More

    ಸಂಕಟ ಕಾಲದ ತುರ್ತು ಅಗತ್ಯ ಸೆಕ್ಷನ್ 144 ಬಳಕೆ

    ‘ಸಿದ್ಧತೆಗೆ ವಿಫಲವಾಗುವುದು ಎಂದರೆ ನೀವು ವೈಫಲ್ಯಕ್ಕೆ ಸಿದ್ಧರಾಗುತ್ತಿರುವಿರಿ ಎಂದೇ ಅರ್ಥ’.

    | ಬೆಂಜಮಿನ್ ಫ್ರಾಂಕ್ಲಿನ್

    ಸಂಕಟ ಕಾಲದ ತುರ್ತು ಅಗತ್ಯ ಸೆಕ್ಷನ್ 144 ಬಳಕೆಕರೊನಾ ವೈರಸ್ ರೋಗ (ಕೋವಿಡ್ 9) ಎಂಬ ಮಹಾಮಾರಿ ಸ್ಪೋಟಗೊಂಡು ಜಗತ್ತನ್ನು ತಲ್ಲಣಗೊಳಿಸಿದೆ. ಭಾರತವನ್ನೂ ಇದು ಬಿಟ್ಟಿಲ್ಲ. ಇಲ್ಲಿಯೂ ಅದರ ತಾಂಡವ ನೃತ್ಯ ನಡೆಯುತ್ತಿದೆ. ಇದನ್ನು ಎದುರಿಸುವ ಭಾಗವಾಗಿ ಇಡೀ ದೇಶ 21 ದಿನಗಳ ಲಾಕ್​ಡೌನ್​ಗೆ ಒಳಗಾಗಿದೆ. ಕರ್ನಾಟಕ ಸೇರಿ ಬಹುತೇಕ ಎಲ್ಲ ರಾಜ್ಯಗಳು ಕ್ರಿಮಿನಲ್ ದಂಡ ಸಂಹಿತೆಯ (ಸಿಆರ್​ಪಿಸಿ) 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಹೇರಿವೆ. ಈ ಹಿನ್ನೆಲೆಯಲ್ಲಿ ಈ ಸೆಕ್ಷನ್​ನ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಕರೊನಾದಂಥ ಮಾರಕ ವೈರಸ್ ಹರಡುವುದನ್ನು ತಡೆಯಲು ಇಂಥ ಕಾನೂನನ್ನು ಬಳಸುವುದು ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಇದನ್ನು ಅರಿಯುವುದು ಅಗತ್ಯ. ವೈರಸ್ ಅಪಾಯ ಕಡಿಮೆ ಮಾಡಲು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಾತರಿಗೊಳಿಸಲು ಈ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

    1973ರ ಸಿಆರ್​ಪಿಸಿಯ ಸೆಕ್ಷನ್ 144 ಜಿಲ್ಲಾ ಮ್ಯಾಜಿಸ್ಟೆŠೕಟ್, ಸಬ್ ಡಿವಿಜನಲ್ ಮ್ಯಾಜಿಸ್ಟೆŠೕಟ್ ಅಥವಾ ರಾಜ್ಯ ಸರ್ಕಾರದಿಂದ ವಿಶೇಷ ಅಧಿಕಾರ ಪಡೆದ ಇನ್ನಾವುದೇ ಕಾರ್ಯನಿರ್ವಾಹಕ ಮ್ಯಾಜಿಸ್ಟೆŠೕಟ್​ಗೆ ಈ ಕೆಳಗಿನ ಅಧಿಕಾರ ನೀಡುತ್ತದೆ.

    ಸಾರ್ವಜನಿಕ ಗಲಭೆ, ಅಪಾಯಕಾರಿ ಸನ್ನಿವೇಶ ನಿಯಂತ್ರಿಸಲು, ನಿರ್ದಿಷ್ಟ ಸಾರ್ವಜನಿಕ ಸೊತ್ತುಗಳನ್ನು ವಶಕ್ಕೆ ಪಡೆಯಲು ಇದು ಅಧಿಕಾರ ನೀಡುತ್ತದೆ. ಗಲಭೆ, ಅಶಾಂತಿ, ಮಾನವ ಜೀವ, ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ತಡೆಯಲು ಕ್ರಮ ಕೈಗೊಳ್ಳಲು ಸೆಕ್ಷನ್ 144 ಅಧಿಕಾರ ನೀಡುತ್ತದೆ. ತುರ್ತು ಸಂದರ್ಭಗಳಲ್ಲಿ ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಲು ಅವಕಾಶವಿದೆ. ಜನಸಾಮಾನ್ಯರ ಭಾಷೆಯಲ್ಲಿ ಇದು ಕರ್ಫ್ಯೂ ಹೇರುವ ಸೆಕ್ಷನ್ ಆಗಿದೆ. ಆದರೆ ಕಾನೂನಾತ್ಮಕವಾಗಿ ‘ಅಶಾಂತ ಅಥವಾ ಅಪಾಯವಿದೆಯೆಂಬ ಶಂಕೆಯ ತುರ್ತು ಸಂದರ್ಭಗಳಲ್ಲಿ ತಾತ್ಕಾಲಿಕ ಆಜ್ಞೆಗಳು’ ಎಂಬುದು ಇದರ ಹೆಸರು. ಐತಿಹಾಸಿಕವಾಗಿ ನಾಗರಿಕ ಅಶಾಂತಿ, ದೊಂಬಿ ಮತ್ತು ಕಾನೂನುಬಾಹಿರ ಗುಂಪುಗೂಡುವಿಕೆ ಸಮಯದಲ್ಲಿ ವ್ಯಕ್ತಿಗಳ ಓಡಾಟದ ಮೇಲೆ ನಿರ್ಬಂಧ ಹೇರಲು ಈ ನಿಯಮವನ್ನು ಬಳಸಿಕೊಳ್ಳಲಾಗಿದೆ.

    ಇದೇ ಮೊದಲ ಸಲ: ಒಂದು ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಈ ಸೆಕ್ಷನ್ ಹೇರಿರುವುದು ಹೊಸ ವಿದ್ಯಮಾನವಾಗಿದೆ. ವಿನೂತನವೂ ಆಗಿದೆ. ಅಲ್ಲದೆ ಕಾಲದ ಅಗತ್ಯ ಕೂಡ ಆಗಿದೆ. ತಮಗೆ ಸೋಂಕು ತಗಲುವುದಿಲ್ಲ ಎಂದು ಯುವಜನರು ನಂಬಿರುವ ಕಾಲದಲ್ಲಂತೂ ವಿಶೇಷವಾಗಿ ಅಗತ್ಯವಾಗಿದೆ.

    ಈ ಸೆಕ್ಷನ್​ನ ಅಧಿಕಾರದ ಪರಿಣಾಮ ಹೇಗಿದೆಯೆಂದರೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಮಾತ್ರವಲ್ಲದೆ ಸಾರ್ವಜನಿಕರ ವಿರುದ್ಧವೂ ಇದನ್ನು ಹೇರಬಹುದಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸೆಕ್ಷನ್ 144 ಮತ್ತು ರಾಜ್ಯ ಸರ್ಕಾರಿ ಯಂತ್ರದ ಬಳಕೆಗೆ ಸಾಂವಿಧಾನಿಕ ಸಮರ್ಥನೆಯೂ ಇದೆ. ಸಾರ್ವಜನಿಕ ಆರೋಗ್ಯ ಸಂಪೂರ್ಣವಾಗಿ ರಾಜ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಸಂವಿಧಾನ ಹೇಳುತ್ತದೆ.

    144ನೇ ಸೆಕ್ಷನ್ ಹೇರುವ ಮುನ್ನ ಈ ನಿಯಮದ ಅನ್ವಯ ಕ್ರಮ ಕೈಗೊಳ್ಳಲು ಸೂಕ್ತವಾದ ಕಾರಣಗಳಿವೆ ಎಂದು ಜಿಲ್ಲಾ ಮ್ಯಾಜಿಸ್ಟೆŠೕಟ್​ರಿಗೆ ಮನವರಿಕೆ ಆಗಿರಬೇಕು. ದೈಹಿಕ ಸಾಮೀಪ್ಯದಿಂದ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಹಾಗೂ ಚೀನಾದಿಂದ ಅಮೆರಿಕ, ಇಟಲಿವರೆಗೆ ಹಬ್ಬಿದ ಕರೊನಾ ಸೋಂಕು ಇಲ್ಲಿವರೆಗೂ ಬಂದಿದೆ ಎಂದು ತಿಳಿದು ಬಂದಿರುವುದರಿಂದ ಅದು ಹರಡುವುದನ್ನು ನಿಯಂತ್ರಿಸುವ ಕ್ರಮದ ಮಹತ್ವದ ಭಾಗವಾಗಿ ಸೆಕ್ಷನ್ 144ನ್ನು ಜಾರಿ ಮಾಡುವುದು ಅನಪೇಕ್ಷಿತವಲ್ಲ. ವ್ಯಕ್ತಿಗಳಿಗೆ ಸೂಕ್ತ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಅದರ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಎರಡು ತಿಂಗಳಿಗಿಂತ ಹೆಚ್ಚು ಅವಧಿಗೆ ಈ ಆದೇಶ ಜಾರಿಯಲ್ಲಿ ಇರುವಂತಿಲ್ಲ. ಆದರೆ ಅಗತ್ಯವೆಂದು ರಾಜ್ಯ ಸರ್ಕಾರ ಭಾವಿಸಿದರೆ ಜಿಲ್ಲಾಧಿಕಾರಿ (ಜಿಲ್ಲಾ ಮ್ಯಾಜಿಸ್ಟೆŠೕಟ್) ಅದನ್ನು ಇನ್ನೂ ಆರು ತಿಂಗಳು ವಿಸ್ತರಿಸಬಹುದಾಗಿದೆ. ಈ ಆದೇಶದಿಂದ ಬಾಧಿತ ವ್ಯಕ್ತಿ ಮನವಿ ಸಲ್ಲಿಸಿದಲ್ಲಿ ಜಿಲ್ಲಾಧಿಕಾರಿ ತಮ್ಮ ಆದೇಶವನ್ನು ವಾಪಸ್ ಪಡೆಯಬಹುದು ಅಥವಾ ಬದಲಾವಣೆ ಮಾಡಬಹುದು. ಅರ್ಜಿ ತಿರಸ್ಕರಿಸಿದಲ್ಲಿ ಅದಕ್ಕೆ ಕಾರಣ ನೀಡಬೇಕಾಗುತ್ತದೆ.

    ಸುಪ್ರೀಂ ಕೋರ್ಟ್ ನಿಲುವು: ಸಾರ್ವಜನಿಕ ಸುರಕ್ಷತೆಗೆ ಅಪಾಯ ಇದ್ದಾಗ ಮಾತ್ರವೇ ಸೆಕ್ಷನ್ 144ನ್ನು ಜಾರಿ ಮಾಡಬಹುದು. ರಾಮಲೀಲಾ ಮೈದಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದನ್ನು ಎತ್ತಿ ಹಿಡಿದಿದೆ. ‘ಊಹೆ, ಸಂಭಾವ್ಯತೆ ಆಧಾರದಲ್ಲಿ ಇದನ್ನು ಜಾರಿ ಮಾಡುವಂತಿಲ್ಲ. ಸಾರ್ವಜನಿಕ ಶಾಂತಿಗೆ ನಿಜವಾದ ಭಂಗ ಬರುವಂತಿದ್ದಾಗ ಮಾತ್ರವೇ ಇದನ್ನು ಅನುಷ್ಠಾನಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಸೆಕ್ಷನ್ ಅನ್ವಯ ಹೇರುವ ಆಜ್ಞೆ ನಿಷೇಧಾತ್ಮಕವಾಗಿರಬೇಕೇ ಹೊರತು ಕೇವಲ ನಿರ್ಬಂಧಾತ್ಮಕವಾಗಿಯಲ್ಲ. ನಿಷೇಧ ಮತ್ತು ನಿರ್ಬಂಧ ನಡುವಿನ ವ್ಯತ್ಯಾಸವನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸಂದರ್ಭ ನಿಭಾಯಿಸಲು ಬೇರೆ ಪರ್ಯåಯ ಕ್ರಮಗಳಿರುವಾಗ ಸೆಕ್ಷನ್ 144 ಹೇರಬಾರದು ಎಂದು ಕೋರ್ಟ್ ಹೇಳಿದೆ. ಬೇರೆ ಕ್ರಮಕ್ಕೆ ಸಮಯ ಅಥವಾ ಇತರ ಯಾವುದೇ ಅವಕಾಶ ಇಲ್ಲದಿರುವಾಗ ಮಾತ್ರ ಇದನ್ನು ಬಳಸಬೇಕು. ಕರೊನಾ ವೈರಸ್ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಾದ್ದರಿಂದ ಈ ಅಪರೂಪದ ಸೆಕ್ಷನ್ ಹೇರುವ ಮೂಲಕ ಮಾತ್ರವೇ ಅದನ್ನು ನಿಯಂತ್ರಿಸಬಹುದಾಗಿದೆ. ಇದು ಸಾರ್ವಜನಿಕರ ಹಿತಕ್ಕೆ ಅನುಗುಣವಾಗಿದೆ.

    ಬಹುತೇಕ ನಿಷೇಧಾಜ್ಞೆ ಹೇರಿರುವ ರಾಜ್ಯಗಳಲ್ಲಿ ಯಾವುದೇ ಪ್ರದರ್ಶನ, ಮೆರವಣಿಗೆ, ಪ್ರತಿಭಟನೆಗಳಿಗೆ ಜನರು ಒಟ್ಟುಗೂಡುವುದರ ಮೇಲೆ ನಿಷೇಧ ಹೇರಲಾಗಿದೆ. ಸಂತೆಗಳು, ಮನರಂಜನೆ ಕಾರ್ಯಕ್ರಮಗಳು, ಪ್ರದರ್ಶನಗಳು, ಗುಂಪು ಪ್ರವಾಸಗಳನ್ನು ನಿಷೇಧಿಸಲಾಗಿದೆ. ಆದರೆ ತರಕಾರಿ, ಹಣ್ಣುಹಂಪಲು ಮತ್ತು ಅವಶ್ಯಕ ಸಾಮಗ್ರಿಗಳ ಮಾರಾಟಕ್ಕೆ ಇದು ಅನ್ವಯವಾಗುವುದಿಲ್ಲ. ಜಗತ್ತಿನಾದ್ಯಂತ ಜನರು ಈಗ ಅನುಸರಿಸುತ್ತಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪರಿಕಲ್ಪನೆಗೆ ಅನುಗುಣವಾಗಿ ಈ ನಿಷೇಧಗಳನ್ನು ವಿಧಿಸಲಾಗಿದೆ.

    ಶಿಕ್ಷೆಗೆ ಅವಕಾಶ: ಸೆಕ್ಷನ್ 144 ಉಲ್ಲಂಘನೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 188ರನ್ವಯ ಶಿಕ್ಷೆ ವಿಧಿಸಬಹುದಾಗಿದೆ. ಉಲ್ಲಂಘನೆ ಮಾಡಿದವರನ್ನು 188 (1) ಸೆಕ್ಷನ್ ಅಡಿ ಪೊಲೀಸರು ಬಂಧಿಸಿ ಅವಿಧೇಯತೆಗಾಗಿ ಸೆರೆಮನೆಯಲ್ಲಿ ಇಡಬಹುದು. ವಿಚಾರಣೆಯ ನಂತರ, ಒಂದು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಇನ್ನೂರು ರೂಪಾಯಿವರೆಗೆ ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ. ಇಂಥ ಅವಿಧೇಯತೆಯು ಮಾನವ ಜೀವ, ಆರೋಗ್ಯ ಅಥವಾ ಸುರಕ್ಷತೆಗೆ ಅಪಾಯ ಒಡ್ಡಿದರೆ ಅಥವಾ ಒಡ್ಡುವಂತಿದ್ದರೆ ಅಥವಾ ಗಲಭೆ ಹುಟ್ಟಲು ಕಾರಣವಾದರೆ ಅಂಥ ವ್ಯಕ್ತಿಯನ್ನು ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಒಂದು ಸಾವಿರ ರೂಪಾಯಿವರೆಗೆ ದಂಡ ಅಥವಾ ಈ ಎರಡನ್ನೂ ವಿಧಿಸಬಹುದಾಗಿದೆ.

    ಹೀಗಾಗಿ, ಸ್ವಾತಂತ್ರ್ಯ ಮತ್ತು ಭದ್ರತೆ ಯಾವಾಗಲೂ ಪರಸ್ಪರ ಸಂಘರ್ಷಕ್ಕೆ ಕಾರಣವಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಆದ್ದರಿಂದ, ಸ್ವಾತಂತ್ರ್ಯ ಮತ್ತು ಭದ್ರತೆ ನಡುವೆ ಯಾವುದು ಮುಖ್ಯ ಎನ್ನುವುದನ್ನು ನಾವು ನಿರ್ಧರಿಸಬೇಕು. ಇವೆರಡರ ನಡುವಿನ ಆಯ್ಕೆ ತುಂಬ ಸವಾಲಿನದ್ದು ಎನಿಸಿದರೂ ಏನೂ ಆಗದು ಎಂದು ಉಡಾಫೆಯಿಂದ ಇರುವ ಬದಲು ಅರ್ಥಪೂರ್ಣ ಉತ್ತರ ಕಂಡುಕೊಳ್ಳುವುದು ಅಗತ್ಯ. ಪ್ರತಿಯೊಬ್ಬ ಪ್ರಜೆಯ ಹೆಚ್ಚಿನ ಸುರಕ್ಷತೆ ಮತ್ತು ಸ್ವಾತಂತ್ರ್ಯಕ್ಕಾಗಿ ಇದು ಅಗತ್ಯ. ನಿರ್ಧಾರವು ಒಂದರೊಡನೆ ಇನ್ನೊಂದು ರಾಜಿ ಮಾಡಿಕೊಳ್ಳದ ರೀತಿಯಲ್ಲಿ ಎರಡು ಅತಿಗಳ ನಡುವೆ ತೂರಾಡಬಾರದು. ಸುರಕ್ಷಿತವಾಗಿ ಇರುವುದಕ್ಕಿಂತ ಸ್ವತಂತ್ರವಾಗಿ ಇರುವುದು ಮೇಲೋ ಅಥವಾ ಸ್ವತಂತ್ರವಾಗಿ ಇರುವುದಕ್ಕಿಂತ ಸುರಕ್ಷಿತವಾಗಿರುವುದು ಮೇಲೋ ಎಂದು ಉತ್ತರಿಸುವುದು ಬಹಳ ಕಷ್ಟವೇ. ಏನಿದ್ದರೂ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಖಾತರಿಪಡಿಸುವ ಪ್ರಕ್ರಿಯೆಯಲ್ಲಿ ನಾಗರಿಕರಿಗೆ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಖಾತರಿಪಡಿಸುವುದಕ್ಕಾಗಿ 144ನೇ ಸೆಕ್ಷನ್ ಹೇರಿಕೆ ಮಾಡಲಾಗಿದೆ.

    (ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

    ಕೋವಿಡ್​ 19 ಬಗ್ಗೆ ಎಚ್ಚರಿಕೆ ನೀಡಿದ್ದ ಚೀನಾದ ವೈದ್ಯೆ ಆಯ್​ಫೆನ್​ ನಿಗೂಢ ಕಣ್ಮರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts