More

    ಜಗದಗಲ ಅಂಕಣ: ದೊಡ್ಡಣ್ಣನ ದೊಡ್ಡ ಆಲೋಚನೆಗಳ ನೇತಾರರು

    ಬುಧವಾರ ಬೆಳಗ್ಗೆ ಈ ಲೇಖನವನ್ನು ನೀವು ಓದುವ ಹೊತ್ತಿಗೆ ಶ್ವೇತಭವನದಲ್ಲಿ ಮುಂದಿನ ನಾಲ್ಕು ವರ್ಷಗಳು ಯಾರಿರುತ್ತಾರೆಂದು ಸುಳಿವು ಸಿಗತೊಡಗಿರುತ್ತದೆ. ಅವರು ಯಾರೇ ಆಗಿರಲಿ, ಅಮೆರಿಕ ಅಷ್ಟೇ ಅಲ್ಲ, ಜಗತ್ತಿಗೇ ಜಗದಗಲ ಅಂಕಣ: ದೊಡ್ಡಣ್ಣನ ದೊಡ್ಡ ಆಲೋಚನೆಗಳ ನೇತಾರರುಸಂಬಂಧಿಸಿದಂತೆ ಸದ್ಯದಲ್ಲೇ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿರುತ್ತದೆ. ಕಮ್ಯೂನಿಸ್ಟ್ ಚೀನಾ ಜಗತ್ತನ್ನು ಕರೊನಾ ಸಂಕಷ್ಟದಲ್ಲಿ ಸಿಲುಕಿಸಿದ್ದಲ್ಲದೆ ಆ ಬಗ್ಗೆ ಕಿಂಚಿತ್ತಾದರೂ ಪಶ್ಚಾತ್ತಾಪವಿಲ್ಲದೆ, ಸುತ್ತಲ ಹಲವುಹತ್ತು ದೇಶಗಳ ನೆಲ-ಜಲ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಬೆದರಿಕೆಯೊಡ್ಡುತ್ತ ಜಾಗತಿಕ ಶಾಂತಿಗೆ ಅತಿದೊಡ್ಡ ಕಂಟಕವಾಗಿ ಬೆಳೆದುನಿಂತಿದೆ. ಅದನ್ನು ಎದುರಿಸುವ, ಅದರ ಶಾಂತಿಕಂಟಕ ಕೈಗಳನ್ನು ಕಟ್ಟಿಹಾಕುವ ಸಾಮರ್ಥ್ಯವಿರುವ ಏಕೈಕ ದೇಶ ಅಮೆರಿಕ. ಅಮೆರಿಕದ ಅಧ್ಯಕ್ಷರು ಇಂದು ತೆಗೆದುಕೊಳ್ಳುವ ನಿರ್ಧಾರ ಮುಂದೆ ಬಹುಕಾಲದವರೆಗೆ ಜಾಗತಿಕ ಇತಿಹಾಸವನ್ನು ನಿರ್ದೇಶಿಸುತ್ತಿರುತ್ತದೆ. ಹಿಂದಿನ ಹಲವು ಅಧ್ಯಕ್ಷರುಗಳು ಸೂಕ್ಷ್ಮ ಸನ್ನಿವೇಶಗಳಲ್ಲಿ ತೆಗೆದುಕೊಂಡ ನಿರ್ಧಾರಗಳು, ಅವುಗಳಿಂದಾದ ತಿರುವುಗಳ ಸ್ಥೂಲ ಪರಿಚಯ ಈ ಲೇಖನದ ಉದ್ದೇಶ.

    ಜಾರ್ಜ್ ವಾಷಿಂಗ್​ಟನ್ ಅಮೆರಿಕದ ಮೊದಲ ಅಧ್ಯಕ್ಷ. ಬ್ರಿಟನ್ ವಿರುದ್ಧದ ಸ್ವಾತಂತ್ರ್ಯ ಯುದ್ಧದಲ್ಲಿ 13 ವಸಾಹತುಗಳ ಒಕ್ಕೂಟದ ಸೇನೆಯ ನೇತೃತ್ವ ವಹಿಸಿ, ಜಯ ಗಳಿಸಿ, ‘ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ’ಗೆ ಅಸ್ತಿಭಾರ ಹಾಕಿದ ಮಹಾನ್ ನಾಯಕ. 2 ಅವಧಿಗಳ ಆಡಳಿತ ಮುಗಿಸಿ ನಿವೃತ್ತನಾಗುವ ಗಳಿಗೆಯಲ್ಲಿ ಅವರು ತನ್ನ ನಂತರದ ಅಧ್ಯಕ್ಷರುಗಳಿಗೆ, ಆ ಮೂಲಕ ಅಮೆರಿಕಗೆ ನೀಡಿದ ಸಂದೇಶ ಮುಂದಿನ ಒಂದೂವರೆ ಶತಮಾನದವರೆಗೆ ಆ ದೇಶದ ವಿದೇಶನೀತಿಯನ್ನು ನಿರ್ದೇಶಿಸಿತು.

    1789ರಲ್ಲಿ ವಾಷಿಂಗ್​ಟನ್ ಅಧ್ಯಕ್ಷಗಿರಿ ವಹಿಸಿಕೊಳ್ಳುತ್ತಿ ದ್ದಂತೇ ಅತ್ತ ಫ್ರಾನ್ಸ್​ನಲ್ಲಿ ಕ್ರಾಂತಿ ಆರಂಭವಾಯಿತು. ಬೊರ್ಬೇನ್ ರಾಜಪ್ರಭುತ್ವದ ವಿರುದ್ಧ ಭುಗಿಲೆದ್ದ ಆ ಜನಾಂದೋಲನ ತಮ್ಮ ಬುಡಕ್ಕೂ ಬಿಸಿನೀರು ಕಾಯಿಸಬಹು ದೆಂದು ಆತಂಕಗೊಂಡ ಸುತ್ತಲ ಪ್ರಶಿಯಾ, ರಷ್ಯಾ ಹಾಗೂ ಪವಿತ್ರ ರೋಮನ್ ಸಾಮ್ರಾಜ್ಯಗಳ ಅರಸರುಗಳು ಹೊಸ ಫ್ರೆಂಚ್ ಗಣರಾಜ್ಯದ ವಿರುದ್ಧ ಒಟ್ಟುಗೂಡಿದರು. ಯುರೋಪಿನಲ್ಲಿ

    ಫ್ರಾನ್ಸ್​ನ ಪ್ರಾಬಲ್ಯ ಹೆಚ್ಚಿದಷ್ಟೂ ತನಗೆ ಕುತ್ತಾಗಬಹುದೆಂದು ಶಂಕಿಸಿದ ಬ್ರಿಟನ್ ಸಹ ಅವರೊಂದಿಗೆ ಸೇರಿಕೊಂಡಿತು. ಹೀಗೆ ಒಂದು ಕಡೆ ಫ್ರೆಂಚ್ ಗಣರಾಜ್ಯ, ಇನ್ನೊಂದು ಕಡೆ ಸರಿಸುಮಾರು ಇಡೀ ಯುರೋಪ್ ನಿಂತು 1792ರಲ್ಲಿ ಆರಂಭವಾದ ಸಮರ ಸರಣಿ ವಾಷಿಂಗ್​ಟನ್ 1797ರಲ್ಲಿ ಅಧಿಕಾರ ತ್ಯಜಿಸುವ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ವಾಷಿಂಗ್​ಟನ್ ತನ್ನ ‘ವಿದಾಯ ಭಾಷಣ’ದಲ್ಲಿ ಅಮೆರಿಕನ್ನರಿಗೆ ನೀಡಿದ ಉಪದೇಶ, ‘ಯುರೋಪಿನ ಶಕ್ತಿ ರಾಜಕಾರಣದ ಗೋಜಲಿನಲ್ಲಿ ಸಿಲುಕಿಕೊಳ್ಳಬೇಡಿ’ ಎಂದು.

    ಆಗಿನ ಅಮೆರಿಕ ಭೌಗೋಳಿಕವಾಗಿ ಈಗಿನದರ ಕಾಲುಭಾಗವೂ ಇರಲಿಲ್ಲ. ಪಶ್ಚಿಮದಲ್ಲಿ ವಿಶಾಲ ಫ್ರೆಂಚ್ ವಸಾಹತು ಲೂಸಿಯಾನಾ, ಉತ್ತರದಲ್ಲಿ ಮತ್ತಷ್ಟು ವಿಶಾಲವಾದ ಬ್ರಿಟಿಷ್ ಆಡಳಿತದ ಕೆನಡಾ ಇದ್ದರೆ ದಕ್ಷಿಣದ ಫ್ಲಾರಿಡಾ ಸ್ಪಾ್ಯನಿಷ್ ಹಿಡಿತದಲ್ಲಿತ್ತು. ಹೀಗಾಗಿ ಅಮೆರಿಕ ಸಿಕ್ಕಿಕೊಂಡಿದ್ದ ಇಕ್ಕಟ್ಟೆಂದರೆ ಫ್ರಾನ್ಸ್ ಪರ ವಹಿಸಿದರೆ ಉತ್ತರದ ಕೆನಡಾದಿಂದ ಬ್ರಿಟಿಷರೂ, ದಕ್ಷಿಣದ ಫ್ಲಾರಿಡಾದಿಂದ ಸ್ಪಾ್ಯನಿಷರೂ ಎರಗಿಬಿಡುತ್ತಿದ್ದರು. ಬ್ರಿಟನ್ ಮತ್ತದರ ಯುರೋಪಿಯನ್ ಸಹಯೋಗಿಗಳ ಪರ ನಿಂತರೆ ಪಶ್ಚಿಮದ ಲೂಸಿಯಾನಾದಿಂದ ಫ್ರೆಂಚ್ ಸೇನೆಯ ದಾಳಿಗೆ ಅಮೆರಿಕ ತುತ್ತಾಗುತ್ತಿತ್ತು! ದೀರ್ಘ ಸ್ವಾತಂತ್ರ್ಯ ಹೋರಾಟದಲ್ಲಿ ಜಝುರಿತಗೊಂಡು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಪುಟ್ಟ ಅಮೆರಿಕಕ್ಕೆ ಪ್ರಬಲ ಯುರೋಪಿಯನ್ ಸೇನೆಗಳನ್ನು ಎದುರಿಸುವ ಸಾಮರ್ಥ್ಯವೇ ಇರಲಿಲ್ಲ. ಹೀಗಾಗಿ ಯುರೋಪಿನ ಶಕ್ತಿ ರಾಜಕಾರಣದ ಗೋಜಲಿನಲ್ಲಿ ಸಿಲುಕಿಕೊಂಡರೆ ಅರ್ಥವ್ಯವಸ್ಥೆ ಮುರಿದುಬೀಳುವುದರ ಜತೆಗೆ ಸ್ವಾತಂತ್ರ್ಯಕ್ಕೂ ಸಂಚಕಾರ ಒದಗುತ್ತಿತ್ತು. ಹೀಗಾಗಿಯೇ ಆ ದೂರಾಲೋಚನೆಯ ಮಹಾನ್ ನಾಯಕ ತನ್ನ ದೇಶಕ್ಕೆ ವಿವೇಕಯುತ ಉಪದೇಶ ನೀಡಿದ್ದು. ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದರ ಜತೆಗೇ ಆರ್ಥಿಕ ಪ್ರಗತಿಯೂ ಅಮೆರಿಕ ವಿದೇಶನೀತಿಯ ಪ್ರಮುಖ ಗುರಿಯಾದದ್ದು ಹೀಗೆ. ವಾಷಿಂಗ್​ಟನ್​ರ ಉಪದೇಶವನ್ನು ಪಾಲಿಸಿದ ಮುಂದಿನ ಇಬ್ಬರು ಅಧ್ಯಕ್ಷರು ಅಮೆರಿಕ ಅನಗತ್ಯ ಯುದ್ಧಗಳಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಂಡು, ಯುದ್ಧನಿರತ ಯುರೋಪಿಗೆ ಅಗತ್ಯ ವಸ್ತುಗಳನ್ನು ಹೇರಳವಾಗಿ ಪೂರೈಸುತ್ತ ಅಮೆರಿಕ ಆರ್ಥಿಕವಾಗಿ ಸದೃಢಗೊಳ್ಳುವಂತೆ ಮಾಡಿದರು. ಯುದ್ಧದ ಖರ್ಚಿಗಾಗಿ ಹಣ ಕಡಿಮೆಯಾಗಿ ಕಂಗೆಟ್ಟಿದ್ದ ಫ್ರಾನ್ಸ್​ನ ಅಸಹಾಯಕತೆಯನ್ನು ಉಪಯೋಗಿಸಿಕೊಂಡ ಮೂರನೆಯ ಅಧ್ಯಕ್ಷ ಥಾಮಸ್ ಜೆಫರ್ಸನ್ ಬೃಹತ್ ಲೂಸಿಯಾನಾವನ್ನು ಫ್ರೆಂಚರಿಂದ ಕೊಂಡು ಅಮೆರಿಕದ ಭೌಗೋಳಿಕ ವಿಸ್ತಾರವನ್ನು ದ್ವಿಗುಣಗೊಳಿಸಿದರು.

    ನೆಪೋಲಿಯನ್ ಬೊನಪಾರ್ತ್ ತನ್ನ ಸಮರ್ಥ ನಾಯಕತ್ವದಿಂದ ಫ್ರೆಂಚ್ ಸೇನೆಗೆ ಎಲ್ಲೆಲ್ಲೂ ವಿಜಯ ದೊರಕಿಸಿಕೊಡತೊಡಗಿದ್ದಲ್ಲದೇ ‘ಕಾಂಟಿನೆಂಟಲ್ ಸಿಸ್ಟಂ’ ಎಂಬ ನೀತಿಯಡಿಯಲ್ಲಿ ಬ್ರಿಟನ್ ಜತೆಗೆ ಆರ್ಥಿಕ ವ್ಯವಹಾರಗಳನ್ನು ನಡೆಸದಂತೆ ತನ್ನ ಮಿತ್ರದೇಶಗಳನ್ನು ಪ್ರತಿಬಂಧಿಸಿದ. ಪ್ರತಿಯಾಗಿ ಬ್ರಿಟನ್ ಫ್ರಾನ್ಸ್ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದ್ದಲ್ಲದೆ ಅಟ್ಲಾಂಟಿಕ್ ಸಾಗರದಲ್ಲಿ ಫ್ರಾನ್ಸ್ ಕಡೆಗೆ ಚಲಿಸುವ ವಿವಿಧ ದೇಶಗಳ ವ್ಯಾಪಾರಿ ಹಡಗುಗಳನ್ನು ತಡೆಯತೊಡಗಿತು. ಯುರೋಪಿನ ಯುದ್ಧಗಳಿಂದ ದೂರ ಉಳಿದು, ಎರಡೂ ಪಕ್ಷಗಳ ಜತೆ ಆರ್ಥಿಕ ವ್ಯವಹಾರಗಳನ್ನು ನಡೆಸಿಕೊಂಡು ನೆಮ್ಮದಿಯಾಗಿದ್ದ ಅಮೆರಿಕಕ್ಕೆ ಬ್ರಿಟನ್ ಮತ್ತು ಫ್ರಾನ್ಸ್ ಪರಸ್ಪರರ ವಿರುದ್ಧ ವಿಧಿಸಿದ ಈ ಆರ್ಥಿಕ ದಿಗ್ಬಂಧನಗಳು ಶಾಪವಾಗಿ ಪರಿಣಮಿಸಿದವು. ಆಕ್ರೋಶಗೊಂಡ ಕಾಂಗ್ರೆಸ್​ನಲ್ಲಿದ್ದ ಶಾಸಕ ‘ಹದ್ದು’ಗಳ ಒತ್ತಡಕ್ಕೆ ಸಿಲುಕಿದ ಅಧ್ಯಕ್ಷ ಜೇಮ್್ಸ ಮ್ಯಾಡಿಸನ್ ಯುರೋಪಿಯನ್ ಸಂಘರ್ಷದಲ್ಲಿ ಅಮೆರಿಕದ ಅಲಿಪ್ತತೆಯನ್ನು ಗೌರವಿಸಬೇಕೆಂದೂ; ಅದರಂತೆ, ಯಾವುದೇ ದೇಶದ ಜತೆಗೆ ಅಮೆರಿಕದ ಆರ್ಥಿಕ ಸಂಬಂಧಗಳನ್ನು ತಡೆಯುವ ಕೃತ್ಯವನ್ನು ನಿಲ್ಲಿಸಬೇಕೆಂದೂ ಬ್ರಿಟನ್​ಗೆ ಮನವಿ ಮಾಡಿಕೊಂಡರು. ದಿಗ್ಬಂಧನ ನೀತಿಯಿಂದ ಅಮೆರಿಕಕ್ಕೆ ವಿನಾಯಿತಿ ನೀಡುವ ನಿರ್ಣಯವನ್ನು ಬ್ರಿಟಿಷ್ ಸರ್ಕಾರವೇನೋ ತೆಗೆದುಕೊಂಡಿತು. ಆದರೆ ದೂರವಾಣಿಯಾಗಲೀ, ಇಮೇಲ್ ಆಗಲೀ ಇಲ್ಲದ ಆ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ನಿರ್ಣಯ ಅಟ್ಲಾಂಟಿಕ್ ಸಾಗರದಲ್ಲಿ ಕಾರ್ಯನಿರತವಾಗಿದ್ದ ಬ್ರಿಟಿಷ್ ಯುದ್ಧನೌಕೆಗಳಿಗಾಗಲೀ, ಅಮೆರಿಕದ ಸರ್ಕಾರಕ್ಕಾಗಲೀ ತಕ್ಷಣಕ್ಕೆ ತಲುಪುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ ತಮ್ಮ ಮನವಿಗೆ ಬ್ರಿಟನ್ ಸ್ಪಂದಿಸುತ್ತಿಲ್ಲವೆಂದು ತೀರ್ವನಿಸಿದ ಅಧ್ಯಕ್ಷ ಮ್ಯಾಡಿಸನ್ 1812ರಲ್ಲಿ ಯುದ್ಧ ಘೊಷಿಸಿಯೇಬಿಟ್ಟರು. ಅದರ ಪರಿಣಾಮ ಭೀಕರವಾಗಿತ್ತು.

    ಉತ್ತರದ ಕೆನಡಾದಿಂದ ಬ್ರಿಟಿಷ್ ಸೇನೆ ರಾಜಧಾನಿ ವಾಷಿಂಗ್​ಟನ್ ಡಿ.ಸಿ.ಗೇ ನುಗ್ಗಿತು. ಅಧ್ಯಕ್ಷ ಮ್ಯಾಡಿಸನ್ ರಾಜಧಾನಿಯನ್ನು ತೊರೆದು ಓಡಿಹೋದರು. ಸಮರೋನ್ಮತ್ತ ಬ್ರಿಟಿಷ್ ಸೇನೆ ಅಧ್ಯಕ್ಷರ ನಿವಾಸಕ್ಕೇ ಬೆಂಕಿ ಇಟ್ಟಿತು. ಕೆಂಪು ರಂಗಿನ ಆ ಸುಂದರ ಬೃಹತ್ ಕಟ್ಟಡ ಕಪು್ಪಗಟ್ಟಿಹೋಯಿತು! ನಾಲ್ಕು ವರ್ಷಗಳ ನಂತರ ‘ಘಂಟ್ ಒಪ್ಪಂದ’ದ ಮೂಲಕ ಯುದ್ಧ ಸಮಾಪ್ತಿಯಾಗುವ ಹೊತ್ತಿಗೆ ಬ್ರಿಟಿಷ್-ಫ್ರೆಂಚ್ ಕಾಳಗ ಕೊನೆಗೊಂಡು, ನೆಪೋಲಿಯನ್ ಎರಡು ಸಲ ಪರಾಭವಗೊಂಡು, ಬ್ರಿಟಿಷರಿಗೆ ಸೆರೆಸಿಕ್ಕಿ, ದೂರದ ಸೆಂಟ್ ಹೆಲಿನಾದಲ್ಲಿ ಕಾರಾಗೃಹ ಸೇರಿಯೂ ಆಗಿತ್ತು. ತಮ್ಮ ರಾಜಧಾನಿಯನ್ನು ಪುನಃ ಪಡೆದ ಅಮೆರಿಕನ್ನರು ಬ್ರಿಟಿಷ್ ಬೆಂಕಿಯಿಂದಾಗಿ ಕಪು್ಪಗಟ್ಟಿದ್ದ ತಮ್ಮ ಅಧ್ಯಕ್ಷರ ನಿವಾಸಕ್ಕೆ ಬಿಳಿಯ ಬಣ್ಣ ಬಳಿದರು. ಕೆಂಪು ಬಣ್ಣದ್ದಾಗಿದ್ದ ಅಧ್ಯಕ್ಷರ ನಿವಾಸ ‘ಶ್ವೇತಭವನ’ವಾದದ್ದು ಹೀಗೆ.

    ಮುಂದಿನ ಏಳು ವರ್ಷ ತೆಪ್ಪಗಿದ್ದ ಅಮೆರಿಕ ಮತ್ತೆ ಸದ್ದು ಮಾಡತೊಡಗಿದ್ದು 1823ರಲ್ಲಿ. ಕಾಲು ಶತಮಾನದವರೆಗೆ ಯುರೋಪ್ ಅಶಾಂತಿಯಲ್ಲಿ ಮುಳುಗಿದ್ದ ಅವಕಾಶವನ್ನು ಉಪಯೋಗಿಸಿಕೊಂಡು ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿದ್ದ ಸ್ಪಾ್ಯನಿಷ್ ಮತ್ತು ಪೋರ್ತಗೀಸ್ ವಸಾಹತುಗಳು ಸ್ವತಂತ್ರವಾಗಲು ನೋಡಿದವು. 1815ರಲ್ಲಿ ನೆಪೋಲಿಯಾನಿಕ್ ಯುದ್ಧಗಳು ಮುಗಿಯುವ ಹೊತ್ತಿಗೆ ಹಲವಾರು ವಸಾಹತುಗಳು ಸ್ವತಂತ್ರವಾಗಿಯೂಬಿಟ್ಟಿದ್ದವು. ನೆಪೋಲಿಯನ್​ನನ್ನು ಜೈಲಿಗಟ್ಟಿದ ಯುರೋಪಿಯನ್ ನಾಯಕರು ಹೊಸ ವ್ಯವಸ್ಥೆಯ ರೂಪರೇಷೆಗಳನ್ನು ನಿರ್ಧರಿಸಲು ‘ಕನ್ಸರ್ಟ್ ಆಫ್ ಯುರೋಪ್’ ಎಂಬ ಶಾಂತಿ ಮಾತುಕತೆಗಳ ಸರಣಿಯ ನ್ನಾರಂಭಿಸಿದರು. 1815-1822ರ ನಡುವೆ ವಿಯೆನ್ನಾ, ಆಯ್್ಕ ್ಸ- ಲಾ -ಶಾಪೆಲ್ (ಇಂದಿನ ಆಖ್ಹೆನ್), ಲೈಬಾಖ್ಹ್ (ಇಂದಿನ ಲುಬ್ಲಿಯಾನಾ) ಮತ್ತು ವೆರೋನಾಗಳಲ್ಲಿ ಮಾತುಕತೆ ನಡೆಸಿದರು. ಅಲ್ಲಿ ಅವರು ತೆಗೆದುಕೊಂಡ, ಅಮೆರಿಕ ಖಂಡಗಳಿಗೆ ಸಂಬಂಧಿಸಿದ ನಿರ್ಣಯದ ಪ್ರಕಾರ, ತಂತಮ್ಮ ವಸಾಹತುಗಳಲ್ಲಿನ ಸ್ವಾತಂತ್ರಾ್ಯಂದೋಲನ ಹತ್ತಿಕ್ಕಲೂ, ಈಗಾಗಲೇ ಕಳೆದುಕೊಂಡಿರುವ ವಸಾಹತು ಗಳನ್ನು ಮರಳಿ ಪಡೆಯಲೂ ಅಶಕ್ತ ಸ್ಪೇನ್ ಮತ್ತು ಪೋರ್ತಗಲ್​ಗಳಿಗೆ ಸಶಕ್ತ ಯುರೋಪಿಯನ್ ರಾಷ್ಟ್ರಗಳು ಸಹಕರಿಸಬೇಕೆಂದಾಗಿತ್ತು. ಇದನ್ನು ವಿರೋಧಿಸಿದ್ದು ಅಧ್ಯಕ್ಷ ಜೇಮ್್ಸ ಮನ್ರೋ. ಅಮೆರಿಕ ಖಂಡದಲ್ಲಿನ ವಸ್ತುಸ್ಥಿತಿಯನ್ನು ಬದಲಾಯಿಸಲು ಯುರೋಪಿಯನ್ ರಾಷ್ಟ್ರಗಳು ನಡೆಸುವ ಯಾವುದೇ ಕಾರ್ಯಾಚರಣೆಯನ್ನು ತನ್ನ ವಿರುದ್ಧದ ಕೃತ್ಯವೆಂದು ಅಮೆರಿಕ ಬಗೆಯುತ್ತದೆ ಎಂದು ಮನ್ರೋ 1823 ಡಿಸೆಂಬರ್ 2ರಂದು ಘೊಷಿಸಿದರು. ಅವರ ಪ್ರಕಾರ ಈಗಾಗಲೇ ಸ್ವತಂತ್ರವಾಗಿರುವ ದೇಶಗಳನ್ನು ಮತ್ತೆ ವಸಾಹತುಗಳನ್ನಾಗಿ ಮಾಡಕೂಡದೆಂದೂ, ಪ್ರತಿಯಾಗಿ ಇನ್ನೂ ವಸಾಹತುಗಳಾಗಿಯೇ ಉಳಿದಿರುವ ದೇಶಗಳಲ್ಲಿ ಯುರೋಪಿಯನ್ ರಾಷ್ಟ್ರಗಳ ಅಧಿಕಾರವನ್ನು ಅಮೆರಿಕ ವಿರೋಧಿಸುವುದಿಲ್ಲವೆಂದಾಗಿತ್ತು. ಹೀಗೆ ಉತ್ತರದಲ್ಲಿ ಮೆಕ್ಸಿಕೋದಿಂದ ಹಿಡಿದು ದಕ್ಷಿಣದಲ್ಲಿ ಚಿಲಿಯವರೆಗೆ ಇಪ್ಪತ್ತಕ್ಕೂ ಹೆಚ್ಚಿನ ದೇಶಗಳ ಸ್ವಾತಂತ್ರ್ಯದ ಪರವಾಗಿ ಅಮೆರಿಕ ನಿಂತಿತು. ‘ಅಮೆರಿಕನ್ನರಿಗಾಗಿ ಅಮೆರಿಕ’ ಎಂದು ಸರಳವಾಗಿಯೂ, ‘ಮನ್ರೋ ನೀತಿ’ ಎಂದು ವಿಶಿಷ್ಟವಾಗಿಯೂ ಇತಿಹಾಸದಲ್ಲಿ ಗುರುತಿಸಲ್ಪಡುವ ಈ ನೀತಿ ಅಟ್ಲಾಂಟಿಕ್ ಸಾಗರದಾಚೆಯ ಜಗತ್ತಿನಲ್ಲಿ ಅಮೆರಿಕ ತನ್ನ ಯಜಮಾನಿಕೆಯನ್ನು ಪ್ರತಿಷ್ಠಾಪಿಸುವ ಮೊದಲ ನಿರ್ಣಾಯಕ ಪ್ರಯತ್ನ.

    ಹೀಗೆ ‘ಹೊಸ ಪ್ರಪಂಚ’ದಲ್ಲಿ ತನ್ನ ಸರ್ವಶ್ರೇಷ್ಠತೆಯನ್ನು ಸ್ಥಾಪಿಸಿದ ಅಮೆರಿಕ 19ನೇ ಶತಮಾನ ಅಂತ್ಯವಾಗುತ್ತಿದ್ದಂತೇ ‘ಹಳೆಯ ಪ್ರಪಂಚ’ದಲ್ಲೂ ಶಕ್ತಿ ಪ್ರದರ್ಶನಕ್ಕೆ ಮುಂದಾಯಿತು. 1898ರಲ್ಲಿ ಕ್ಯೂಬದ ಜನತೆ ಸ್ಪಾನಿಷ್ ವಸಾಹತುಶಾಹಿ ಆಡಳಿತದ ವಿರುದ್ಧ ದಂಗೆಯೆದ್ದು ಸ್ವಾತಂತ್ರ್ಯದ ರಣಕಹಳೆ ಮೊಳಗಿಸಿದಾಗ ಕ್ಯೂಬನ್ನರ ಪರವಾಗಿ ಮಧ್ಯಪ್ರವೇಶಿಸಿ ಸೇನಾಕಾರ್ಯಾಚರಣೆಯಿಂದ ಆ ದ್ವೀಪವನ್ನು ಸ್ವತಂತ್ರಗೊಳಿಸಬೇಕೆಂಬ ಒತ್ತಡ ಅಧ್ಯಕ್ಷ ವಿಲಿಯಂ ಮೆಕಿನ್ಲೇ ಮೇಲೆ ಬಿತ್ತು. ಹವಾನಾ ಬಂದರಿನಲ್ಲಿದ್ದ ಅಮೆರಿಕನ್ ಯುದ್ಧನೌಕೆ ಮೇಲೆ ಸ್ಪಾ್ಯನಿಷ್ ಹಸ್ತಕರು ದಾಳಿಯೆಸಗಿ ನಾಶಪಡಿಸಿದ್ದನ್ನೇ ನೆಪವಾಗಿಸಿಕೊಂಡು ಸ್ಪೇನ್ ಮೇಲೆ ಯುದ್ಧ ಸಾರಿ ಕೆರಿಬಿಯನ್ ಮತ್ತು ಪೆಸಿಫಿಕ್ ರಣಾಂಗಣಗಳೆರಡರಲ್ಲೂ ಸ್ಪಾನಿಷ್ ನೌಕಾಪಡೆಯನ್ನು ಮಣಿಸಿದ ಅಮೆರಿಕ ಕ್ಯೂಬಾವನ್ನು ವಿಮೋಚನೆಗೊಳಿಸಿದ್ದಲ್ಲದೆ ಪ್ಯೂರ್ಟೇ ರಿಕೋ ದ್ವೀಪವನ್ನು ವಶಕ್ಕೆ ತೆಗೆದುಕೊಂಡು ಇಂದಿಗೂ ಅದನ್ನು ತನ್ನ ಸಾಗರೋತ್ತರ ಪ್ರದೇಶವೆಂದು ಪರಿಗಣಿಸುತ್ತಿದೆ. ಅಲ್ಲದೆ, ಪೂರ್ವದ ಫಿಲಿಪ್ಪೀನ್ಸ್ ದ್ವೀಪಗಳನ್ನು 48 ವರ್ಷಗಳ ಕಾಲ ವಸಾಹತುವಿನಂತೇ ಆಳಿ ತನ್ನ ವಸಾಹತುಶಾಹಿ ಬಯಕೆಯನ್ನು ತಣಿಸಿಕೊಂಡು 1946ರಲ್ಲಿ ಸ್ವಾತಂತ್ರ್ಯ ನೀಡಿತು.

    20ನೇ ಶತಮಾನ ಆರಂಭವಾಗುತ್ತಿದ್ದಂತೇ ಮಧ್ಯ ಅಮೆರಿಕವನ್ನು ತನ್ನ ಹಿತ್ತಲಿನಂತೆ ಪರಿಗಣಿಸುವ ನೀತಿಗೆ ಅಧ್ಯಕ್ಷ ಥಿಯೋಡೋರ್ ರೂಸ್​ವೆಲ್ಟ್ ಮುಂದಾದರು. ‘ಮೃದುವಾಗಿ ಮಾತಾಡಬೇಕು, ಜತೆಗೆ ಕಂಕುಳಲ್ಲೊಂದು ದೊಡ್ಡ ದೊಣ್ಣೆ ಇಟ್ಟುಕೊಂಡಿರಬೇಕು’ ಎಂದು ವಾದಿಸಿದ ಅವರ ನೀತಿ ‘ದೊಡ್ಡ ದೊಣ್ಣೆ ನೀತಿ’ ಎಂದೇ ಹೆಸರಾಗಿದೆ. ಈ ನೀತಿಯ ಪರಿಣಾಮವಾಗಿ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ, ಮುಖ್ಯವಾಗಿ ಮೆಕ್ಸಿಕೋದಲ್ಲಿ ಅಮೆರಿಕದ ಹಸ್ತಕ್ಷೇಪ ಅತಿಯೆನಿಸುವ ಮಟ್ಟಿಗೆ ಬೆಳೆಯಿತು. 110 ವರ್ಷಗಳ ಹಿಂದೆ ಮೆಕ್ಸಿಕೋದ 80ರ ವಯೋವೃದ್ಧ ಅಧ್ಯಕ್ಷ ಪೊರ್ಫೀರಿಯೋ ಡಯಾಸ್ ತನ್ನ ದೇಶದ ಯಾತನೆಯನ್ನು ವ್ಯಕ್ತಪಡಿಸಿದ್ದು ಹೀಗೆ: ‘ಬಡಪಾಯಿ ಮೆಕ್ಸಿಕೋ! ಅಮೆರಿಕ ಬಲು ಹತ್ತಿರ, ದೇವರಿಂದ ಬಲು ದೂರ!?’ ಪ್ರಥಮ ಮಹಾಯುದ್ಧದಲ್ಲಿ ಸೀಮಿತ ಪಾತ್ರ ವಹಿಸಿದ ಅಮೆರಿಕ ನಂತರದ ಶಾಂತಿ ಮಾತುಕತೆಗಳಲ್ಲಿ ಪ್ರಮುಖ ಪಾತ್ರ ವಹಿಸಲು ಪ್ರಯತ್ನಿಸಿತು. ಮತ್ತೊಂದು ಮಹಾಯುದ್ಧ ತಡೆಗಟ್ಟಲು ಅಧ್ಯಕ್ಷ ವುಡ್ರೋ ವಿಲ್ಸನ್ 14 ಸೂತ್ರಗಳನ್ನು ಮಂಡಿಸಿ ದರು. ದೇಶಗಳು ಹೀಗೇ ಮಾಡಬೇಕು, ಹೀಗೆ ಮಾಡಬಾರದು ಎಂದು ಕಟ್ಟುಪಾಡು ವಿಧಿಸುವ ವಿಲ್ಸನ್ ಸೂತ್ರಗಳಿಗೆ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಯುರೋಪಿನ ದೇಶಗಳಿಂದ ಬರಲಿಲ್ಲ. ಫ್ರೆಂಚ್ ಅಧ್ಯಕ್ಷ ಬೆಂಜಮಿನ್ ಕ್ಲೆಮೆನ್​ಸೋ ಅಂತೂ ‘ಯೆಹೋವ ದೇವರಂಥವನೇ ಕೇವಲ ಹತ್ತು ಕಟ್ಟಾಜ್ಞೆಗಳಿಂದ ತೃಪ್ತನಾದ, ಈಗ ಈ ವಿಲ್ಸನ್ ಮಹಾಶಯ ಹದಿನಾಲ್ಕನ್ನು ಹಿಡಿದುಕೊಂಡು ಬಂದಿದ್ದಾನೆ!’ ಅಂದುಬಿಟ್ಟರು.

    ಎರಡು ದಶಕಗಳ ನಂತರ ಪ್ರಪಂಚ ಮತ್ತೊಮ್ಮೆ ಭೀಕರ ಯುದ್ಧಕ್ಕೆ ಸಿಲುಕಿತು. ಜಪಾನ್​ನ ಹುಚ್ಚುತನದಿಂದಾಗಿ ಯುದ್ಧಕ್ಕೆ ಎಳೆಯಲ್ಪಟ್ಟ ಅಮೆರಿಕ ಮಿತ್ರದೇಶಗಳ ನಾಯಕತ್ವ ವಹಿಸಿ ಯುದ್ಧದಲ್ಲಿ ಜಯಗಳಿಸಿತು. 1945ರ ಆಗಸ್ಟ್​ನಲ್ಲಿ ಯುದ್ಧ ಮುಕ್ತಾಯವಾಗುವ ಹೊತ್ತಿಗೆ ಜಗತ್ತಿನ ನಾಯಕತ್ವ ಅಮೆರಿಕ ಕೈಗೆ ಬಂದಾಗಿತ್ತು. ಆಗ ಬಂದ ಆ ಜಗನ್ನಾಯಕನ ಸ್ಥಾನವನ್ನು ಅಮೆರಿಕ ಇನ್ನೂ ಬಿಟ್ಟುಕೊಟ್ಟಿಲ್ಲ. ಸವಾಲೆಸೆದ ಸೋವಿಯೆತ್ ಯೂನಿಯನ್ ಕುಸಿದು ಇತಿಹಾಸ ಸೇರಿದೆ. ಅದರ ಸ್ಥಾನದಲ್ಲೀಗ ಚೀನಾ ತಲೆಯೆತ್ತಿ ಅಮೆರಿಕಕ್ಕೆ ಸವಾಲೆಸೆಯುತ್ತಿದೆ. ಆದರೆ ದುರಂತವೆಂದರೆ ಅದು ಎಲ್ಲ ದೇಶಗಳ ಹಿತಾಸಕ್ತಿಗಳಿಗೆ ಧಕ್ಕೆಯೊಡ್ಡುತ್ತಿದೆ. ಪರಿಣಾಮವಾಗಿ ಅಮೆರಿಕಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಜಾಗತಿಕ ಬೆಂಬಲ ದೊರೆತಿದೆ. ಇದನ್ನು ಅಮೆರಿಕದ ಅಧ್ಯಕ್ಷ ಹೇಗೆ ಬಳಸಿಕೊಳ್ಳುತ್ತಾರೆಂದು, ಚೀನಾ ವಿರುದ್ಧ ಯಾವ ನೀತಿ ರೂಪಿಸುತ್ತಾರೆಂದು ಜಗತ್ತು ಎದುರುನೋಡುತ್ತಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts