More

    ಸವಾಲು ಕೊನೆಗೊಂಡಿಲ್ಲ; ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ

    ದೇಶದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ಕೊಂಚ ತಗ್ಗುತ್ತಿದೆ. ಕರ್ನಾಟಕದಲ್ಲೂ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿರುವುದು ಸಮಾಧಾನಕರ ಬೆಳವಣಿಗೆ. ಕಳೆದ ಹದಿನೇಳು ದಿನಗಳಿಂದ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಹನ್ನೊಂದು ದಿನಗಳಿಂದ ಹೊಸ ಪ್ರಕರಣಗಳಿಗಿಂತ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಮಂಗಳವಾರ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 1,96,487 ಹೊಸ ಪ್ರಕರಣಗಳು ದಾಖಲಾಗಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 3,26,850. ಏಪ್ರಿಲ್ 14ರ ನಂತರ ಇದೇ ಮೊದಲ ಬಾರಿಗೆ ದೈನಂದಿನ ಪ್ರಕರಣಗಳ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ದಾಖಲಾಗಿದೆ. ದೈನಂದಿನ ತಪಾಸಣೆ ಸಂಖ್ಯೆಯೂ ಸರಾಸರಿ 20 ಲಕ್ಷಕ್ಕೆ ಏರಿಕೆಯಾಗಿದೆ. ಈವರೆಗೆ 33 ಕೋಟಿಗೂ ಅಧಿಕ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಉತ್ತರ ಪ್ರದೇಶ ಹೆಚ್ಚು ಸೋಂಕಿತರಿರುವ ರಾಜ್ಯಗಳಾಗಿವೆ. ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಪ್ರಕರಣಗಳ ಸಂಖ್ಯೆ ತಗ್ಗುತ್ತಿದ್ದರೂ, ಮರಣ ಪ್ರಮಾಣ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ವಾಸ್ತವ. ಈಗಲೂ ದೈನಂದಿನ ಸಾವಿನ ಸಂಖ್ಯೆ 3 ಸಾವಿರದ ಗಡಿ ಮೀರುತ್ತಿದೆ.

    ಕೆಲವೇ ದಿನಗಳ ಹಿಂದೆ 24 ಗಂಟೆಗಳ ಅವಧಿಯಲ್ಲಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾದರೆ, ಮೃತರ ಸಂಖ್ಯೆ 4 ಸಾವಿರ ಮೀರಿತ್ತು. ಇದು ಭಾರಿ ಕಳವಳ, ಆತಂಕಕ್ಕೆ ಕಾರಣವಾಗಿತ್ತು. ಹಾಗಂತ ಪರಿಸ್ಥಿತಿ ತುಂಬ ಸುಧಾರಣೆಯಾಗಿದೆ ಎಂದೇನಲ್ಲ. ಹಲವು ರಾಜ್ಯಗಳಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಅಷ್ಟಕ್ಕೂ, ಕರ್ನಾಟಕ ಸೇರಿ ಬಹುತೇಕ ರಾಜ್ಯಗಳಲ್ಲಿ ಈಗ ಲಾಕ್​ಡೌನ್ ಅಥವಾ ಕಠಿಣ ನಿರ್ಬಂಧಗಳು ಜಾರಿಯಲ್ಲಿವೆ. ಈ ಅವಧಿಯಲ್ಲಿ ವೈದ್ಯಕೀಯ ವ್ಯವಸ್ಥೆ ಇನ್ನಷ್ಟು ಸನ್ನದ್ಧಗೊಳಿಸಲು ಸಮಯ ದೊರೆತಿದೆ. ಮುಖ್ಯವಾಗಿ, ಜನಸಂಚಾರಕ್ಕೆ ಕಡಿವಾಣ ಬಿದ್ದಿರುವುದರಿಂದ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ಕಡಿಮೆ ಆಗಿರಬಹುದು.

    ಲಾಕ್​ಡೌನ್ ದೀರ್ಘಾವಧಿ ಮುಂದುವರಿಸಲು ಸಾಧ್ಯವಿಲ್ಲ ಎಂಬುದು ಸರಳ ಸತ್ಯ. ಲಾಕ್​ಡೌನ್ ತೆರವುಗೊಂಡ ಬಳಿಕ ಜನಸಂಚಾರ ಸಾಮಾನ್ಯವಾಗುತ್ತದೆ, ವ್ಯಾಪಾರ-ವಹಿವಾಟಗಳು ಮತ್ತೆ ಆರಂಭವಾಗುತ್ತವೆ. ಅಂಥ ಸಂದರ್ಭದಲ್ಲಿ ಕರೊನಾ ಪರಿಸ್ಥಿತಿ ಮೊದಲಿನಂತಾದರೆ ಎಂಬ ಚಿಂತೆಯೂ ಕಾಡುತ್ತಿದೆ. ಕರೊನಾ ಎರಡನೇ ಅಲೆಯ ಸವಾಲು ಇನ್ನೂ ಗಂಭೀರ ಸ್ವರೂಪದಲ್ಲೇ ಇದೆ ಎಂಬುದನ್ನು ಮರೆಯುವಂತಿಲ್ಲ. ಈಗಲೂ ಎಷ್ಟೋ ಕಡೆ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯಕೀಯ ಆಮ್ಲಜನಕ, ಸೂಕ್ತ ಔಷಧದ ಕೊರತೆ ಕಂಡುಬರುತ್ತಿದೆ.

    ಜೂನ್ ಅಂತ್ಯದವೇಳೆಗೆ ಎರಡನೇ ಅಲೆ ತಗ್ಗಬಹುದು ಎಂಬುದು ವೈದ್ಯಕೀಯ ತಜ್ಞರ ಅಂದಾಜು. ಆದ್ದರಿಂದ, ಇನ್ನಷ್ಟು ಪರಿಣಾಮಕಾರಿಯಾಗಿ ಕರೊನಾ ವಿರುದ್ಧ ಹೋರಾಟ ಮುಂದುವರಿಸಬೇಕಿದೆ ಮತ್ತು ಈ ಹೊತ್ತಲ್ಲಿ ಯಾವುದೇ ನಿರ್ಲಕ್ಷ್ಯ ನುಸುಳದಂತೆ ಎಚ್ಚರಿಕೆ ವಹಿಸಬೇಕಿದೆ. ಸುರಕ್ಷತಾ ನಿಯಮಗಳನ್ನು ತಪ್ಪದೆ ಪಾಲಿಸುವುದು, ಲಸಿಕೆ ಹಾಕಿಸಿಕೊಳ್ಳುವುದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಜೀವನಶೈಲಿ ಹೊಂದುವುದು ಈಗಿನ ಅಗತ್ಯ. ಮುಂಬರುವ ದಿನಗಳು ಮಹತ್ವದ್ದಾಗಿದ್ದು, ಕರೊನಾ ಕಡಿಮೆಯಾಗುತ್ತಿದೆ ಎಂಬ ನಿರ್ಲಕ್ಷ್ಯ ಬೇಡವೇ ಬೇಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts