿಜೀವನದ 13ನೇ ಪಂದ್ಯದಲ್ಲಿ ರಷ್ಯಾದ ಆರ್ಟಿಶ್ ಲಾಪ್ಸನ್ ವಿರುದ್ಧ ಸೆಣಸಲಿದ್ದಾರೆ. ಗೋವಾದಲ್ಲಿ ‘ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೊ’ ಹಡಗಿನ ಚಾವಣಿಯ ಮೇಲೆ ಈ ‘ಬ್ಯಾಟಲ್ ಆನ್ ಶಿಪ್’ ಕಾದಾಟ ನಡೆಯುತ್ತಿರುವುದು ವಿಶೇಷವಾಗಿದೆ.

    ಇದುವರೆಗೆ ಆಡಿರುವ ಎಲ್ಲ 12 ವೃತ್ತಿಪರ ಬಾಕ್ಸಿಂಗ್ ಪಂದ್ಯಗಳಲ್ಲೂ ಗೆದ್ದ ದಾಖಲೆ ಹೊಂದಿರುವ 35 ವರ್ಷದ ವಿಜೇಂದರ್ ಅಜೇಯ ಓಟವನ್ನು ಮುಂದುವರಿಸುವ ಹಂಬಲದಲ್ಲಿದ್ದಾರೆ. 8 ಪಂದ್ಯಗಳಲ್ಲಿ ನಾಕೌಟ್ ಗೆಲುವು ಕಂಡಿರುವ ವಿಜೇಂದರ್ 2019ರ ನವೆಂಬರ್‌ನಲ್ಲಿ ಕೊನೆಯ ಪಂದ್ಯವಾಡಿದ್ದರು. ಘಾನಾದ ಚಾರ್ಲ್ಸ್ ಆಡಮು ವಿರುದ್ಧ ಆಡಿದ ಆ ಪಂದ್ಯದಲ್ಲಿ ಅವರು ಸುಲಭ ಗೆಲುವು ದಾಖಲಿಸಿದ್ದರು. ಬಳಿಕ ಕರೊನಾ ಹಾವಳಿಯಿಂದಾಗಿ ಕಳೆದ ವರ್ಷ ಅವರ ಪಂದ್ಯ ಆಯೋಜನೆಗೊಂಡಿರಲಿಲ್ಲ.

    26 ವರ್ಷದ ಆರ್ಟಿಶ್ ಲಾಪ್ಸನ್, ವಿಜೇಂದರ್‌ಗಿಂತ ಕಡಿಮೆ ಅನುಭವಿಯಾಗಿದ್ದರೂ, ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 2 ನಾಕೌಟ್ ಸಹಿತ 4ರಲ್ಲಿ ಜಯಿಸಿರುವ ಲಾಪ್ಸನ್, ತಲಾ 1 ಡ್ರಾ, ಸೋಲು ಕಂಡಿದ್ದಾರೆ.

    6 ಅಡಿ ಎತ್ತರದ ವಿಜೇಂದರ್‌ಗಿಂತ ಲಾಪ್ಸನ್ (6.4 ಅಡಿ) ಎತ್ತರವಾಗಿದ್ದು, ಭಾರತೀಯ ಬಾಕ್ಸರ್‌ಗೆ ಈ ಬಾರಿ ಎತ್ತರದ ಲಾಭ ಪಡೆಯಲು ಅವಕಾಶವಿಲ್ಲವಾಗಿದೆ. ಇದರ ನಡುವೆಯೂ ಗೆಲುವಿನ ಬಗ್ಗೆ ಅಪಾರ ವಿಶ್ವಾಸ ಹೊಂದಿರುವ ವಿಜೇಂದರ್, ‘ನನಗಿಂತ ಎತ್ತರವಾಗಿರುವ ಲಾಪ್ಸನ್ ವಿರುದ್ಧ ನಿಧಾನಗತಿಯ ಆರಂಭ ಕಾಣಲಿದ್ದೇನೆ. ಆದರೆ ಆತನನ್ನು ಸೋಲಿಸುವ ವಿಶ್ವಾಸ ನನಗಿದೆ. ಎತ್ತರ ಎಲ್ಲವೂ ಅಲ್ಲ. ಬಾಕ್ಸಿಂಗ್‌ನಲ್ಲಿ ಸಾಮರ್ಥ್ಯ ಮತ್ತು ಕಾರ್ಯತಂತ್ರವೂ ಅಗತ್ಯ. ನಾನು ಸಾಕಷ್ಟು ಅನುಭವವನ್ನೂ ಹೊಂದಿದ್ದೇನೆ. ಲಾಪ್ಸನ್ ಇನ್ನೂ ಹುಡುಗ. ನನ್ನ ಅಜೇಯ ದಾಖಲೆ ಮುಂದುವರಿಯಲಿದೆ. ಎದುರಾಳಿ ಕಠಿಣವಾಗಿದ್ದಾಗ ಆತನನ್ನು ಸೋಲಿಸುವುದರಲ್ಲೂ ಖುಷಿ ಸಿಗುತ್ತದೆ’ ಎಂದಿದ್ದಾರೆ.

    ಪಂದ್ಯ ಆರಂಭ: ರಾತ್ರಿ 8.00.
    ನೇರಪ್ರಸಾರ: ಫ್ಯಾನ್‌ಕೋಡ್, ಬುಕ್ ಮೈ ಶೋ ವೆಬ್‌ಸೈಟ್.

    VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!

    ಪುರುಷರ ಕೌಂಟಿ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡಳು ಈ ಸುಂದರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts