More

    ಜೂನ್​ನಲ್ಲೇ ಅತಿಥಿ ಶಿಕ್ಷಕರ ನೇಮಕ: ವಿಜಯವಾಣಿ ಸಂವಾದದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಶ್ವಾಸನೆ

    ಜೂನ್​ನಲ್ಲೇ ಅತಿಥಿ ಶಿಕ್ಷಕರ ನೇಮಕ: ವಿಜಯವಾಣಿ ಸಂವಾದದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಶ್ವಾಸನೆಫೋನ್ ಇನ್ ಕಾರ್ಯಕ್ರಮದ ನಂತರ ‘ವಿಜಯವಾಣಿ’ಯೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು, ತಮ್ಮ ಚಿಂತನೆ ಹಾಗೂ ಯೋಜನೆಗಳನ್ನು ಹಂಚಿಕೊಂಡದ್ದು ಹೀಗೆ:

    ಅತಿಥಿ ಶಿಕ್ಷಕರ ನೇಮಕ ವಿಳಂಬದಿಂದ ಸರ್ಕಾರದ ಉದ್ದೇಶವೇ ಈಡೇರದು. ಪ್ರತಿ ಶೈಕ್ಷಣಿಕ ವರ್ಷಾರಂಭದಲ್ಲಿ ತಲೆ ಎತ್ತುವ ಸಮಸ್ಯೆಯಿದು, ಪರಿಹಾರ ಇಲ್ಲವೆ ?

    ಸಚಿವರು: ಪ್ರತಿ ಬಾರಿ ಸೆಪ್ಟಂಬರ್​ನಲ್ಲಿ ಅತಿಥಿ ಶಿಕ್ಷಕರ ನೇಮಕವಾಗುತ್ತಿದ್ದುದು ನಿಜ. ಇನ್ನು ಹಾಗಾಗದು, ಜೂನ್​ನಲ್ಲೇ ನೇಮಿಸಿಕೊಳ್ಳುತ್ತೇವೆ. ಸಂಭಾವನೆ ಹೆಚ್ಚಿಸುವ ಬಗ್ಗೆಯೂ ಪರಿಶೀಲಿ ಸುತ್ತೇವೆ. ಅತಿಥಿ ಶಿಕ್ಷಕರಾಗಿ ನೇಮಕವಾದವರಿಗೆ ಒಂದು ವಾರ ತರಬೇತಿ ವ್ಯವಸ್ಥೆಯಾಗಲಿದೆ.

    ಶಿಕ್ಷಕರ ನೇಮಕ ಮತ್ತು ವರ್ಗಾವಣೆ ವಿಚಾರಕ್ಕೆ ಬಂದಾಗ ಸರ್ಕಾರದ ನಿರ್ಧಾರ ಶಿಕ್ಷಣದ ಗುಣಮಟ್ಟದ ಮೇಲೆ ಕೇಂದ್ರೀಕೃತವಾಗಿರುತ್ತದೆಯೇ ಅಥವಾ ಶಿಕ್ಷಕರ ಅಗತ್ಯಗಳನ್ನು ಆಧರಿಸಿರುತ್ತದೆಯೇ? ನೇಮಕ ನೀತಿ ಸಡಿಲಗೊಳಿಸುತ್ತಿದ್ದರೆ, ಶಿಕ್ಷಕರ ಕೋರಿಕೆಗಳನ್ನು ಮಾನ್ಯ ಮಾಡುತ್ತಾ ಹೋದರೆ ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಆಗುವುದಿಲ್ಲವೆ ?

    ಸಚಿವರು: ಅದು ಹಾಗಲ್ಲ, ಶಿಕ್ಷಕರು ಕಷ್ಟಕ್ಕಿಂತ ಇಷ್ಟಪಟ್ಟು ಮಕ್ಕಳಿಗೆ ಕಲಿಸಬೇಕೆಂದರೆ ಇಷ್ಟಪಟ್ಟ ಸ್ಥಳಕ್ಕೆ ಹೋಗಬೇಕು. ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರಲ್ಲಿ ಶೇ.60ರಷ್ಟು ಶಿಕ್ಷಕಿಯರಿದ್ದಾರೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ 30,000 ಶಿಕ್ಷಕರ ಕೊರತೆಯಿದೆ. ಇದರ ನಡುವೆಯೂ ‘ಶಿಕ್ಷಕ ಸ್ನೇಹಿ’ ವಾತಾವರಣ ನಿರ್ವಿುಸಬೇಕು ಎನ್ನುವುದು ಸರ್ಕಾರದ ಅಪೇಕ್ಷೆ. ಉದಾಹರಣೆಗೆ ಕನಕಪುರದ ಶಿಕ್ಷಕನನ್ನು ದೂರದ ಮೊಳಕಾಲ್ಮೂರಿಗೆ ವರ್ಗಾಯಿಸಿದರೆ ಆ ಶಿಕ್ಷಕನಿಗೆ ಕಷ್ಟವಾಗುತ್ತದೆ. ಜಿಲ್ಲಾಮಟ್ಟದಲ್ಲಿ ಶಿಕ್ಷಕ ನೇಮಕವಾದರೆ ಸ್ಥಳೀಯರಿಗೆ ಅವಕಾಶ ಸಿಗುತ್ತದೆ. ಅಲ್ಲದೇ ಬೇಕಿರುವ ಸ್ಥಳಕ್ಕೆ ವರ್ಗಾವಣೆಗೆಂದು ಶಿಕ್ಷಕರ ಅಲೆದಾಟ, ಒತ್ತಡ, ಅಕಾಲಿಕ- ಅವೈಜ್ಞಾನಿಕವೆಂಬ ದೂರುಗಳು ತಪ್ಪುತ್ತವೆ.

    ಪಿಯು ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿದೆ. ಪರೀಕ್ಷಾ ಸಹಾಯಕ ನಿರ್ದೇಶಕರೇ ಇಲ್ಲ. ಇದರಿಂದ ಪರೀಕ್ಷೆ ನಡೆಸಲು ಸಮಸ್ಯೆಯಾಗುವುದಿಲ್ಲವೆ?

    ಸಚಿವರು: ಪಿಯು ಶಿಕ್ಷಣ ಕಚೇರಿಯಲ್ಲಿ ಬಹಳಷ್ಟು ಹುದ್ದೆಗಳು ಖಾಲಿಯಿರುವುದು ಗಮನಕ್ಕಿದೆ. ಹೀಗಾಗಿ ಸೇವೆಯಿಂದ ವಯೋನಿವೃತ್ತರಾಗುವವರನ್ನು ಪರೀಕ್ಷೆಗಳು ಮುಗಿಯುವ ತನಕ ಮುಂದುವರಿಸಲಿದ್ದೇವೆ.

    ಸರ್ಕಾರಿ ಶಾಲೆಗಳು ಹಾಗೂ ಪಿಯು ಕಾಲೇಜುಗಳಲ್ಲಿ ಮೂಲ ಸವಲತ್ತುಗಳದ್ದೇ ದೊಡ್ಡ ಸವಾಲು. ಇದನ್ನು ಹೇಗೆ ನೀಗಿಸುತ್ತೀರಿ?

    ಸಚಿವರು: ಮೂಲ ಸವಲತ್ತುಗಳ ಕೊರತೆಯುಳ್ಳ ಶಾಲೆಗಳ ಪಟ್ಟಿಯನ್ನು ಕಳುಹಿಸಲು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ವಿವರವಾದ ಮಾಹಿತಿ ಲಭ್ಯವಾದ ಬಳಿಕ ಶೌಚ ಗೃಹ ನಿರ್ವಿುಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ನರೇಗಾ ನೆರವಿನಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ನಂತರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.

    ನೆರೆಯ ಆಂಧ್ರಪ್ರದೇಶದಲ್ಲಿ ಕನ್ನಡವನ್ನು ಕೈಬಿಡುವ ಪ್ರಸ್ತಾಪ ಮಾಡಲಾಗಿದೆ. ನೀವು ಕೂಡ ಪತ್ರ ಬರೆದಿದ್ದೀರಿ. ಏನಾಗಿದೆ ಸದ್ಯದ ಬೆಳವಣಿಗೆ?

    ಸಚಿವರು: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ ಅವರಿಂದ ಇನ್ನೂ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಆದರೆ, ಕನ್ನಡ ಕೈಬಿಡುವ ಯಾವುದೇ ಪ್ರಸ್ತಾವವಿಲ್ಲವೆಂದು ಅಲ್ಲಿನ ಶಿಕ್ಷಣ ಸಚಿವರು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಗಮನಿಸಿರುವೆ. ಗಡಿ ಭಾಗದ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಅಲ್ಲಿನವರ ನಿರಂತರ ಪ್ರಯತ್ನ, ಹೋರಾಟದ ಬಗ್ಗೆ ಕಾಳಜಿ ವಹಿಸಿ ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಪತ್ರ ಬರೆಯಬೇಕಾಯಿತು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts