More

    ಗ್ರಾಮಕ್ಕೆ ಸಿಕ್ಕರೆ ಸಂಸ್ಕಾರ ಗುಡಿಸಲಿನಲ್ಲಿಯೂ ಅರಳುವುದು ಭಾರತ!

    ಅಭಿವೃದ್ಧಿಯ ಓಟದಲ್ಲಿ ಎಷ್ಟು ವೇಗವಾಗಿ ಧಾವಿಸುತ್ತಿದ್ದೇವೆ ಎಂದರೆ ನಮ್ಮನ್ನು ನಾವೇ ‘ತುಂಬ ಮುಂದುವರಿದವರು’ ಎಂದುಕೊಂಡಿದ್ದೇವೆ. ನಿಜಕ್ಕೂ ‘ಅಭಿವೃದ್ಧಿ’ ಆಗಿದ್ದರೆ ಇಷ್ಟೊಂದು ದುಃಖ, ನೋವು, ಸಂಕಟ, ಖಿನ್ನತೆ, ಅನ್ಯಾಯ, ಅಪಚಾರ, ಸ್ವಾರ್ಥ, ಮೋಸ ಏಕೆ ಇರುತ್ತಿತ್ತು? ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಇದಕ್ಕೆ ಉತ್ತರ ನೀಡಿ ಕಣ್ಣು ತೆರೆಸಿದ್ದಾರೆ- ‘ಜಗತ್ತಿನ ದುಃಖ-ಸಂಕಟಗಳಿಗೆ ಭೌತಿಕ ಸಹಾಯವಷ್ಟೇ ಔಷಧವಲ್ಲ. ಪ್ರತಿಯೊಂದು ಮನೆಯನ್ನು ಅನ್ನಛತ್ರವನ್ನಾಗಿ ಪರಿವರ್ತಿಸಬಹುದು, ಎಲ್ಲೆಲ್ಲೂ ಆಸ್ಪತ್ರೆಗಳನ್ನು ಕಟ್ಟಬಹುದು. ಆದರೆ ಮನುಷ್ಯನ ದೃಷ್ಟಿಕೋನ ಬದಲಿಸದೇ, ಸ್ವಭಾವ ಪರಿವರ್ತನೆಯಾಗದೇ, ಚಾರಿತ್ರ್ಯ ಶುಭ್ರವಾಗದೇ ದುಃಖ, ಸಂಕಟ, ನೋವು ಹಾಗೂ ನರಳಾಟಗಳು ದೂರವಾಗುವುದಿಲ್ಲ’.

    ಹೌದು, ಮನುಷ್ಯನ ಸ್ವಭಾವ ಪರಿವರ್ತನೆ ಅಷ್ಟು ಸುಲಭವೇನಲ್ಲವಲ್ಲ. ಸ್ವಭಾವ ಪರಿವರ್ತನೆ ಮಾಡುವ ಶಕ್ತಿ ಗ್ರಾಮಕ್ಕೆ ಸಿಕ್ಕರೆ ಸಂಸ್ಕಾರ ಗುಡಿಸಲಿನಲ್ಲಿಯೂ ಅರಳುವುದು ಭಾರತ!ಇರುವುದು ಸುಸಂಸ್ಕಾರಗಳಿಗೆ ಮಾತ್ರ. ‘ಭಾರತ ಹಳ್ಳಿಗಳ ದೇಶ’ ಎಂದು ಹೇಳಿಕೊಂಡರೂ ಆ ಗ್ರಾಮಗಳ ಆಂತರ್ಯ ಹೊಕ್ಕಿ ನೋಡಿದಾಗ ಅಲ್ಲಿನ ವಾಸ್ತವ ಮತ್ತು ಶೋಚನೀಯ ಸ್ಥಿತಿ ದಂಗುಬಡಿಸುತ್ತದೆ. ‘ಭಾರತದ ಭವಿಷ್ಯ ಇರುವುದೇ ಗುಡಿಸಲುಗಳಲ್ಲಿ’ ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಹಲವು ಯತಿಗಳ, ಸ್ವಾಮೀಜಿಗಳ ಹೃದಯಮಂಟಪದಲ್ಲಿ ಪ್ರತಿಷ್ಠಾಪಿತವಾದಾಗ ಬದಲಾವಣೆಯ ಹೊಸ ದಾರಿಯೊಂದು ತೆರೆದುಕೊಂಡು, ಇಡೀ ರಾಷ್ಟ್ರಕ್ಕೆ ಮಾದರಿಯಾಗಿ, ಪ್ರೇರಣೆಯಾಗಿ ಬೆಳಕು ತೋರುತ್ತಿದೆ.

    ಹತ್ತಿರದಿಂದ ಹೋಗಿ ನೋಡಿದರೆ ನಮ್ಮ ಹಳ್ಳಿಗಳು ಯಾವುದರಲ್ಲೂ ಕಮ್ಮಿಯಲ್ಲ, ಅವುಗಳ ಆಂತರ್ಯದ ಶಕ್ತಿ ಅಸಾಧಾರಣ ಎಂಬುದು ಅರಿವಾಗುತ್ತದೆ. ಅದಕ್ಕೆಂದೆ, ಎಷ್ಟೋ ಹಳ್ಳಿಗಳು ಸೈನಿಕರಿಂದ, ಶಿಕ್ಷಕರಿಂದ, ಕುಂಬಾರರಿಂದ, ನೇಕಾರರಿಂದ, ಪ್ರಗತಿಪರ ರೈತರಿಂದ ತುಂಬಿಕೊಂಡು, ಅಭಿವೃದ್ಧಿಯ ನೈಜಪಥ ದರ್ಶಿಸುತ್ತಿರುವುದನ್ನು ಕಂಡಿದ್ದೇವೆ. ಆದರೆ, ಒಂದು ಗ್ರಾಮ ಸಾಲುಸಾಲು ಯತಿ-ಸ್ವಾಮೀಜಿಗಳನ್ನು ನೀಡಿದೆ ಮತ್ತು ಆ ಎಲ್ಲ ಸ್ವಾಮೀಜಿಗಳು ಸಂಸ್ಕಾರದ ಕ್ರಾಂತಿಯಿಂದ ಯುವಸಮೂಹದ ವರ್ತಮಾನ, ಭವಿಷ್ಯವನ್ನು ಕಟ್ಟಿಕೊಡುತ್ತಿದ್ದಾರೆ.

    ಶ್ರೀ ರಾಮಕೃಷ್ಣ ಪರಮಹಂಸ, ಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ವಿಚಾರಗಳ ಶಕ್ತಿಯನ್ನು ಶ್ರೀಸಾಮಾನ್ಯನ ಎದೆಗೂ ನಾಟಿಸುತ್ತ, ಜೀವನದರ್ಶನ ಒದಗಿಸುತ್ತಿದ್ದಾರೆ. ಈ ಹಳ್ಳಿಯನ್ನು ಕಂಡ ಅದೆಷ್ಟೋ ಜನ ‘ನಮ್ ಊರು ಹೀಂಗ್ ಆಗ್ಬೇಕ್ ನೋಡ್ರಿ, ಬಂಗಾರದಾಂಗ ಬಾಳೋದು ಅಂದ್ರ ಇದ್ ನೋಡ್ರಿ…’ ಎಂದು ಕೊಂಡು ಪ್ರೇರಣೆಯ ಪಲ್ಲಕ್ಕಿಯನ್ನು ತಮ್ಮ ಊರುಗಳಿಗೂ ಕೊಂಡೊಯ್ಯುತ್ತಿದ್ದಾರೆ.

    ಬೇಂದ್ರೆ ಅಜ್ಜ ನಡೆದಾಡಿದ ಪೇಢಾ ನಗರಿ, ವಿದ್ಯಾನಗರಿ ಧಾರವಾಡದಿಂದ ಇಪ್ಪತ್ತು ಕಿಲೋಮೀಟರ್ ಅಂತರದಲ್ಲಿದೆ ತಡಕೋಡ ಗ್ರಾಮ. ಪುಸ್ತಕಗಳು, ಒಳ್ಳೆಯ ಚಿಂತನೆಗಳು ವ್ಯಕ್ತಿಯಲ್ಲಿ ಹೇಗೆ ಆಂತರ್ಯದ ಕಿಡಿಯನ್ನು ಹೊತ್ತಿಸುತ್ತವೆ ನೋಡಿ. ಈ ಗ್ರಾಮದ ಪುಂಡಲಿಕ್ ಪೇಷಿ ಹಿಂದೊಮ್ಮೆ ಮದ್ಯವ್ಯಸನಿಯಾಗಿ, ಬಾಳಿನಲ್ಲಿ ದಿಕ್ಕು ತಪ್ಪಿದ್ದರು. ಅವರೊಮ್ಮೆ ಲೆನಿನ್ ಬಗ್ಗೆ ಓದುತ್ತಿರುವಾಗ ವಿವೇಕಾನಂದರ ಪ್ರಸ್ತಾಪ ಬಂದು, ಬಡಿದೆಬ್ಬಿಸಿದಂತಾಯಿತು. ಮುಂದೆ, ವಿವೇಕಾನಂದರ ಬಗ್ಗೆ ಸಮಗ್ರ ಅಧ್ಯಯನ ಮಾಡಿ, ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಜೀವನವನ್ನೇ ಬದಲಿಸಿಕೊಂಡರು. ಯುವ ಮನಸ್ಸುಗಳಿಗೆ ವಿವೇಕ ಚಿಂತನೆಗಳನ್ನು ತಲುಪಿಸಿದರು, ಅಧ್ಯಾತ್ಮದ ಸವಿಗೆ ಅಂಟಿಕೊಂಡರು. ಕೊಲ್ಕತ್ತ ರಾಮಕೃಷ್ಣ ಮಿಶನ್​ಗೆ ಹೋಗಿ ಬಂದ ಬಳಿಕ, ಗ್ರಾಮದ ತಮ್ಮ ಮನೆಯ ಮೇಲ್ಭಾಗದಲ್ಲೇ ಪುಟ್ಟ ಮಂದಿರ ಮಾಡಿಕೊಂಡು ರಾಮಕೃಷ್ಣರ ‘ವಚನವೇದ’ ಸಂದೇಶಗಳನ್ನು ಜನರಿಗೆ ತಲುಪಿಸಿದರು. ಹಲವು ವರ್ಷಗಳ ಕಾಲ ಕಾವಿ ತೊಟ್ಟು ಸ್ವಾಮಿ ಕೃಪಾನಂದರಾಗಿ, ಸಾಧನಾಪಥದಲ್ಲಿ ಸಾಗಿದರು. ಕೆಲ ವರ್ಷಗಳ ಹಿಂದೆ ಇವರ ದೇಹಾಂತ್ಯವಾದರೂ, ಕೃಪಾನಂದರು ಕಟ್ಟಿಕೊಟ್ಟ ವಿಚಾರಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿವೆ.

    ಇನ್ನು, ತಡಕೋಡ ಗ್ರಾಮದ ಶಾಲೆಯಲ್ಲಿ ಓದಿದ ಎಂಟು ತರುಣರು, ಮುಂದೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿಗಳಾಗಿ, ಸಮಾಜದ ಕತ್ತಲನ್ನು ಕಳೆಯುತ್ತಿರುವುದು ಈ ಹಳ್ಳಿಯ ಸಂಸ್ಕಾರಶಕ್ತಿಯ ದ್ಯೋತಕ. ಕಲಬುರ್ಗಿಯ ಸ್ವಾಮಿ ಮಹೇಶ್ವರಾನಂದಜಿ, ರಾಣೆಬೆನ್ನೂರಿನ ಪ್ರಕಾಶಾನಂದಜಿ ಮಹಾರಾಜ್, ಹೊಸಪೇಟೆಯ ಸುಮೇಧಾನಂದಜಿ ಮಹಾರಾಜ್, ಗದಗದ ಜಗನ್ನಾಥಾನಂದಜೀ ಮಹಾರಾಜ್, ಬೀದರನ ಜ್ಯೋತಿರ್ಮಯಾನಂದಜೀ ಮಹಾರಾಜ್, ಕೊಪ್ಪಳದ ಚೈತನ್ಯಾನಂದ ಮಹಾರಾಜ್, ಬೆಂಗಳೂರಿನ ಆವಲಹಳ್ಳಿಯ ಅಭಯಾನಂದಜೀ ಮಹಾರಾಜ್, ಅಲಿಪ್ತೇಶಾನಂದಜೀ ಮಹಾರಾಜ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿಗಳಾಗಿ, ನಾಡಿನಾದ್ಯಂತ ಸುಸಂಸ್ಕಾರಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಆ ಮೂಲಕ ರಾಷ್ಟ್ರನಿರ್ವಣ ಕಾರ್ಯದಲ್ಲಿ ತೊಡಗಿದ್ದಾರೆ.

    1993ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ನಂತರ ಎಂಟೂ ಜನ, ಸ್ವಾಮಿ ನಿರ್ಭಯಾನಂದ, ಬೆಂಗಳೂರಿನ ಪುರುಷೋತ್ತಮಾನಂದ ಸ್ವಾಮೀಜಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಆ ಇಬ್ಬರ ಪ್ರೇರಣೆಯಿಂದ ಸಂತರಾಗಿ, ರಾಮಕೃಷ್ಣ ವಿವೇಕಾನಂದ ಆಶ್ರಮವನ್ನು ಮುನ್ನಡೆಸುತ್ತಿದ್ದಾರೆ. ತಡಕೋಡ ಗ್ರಾಮದಲ್ಲಿ ವಿವೇಕ ಚಿಂತನೆಗಳ ಪ್ರವಾಹ ತಗ್ಗಬಾರದು ಮತ್ತು ಉತ್ತಮ ವಿಚಾರಗಳ ಮೂಲಕ ಯುವಕರ ಮನಸ್ಸು, ಜೀವನ ಕಟ್ಟಬೇಕು ಎಂಬ ಉದ್ದೇಶದಿಂದ 1994ರಲ್ಲಿ ಸ್ಥಾಪಿಸಲಾದ ‘ವಿವೇಕಾನಂದ ಶಕ್ತಿ ಕೇಂದ್ರ’ ಸಾರ್ಥಕ 25 ವರ್ಷಗಳನ್ನು ಪೂರೈಸಿದೆ.

    ಸೇವಾ ಮನೋಭಾವದ ನೂರಾರು ಯುವಕರು ಈ ಕೇಂದ್ರದ ಮೂಲಕ ವಿವೇಕಾನಂದರ ವಿಚಾರಗಳ ದೀಕ್ಷೆ ಪಡೆದು, ಸಮಾಜದ ಹಲವು ರಂಗಗಳಲ್ಲಿ ಸಶಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಗ್ರಾಮದ 300ಕ್ಕೂ ಹೆಚ್ಚು ಜನ ಸರ್ಕಾರಿ ಉದ್ಯೋಗದಲ್ಲಿದ್ದಾರೆ, ಎಷ್ಟೋ ಜನರು ಸ್ವಾವಲಂಬಿ ಬದುಕನ್ನೂ ಕಂಡುಕೊಂಡಿದ್ದಾರೆ. ಸಾಂಪ್ರದಾಯಿಕ ಕಸುಬಿನತ್ತಲೂ ಒಲವು ತೋರಿದ್ದಾರೆ.

    ಶಿಕ್ಷಣದ ಮೂಲಕವೇ ಉತ್ತಮ ಸಂಸ್ಕಾರ ಬಿತ್ತಲು ಸಾಧ್ಯ. ಹಾಗಾಗಿ, ಕಲಬುರಗಿ ಬಳಿಯ ತಾಡತೆಗನೂರ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿರುವ ಮಹೇಶ್ವರಾನಂದ ಸ್ವಾಮೀಜಿಯವರೇ ತಡಕೋಡದಲ್ಲೂ ಪ್ರಕಾಶಾನಂದಜಿ ಮಹಾರಾಜ್​ರ ಜತೆಗೆ ‘ವಿವೇಕಾನಂದ ವಿದ್ಯಾ ಮಂದಿರ’ ಶಿಕ್ಷಣ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆ. ತಡಕೋಡ ಮಾತ್ರವಲ್ಲ ಸುತ್ತಲಿನ 40ಕ್ಕೂ ಹೆಚ್ಚು ಹಳ್ಳಿಯ ನೂರಾರು ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣವನ್ನು ಉಚಿತವಾಗಿ ಒದಗಿಸಲಾಗುತ್ತಿರುವುದು ವಿವೇಕಾನಂದ ಶಕ್ತಿ ಕೇಂದ್ರದ ಹೆಗ್ಗಳಿಕೆ. ಇದು ವಸತಿ ಶಾಲೆಯ ಸೌಲಭ್ಯವನ್ನೂ ಹೊಂದಿದೆ. ಹಳ್ಳಿ ಮಕ್ಕಳು ಮಧ್ಯದಲ್ಲೇ ಶಾಲೆ ಬಿಡುವುದು ಜಾಸ್ತಿ. ಅದನ್ನು ತಪ್ಪಿಸಲು ವಿನೂತನ ಉಪಾಯ ಮಾಡಲಾಗಿದೆ. ಶಿಕ್ಷಣ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು, ಸಾಮಾನ್ಯ ಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯಿಂದ -ಠಿ; 25 ಸಾವಿರ ಮತ್ತು ವಸತಿ ಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಯಿಂದ -ಠಿ; 1 ಲಕ್ಷ ಠೇವಣಿಯಾಗಿ ಪಡೆಯಲಾಗುತ್ತದೆ. ಎಸ್ಸೆಸ್ಸೆಲ್ಸಿ ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಆ ಹಣ ಮರಳಿಸಲಾಗುತ್ತದೆ ಮತ್ತು ಅದು ಮಕ್ಕಳ ಪಿಯು ಶಿಕ್ಷಣಕ್ಕೆ ಅನುವು ಮಾಡಿಕೊಡುತ್ತದೆ. ಮುಖ್ಯವಾಗಿ, ಮಧ್ಯದಲ್ಲೇ ಶಾಲೆ ಬಿಡುವುದು ತಪು್ಪತ್ತದೆ. ಗ್ರಾಮೀಣ ಮಕ್ಕಳ ಸುಪ್ತಪ್ರತಿಭೆಯನ್ನು ಅನಾವರಣಗೊಳಿಸಿ, ಬಾಲ್ಯದಲ್ಲೇ ಆದರ್ಶ, ಮೌಲ್ಯಗಳನ್ನು ಅಳವಡಿಸಿದ ಪರಿಣಾಮ ಇಲ್ಲಿ ವ್ಯಾಸಂಗ ಮಾಡಿದವರು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ಜತೆಗೆ ಸಮಾಜದ ಶಕ್ತಿಯಾಗಿ ಬದಲಾಗುತ್ತಿದ್ದಾರೆ.

    ವಿವೇಕಾನಂದ ಶಕ್ತಿ ಕೇಂದ್ರ ತಡಕೋಡ ಗ್ರಾಮವನ್ನು ಹೇಗೆ ಪರಿವರ್ತನೆ ಮಾಡಿದೆ ಎಂದರೆ ಇಲ್ಲಿನ ಜನರು ದ್ವೇಷ, ಅಸೂಯೆಗಳನ್ನು ಮರೆತು ಸಮನ್ವಯ, ಸಹಕಾರ ಭಾವದಿಂದ ಜೀವಿಸುತ್ತಿದ್ದಾರೆ. ಸೇವಾ ಮನೋಭಾವದ ತರುಣ ಮನಸ್ಸುಗಳು ರೂಪುಗೊಂಡಿದ್ದು, ಹಳ್ಳಿಯ ಅಭಿವೃದ್ಧಿಗೆ ಶ್ರಮಿಸುತ್ತಿವೆ. ‘ಶಾಂತಿ, ಸೌಹಾರ್ದ, ಎಲ್ಲರ ಹಿತ’ ಇಲ್ಲಿನ ಜನರ ಜೀವನಮಂತ್ರವಾಗಿ ಬದಲಾಗಿದೆ. ‘ಇಂಥದ್ದೊಂದು ಕೇಂದ್ರ ನಮ್ಮಲ್ಲಿ ಸ್ಥಾಪನೆ ಆಗಿರದಿದ್ದರೆ ತಡಕೋಡ ಕೂಡ ಉಳಿದ ಹಳ್ಳಿಗಳಂತೆ ಸಮಸ್ಯೆಯಲ್ಲೇ ಬಳಲುತ್ತ, ಅದರ ಬಗೆಗಿನ ಚರ್ಚೆಯಲ್ಲೇ ಮುಳುಗಿರಬೇಕಿತ್ತು’ ಎನ್ನುತ್ತಾರೆ ಗ್ರಾಮಸ್ಥರು.

    ಈ ವರ್ಷದ ಮಾರ್ಚ್​ನಲ್ಲಿ ರಜತ ಮಹೋತ್ಸವ ಆಚರಣೆ ಪೂರ್ಣಗೊಂಡ ಬಳಿಕ, ಮತ್ತಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮುಖ್ಯವಾಗಿ, ಗ್ರಾಮೀಣ ಪ್ರದೇಶದ ಮಕ್ಕಳು ‘ಇಂಗ್ಲಿಷ್ ಬರುವುದಿಲ್ಲ’ ಎಂಬ ಸಣ್ಣಕೊರತೆಯಿಂದ ಸ್ಪರ್ಧಾತ್ಮಕ ಜಗತ್ತಿನಿಂದ ದೂರವಾಗುತ್ತಿದ್ದಾರೆ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಆಂಗ್ಲ ಮಾಧ್ಯಮದಲ್ಲೂ ಶಿಕ್ಷಣ ನೀಡಲು ವಿವೇಕಾನಂದ ಶಕ್ತಿ ಕೇಂದ್ರ ಮುಂದಾಗಿದ್ದು, ಪರಂಪರೆ ಆಧಾರಿತ ಆಧುನಿಕ ಶಿಕ್ಷಣ ನೀಡಲು ‘ಶ್ರೀರಾಮಕೃಷ್ಣ ವಿದ್ಯಾಶಾಲಾ’ ನಿರ್ವಿುಸಲಾಗುತ್ತಿದೆ. ಗ್ರಾಮದಲ್ಲಿ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮ ನಿರ್ವಣಕ್ಕೂ ಚಾಲನೆ ಸಿಕ್ಕಿದೆ. ಅಲ್ಲದೆ, ಉತ್ತರ ಕರ್ನಾಟಕ ಭಾಗದ ಹಲವೆಡೆ ತಡಕೋಡದಿಂದ ಪ್ರೇರಣೆ ಪಡೆದು, ವಿವೇಕಾನಂದ ಶಕ್ತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

    ಗ್ರಾಮೀಣ ಭಾಗಕ್ಕೆ ಒಳ್ಳೆಯ ಶಿಕ್ಷಣ ತುಂಬ ಅಗತ್ಯ. ನಮ್ಮ ಸಂಸ್ಕೃತಿ, ವಿಚಾರಗಳ ಸೊಗಡು ಹೊಂದಿದ ಶಿಕ್ಷಣವನ್ನು ನೀಡಿದರೆ ಮನಸ್ಸುಗಳು ಅರಳಿ, ಸಮಾಜವೂ ಹೇಗೆ ಸಶಕ್ತವಾಗುತ್ತದೆ ಎಂಬುದಕ್ಕೆ ತಡಕೋಡ ಉತ್ತಮ ನಿದರ್ಶನವಾಗಿ, ಇತರ ಹಳ್ಳಿಗಳಿಗೂ ಮಾದರಿಯಾಗಿದೆ. ಅಲ್ಲದೆ, ಒಂದೇ ಗ್ರಾಮದ ಎಂಟು ಸ್ವಾಮೀಜಿಗಳು ನಾಡಿನ ಬೇರೆ ಬೇರೆ ಕಡೆ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವುದು ಸಾಧಾರಣ ಸಂಗತಿಯೇನಲ್ಲ.

    ‘ತಡಕೋಡದ ಪ್ರತೀ ಯುವಕನಲ್ಲೂ ಅಸಾಧಾರಣ ಶಕ್ತಿ ಇದೆ, ತುಂಬು ಆತ್ಮವಿಶ್ವಾಸವಿದೆ. ಅಷ್ಟೇ ಅಲ್ಲ, ತಮಗಾಗಿ ಮಾತ್ರ ಇವರು ಬದುಕುತ್ತಿಲ್ಲ. ಸಮಾಜ ಸೇವೆಯ ಮೂಲಕ ಹಲವು ರಂಗಗಳ ಕೊರತೆ ನೀಗಿಸುತ್ತಿದ್ದಾರೆ. ಇಂಥ ಶಕ್ತಿ ಪ್ರತೀ ಗ್ರಾಮಗಳಲ್ಲೂ ಇರುತ್ತದೆ. ಅದನ್ನು ಜಾಗೃತಗೊಳಿಸುವ ಕಾರ್ಯ ಆಗಬೇಕಷ್ಟೇ. ಅದರಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಯತಿಗಳು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ’ ಎನ್ನುವ ಮಹೇಶ್ವರಾನಂದ ಸ್ವಾಮೀಜಿ, (90198-49144) ಗ್ರಾಮೀಣ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಲು ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡುತ್ತಲೇ ಇದ್ದಾರೆ. ಅಧ್ಯಾತ್ಮದ ಮೌಲ್ಯ ಬದಿಗಿರಿಸಿ ಭಾರತ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಇಷ್ಟೊಂದು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಇವರ ಸಂಸ್ಥೆಗೆ ನೆರವಿನ ಕೈಗಳು ಹೆಚ್ಚಬೇಕಿದೆ. ‘ದೀನರು, ದರಿದ್ರರು, ಅಶಕ್ತರು, ರೋಗಿಗಳು ನಿಮ್ಮ ದೇವರಾಗಲಿ, ಮೂರ್ಖರು ನಿಮ್ಮ ದೇವರಾಗಲಿ’ ಎಂಬ ವಿವೇಕಾನಂದರ ನುಡಿಗಳು ತಡಕೋಡನಂಥ ಅದೆಷ್ಟೋ ಗ್ರಾಮಗಳಲ್ಲಿ ಜೀವಂತ ರೂಪ ತಳೆದಿದ್ದು, ಭರವಸೆಯ ಭಾರತವೊಂದು ನಿರ್ವಣವಾಗುತ್ತಿದೆ! ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲ ಕಾವಿಧಾರಿಗಳು ಸಮಾಜ ಬದಲಾವಣೆಯ ಸೇನಾನಿಗಳಾಗಿದ್ದು, ಸಮಷ್ಟಿಯ ಬೆಂಬಲ ಸದಾ ಅವರ ಜತೆಗಿರಲಿ ಎಂಬ ಆಶಯ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts