More

    ಒಳಗಿನ ಪ್ರಪಂಚಕ್ಕೆ ಮರಳುವುದು ಯಾವಾಗ?

    ಬದುಕಿನ ಅವಲೋಕನದ ಹೊತ್ತಲ್ಲಿ ಕೆಲ ಅರ್ಥಪೂರ್ಣ ಮಾತುಗಳನ್ನು ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ಜೀವನ ನಾಲ್ಕುದಿನದ ಸಂತೆ…! ಬದುಕು ಒಂದು ಯಾತ್ರೆ, ನಾವು ಬಂದು, ಹೋಗುವ ಪ್ರಯಾಣಿಕರಷ್ಟೇ. ನಮ್ಮ ಮುನಿಸು, ತಾಪತ್ರಯ, ದ್ವೇಷ, ಅಸೂಯೆ, ಸ್ವಾರ್ಥ, ದೂರುಗಳನ್ನೇ ಹರಡಿಕೊಂಡು ಕೂಡ್ರುವಷ್ಟು ಬದುಕು ದೀರ್ಘವಲ್ಲ, ಅದು ತುಂಬ ಶಾರ್ಟ್ ಎಷ್ಟೋ ಜನರಿಗೆ ಸ್ವೀಟ್ ಸಹ. ‘ಜೀವನಕ್ಕೆ ಅರ್ಥವಿಲ್ಲ, ಅದಕ್ಕೆ ಅರ್ಥ ತುಂಬಬೇಕಾದವರು ನಾವೇ’, ‘ಒಳಿತು ಮಾಡು ಮನುಸ… ನೀ ಇರೋದು ಒಳಗಿನ ಪ್ರಪಂಚಕ್ಕೆ ಮರಳುವುದು ಯಾವಾಗ?ಮೂರು ದಿವಸ, ಪ್ರೀತಿ, ಪ್ರೇಮ ಹಂಚಿ, ನೀ ಹೋಗಬೇಕು ಅಲ್ಲಿ, ಸತ್ತ ಮೇಲೂ ನಿನಗೆ… ಹೆಸರು ಉಂಟು ಇಲ್ಲಿ…’ ಎಂಬ ಸಾಲುಗಳು ಭಾವಲೋಕದಲ್ಲಿ ಸಂಚಲನವನ್ನೇ ಮೂಡಿಸುತ್ತವೆ. ಅಷ್ಟಕ್ಕೂ, ಬದುಕಿನ ಬಗ್ಗೆ ತುಂಬ ಸುಂದರ ವ್ಯಾಖ್ಯಾನ, ಆ ಮೌಲ್ಯದ ಮಹತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದು ಭರತಭೂಮಿಯೇ. ಹಾಗಾಗಿ, ಇಲ್ಲಿ ಜೀವನ ಎಂದರೆ ಏನು? ಅಂತ ಕೇಳಿದರೆ ಶ್ರೀಸಾಮಾನ್ಯರಿಂದ ಹಿಡಿದು ವಿದ್ವತ್ ವಲಯದವರೆಗೆ ಎಲ್ಲರೂ ಒಳ್ಳೆಯ ವಿವರಣೆ ಕೊಡುತ್ತಾರೆ.

    ಇಂಥ ಬದುಕನ್ನೇ ಈಗ ಎಷ್ಟು ಕ್ಷುಲ್ಲಕವಾಗಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಿದರೆ ನಾವು ಸಾಧಿಸಿರುವ ಭೌತಿಕ ಅಭಿವೃದ್ಧಿಯೆಲ್ಲ ವ್ಯರ್ಥ ಎನಿಸಿಬಿಡುತ್ತದೆ. ಕರೊನಾ ಎರಡನೇ ಅಲೆಯ ಹೊತ್ತಲ್ಲಿ ಸಾವಿನ ಸುದ್ದಿಗಳು ಅಪ್ಪಳಿಸಿ, ತಲ್ಲಣಗೊಳಿಸಿದ್ದವು. ಆದರೆ, ಈಗ ಹಲವು ತಿಂಗಳಿಂದ ಬರೀ ಸಾಮೂಹಿಕ ಆತ್ಮಹತ್ಯೆಗಳದ್ದೇ ಕರಾಳ ಸುದ್ದಿಗಳು. ಅಂದರೆ, ಕುಟುಂಬದ ಎಲ್ಲ ಅಥವಾ ಬಹುತೇಕ ಸದಸ್ಯರು ಆತ್ಮಹತ್ಯೆಗೆ ನಿರ್ಧರಿಸುತ್ತಿದ್ದಾರೆ ಎಂದರೆ ಬದುಕು ಅಷ್ಟು ಭೀಭತ್ಸವಾಯಿತೆ, ಅವರ ಹೃದಯದಲ್ಲಿ ಅದೆಂಥ ನೋವು ಮಡುಗಟ್ಟಿರಬಹುದು? ಪಟ್ಟಾಭಿಷೇಕವಾಗಿ ಕೆಲ ಕ್ಷಣಗಳಲ್ಲೇ ರಾಜನಾಗಬೇಕಿದ್ದ ಶ್ರೀರಾಮಚಂದ್ರ ಹದಿನಾಲ್ಕು ವರ್ಷದ ವನವಾಸಕ್ಕೆ ಹೊರಟನಲ್ಲ, ಆ ಬಗೆಯ ನೋವೇ? ರಾಜಪುತ್ರ ಲವ-ಕುಶರನ್ನು ಕಾಡಿನಲ್ಲಿ ಬೆಳೆಸಿ, ಸರಣಿ ಸಂಕಷ್ಟಗಳನ್ನೇ ಎದುರಿಸಿದ ಸೀತಾಮಾತೆಯ ದುಃಖವೇ? ಸತ್ಯವಚನಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ ಸ್ಮಶಾನ ಕಾದ ಸತ್ಯ ಹರಿಶ್ಚಂದ್ರನ ನೋವೇ? ಊಹುಂ, ‘ಇಲ್ಲಿ ಯಾವುದೂ ನಮ್ಮ ಮನಸ್ಸಿನ ಹಾಗೆ ನಡೆಯುತ್ತಿಲ್ಲ’ ಎಂಬುದೇ ಜೀವನಕ್ಕೆ ನಿರಾಶೆಯ ಕಾಮೋಡವಾಗಿ ಕಾಡುತ್ತಿದೆ. ಹೆಂಡತಿ ಮಾತು ಕೇಳುತ್ತಿಲ್ಲ ಎಂದು ಗಂಡ, ಪತಿಯ ಕಿರುಕುಳ ಸಹಿಸದಾಗಿದೆ ಎಂದು ಪತ್ನಿ, ಪರೀಕ್ಷೆಯೇ ಬೇಡವಾಗಿದೆ ಎಂದು ವಿದ್ಯಾರ್ಥಿ, ಮನೆಯಲ್ಲಿ ಬೈಕೋ, ಮೊಬೈಲೋ ಕೊಡಿಸಲಿಲ್ಲ ಎಂದು ಚಿಗುರುಮೀಸೆಯ ಹುಡುಗ, ಪ್ರೇಮವೈಫಲ್ಯವಾಯಿತು ಎಂದು ಯುವಕ-ಯುವತಿ, ನೋಡಲು ಚೆನ್ನಾಗಿಲ್ಲ ಎಂದು ನೊಂದುಕೊಳ್ಳುವ ಹುಡುಗಿ, ಅಷ್ಟೇ ಅಲ್ಲ, ವೃದ್ಧಾಪ್ಯದಲ್ಲಿ ಮಕ್ಕಳು ಕೇಳುತ್ತಿಲ್ಲ ಎಂದು ಹಿರಿಯ ಜೀವಗಳು ಕೂಡ ಆತ್ಮಹತ್ಯೆಗೆ ಶರಣಾಗುತ್ತಿದ್ದಾರಲ್ಲ, ಎಂಥ ವಿಪರ್ಯಾಸ. ಈ ಸಾಮೂಹಿಕ ಆತ್ಮಹತ್ಯೆಯಲ್ಲಿ ಎಳೆಯ ಕೂಸುಗಳು ಕಾರಣವಿಲ್ಲದೆ ಬಲಿಯಾಗುತ್ತಿವೆಯಲ್ಲ? ಸಾಯಲು ಮಾಡಿದಷ್ಟು ‘ಧೈರ್ಯ’ದ ಒಂದು ಪಾಲನ್ನಾದರೂ ಬದುಕಲು ಮಾಡಿದ್ದರೆ, ಅದೆಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವ ದಾರುಣತೆಗೆ ಸಿಲುಕುತ್ತಿರಲಿಲ್ಲ. ಬರೀ ಇಪ್ಪತ್ತು ರೂಪಾಯಿ ಜಗಳಕ್ಕೆ ಕೊಲೆಗಳಾಗುತ್ತಿವೆ ಎಂದರೆ ಜೀವ ಎಷ್ಟು ಅಗ್ಗವಾಗಿ ಹೋಯಿತು ನೋಡಿ!

    ವಾಸ್ತವದಲ್ಲಿ, ಆತ್ಮಕ್ಕೆ ಸಾವು ಎಂಬುದಿಲ್ಲ. ಅದೇನಿದ್ದರೂ ಶರೀರಕ್ಕೆ ಸೀಮಿತ. ಆದರೆ, ಯಾವ ಉದ್ದೇಶ ಸಾಧಿಸಲು ಆತ್ಮವು ಶರೀರವನ್ನು ಆಯ್ಕೆ ಮಾಡಿಕೊಂಡಿರುತ್ತದೆಯೋ, ಆ ಆತ್ಮವನ್ನೇ ಬಿಟ್ಟು ಶರೀರ ಹೋದರೆ ಮತ್ತೆ

    ಹುಟ್ಟಿ ಬರಲೇಬೇಕು! ತಾಪತ್ರಯಗಳನ್ನು ಜಯಿಸಿಕೊಂಡು ಮುನ್ನುಗ್ಗಬೇಕು ಎಂಬುದು ಎಲ್ಲರೂ ತಿಳಿದಿರುವ ಸುಲಭ ಸತ್ಯವೇ. ಆದರೂ, ಹೀಗೇಕೆ ಆಗುತ್ತಿದೆ. ಬಡವರು, ಉಳ್ಳವರು, ಆರೋಗ್ಯವಂತರು, ರೋಗಿಗಳು, ಮಕ್ಕಳು, ವೃದ್ಧರು- ಎಲ್ಲರಿಗೂ ಬದುಕು ಬಹುಬೇಗ ಬೇಡವಾಗುತ್ತಿದೆ. ಬರೀ ಹೊರಗಡೆಯೇ

    (ಭೌತಿಕ ಜಗತ್ತು) ಬದುಕುತ್ತಿದ್ದರೆ ಥಳಕು-ಬಳುಕು ನಾಲ್ಕು ದಿನ ಚೆಂದವೆನಿಸಿ, ಆಮೇಲೆ ಏಕತಾನತೆ, ಬೇಸರ, ಭಯ ಕಾಡಲು ಶುರುವಾಗುತ್ತದೆ. ಅದಕ್ಕೆಂದೆ ಪಾಶ್ಚಿಮಾತ್ಯ ಜನರು ನೆಮ್ಮದಿ ಹುಡುಕಿಕೊಂಡು, ಭಾರತಕ್ಕೆ ಬರುತ್ತಾರೆ,

    ಇಲ್ಲಿನ ಅಧ್ಯಾತ್ಮ ಪ್ರವಾಹದಲ್ಲಿ ಒಂದಾಗುತ್ತಾರೆ.

    ಬಾಳಪಯಣದಲ್ಲಿ ಕಷ್ಟ, ದುಃಖ, ನೋವು ಎಲ್ಲವೂ ಇದೆ ಎಂದು ಒಪ್ಪೋಣ. ಕೆಲವರ ಪಾಲಿಗೆ ಅದು ಜಾಸ್ತಿ, ಕೆಲವರ ಪಾಲಿಗೆ ಕಮ್ಮಿ. ಆದರೆ, ಇದೆಲ್ಲವೂ ನಾಣ್ಯದ ಒಂದು ಮುಖ ಮಾತ್ರ. ಇನ್ನೊಂದು ಮುಖವನ್ನು ಗಮನಿಸಿಲ್ಲ… ಹೊರಗಡೆ ಪ್ರಪಂಚದಲ್ಲಿ ಸಂಪತ್ತು, ವರ್ಚಸ್ಸು, ಅಧಿಕಾರ ಪಡೆಯಲು ಎಷ್ಟೊಂದು ಹೆಣಗಾಡುತ್ತಿದ್ದೇವೆ, ಈ ಹೋರಾಟದಲ್ಲಿ ಬೇಕಾದ್ದು ಕೈತಪ್ಪಿದರೆ ಜೀವನವೇ ಮುಗಿದುಹೋಯಿತು ಎಂಬಂತೆ ವರ್ತಿಸುತ್ತೇವೆ. ಆದರೆ, ತುಂಬ ಮಹತ್ವವಾದ, ಈ ಜಂಜಾಟಗಳ ನಡುವೆ ಕಳೆದುಹೋದ

    ಸಂಗತಿಯನ್ನು ಮರೆತುಬಿಟ್ಟಿದ್ದೇವೆ. ಹೌದು, ನಮಗೆಲ್ಲ ಹೊರಗಿನ ಪ್ರಪಂಚ ಮಾತ್ರ ಇಲ್ಲ; ನಮ್ಮೊಳಗೂ ಒಂದು ಪ್ರಪಂಚವಿದೆ. ಅದನ್ನೇ ಆಂತರ್ಯದ ಲೋಕವೆಂದು ಕರೆಯುತ್ತೇವೆ. ಈ ಲೋಕದಲ್ಲಿ ಈಗ ಚಟುವಟಿಕೆಗಳೇ ವಿರಳವಾಗಿವೆ. ಆಂತರ್ಯದ ಲೋಕಕ್ಕೆ ಪಯಣಿಸಿ, ನಮ್ಮನ್ನು ನಾವು ಅರಿಯಬೇಕು ಎಂಬ ಜರೂರತ್ತನ್ನು ಮರೆತುಬಿಟ್ಟಿದ್ದೇವೆ. ಅಂತಃಕರಣ, ಆತ್ಮಸಮ್ಮಾನ, ಆತ್ಮಸಂತೃಪ್ತಿ, ಬ್ರಹ್ಮಾನಂದ- ಇವೆಲ್ಲವುಗಳ ಕಾಯಂ ವಿಳಾಸವೇ ನಮ್ಮ ಆಂತರ್ಯದ ಲೋಕ. ಅದೀಗ ಖಾಲಿಯಾಗುತ್ತಿದೆ, ಭಣಗುಡುತ್ತಿದೆ. ಸಂವೇದನೆಗಳು ಮರೆಯಾಗುತ್ತಿವೆ.

    ನರೇಂದ್ರ ಸ್ವಾಮಿ ವಿವೇಕಾನಂದರಾಗಿದ್ದು, ಶ್ರೀರಾಮಕೃಷ್ಣ ಪರಮಹಂಸರು ಕಾಳಿಯೊಡನೆ ಮಾತನಾಡಿದ್ದು, ಸಂತ ಜ್ಞಾನೇಶ್ವರರು ಭಕ್ತಿಪಂಥವನ್ನು ಬೆಳಗಿದ್ದು, ಸಂತ ತುಕಾರಾಮರು ಸಾವಿರಾರು ಅಭಂಗಗಳನ್ನು ರಚಿಸಿದ್ದು, ಸಮರ್ಥ ರಾಮದಾಸರು ಧರ್ಮರಕ್ಷಣೆಯ ಮಾರ್ಗ ಕಲ್ಪಿಸಿದ್ದು… ಆಂತರ್ಯದ ಲೋಕದ ಮೂಲಕವೇ. ಇವರೆಲ್ಲ ‘ಹೊರಗಡೆ’ಯೇ ಆಸಕ್ತರಾಗಿದ್ದ್ದೆ ಈ ಪವಾಡಸದೃಶ ಸಾಧನೆಗಳೆಲ್ಲ ಸಾಕಾರಗೊಳ್ಳುತ್ತಿರಲಿಲ್ಲ. ರಾಮತ್ವ, ಕೃಷ್ಣತ್ವಗಳು ಮತ್ತಷ್ಟು ಚೈತನ್ಯ ಪಡೆಯುತ್ತಿರಲಿಲ್ಲ. ‘ಅತಿಯಾದರೆ ಅಮೃತವೂ ವಿಷ’ ಎಂಬ ಮಾತು ಹಿರಿಯರು ತುಂಬ ಹಿಂದೆಯೇ ಹೇಳಿದ್ದಾರೆ. ಬರೀ ಬೇಕುಗಳ ಹಿಂದೆ ಓಡಿದರೆ, ಎಲ್ಲವೂ ನನ್ನ ಮನಸ್ಸಿನಂತೆ ಮಾತ್ರ ನಡೆಯಬೇಕು ಎಂದು ಹಠ ಹಿಡಿದರೆ ಲೌಕಿಕ ಬದುಕು ದುಃಖದಾಯಕವಾಗದೆ ಇನ್ನೇನಾಗುತ್ತದೆ? ಈ ಸ್ಪರ್ಧಾಜಗತ್ತಿನಲ್ಲಿ ಬದುಕಲು ಕೊಂಚವೇ ಸ್ವಾರ್ಥ ಸಾಕು. ಆದರೆ, ಇದು ಮಿತಿ ಮೀರಬಾರದು. ಸ್ವಾರ್ಥದ ಬೇಲಿ ವಿಸ್ತರಿಸಿಕೊಂಡಷ್ಟು ಮಾನವೀಯ ಮೌಲ್ಯಗಳು ದೂರವಾಗುತ್ತವೆ. ವಾಸ್ತವ ಮರೆಯಾಗಿ ಭ್ರಮೆಗಳೇ ಮೇಳೈಸುತ್ತವೆ. ಸ್ವಾರ್ಥದಿಂದ ನಮಗೂ, ನಮ್ಮ ಜತೆಗಿರುವವರಿಗೂ ದುಃಖವೇ.

    ಅಷ್ಟಕ್ಕೂ, ಆಂತರ್ಯದ ಲೋಕವನ್ನು ಮರೆತು, ಕಡೆಗಣಿಸಿ ಎಷ್ಟು ದಿನ ಬಾಳಲು ಸಾಧ್ಯ. ಬದುಕಿನಲ್ಲಿ ಬೆಟ್ಟದಷ್ಟು ಸಾಧನೆ ಮಾಡಿರಲಿ, ತುಂಬ ದುಃಖವನ್ನೇ ಅನುಭವಿಸಿರಲಿ, ತಲುಪಬೇಕಾದ ಅಂತಿಮ ಗುರಿ, ಅಂತಿಮ ಸತ್ಯ ಎಂಬುದಿದೆಯಲ್ಲ, ಅದು ಎಲ್ಲರಿಗೂ ಒಂದೇ. ಮಾತ್ರವಲ್ಲ, ಆತ್ಮಾನಂದವನ್ನು ಅನುಭವಿಸುವ ಸಾಮರ್ಥ್ಯ ಇದ್ದರೂ, ಎಲ್ಲೆಲ್ಲೋ

    ಬದುಕಿನ ಬಂಡಿಯನ್ನು ಓಡಿಸಿ, ದಿಕ್ಕು ತಪು್ಪತ್ತಿದ್ದೇವೆ. ಅಷ್ಟಕ್ಕೂ ಜೀವನದ ಉದ್ದೇಶ ಏನು?

    ನೆಮ್ಮದಿಯಾಗಿರಬೇಕು, ಖುಷಿಯಾಗಿರಬೇಕು, ನಮ್ಮಿಂದ ಮತ್ತೆ ಕೆಲವರ ಬದುಕಿನಲ್ಲಿ ನಗು ಅರಳಿಸಬೇಕು. ಆದರೆ, ಸದ್ಗುಣಗಳು ಎಂಬ ಪುಷ್ಪಗಳು ಸ್ವಾರ್ಥದ ಬೇರಿನಲ್ಲಿ ಅರಳಲು ಸಾಧ್ಯವಿಲ್ಲ. ಅದಕ್ಕಾಗಿ, ಜೀವನವನ್ನು ವಿಶಾಲ ಮನೋಭಾವದಿಂದ ಕಾಣಬೇಕು. ನಾನು ಅಷ್ಟೇ ಅಲ್ಲ ನಾವೆಲ್ಲ ಚೆನ್ನಾಗಿ ಬದುಕಬೇಕು ಎಂಬ ಸರಳತೆ, ಜೀವನದ ವಿಸ್ಮಯಗಳನ್ನೆಲ್ಲ ಮುಗ್ಧತೆಯಿಂದ ಅನುಭವಿಸುವ ಮನಸ್ಸು, ರೋಚಕ ತಿರುವುಗಳಲ್ಲಿ ಒಮ್ಮೆ ನಿಂತು ಹಿಂದೆ ನೋಡಿ, ಮುಗುಳ್ನಗೆ ಬೀರುವ, ಇಲ್ಲಿ ಯಾವುದೂ ಶಾಶ್ವತವಲ್ಲ, ಅನುಭವಿಸಲು ಇರುವುದು ಈ ಕ್ಷಣ ಮಾತ್ರ ಎಂಬ ಸ್ಪಷ್ಟ ಅರಿವು ದುಃಖ, ಕಿರಿಕಿರಿಗಳ ಭಾರವನ್ನೆಲ್ಲ ಸರಳವಾಗಿ ತಗ್ಗಿಸಿಬಿಡುತ್ತದೆ.

    ರಾಷ್ಟ್ರವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥ ಸನ್ನಿಧಿಯ ಗುಹೆಯಲ್ಲಿ ಧ್ಯಾನಮಗ್ನರಾಗಿದ್ದು,

    ಆಂತರ್ಯದ ಲೋಕ ಪ್ರವೇಶಿಸಲೆಂದೇ. ಖ್ಯಾತ ನಟ ರಜನಿಕಾಂತ್ ಆಗಾಗ ಹಿಮಾಲಯಕ್ಕೆ ಹೋಗಿ ಸಂತರ ದರ್ಶನ ಮಾಡುವುದು ‘ಒಳಗಿನ ತಿರುಳನ್ನು ಅರಿಯಲೆಂದೇ’. ಉಚ್ಚಶಿಕ್ಷಿತರು, ಯುವಕರು ಅಧ್ಯಾತ್ಮದ ಪಥದಲ್ಲಿ ಮುನ್ನುಗ್ಗುತ್ತಿರುವುದು ಇದೇ ಹಂಬಲದಿಂದಲೇ.

    ‘ಶ್ರೀರಾಮ, ಶ್ರೀಕೃಷ್ಣನ ಕಥೆಗಳೆಲ್ಲ ಕೇಳಿ, ವ್ಹಾ, ವ್ಹಾ ಎಂದು ಮತ್ತದೇ ಹಳೆ ಜಂಜಾಟದಲ್ಲೇ ಮುಳುಗಿಹೋಗುವ ನಾವು, ಬರೀ ಆ ಕಥೆಗಳನ್ನು ಕೇಳಿ ಏನು ಪ್ರಯೋಜನ? ರಾಮತ್ವ, ಕೃಷ್ಣತ್ವದ ಹಾದಿಯಲ್ಲಿ ಸಾಗಿದಾಗ, ನಮ್ಮ ಜೀವನದಲ್ಲಿ ನಾವು ಪರಿವರ್ತನೆ ತಂದುಕೊಂಡಾಗ, ಕೃತಕ ನಗುವನ್ನು ಬಿಟ್ಟು, ಆನಂದಭಾವದ ನೈಜ ನಗೆಯನ್ನು ಮುಖದ ತುಂಬ ಅರಳಿಸಿಕೊಂಡಾಗ ಎಲ್ಲ ಕಲ್ಮಶಗಳು ದೂರವಾಗುತ್ತವೆ. ಆಗ ಅಂತರಂಗದೊಂದಿಗೆ ಸಂಪರ್ಕ ಸಾಧಿಸುವ, ಆ ಮುಖೇನ ಪರಮಶಕ್ತಿಯೊಂದಿಗೆ ತಾದಾತ್ಮ್ಯೊಳ್ಳುವ ಸಂದರ್ಭವೂ ಒದಗುತ್ತದೆ’ ಎನ್ನುವ ಶ್ರೀ ಆಶ್ರಮದ ಎ.ಪಿ.ಪಾಟೀಲ್ ಗುರೂಜಿ ಅವರು, ‘ಆನಂದವೇ ದೇವರು, ಆ ಆನಂದದೆಡೆಗೆ ಸಾಗಲು, ಆಸೆಗಳಿಗೆ ಮಿತಿಯಿರಲಿ. ಮನಸ್ಸಿನ ಅಲೆದಾಟದ ಮೇಲೆ ನಿಯಂತ್ರಣವಿರಲಿ, ಮಾಡುವ ಪ್ರತಿ ಕೆಲಸವೂ ಅರಿವಿನಿಂದ ಕೂಡಿರಲಿ’ ಎನ್ನುತ್ತ ಅಂತರಂಗದೆಡೆಗಿನ ಪಯಣದ ದಾರಿಯನ್ನು ಪ್ರಶಸ್ತಗೊಳಿಸುತ್ತಾರೆ. ‘ಚಿಂತೆ ಮಾಡಿದರೂ ಹೋಗುವುದೇ, ನಗುತ್ತ ಇದ್ದರೂ ಹೋಗುವುದೇ, ನೀವು ಹೇಗೆ ಇದ್ದರೂ ಹೋಗುವುದೇ. ‘ಹೋಗುವುದು’ ಸತ್ಯವಾದ ಮೇಲೆ ಚಿಂತೆ ಮಾಡುತ್ತ, ಅಳುತ್ತ ಹೋಗುವುದಕ್ಕಿಂತ ನಗುತ್ತ ಹೋಗೋಣ’ ಎಂದು ಹೃದಯಗಳ ಭಾರವನ್ನು ಇಳಿಸುತ್ತಾರೆ ಪಾಟೀಲ್ ಗುರೂಜಿ. ಹೌದು, ನಿಜವಾದ ಆನಂದದಲ್ಲಿರುವ ವ್ಯಕ್ತಿ ತಾಯಿಯ ಗರ್ಭದಲ್ಲಿರುವ ಮಗುವಿನಂತೆ. ಆ ವ್ಯಕ್ತಿಯನ್ನು ದೈವತ್ವವು ತಾಯಿಯ ಹಾಗೇ ಪೋಷಿಸುತ್ತದೆ. ಅಧ್ಯಾತ್ಮ, ಮೌಲ್ಯಗಳು ಜೀವನೋತ್ಸಾಹವನ್ನು ಹೆಚ್ಚಿಸುತ್ತವೆ. ಎಪ್ಪತ್ತು-ಎಂಬತ್ತು ವರ್ಷದ ವೃದ್ಧರು ಸಹ ಪಂಢರಪುರದ ವಾರಿಯಲ್ಲಿ ಉತ್ಸಾಹದಿಂದ ಭಜನೆ ಹಾಡುತ್ತ, ಮೃದುಂಗದ ತಾಳಕ್ಕೆ ಹೆಜ್ಜೆ ಹಾಕುತ್ತ ಸಾಗುತ್ತಾರಲ್ಲ, ಆ ನೈಜ ಚೈತನ್ಯ ಬರುವುದೇ ಆಂತರ್ಯದ ಆನಂದದ ಮೂಲಕ.

    ನಿರ್ಧಾರದ ಚೆಂಡು ನಮ್ಮ ಅಂಗಳದಲ್ಲೇ ಇದೆ. ‘ಬೇಕು’ಗಳ ಬೆನ್ನುಹತ್ತಿ ಲೌಕಿಕದ ಮಾಯೆಯೊಳಗೆ ಸಿಲುಕುವುದೋ? ಹೃದಯಮಂದಿರದಲ್ಲಿ ಎಂದೂ ಬೆಳಗುವ ಆನಂದಜ್ಯೋತಿಯನ್ನು ಪ್ರಜ್ವಲಿಸುವುದೋ? ದೃಢಸಂಕಲ್ಪ ಕೈಗೊಂಡರೆ ಎಂಥ ಅಂಧಕಾರವನ್ನೂ ಕಳೆಯಬಹುದು. ಬನ್ನಿ, ಮರೆತೇ ಹೋಗಿರುವ ಒಳಗಿನ ಪ್ರಪಂಚದತ್ತ ಪಯಣ ಆರಂಭಿಸೋಣ.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts