More

    ಜೈಲಿನಲ್ಲಿ ಡ್ರಗ್ಸ್, ಮೊಬೈಲ್​ ಫೋನ್, ಸಿಗರೇಟ್, ಬೀಡಿ ಪತ್ತೆಗೆ ಹೊಸ ಪ್ಲ್ಯಾನ್​!

    | ಗೋವಿಂದರಾಜು ಚಿನ್ನಕುರ್ಚಿ

    ಬೆಂಗಳೂರು: ರಾಜ್ಯ ಕಾರಾಗೃಹಗಳ ಕೈದಿಗಳಿಗೆ ಪೂರೈಕೆ ಆಗುತ್ತಿರುವ ಮಾದಕ ವಸ್ತು, ಮದ್ಯ, ಮೊಬೈಲ್​ಫೋನ್, ಬೀಡಿ, ಸಿಗರೇಟ್ ಇನ್ನಿತರ ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ವಿಶೇಷ ಶ್ವಾನ ಪಡೆ ಬರಲಿದೆ.

    ಜೈಲಿನಲ್ಲಿ ಡ್ರಗ್ಸ್, ಮೊಬೈಲ್​ ಫೋನ್, ಸಿಗರೇಟ್, ಬೀಡಿ ಪತ್ತೆಗೆ ಹೊಸ ಪ್ಲ್ಯಾನ್​!ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ತಡೆಯಲು ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆ ಮುಂದಾಗಿದ್ದು, ಶ್ವಾನ ಪಡೆ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದೆ. ಕರೊನಾ ಲಾಕ್​ಡೌನ್ ಪರಿಣಾಮ ತಡವಾಗುತ್ತಿದ್ದು, ಶೀಘ್ರದಲ್ಲೇ ಶ್ವಾನ ಪಡೆ ಸಿದ್ದವಾಗಲಿದೆ.

    ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ವಿಚಾರಣಾಧೀನ ಕೈದಿಗಳು ಮತ್ತು ಸಜಾ ಕೈದಿಗಳು ಜೈಲು ಸೇರುತ್ತಾರೆ. ಆ ನಂತರ ತಮ್ಮ ಪ್ರಭಾವ ಬಳಸಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಅಥವಾ ಜೈಲು ಅಧಿಕಾರಿ, ಸಿಬ್ಬಂದಿಗೆ ಲಂಚ ಕೊಟ್ಟು ತಮಗೆ ಬೇಕಾದ ವಸ್ತುಗಳನ್ನು ಜೈಲಿನ ಒಳಗೆ ತರಿಸಿಕೊಳ್ಳುತ್ತಾರೆ. ಊಟದ ಬಾಕ್ಸ್, ಪೊಟ್ಟಣ, ಔಷಧ ಸೋಗಿನಲ್ಲಿ ಅಥವಾ ಜೈಲು ಸಿಬ್ಬಂದಿ ತಮ್ಮ ಜತೆಯಲ್ಲಿಯೇ ಕೈದಿಗಳಿಗೆ ಬೇಕಾದ ಡ್ರಗ್ಸ್, ಬೀಡಿ, ಸಿಗರೇಟ್, ಮೊಬೈಲ್ ​ಫೋನ್, ಸಿಮ್ ಕಾರ್ಡ್, ಮದ್ಯ ಇನ್ನಿತರ ವಸ್ತುಗಳನ್ನು ಅಕ್ರಮವಾಗಿ ಒಳಗೆ ಸಾಗಿಸುತ್ತಾರೆ.

    ಕೆಲವರು ಮೊಬೈಲ್​ ಫೋನ್ ಬಳಸಿ ಒಳಗಿಂದಲೇ ಗಣ್ಯರು, ಉದ್ಯಮಿ, ಅಮಾಯಕರಿಗೆ ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಮಾಡುತ್ತಾರೆ. ಜತೆಗೆ ಎದುರಾಳಿ ಗುಂಪಿನವರ ಹತ್ಯೆಗೂ ಸ್ಕೆಚ್ ರೂಪಿಸುತ್ತಾರೆ. ಮಾದಕ ವಸ್ತುಗಳನ್ನು ಸೇವಿಸಿಕೊಂಡು ಮತ್ತಷ್ಟು ಅಪರಾಧ ಕೃತ್ಯಗಳಿಗೆ ಜೈಲಿನಲ್ಲಿಯೇ ಸ್ಕೆಚ್ ರೂಪಿಸಿ ಅಶಾಂತಿ ಸೃಷ್ಟಿಸುತ್ತಾರೆ. ಕಾರಾಗೃಹದಲ್ಲೂ ಗಲಾಟೆ ಮಾಡಿ ತಮ್ಮ ಆರೋಗ್ಯಕ್ಕೂ ಕುತ್ತು ತಂದುಕೊಳ್ಳುತ್ತಾರೆ. ಇದೆಲ್ಲ ಜೈಲು ಅಧಿಕಾರಿ ಅಥವಾ ಸಿಬ್ಬಂದಿ ಸಹಕಾರದಿಂದ ಕೆಲವೊಮ್ಮೆ ನಡೆಯುತ್ತಿರುತ್ತದೆ.

    ಪೊಲೀಸರು ಕಾರಾಗೃಹದ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದಾಗ ಗಾಂಜಾ, ಮೊಬೈಲ್​ಫೋನ್, ಸಿಮ್ ಮಾರಕಾಸ್ತ್ರಗಳು ಪತ್ತೆ ಆಗಿರುವ ಹಲವು ನಿದರ್ಶನಗಳು ಇವೆ. ಈ ಅಕ್ರಮ ಚಟುವಟಿಕೆ ತಡೆಯುವ ಉದ್ದೇಶಕ್ಕೆ ಕಾರಾಗೃಹ ಇಲಾಖೆಗೆ ಶ್ವಾನ ಪಡೆಯನ್ನು ರಚನೆ ಮಾಡಲಾಗುತ್ತಿದೆ. ಅದಕ್ಕೆ ವಿಶೇಷ ತರಬೇತಿ ಸಹ ಕೊಟ್ಟು ಬಳಸಲಾಗುತ್ತದೆ ಎಂದು ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

    ವಿಶೇಷ ತರಬೇತಿ
    ಶ್ವಾನಪಡೆಗೆ ವಿಶೇಷ ತರಬೇತಿ ಕೊಡಿಸಲಾಗುತ್ತದೆ. ಜೈಲಿನ ಯಾವುದೇ ಮೂಲೆಯಲ್ಲಿ ಮುಚ್ಚಿಟ್ಟರೂ ಕೇವಲ ವಾಸನೆಯಿಂದ ಶ್ವಾನಪಡೆ ಹುಡುಕಿ ತರಲಿದೆ. ಇದರಿಂದ ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲಾಗುತ್ತದೆ. ಜೈಲು ಅಧಿಕಾರಿ, ಸಿಬ್ಬಂದಿಯ ಅಕ್ರಮ ವ್ಯವಹಾರಗಳಿಗೂ ಬ್ರೇಕ್ ಬೀಳಲಿದೆ ಎಂಬುದು ಗೃಹ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

    ಎಲ್ಲ ಜೈಲಿಗಳಿಗೂ ವಿಸ್ತರಣೆ
    ವಿಮಾನ-ರೈಲು ನಿಲ್ದಾಣ ಸೇರಿ ಪ್ರಮುಖ ಪ್ರದೇಶಗಳಲ್ಲಿ ಮಾದಕ ವಸ್ತುಗಳ ಪತ್ತೆಗೆ ಶ್ವಾನಪಡೆಗಳನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ ಜೈಲಿನಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿರುವ ಕಾರಣ ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಜೈಲಿಗೆ ಶ್ವಾನ ಪಡೆ ರಚನೆಗೆ ಸರ್ಕಾರಕ್ಕೆ ಪ್ರಸ್ತಾವವನ್ನೇ ಸಲ್ಲಿಸಲಾಗಿದೆ. ದಿನಕ್ಕೆ ಎರಡು ಬಾರಿ ಗಸ್ತು ತಿರುಗಿಸಲಾಗುತ್ತದೆ. ಯಶಸ್ವಿ ನಂತರ ಎಲ್ಲ ಜೈಲುಗಳಿಗೆ ವಿಸ್ತರಿಸಲಾಗುತ್ತದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts