More

    ಕರೊನಾ ಕಾಲದಲ್ಲಿ ದಾದಾಗಿರಿ, ಐಪಿಎಲ್ ತುತ್ತೂರಿ

    ಸಾಮ್ರಾಜ್ಯಗಳು ಉರುಳುತ್ತವೆ

    ನಾಗರಿಕತೆಗಳು ಅಳಿಯುತ್ತವೆ

    ಲಕ್ಷಜೀವಗಳು ಹುಟ್ಟುತ್ತವೆ

    ಲಕ್ಷಾಂತರ ಸಾಯುತ್ತಾರೆ

    ಕಾಲ ಯಾರಿಗೂ ಕಾಯುವುದಿಲ್ಲ

    ಏನು ನಡೆಯಬೇಕೋ ನಡೆದೇ ತೀರುತ್ತದೆ

    ನಾವು ಇದ್ದರೂ ಸೈ, ಇರದಿದ್ದರೂ ಸೈ

    ಶೋ ಮಸ್ಟ್ ಗೋ ಆನ್…

    ***

    ಕರೊನಾ ಕಾಲದಲ್ಲಿ ದಾದಾಗಿರಿ, ಐಪಿಎಲ್ ತುತ್ತೂರಿಕರೊನಾ ಮಹಾಮಾರಿ ಜಗತ್ತಿನ ಧಾವಂತಕ್ಕೆ ಬ್ರೇಕ್ ಹಾಕಿರಬಹುದು. ಜನರ ಅಹಂಕಾರವನ್ನು ಮಣ್ಣು ಮಾಡಿರಬಹುದು. ಸರ್ಕಾರಗಳನ್ನು ಕಂಗಾಲಾಗಿಸಿರಬಹುದು. ಆದರೂ ಕಾಲಚಕ್ರದ ಗಡಿಯಾರ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮೊನ್ನೆ ನ್ಯೂಯಾರ್ಕ್​ನಲ್ಲಿ ಯುಎಸ್ ಓಪನ್ ಗ್ರಾಂಡ್​ಸ್ಲಾಂ ನಡೆಯಿತು. ಇದೀಗ ಅರಬ್ ರಾಷ್ಟ್ರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

    ಇದೊಂದು ರೀತಿ ಯಾರೂ ಊಹಿಸಲಾಗದ ಸನ್ನಿವೇಶ. ಹೀಗೊಂದು ಕಾಯಿಲೆ ಇಡೀ ಜೀವಜಗತ್ತನ್ನು ಬುಗುರಿಯಂತೆ ಆಡಿಸಬಹುದೆಂಬ ಕಲ್ಪನೆಯಾದರೂ ಯಾರಿಗಿತ್ತು? ಆದರೂ, ಆರೇಳು ತಿಂಗಳ ಬಲವಂತ ನಿರ್ವಾತ, ನಿಶ್ಶಬ್ದದ ನಂತರ ಜಗತ್ತು ತನ್ನ ನಿತ್ಯದ ದಿನಚರಿಗೆ ಹೊರಳಲು ಪ್ರಯಾಸ ಪಡುತ್ತಿದೆ. ಚಟುವಟಿಕೆಗಳು ಮರಳುತ್ತಿವೆ. ಅದೇ ರೀತಿ ಕ್ರಿಕೆಟ್ ಜಗತ್ತನ್ನೂ ಆವರಿಸಿದ್ದ ಶೂನ್ಯ ಸರಿದು ಪುನರಾರಂಭದ ಮಗ್ಗುಲು ತೆರೆದುಕೊಳ್ಳುತ್ತಿದೆ. ಐಪಿಎಲ್ ಇನ್ನೇನು ಶುರುವಾಗುತ್ತಿದೆ.

    ಹಾಗೆ ನೋಡಿದರೆ, ಇಂಗ್ಲೆಂಡ್ ಇತ್ತೀಚೆಗೆ ಮೂರು ಸರಣಿಗಳಿಗೆ ಆತಿಥ್ಯ ವಹಿಸಿ ನಿರ್ಜನ ಕ್ರೀಡಾಂಗಣಗಳಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳನ್ನಾಡಿತು. ಕರೊನಾ ಅಷ್ಟಾಗಿ ತಟ್ಟದ ವಿಂಡೀಸ್​ನಲ್ಲಿ ಕೆರಿಬಿಯನ್ ಕ್ರಿಕೆಟ್ ಲೀಗ್ ನಡೆಯಿತು. ಯುಎಸ್ ಓಪನ್ ಟೆನಿಸ್​ನಂತೆ ಯುರೋಪಿಯನ್ ಫುಟ್​ಬಾಲ್ ಪಂದ್ಯಗಳೂ ಅಲ್ಲಲ್ಲಿ ನಡೆದವು. ಇವೆಲ್ಲವೂ ಕರೊನೋತ್ತರ ಪ್ರಯೋಗಗಳಾಗಿ ಆಟಗಾರರಿಗೆ, ಅಭಿಮಾನಿಗಳಿಗೆ ಹೊಸ ಅನುಭವ ನೀಡಿದವು. ಇದೀಗ ಐಪಿಎಲ್ ಸರದಿ.

    ಇಲ್ಲಿ ಒಂದು ವಿಶೇಷ ಕಾಕತಾಳೀಯವನ್ನು ಗಮನಿಸಬಹುದು. ಕಳೆದ ಎರಡು ದಶಕಗಳ ರಿವಾಜಿನಂತೆ ಭಾರತೀಯ ಕ್ರಿಕೆಟ್ ಸಂಕಷ್ಟದ, ಸಂಕ್ರಮಣದ ಕಾಲಘಟ್ಟದಲ್ಲಿರುವಾಗ ಸವಾಲುಗಳಿಗೆ ಎದೆಯೊಡ್ಡಿ ಹೊಸ ದಿಕ್ಕಿನಲ್ಲಿ ಮುನ್ನಡೆಸುವುದಕ್ಕೆ ಮಹಾನಾಯಕನೋರ್ವ ಸಿದ್ಧವಾಗಿರುತ್ತಾನೆ. ಈ ಬಾರಿ ಕೂಡ ಕರೊನಾ ಎಮರ್ಜೆನ್ಸಿಯ ಕಾಲಘಟ್ಟದಲ್ಲಿ ದಾದಾಗಿರಿಗೆ ವೇದಿಕೆ ಸಜ್ಜಾಗಿದೆ.

    ಪವರ್​ಫುಲ್ ಪೀಪಲ್ ಕಮ್ ಫ್ರಂ ಪವರ್​ಫುಲ್ ಪ್ಲೇಸಸ್…

    1999-2000ದ ಕರಾಳ ದಿನಗಳವು. ಮ್ಯಾಚ್​ಫಿಕ್ಸಿಂಗ್ ಬಿರುಗಾಳಿಗೆ ಭಾರತೀಯ ಕ್ರಿಕೆಟ್ ತರಗೆಲೆಯಾಗಿದ್ದ ಸಂದರ್ಭ. ವಿಶ್ವಮಟ್ಟದಲ್ಲಿ ಹೆಸರು ಕೆಡಿಸಿಕೊಂಡು, ಭಾರತೀಯ ಕ್ರಿಕೆಟ್ ತಂಡ ಅಯೋಮಯ ಸ್ಥಿತಿಯಲ್ಲಿದ್ದಾಗ ಕತ್ತಲ ಹಾದಿಯಲ್ಲಿ ಕೈಹಿಡಿದು ಬೆಳಕಿನ ದಿಕ್ಕಿನಲ್ಲಿ ಮುನ್ನಡೆಸುವುದಕ್ಕೆ ದಿಟ್ಟ ನಾಯಕನೊಬ್ಬನ ಅವಶ್ಯಕತೆ ಇತ್ತು. ಆಗ ಉದಯಿಸಿದ್ದೇ ಸೌರವ್ ಗಂಗೂಲಿ ನಾಯಕತ್ವ.

    ಭಾರತ ಕ್ರಿಕೆಟ್ ತಂಡದ ನಾಯಕತ್ವವೆನ್ನುವುದು ಗಂಗೂಲಿ ಪಾಲಿಗೆ ಬಯಸಿ ಬಂದ ಭಾಗ್ಯವಾಗಿರಲಿಲ್ಲ. ಉಪನಾಯಕತ್ವ ನೀಡಿ, ಭಾವಿ ನಾಯಕ ಎಂದು ಬಿಂಬಿಸಿ ಮಾನಸಿಕವಾಗಿ ಸಜ್ಜುಗೊಂಡ ಮೇಲೆ ಹೊರಿಸಿದ ಜವಾಬ್ದಾರಿಯೂ ಅದಾಗಿರಲಿಲ್ಲ. ಮ್ಯಾಚ್ ಫಿಕ್ಸಿಂಗ್​ನಲ್ಲಿ ಅಜರುದ್ದೀನ್ ತಲೆದಂಡವಾದ ಮೇಲೆ, ಸಚಿನ್ ತೆಂಡುಲ್ಕರ್ ನಿರಾಕರಿಸಿದ ಮೇಲೆ, ಇರುವವರಲ್ಲೇ ಒಬ್ಬರಿಗೆ ಹೊಣೆ ಹೊರಿಸುವ ಸಂದರ್ಭದಲ್ಲಿ ಮುನ್ನೆಲೆಗೆ ಬಂದವರು ಅವರು. ಅಲ್ಲಿಯವರೆಗೂ ಗಂಗೂಲಿ ಎಂದರೆ ಒರಟ, ಗರ್ವಿಷ್ಠ, ಶ್ರೀಮಂತ ಕುಟುಂಬದ ಹಿನ್ನೆಲೆಯ ಉಡಾಳತನ, ಆಲಸ್ಯ, ದೌಲತ್ತು, ಅಶಿಸ್ತುಗಳ ಪರಮಾವತಾರ ಎಂಬ ಭಾವನೆ ಎಲ್ಲರಲ್ಲೂ. ಆದರೆ, ಕುಲುಮೆಗೆ ಒಡ್ಡಿದಾಗಲೇ ಬಂಗಾರ ಹಾಗೂ ಕಬ್ಬಿಣದ ವ್ಯತ್ಯಾಸ ತಿಳಿಯುವುದು. ನಾಯಕತ್ವದ ಕುಲುಮೆಯಲ್ಲಿ ಗಂಗೂಲಿ ಅಪ್ಪಟ ಬಂಗಾರವಾಗಿ ಹೊರಹೊಮ್ಮಿದರು. ಅವರ ಒರಟುತನ ಭಾರತ ತಂಡಕ್ಕೊಂದು ಕಠಿಣ ಮನೋಬಲ ತಂದುಕೊಟ್ಟಿತು. ಗರ್ವ ಎಂದು ಭಾವಿಸಿದ್ದು ಆತ್ಮಾಭಿಮಾನವಾಯಿತು. ಉಡಾಳತನ ಔದಾರ್ಯವಾಯಿತು. ದೌಲತ್ತು ಘನತೆಯಾಯಿತು. ಆವರೆಗೆ ಅಶಿಸ್ತು ಎನಿಸಿಕೊಂಡಿದ್ದ ಅವರ ಸ್ವಭಾವ ಎದುರಾಳಿ ತಂಡಗಳ ಸೊಕ್ಕು ಮುರಿಯುವುದಕ್ಕೆ ಅಸ್ತ್ರವಾಯಿತು. ಗಂಗೂಲಿ ನೇತೃತ್ವದಲ್ಲಿ ಭಾರತ ತಂಡ ಮೊದಲ ಬಾರಿ ಟೀಮ್ ಇಂಡಿಯಾ ಆಗಿ ಬದಲಾಯಿತು. ಹೊಸ ಗುರಿ, ಹೊಸ ದಾರಿಯಲ್ಲಿ ಮುನ್ನುಗ್ಗಿತು. ತದನಂತರದ ಎಲ್ಲ ಮಹತ್ಸಾಧನೆಗಳಿಗೆ ಭದ್ರ ಬುನಾದಿಯಾಯಿತು. ಕೆಲವು ಶ್ರೇಷ್ಠ ಆಟಗಾರರ ದುರ್ಬಲ ತಂಡವೆನಿಸಿಕೊಂಡಿದ್ದ ಭಾರತ ಬಲಾಢ್ಯ ಆಟಗಾರರ ಬಲಾಢ್ಯ ತಂಡವಾಗಿ ವಿಶ್ವದ ಮೂಲೆಮೂಲೆಗಳಲ್ಲಿ ಆರ್ಭಟಿಸಿತು. ವೈಫಲ್ಯ ಯಾವಾಗಲೂ ಅನಾಥ. ಯಶಸ್ಸಿನ ಪಾಲು ಪಡೆಯಲು ಹಲವು ದಾತರು ಹುಟ್ಟಿಕೊಳ್ಳುತ್ತಾರೆ. ಆದರೆ, ಟೀಮ್ ಇಂಡಿಯಾದ ಇವತ್ತಿನ ಯಶಸ್ಸಿನ ಮೂಲಬೇರು ಅಂದಿನ ಗಂಗೂಲಿ ನಾಯಕತ್ವ ಎನ್ನುವುದನ್ನು ವಿರೋಧಿಗಳೂ ಒಪ್ಪಲೇ ಬೇಕು.

    ಅದಾಗಿ ಒಂದೂವರೆ ದಶಕದ ನಂತರ ಭಾರತೀಯ ಕ್ರಿಕೆಟ್ ಮತ್ತೆ ಅಯೋಮಯ ಸ್ಥಿತಿಗೆ ತಲುಪಿದ್ದು ಬಿಸಿಸಿಐ ಆಡಳಿತಕ್ಕೆ ಗ್ರಹಣ ಹಿಡಿದು ಆಡಳಿತಾಧಿಕಾರಿ ನೇಮಕಗೊಂಡಾಗ. ಸುಪ್ರಿಂ ಕೋರ್ಟ್ ಸೂಚನೆಯಂತೆ ಬಿಸಿಸಿಐನ ಆಡಳಿತ ಮಂಡಳಿ ಬರ್ಖಾಸ್ತುಗೊಂಡು ಆಡಳಿತಾಧಿಕಾರಿ ಅಧಿಕಾರ ನಡೆಸಿದ 33 ತಿಂಗಳ ಕಾಲಘಟ್ಟದಲ್ಲಿ ಭಾರತೀಯ ಕ್ರಿಕೆಟ್ ಅತಂತ್ರಾವಸ್ಥೆಯಲ್ಲಿತ್ತು. ಕ್ರಿಕೆಟ್ ತಂಡ ದೇಶ-ವಿದೇಶಗಳಲ್ಲಿ ಗೆದ್ದು ಬರುತ್ತಿದ್ದರೂ, ಕ್ರಿಕೆಟ್ ಮಂಡಳಿ ಮಾತ್ರ ಯಜಮಾನನಿಲ್ಲದ ಮನೆಯಂತೆ ಕೈಕಟ್ಟಿಸಿಕೊಂಡಿತ್ತು. ಕೊನೆಗೂ ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳೆಲ್ಲವನ್ನೂ ಜಾರಿಗೊಳಿಸಿ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ತರುವ ಸಂದರ್ಭ ಒದಗಿದಾಗ ಬಿಸಿಸಿಐಗೆ ಮತ್ತದೇ ದಿಟ್ಟ ನಾಯಕತ್ವದ ಅಗತ್ಯವಿತ್ತು. ಆಗ ಇಂಥ ಸನ್ನಿವೇಶಗಳಿಗೆ ಎದೆಗೊಡಲು ನಾನಿದ್ದೇನೆ ಎಂದು ಮುಂದೆ ಬಂದವರೇ ಸೌರವ್ ಗಂಗೂಲಿ. ಎರಡೂವರೆ ವರ್ಷಗಳ ಅತಂತ್ರ ಘಟ್ಟದಲ್ಲಿ ತುಕ್ಕುಹಿಡಿದಿದ್ದ ಕ್ರಿಕೆಟ್ ಆಡಳಿತ ಯಂತ್ರಕ್ಕೆ ವೇಗೋತ್ಕರ್ಷ ನೀಡಿದರು. ಅಧ್ಯಕ್ಷರ ಕುರ್ಚಿಯಲ್ಲಿ ಕೇವಲ ಹತ್ತೇ ತಿಂಗಳ ಕಾಲಾವಧಿ ಬಾಕಿ ಎಂಬ ತೂಗುಗತ್ತಿ ನೇತಾಡುತ್ತಿದ್ದರೂ ಲೆಕ್ಕಿಸದೆ ಗಂಗೂಲಿ ತಮ್ಮ ಶೈಲಿಯಲ್ಲಿ ಬಿಸಿಸಿಐಗೆ ವರ್ಚಸ್ಸು ತರುವ ಪ್ರಯತ್ನ ಮಾಡಿದರು. ಮುಂಚೂಣಿಯ ಕ್ರಿಕೆಟ್ ಮಂಡಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಆಲೋಚನೆಗಳನ್ನು ತುಂಬಿದರು. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಒಳಗೊಂಡ ನಾಲ್ಕು ರಾಷ್ಟ್ರಗಳ ಸೂಪರ್ ಸಿರೀಸ್ ಟೂರ್ನಿಯ ಕನಸು ಬಿತ್ತಿದರು. ಕ್ರಿಕೆಟ್ ಆಡಳಿತಕ್ಕೊಂದು ಖದರ್ ತುಂಬಿದರು.

    ಅಷ್ಟರ ನಡುವೆ ಆಡಳಿತಗಾರರಾಗಿ ಗಂಗೂಲಿ ವೇಗಕ್ಕೆ ಕರೊನಾ ವೈರಸ್ ಬ್ರೇಕ್ ಹಾಕಿತು. ಆದರೆ, ಓಟ ನಿಧಾನವಾಗಬಹುದು; ನಿಲ್ಲಿಸುವುದಿಲ್ಲ ಎಂಬ ಹಟ ಗಂಗೂಲಿಯದ್ದು. ಕರೊನಾ ಆರ್ಭಟದಿಂದಾಗಿ ಒಲಿಂಪಿಕ್ಸ್ ಕೂಟವೇ ಮುಂದೂಡಿಕೆಯಾಗಿ, ವಿಂಬಲ್ಡನ್ ರದ್ದಾಗಿ, ಕ್ರೀಡಾ ಚಟುವಟಿಕೆಗಳೆಲ್ಲ ಅಸ್ತವ್ಯಸ್ತಗೊಂಡ ಸಂದರ್ಭದಲ್ಲೂ ಐಪಿಎಲ್ ಟೂರ್ನಿ ಯಾವುದೇ ಕಾರಣಕ್ಕೂ ಈ ವರ್ಷ ರದ್ದುಗೊಳ್ಳಬಾರದು ಎಂದು ಗಂಗೂಲಿ ಗಟ್ಟಿನಿರ್ಧಾರ ತೆಗೆದುಕೊಂಡರು. ಎಲ್ಲವೂ ರದ್ದಾಗಿರುವಾಗ ಐಪಿಎಲ್ ಏಕೆ, ಒಂದು ವರ್ಷ ನಿಲ್ಲಿಸೋಣ ಎಂಬ ವಿಘ್ನಸಂತೋಷಿಗಳೂ ಇದ್ದರು. ಇಷ್ಟೊಂದು ಕರೊನಾ ಪ್ರಕರಣಗಳ ನಡುವೆ ಐಪಿಎಲ್ ಆಯೋಜನೆ ಹೇಗೆ ಸಾಧ್ಯ ಎಂಬ ಆತಂಕ ಅನೇಕರಿಗಿತ್ತು. ಆಟಗಾರರ ಸುರಕ್ಷತೆಯ ಪ್ರಶ್ನೆ ಯಾವತ್ತೂ ಇತ್ತು. ಪ್ರೇಕ್ಷಕರೇ ಇಲ್ಲದೆ ಎಂಥ ಐಪಿಎಲ್ ಎಂಬ ವ್ಯಂಗ್ಯಗಳಿದ್ದವು. ಭಾರತ-ಚೀನಾ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಚೀನಾ ಕಂಪನಿಯ ಐಪಿಎಲ್ ಪ್ರಾಯೋಜಕತ್ವದ ವಿವಾದ ಮುನ್ನೆಲೆಗೆ ಬಂದು ವಿವೊ ಟೂರ್ನಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಬಳಿಕ, ಟೂರ್ನಿ ಸಂಘಟನೆ ಅಸಾಧ್ಯ ಎಂಬ ಭಾವನೆ ಸಾರ್ವತ್ರಿಕವಾಗಿತ್ತು.

    ಪ್ರಾರಂಭದಿಂದಲೂ ಐಪಿಎಲ್​ನ ಯಶಸ್ಸಿನ ಬಗ್ಗೆ ಕೆಂಗಣ್ಣು ಹೊಂದಿರುವ ಐಸಿಸಿಯಂತೂ ಟಿ20 ವಿಶ್ವಕಪ್ ಮುಂದೂಡುವ ಪ್ರಕಟಣೆ ವಿಳಂಬ ಮಾಡುತ್ತ ಬಿಸಿಸಿಐ ಐಪಿಎಲ್ ಸಂಘಟಿಸಲು ಕಾಲಾವಕಾಶವೇ ಸಿಗದಂಥ ಪರಿಸ್ಥಿತಿ ನಿರ್ವಿುಸಲು ಪ್ರಯತ್ನಿಸಿತ್ತು. ಆದರೆ, ಅಧಿಕಾರ ಸ್ಥಾನದಲ್ಲಿ ಇರುವವರಿಗೆ ಇಚ್ಛಾಶಕ್ತಿಯೊಂದಿದ್ದರೆ, ಏನನ್ನೂ ಸಾಧಿಸಬಹುದು ಎಂದು ನಂಬಿದವರು ಗಂಗೂಲಿ. ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್​ರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಅವರು, ಟೂರ್ನಿ ಆಯೋಜನೆ ಕುರಿತಂತೆ ಒಂದೊಂದೇ ತೊಡರುಗಳನ್ನು, ಸಿಕ್ಕು, ಗಂಟು, ಗೋಜಲುಗಳನ್ನು ಚಾಣಾಕ್ಷತನದಿಂದ ಬಿಡಿಸಿಕೊಂಡು ಶಾರ್ಜಾ, ದುಬೈ, ಅಬುದಾಭಿಯಲ್ಲಿ ಸಂಘಟಿಸುವುದಕ್ಕೆ ಹಾದಿಯನ್ನು ಸುಗಮಗೊಳಿಸಿದರು. ಕೇಂದ್ರ ಸರ್ಕಾರದ ಅನುಮತಿ, ಯುಎಇ ಜೊತೆ ರಾಯಭಾರ, ಫ್ರಾಂಚೈಸಿಗಳ ಮನವೊಲಿಕೆ, ಪ್ರಾಯೋಜಕರ ಆಕರ್ಷಣೆ, ವಿದೇಶಿ ಆಟಗಾರರು, ಮಂಡಳಿಗಳ ಮನವೊಲಿಕೆ, ಭಾರತೀಯ ಆಟಗಾರರ ಉತ್ತೇಜನ… ಹೀಗೆ ಐಪಿಎಲ್ ಸಂಘಟನೆಗೆ ಅಗತ್ಯವಾದ ಪ್ರತಿಯೊಂದು ವಿಚಾರಗಳೂ ಪಟಪಟನೆ ಸಾಧ್ಯವಾದವು. ಇನ್ನೇನು ನಾಳೆ (ಶನಿವಾರ) ಸಂಜೆ ಭಾರತೀಯ ಕಾಲಮಾನ 7.30ಕ್ಕೆ ಚೆನ್ನೈ ಸೂಪರ್ಕಿಂಗ್ಸ್- ಮುಂಬೈ ಇಂಡಿಯನ್ಸ್ ಮುಖಾಮುಖಿಯೊಂದಿಗೆ ಐಪಿಎಲ್ ರಂಜನೆ ಶುರುವಾಗುವುದೊಂದೇ ಬಾಕಿ.

    ಗಂಗೂಲಿ ಒಬ್ಬರೇ ಏನು ಮಾಡುತ್ತಾರೆ? ನಾವೆಲ್ಲ ಇಲ್ಲವೇ ಎಂದು ಕೇಳುವವರಿಗೇನೂ ಕಡಿಮೆ ಇಲ್ಲ. ಆದರೆ, ಜೀವಮಾನದಲ್ಲಿ ಗಳಿಸಿದ ಹೆಸರು, ವರ್ಚಸ್ಸೆಲ್ಲವನ್ನೂ ಒತ್ತೆ ಇಟ್ಟು, ಅಂದುಕೊಂಡಿದ್ದನ್ನು ಸಾಧಿಸಲು ಮುನ್ನುಗ್ಗುವ ಛಾತಿಯಲ್ಲಿ ಗಂಗೂಲಿಗೆ ಸ್ಪರ್ಧೆಯೊಡ್ಡುವಂಥವರು ಹೆಚ್ಚು ಮಂದಿ ಸಿಗುವುದಿಲ್ಲ. ಬರುವ ದೀಪಾವಳಿಯವರೆಗೆ ಕ್ರಿಕೆಟ್ ಇಷ್ಟ ಪಡುವ ಪ್ರತಿಯೊಂದು ಮನೆಗಳ ಟಿವಿಯಲ್ಲಿ ಬೌಂಡರಿ, ಸಿಕ್ಸರ್​ಗಳ ಪಟಾಕಿ ಸಿಡಿಯುತ್ತಿರುವಾಗ, ಆರ್​ಸಿಬಿ, ನೈಟ್​ರೈಡರ್ಸ್, ಮುಂಬೈ, ಚೆನ್ನೈನಂಥ ತಂಡಗಳ ಬಲಾಬಲ, ಶಾರುಖ್ ಖಾನ್, ಪ್ರೀತಿ ಜಿಂಟಾ, ನೀತಾ ಅಂಬಾನಿ, ಅನುಷ್ಕಾ ಶರ್ಮ ಮೊದಲಾದ ಸೆಲಿಬ್ರಿಟಿಗಳ ಗಾಸಿಪ್, ಧೋನಿ, ಕೊಹ್ಲಿ, ರೋಹಿತ್, ಗೇಲ್, ರಸೆಲ್ ಆರ್ಭಟದ ಚರ್ಚೆಗಳ ನಡುವೆ ಜನರಿಗೆ ಗಂಗೂಲಿ ಮುಂದಾಳತ್ವದ ಬಗ್ಗೆ, ಸಂಘಟನಾ ಚಾತುರ್ಯದ ಬಗ್ಗೆ ನೆನಪಾಗದೇ ಹೋಗಬಹುದು. ಆದರೆ, ಗಂಗೂಲಿ ಹೊಗಳಿಕೆಗಳಿಗಾಗಿ ಬದುಕಿದವರಲ್ಲ. ಐಪಿಎಲ್​ನ ಕೊನೆಯ ಎಸೆತ ಎಸೆದು, ವಿಜೇತರಿಗೆ ಟ್ರೋಫಿ ಹಸ್ತಾಂತರಿಸುವವರೆಗೆ ಎದುರಾಗುವ ಎಡರುತೊಡರು ಬಗೆಹರಿಸುವ ಕಡೆಗಷ್ಟೇ ಅವರ ಗಮನ. ಭಾರತೀಯ ಕ್ರಿಕೆಟ್​ಗೆ ಇಂಥ ದಾದಾಗಿರಿ ಬೇಕು.

    ಏಕೆಂದರೆ ಶೋ ಮಸ್ಟ್ ಗೋ ಆನ್…

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts