More

    ಗಿರಿ ನಗರದಲ್ಲಿ ಕಾಣದ ಪರಸ್ಪರ ಅಂತರ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಜಿಲ್ಲೆಯಲ್ಲಿ ದಿನೇದಿನೆ ಮಹಾಮಾರಿ ಕರೊನಾ ಆರ್ಭಟಿಸುತ್ತಿದ್ದರೂ ಜನತೆ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬಿಂದಾಸ್ ಆಗಿ ಹೊರಗಡೆ ಸಂಚರಿಸುತ್ತಿರುವ ಜನ ಜಿಲ್ಲಾಡಳಿತ ಸೂಚಿಸುವ ಯಾವ ಕ್ರಮಗಳನ್ನೂ ಪಾಲಿಸದಿರುವುದು ಪಾಸಿಟಿವ್ ಪ್ರಕರಣ ಹೆಚ್ಚಾಗುವ ಭೀತಿ ಮೂಡಿಸಿದೆ.

    ಈಗಾಗಲೇ ಜಿಲ್ಲೆಯಲ್ಲಿ 12 ಕರೊನಾ ಕೇಸ್ ದೃಢಪಟ್ಟಿದ್ದು, ಹೊರ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಲ್ಲಿ ಹೆಮ್ಮಾರಿಯನ್ನು ಅಂಟಿಸಿಕೊಂಡೇ ಬಂದಿದ್ದರಿಂದ ಸೋಂಕಿತರು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕಳೆದೆರಡು ತಿಂಗಳಿಂದ ಹಸಿರು ವಲಯದಲ್ಲಿದ್ದ ಜಿಲ್ಲೆ ಕರೊನಾ ಕೊಡುತ್ತಿರುವ ಒಂದೊಂದೇ ಝಟ್ಕಾದಿಂದ ಕೆಂಪು ವಲಯಕ್ಕೆ ವಾಲುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಜನ ಮಾತ್ರ ಜಾಗೃತರಾಗದಿರುವುದು ವರ್ತಮಾನದ ದುರಂತ. ಮಂಗಳವಾರ ನಗರದಲ್ಲಿ ವಿಜಯವಾಣಿ ನಡೆಸಿದ ಸಿಟಿ ರೌಂಡ್ ವೇಳೆ ಶೇ.65 ಜನ ಮಾಸ್ಕ್ ಧರಿಸದೆ ರಸ್ತೆಗಳಿದಿರುವುದು ಕಂಡಿತು.

    ಗಾಂಧಿ ವೃತ್ತ, ಸುಭಾಷ್ ವೃತ್ತ, ಹತ್ತಿಕುಣಿ ಸರ್ಕಲ್ ಸೇರಿ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ಸರಾಗವಾಗಿ ನಡೆದಿದ್ದು, ಕಿರಾಣಿ ಅಂಗಡಿಗಳಲ್ಲೂ ಮಾಸ್ಕ್ ಧರಿಸುವಿಕೆ ಮತ್ತು ಪರಸ್ಪರ ಅಂತರಕ್ಕೆ ಎಳ್ಳು ನೀರು ಬಿಡಲಾಗಿದೆ. ಗಾಂಧಿ ವೃತ್ತದಲ್ಲಂತೂ ಹಿಂದೆಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನತೆ ಹೊರಗಡೆ ಕಾಣಿಸಿದ್ದು, ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಸ್ಥಳವಿರಲಿಲ್ಲ.

    ಪರಿಸ್ಥಿತಿ ಹೀಗಿದ್ದರೂ ಸಂಬಂಧಿಸಿದ ಯಾವೊಬ್ಬ ಅಧಿಕಾರಿ ನಜರ್ ಹರಿಸದೆ ಜನರನ್ನು ಮನಬಂದಂತೆ ಸಂಚರಿಸಲು ಬಿಡುತ್ತಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬಂದವು. ಜಿಲ್ಲಾಡಳಿತ ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇದನ್ನೇ ನೆಪ ಮಾಡಿಕೊಂಡ ಜನ ಬಿಂದಾಸ್ ಆಗಿ ರಸ್ತೆಯಲ್ಲಿ ಚಕ್ಕರ್ ಹೊಡೆಯುತ್ತಿದ್ದಾರೆ. ಎಲ್ಲೆಂದರಲ್ಲಿ ಪಾನ್ ಜಿಗಿದು ಉಗಿಯುವ ಮೂಲಕ ವೈರಸ್ಗೆ ರತ್ನಗಂಬಳಿ ಹಾಸಿ ಸ್ವಾಗತಿಸುವಂತೆ ಕಾಣುತ್ತಿದೆ.

    ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜನತೆ ಅನವಶ್ಯಕವಾಗಿ ರಸ್ತೆಗಿಳಿಯದಂತೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು ಎಂಬುದು ಪ್ರಜ್ಞಾಂತರ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts