More

    ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

    ಬೇರು-ಚಿಗುರು, ಒಣ ಎಲೆ-ಹಸಿರೆಲೆ, ಕಾಯಿ-ಹಣ್ಣು ಎಲ್ಲವನ್ನೂ ಏಕಕಾಲಕ್ಕೆ ಹೊಂದಿರುವ ಮರವು ನಮಗೆ ಹೊಂದಾಣಿಕೆ ಮತ್ತು ಸಮತೋಲನದ ವಿಷಯದಲ್ಲಿ ಆದರ್ಶವಾಗಬಲ್ಲದು. ಆದರೆ ತಲೆಯೆತ್ತಿ ಮರವನ್ನು ನೋಡುವ ಮತ್ತು ಮುಖ ಕೆಳಗೆ ಮಾಡಿ ಬೇರನ್ನು ಹುಡುಕುವ ವ್ಯವಧಾನ ಇರಬೇಕಷ್ಟೆ.

    ‘ನೀನಾ? ನಾನಾ?’- ಇಂಥದೊಂದು ಪ್ರಶ್ನೆ ಪುರಾಣೇತಿಹಾಸ ಕಾಲದಿಂದ ಹಿಡಿದು ವರ್ತಮಾನದವರೆಗೂ ದೇಶದೇಶಗಳನ್ನು ಕಾಡುತ್ತಲೇ ಬಂದಿದೆ. ಅಧಿಕಾರದ ಆಸೆ, ವ್ಯಕ್ತಿಗತ ಮಹತ್ವಾಕಾಂಕ್ಷೆ, ಪರಿಸ್ಥಿತಿಯ ಒತ್ತಡ, ಅಹಂಗಳ ತಾಕಲಾಟ ಮುಂತಾದ ಕಾರಣಗಳು ಇದಕ್ಕಿವೆ. ಇದರಿಂದಾಗಿ ಅರಸೊತ್ತಿಗೆಗಳು ಉರುಳಿವೆ; ಎಷ್ಟೋ ಮಂದಿ ರಾಜಕೀಯ ನಾಯಕರು ಅಧಿಕಾರ ಕಳೆದುಕೊಂಡಿದ್ದಾರೆ. ಇದರ ಜತೆಗೆ, ಹಿರಿಯ-ಕಿರಿಯ ಎಂಬ ಭೇದವೂ ಸೇರಿದರೆ ಕಿಡಿಗೆ ಬೆಂಕಿ ಹಚ್ಚಿದಂತೆ.

    ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗುಕೆಲ ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಈಗ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಬಂಡಾಯದ ಕಾರಣಕ್ಕೆ ನಡೆಯುತ್ತಿರುವ ರಾಜಕೀಯ ಕಸರತ್ತುಗಳನ್ನು ಕಂಡಾಗ ಹೀಗನಿಸಿತು. ಒಂದು ಕಾಲದಲ್ಲಿ ಈ ಇಬ್ಬರೂ ಯುವನಾಯಕರು ರಾಹುಲ್ ಗಾಂಧಿಯವರ ಪರಮಾಪ್ತರು. ಆಗ ಯುವತಂಡ ಕಟ್ಟಲು ಹೊರಟ ರಾಹುಲ್, ಈ ಆಪ್ತಬಳಗದ ಮಾತಿಗೆ ಕಿವಿಗೊಡುತ್ತಿದ್ದರು. ಆ ಸಂದರ್ಭದಲ್ಲಿ ಹಿರಿಯ ನಾಯಕರನೇಕರಿಗೆ ಪಕ್ಷದ ವ್ಯವಹಾರದಲ್ಲಿ ಅಷ್ಟು ಕಿಮ್ಮತ್ತು ಇರಲಿಲ್ಲ. ಸಹಜವಾಗಿಯೇ ಅವರಿಗೆ ಕಸಿವಿಸಿ. ಆದರೆ ಕಾಲ ಒಂದೇ ರೀತಿ ಇರುವುದಿಲ್ಲವಲ್ಲ. ಮಧ್ಯಪ್ರದೇಶದಲ್ಲಿ ಕಮಲನಾಥ್ ಮತ್ತು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್​ಗೆ ಅಧಿಕಾರದ ಕಾಲ ಒದಗಿಬಂತು; ಮುಖ್ಯಮಂತ್ರಿ ಹುದ್ದೆಗೇರಿದರು. ಜ್ಯೋತಿರಾದಿತ್ಯ ಸಿಂಧಿಯಾಗೆ ತನಗೆ ಈ ಹುದ್ದೆ ಸಿಗಬೇಕಿತ್ತು ಎಂಬ ಆಸೆ. ಜತೆಗೆ ತನ್ನ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂಬ ಮುನಿಸು. ಈ ಅಸಮಾಧಾನ ಒಳಗೊಳಗೇ ಕುದಿಯುತ್ತ ಕೊನೆಗೊಮ್ಮೆ ಸ್ಪೋಟಗೊಂಡು ಸರ್ಕಾರವನ್ನೇ ಆಪೋಶನ ಪಡೆಯಿತು. ಸಿಂಧಿಯಾ ಬಿಜೆಪಿ ಸೇರಿ ರಾಜ್ಯಸಭಾ ಸದಸ್ಯರಾದರು. ಇತ್ತ ರಾಜಸ್ಥಾನದಲ್ಲೂ ಸಚಿನ್ ಪೈಲಟ್​ಗೆ ಇಂಥದೇ ಬಯಕೆ.

    ಬರೀ ಹಿರಿಯರೇ ಅಧಿಕಾರದ ಉನ್ನತ ಸ್ಥಾನಗಳಲ್ಲಿ ಕುಳಿತರೆ ತಮಗೆ ಅವಕಾಶ ಸಿಗುವುದು ಯಾವಾಗ? ಅಷ್ಟಕ್ಕೂ ಪಕ್ಷದ ಗೆಲುವಿನಲ್ಲಿ ತಮದೂ ಮಹತ್ವದ ಪಾತ್ರವಿದೆಯಲ್ಲವೆ ಎಂಬುದು ಕಿರಿಯರ ಭಾವನೆ. ‘ನಾವು ಪಕ್ಷಕ್ಕಾಗಿ ಇಷ್ಟು ವರ್ಷ ದುಡಿದಿದ್ದೇವೆ. ಈಗ ಅಧಿಕಾರ ಬಂದಾಗ ನಾವು ಬೇಡ ಎಂದರೆ ಹೇಗೆ? ಕಿರಿಯರಿಗೆ ಮುಂದೆ ಅವಕಾಶಗಳಿರುತ್ತವೆ. ನಮಗೆ ಹಾಗಲ್ಲ’ ಎಂಬುದು ಹಿರಿಯರ ವಾದ. ಇಲ್ಲಿ ಯಾರು ಸರಿ? ಯಾರದು ತಪು್ಪ? ಒಂದು ಲೆಕ್ಕದಲ್ಲಿ ಇಬ್ಬರೂ ಸರಿ. ಹೀಗಾಗಿಯೇ ಪೀಕಲಾಟ ಎದುರಾಗುವುದು. ‘ಯುವಕರಿಗೆ ಅಧಿಕಾರ ನಡೆಸುವ ಅವಕಾಶ ಸಿಗದಿದ್ದರೆ ಅನುಭವ ಬರುವುದಾದರೂ ಹೇಗೆ? ರಾಜಕೀಯಕ್ಕೆ ಹೊಸರಕ್ತ ಬೇಕಲ್ಲವೆ? ಹೊಸ ಪೀಳಿಗೆಯ ಆಶೋತ್ತರಗಳನ್ನು ನಾವು ಸರಿಯಾಗಿ ಗ್ರಹಿಸಿ ಅದರಂತೆ ನಡೆಯಬಲ್ಲೆವು’ ಎಂಬ ಯುವ ನಾಯಕರ ವಾದವನ್ನು ಅಲ್ಲಗಳೆಯಲಾಗದು. ಹಾಗಂತ ಹಿರಿಯರ ವಾದವೂ ಸರಿಯೇ. ಅದರಲ್ಲೂ, ರಾಜಕಾರಣಿಗಳಿಗೆ ಗರಿಷ್ಠ ವಯೋಮಿತಿ ನಿಗದಿಯಾಗಬೇಕೆನ್ನುವ ಚರ್ಚೆಗಳು ಸಹ ಚಾಲ್ತಿಯಲ್ಲಿರುವಾಗ ರಾಜಕೀಯ ಜೀವನದ ಸಂಧ್ಯೆಯಲ್ಲಿರುವಾಗ ಅಧಿಕಾರ ಸಿಗದಿದ್ದರೆ ಏನುಪಯೋಗ ಎಂಬ ಭಾವನೆಯನ್ನು ಸಾರಾಸಗಟಾಗಿ ತಳ್ಳಿಹಾಕಲಾಗದು.

    ಈ ಹಿರಿ-ಕಿರಿ ಮೇಲಾಟ, ವಾದವಿವಾದ ಇಂದುನಿನ್ನೆಯದೇನಲ್ಲ ಬಿಡಿ. ಮಹಾಭಾರತ ಯುದ್ಧ ಸಂದರ್ಭದಲ್ಲೂ ಇದಕ್ಕೆ ನಿದರ್ಶನ ದೊರೆಯುತ್ತದೆ. ಪಾಂಡವರು ಮತ್ತು ಕೌರವರ ಸೇನೆಗಳು ಸಮರ ಸನ್ನದ್ಧವಾಗಿವೆ. ಪಾಂಡವರ ಏಳು ಅಕ್ಷೌಹಿಣೀ ಸೇನೆಗೆ ಒಂದೊಂದು ಅಕ್ಷೌಹಿಣಿಗೆ ಒಬ್ಬರಂತೆ ಏಳು ಮಂದಿ ಅಕ್ಷೌಹಿಣಿಪತಿಗಳಾದರು. ಅವರೆಂದರೆ-ದ್ರುಪದ, ವಿರಾಟ, ಶನಿ, ಧೃಷ್ಟದ್ಯುಮ್ನ, ಧೃಷ್ಟಕೇತು, ಶಿಖಂಡಿ, ಮತ್ತು ಸಹದೇವ. ಧೃಷ್ಟದ್ಯಮ್ನನು ಪ್ರಧಾನ ಸೇನಾಧಿಪತಿಯಾದನು. ಅತ್ತ, ಕೌರವರ ಕಡೆಯಲ್ಲಿ ಹನ್ನೊಂದು ಅಕ್ಷೌಹಿಣೀ ಸೇನೆಯಿದ್ದು, ಪ್ರತಿ ಅಕ್ಷೌಹಿಣಿಗೂ ಒಬ್ಬರಂತೆ ಹನ್ನೊಂದು ಮಂದಿ ಅಕ್ಷೌಹಿಣಿಪತಿಗಳಾದರು. ಅವರೆಂದರೆ-ಕೃಪ, ದ್ರೋಣ, ಶಲ್ಯ, ಜಯದ್ರಥ, ಸುದಕ್ಷಿಣ, ಕೃತವರ್ಮ, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಶಕುನಿ ಮತ್ತು ಬಾಹ್ನೀಕ. ಭೀಷ್ಮನು ಪ್ರಧಾನ ಸೇನಾಧಿಪತಿಯಾಗಿ ನಿಯುಕ್ತನಾದನು. ದುರ್ಯೋಧನನಲ್ಲಿ ಭರವಸೆ ತುಂಬುವ ಉದ್ದೇಶದಿಂದ ಭೀಷ್ಮನು, ‘ನಮ್ಮ ಯೋಧರಿಂದ ತಕ್ಕರೀತಿಯಲ್ಲಿ ಕೆಲಸ ತೆಗೆದುಕೊಂಡು, ಬಗೆ ಬಗೆ ವ್ಯೂಹಗಳನ್ನು ರಚಿಸಿ ಯುದ್ಧಗೈಯುತ್ತೇನೆ. ನೀನು ಚಿಂತಿಸಬೇಡ, ಕಳವಳಪಡಬೇಡ’ ಎಂದು ಹೇಳಿದ. ಆಗ ದುರ್ಯೋಧನನು, ‘ಸೇನಾಧಿಪತಿಯಾಗಿ ನೀನು ಮತ್ತು ನಮ್ಮ ಪಕ್ಷದಲ್ಲಿ ದ್ರೋಣರಂಥವರು ಇರುವಾಗ ಹೇಳುವುದೇನಿದೆ? ನಮ್ಮ ಪಕ್ಷ ಹಾಗೂ ಶತ್ರುಪಕ್ಷದಲ್ಲಿನ ರಥಿಕರು ಮತ್ತು ಅತಿರಥರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಅಂಥವರ ಹೆಸರುಗಳನ್ನು ಹೇಳುವೆಯಾ?’ ಎಂದು ಬಿನ್ನವಿಸುತ್ತಾನೆ. ಆಗ ಭೀಷ್ಮನು ಅಂಥವರ ಯಾದಿಯನ್ನು ಹೇಳಿದ. ಆದರೆ ಅದರಲ್ಲಿ ಕರ್ಣನ ಹೆಸರೇ ಇರಲಿಲ್ಲ! ‘ಕರ್ಣನು ಸಹಜವಾದ ಕವಚಕುಂಡಲಗಳನ್ನು ಕಳೆದುಕೊಂಡಿದ್ದು, ಪರಶುರಾಮನ ಶಾಪದಿಂದ ಆಯುಧಗಳ ಬಲವನ್ನೂ ಕಳೆದುಕೊಂಡು ದುರ್ಬಲನೂ ಅಸಹಾಯಕನೂ ಆಗಿದ್ದಾನೆ. ನನ್ನ ಪ್ರಕಾರ ಕರ್ಣನು ಪೂರ್ಣರಥನಲ್ಲ, ಅತಿರಥನೂ ಅಲ್ಲ’ ಎಂದು ಭೀಷ್ಮ ಹೇಳುತ್ತಾನೆ. ಈ ಮಾತನ್ನು ದ್ರೋಣನೂ ಅನುಮೋದಿಸುತ್ತಾನೆ. ಮಹಾಶೂರ ಎನಿಸಿಕೊಂಡು, ಕೌರವನ ಅಂತರಂಗದ ಗೆಳೆಯನಾಗಿರುವ ಕರ್ಣ ಇಂಥ ಅವಮಾನವನ್ನು ಸಹಿಸಿಯಾನೆ? ಸಿಡಿದೇಳುತ್ತಾನೆ.

    ‘ಪಿತಾಮಹ, ನಾನು ನಿದೋಷಿಯಾದರೂ ನನ್ನನ್ನು ವಿನಾಕಾರಣ ಪದೇಪದೆ ದೂಷಿಸಿಕೊಂಡೇ ಬರುತ್ತಿದ್ದೀಯೆ. ಆತ್ಮೀಯ ಗೆಳೆಯ ದುರ್ಯೋಧನನ ಸಲುವಾಗಿ ನಾನು ಇದನ್ನೆಲ್ಲ ಸಹಿಸಿಕೊಂಡು ಬಂದಿದ್ದೇನೆ. ಕ್ಷತ್ರಿಯನ ಮಹಾರಥಿತ್ವವು ವಯಸ್ಸು, ನರೆಗೂದಲು, ಐಶ್ವರ್ಯ ಇವುಗಳಿಂದ ಬರುವುದಿಲ್ಲ. ಅದು ಬಲದಿಂದ ಬರುತ್ತದೆ’ ಎಂದು ತಿರುಗೇಟು ನೀಡುತ್ತಾನೆ. ಭೀಷ್ಮ ಮತ್ತು ಕರ್ಣರ ನಡುವೆ ಮೊದಲಿಂದಲೂ ಇದ್ದ ಭಿನ್ನಮತ ಕುರುಕ್ಷೇತ್ರ ಸಂದರ್ಭದಲ್ಲಿ ಭುಗಿಲೇಳುತ್ತದೆ.

    ಹಿರಿಯರು ಮತ್ತು ಕಿರಿಯರ ಇಂಥ ಭಿನ್ನಮತ ಯಾವಾಗಲೂ ಇದ್ದದ್ದೇ ಎಂಬುದಕ್ಕೆ ಈ ಉದಾಹರಣೆ ಕೊಡಬೇಕಾಯಿತು. ಹಾಗಾದರೆ ಇದಕ್ಕೆ ಪರಿಹಾರವಿಲ್ಲವೆ? ಮಹಾಭಾರತದಲ್ಲಿಯೇ ಇದಕ್ಕೊಂದು ಹೊಳಹು ಇದೆ. ಜೂಜಿನಲ್ಲಿ ಸೋತ ಪಾಂಡವರು ಅರಣ್ಯವಾಸದಲ್ಲಿರುವಾಗ ನಡೆದ ಯಕ್ಷಪ್ರಶ್ನೆ ಪ್ರಸಂಗ ಬಹುಪರಿಚಿತ. ಅಲ್ಲಿ ಯಕ್ಷನ ಪ್ರಶ್ನೆಗಳಿಗೆ ಧರ್ಮರಾಜನು ಸಮರ್ಥವಾಗಿ ಉತ್ತರಿಸುತ್ತಾನೆ (ಆ ಉತ್ತರಗಳಲ್ಲಿ ಬಹುತೇಕವು ಇಂದಿಗೂ ನಮಗೆ ಬದುಕಿನ ತೋರುಗಂಬಗಳಾಗಿ ಉಳಿದಿವೆಯೆಂಬುದು ಅದರ ಗಟ್ಟಿತನ, ಮೌಲ್ಯಕ್ಕೆ ಸಾಕ್ಷಿ). ಒಂದು ಹಂತದಲ್ಲಿ ಯಕ್ಷನು, ‘ನಿನ್ನ ತಮ್ಮಂದಿರಲ್ಲಿ ಯಾರನ್ನು ಬದುಕಿಸಲಿ?’ ಎಂದು ಕೇಳಿದ. ಧರ್ಮರಾಜ ನಕುಲನ ಹೆಸರು ಹೇಳಿದ. ‘ಭೀಮ ನಿನಗೆ ಬಹು ಪ್ರೀತಿಪಾತ್ರ. ಅರ್ಜುನನೋ ನಿಮಗೆಲ್ಲ ದಿಕ್ಕು. ಇಂತಿರುವಾಗ ಮಲತಾಯಿಯ ಮಗನಾದ ನಕುಲ ಬದುಕಲಿ ಎನ್ನುತ್ತೀಯಲ್ಲ. ಏಕೆ’ ಎಂದು ಯಕ್ಷ ಕೇಳುತ್ತಾನೆ. ಆಗ ಧರ್ಮರಾಜ, ‘ನಾನು ಧರ್ಮಶೀಲನಾದ ರಾಜನೆಂದು ಜನರು ಭಾವಿಸಿದ್ದಾರೆ. ಆ ಧರ್ಮಮಾರ್ಗದಿಂದ ನಾನು ಕದಲಲಾರೆ. ನನಗೆ ಕುಂತಿ ಹೇಗೋ ಮಾದ್ರಿಯೂ ಹಾಗೆಯೇ. ಅವರಲ್ಲಿ ನಾನು ಭೇದವೆಣಿಸುವುದಿಲ್ಲ. ಇಬ್ಬರನ್ನೂ ಸಮಾನವಾಗಿ ಕಾಣಬೇಕೆಂಬುದು ನನ್ನ ಭಾವನೆ’ ಎಂದು ಹೇಳಿದ. ಧರ್ಮಜನಿಗೆ ಅರ್ಥಕಾಮಕ್ಕಿಂತಲೂ ದಯಾಶೀಲತೆಯೇ ದೊಡ್ಡದು ಎಂಬುದನ್ನು ಅರಿತ ಯಕ್ಷನು, ಎಲ್ಲ ಪಾಂಡವರನ್ನೂ ಬದುಕಿಸಿದ. (ಅಂದಹಾಗೆ ಧರ್ಮರಾಜನ ತಂದೆಯಾದ ಧರ್ಮನೇ ಹಾಗೆ ಯಕ್ಷನ ರೂಪದಲ್ಲಿ ಬಂದಿರುತ್ತಾನೆ). ಇಲ್ಲಿ ನಾವು ಗಮನಿಸಬೇಕಾದುದು ಧರ್ಮರಾಜನ ಸಮತೋಲನದ ನಡೆ. ಬಯಸಿದ್ದರೆ ಆತ ಕುಂತಿಯ ಮಕ್ಕಳನ್ನು ಮಾತ್ರ ಬದುಕಿಸಿಕೊಳ್ಳಬಹುದಿತ್ತು. ಆದರೆ ಹಾಗೆಮಾಡದೆ, ಸಮದರ್ಶಿ ಭಾವವನ್ನು ಪ್ರದರ್ಶಿಸಿದ. ಅದಕ್ಕೆಂದೆ ಆತ ಧರ್ಮರಾಜ. ಇಂಥದೊಂದು ‘ಸುವರ್ಣ ಮಧ್ಯಮಮಾರ್ಗ’ದ ಆದರ್ಶ ಎಲ್ಲರದಾದರೆ, ಬದುಕು ಸುಲಲಿತವಾದೀತು.

    ಕೆಲವೊಮ್ಮೆ ಹಿರಿಯರಿದ್ದರೂ ಕಿರಿಯರಿಂದ ಅಚಾತುರ್ಯ ನಡೆಯುವುದುಂಟು. ದ್ರೌಪದಿ ಮಾನಭಂಗ ಪ್ರಸಂಗವೇ ಇದಕ್ಕೆ ಉದಾಹರಣೆ. ಆಗ ರಾಜಸಭೆಯಲ್ಲಿ ಭೀಷ್ಮ, ದ್ರೋಣ ಮುಂತಾದ ಎಲ್ಲ ಹಿರಿಯರೂ ಇದ್ದರು. ಅನ್ನದ ಋಣವೋ ಮತ್ತೊಂದೋ ಅಂತೂ ಇವರಾರೂ ಮಾತಾಡಲಿಲ್ಲ. ಇನ್ನು ಹಲವೊಮ್ಮೆ ಅನುಭವ, ವಿವೇಕವೇ ಕೈಹಿಡಿಯುತ್ತದೆ. ಅಟಲ್ ಬಿಹಾರಿ ವಾಜಪೇಯಿಯಂತಹ ಅನುಭವಿ, ವಿವೇಕಿ ರಾಜಕಾರಣಿ 20ಕ್ಕೂ ಅಧಿಕ ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ನಿಭಾಯಿಸಿದರು. ಅದೇ ಅನನುಭವಿ ನಾಯಕನಿಗೆ ಇದು ಸಾಧ್ಯವಿತ್ತೆ? ರಾಜೀವ್ ಗಾಂಧಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಅನೇಕ ಹೊಸ ಪರಿಕಲ್ಪನೆಗಳನ್ನು ತಲೆಯಲ್ಲಿ ತುಂಬಿಕೊಂಡಿದ್ದರು; ಸಹಜವಾಗಿಯೇ ಅವರಲ್ಲಿ ಹುಮ್ಮಸ್ಸಿತ್ತು, ತುಡಿತವಿತ್ತು. ಆದರೆ ಅವುಗಳಲ್ಲಿ ಎಷ್ಟು ಕಾರ್ಯಗತವಾದವು ಎಂಬುದು ಬೇರೆ ಚರ್ಚೆ. ರಾಜಕೀಯದಲ್ಲಿ ಕೆಲವೊಮ್ಮೆ ಅರ್ಹತೆ, ಬೆಂಬಲ ಎಲ್ಲವೂ ಇದ್ದರೂ ಅಧಿಕಾರಸ್ಥಾನ ಒಲಿದುಬಿಡುತ್ತದೆ ಎಂಬ ಖಚಿತತೆಯಿಲ್ಲ. ಆಡ್ವಾಣಿಗೆ ಪ್ರಧಾನಿ ಹುದ್ದೆ ಮರೀಚಿಕೆಯಾಗಿಯೇ ಉಳಿದಿಲ್ಲವೆ? ಇನ್ನು ಕೆಲವರಿಗೆ ಅನಿರೀಕ್ಷಿತವಾಗಿ ಉನ್ನತ ಸ್ಥಾನ ಒಲಿಯುತ್ತದೆ. ರಾಜಕೀಯ ಸನ್ನಿವೇಶದ ಕಾರಣದಿಂದಾಗಿ ದೇವೇಗೌಡರಿಗೆ ಪ್ರಧಾನಿ ಹುದ್ದೆಯೇರುವ ಭಾಗ್ಯ ಒದಗಿತು; ಚಂದ್ರಶೇಖರ್​ಗೆ ಕೂಡ ಹಾಗೇ. ಇನ್ನು, ಅಸ್ಸಾಂನ ಪ್ರಫುಲ್ಲ ಕುಮಾರ ಮಹಂತ, ಉತ್ತರ ಪ್ರದೇಶದ ಅಖಿಲೇಶ್ ಯಾದವ್, ಮಾಯಾವತಿ, ಯೋಗಿ ಆದಿತ್ಯನಾಥ, ದೆಹಲಿಯ ಅರವಿಂದ ಕೇಜ್ರಿವಾಲ್, ಮಹಾರಾಷ್ಟ್ರದ ದೇವೇಂದ್ರ ಫಡ್ನವಿಸ್, ಗೋವಾದ ಪ್ರಮೋದ ಸಾವಂತ್, ಅರುಣಾಚಲದ ಪೆಮಾ ಖಂಡು, ಆಂಧ್ರದ ಜಗನ್ ಮೋಹನ ರೆಡ್ಡಿ ಮುಂತಾದವರಿಗೆ ಐವತ್ತರ ಒಳಗೇ ಸಿಎಂ ಪಟ್ಟ ದಕ್ಕಿತು.

    ಹಿರಿಯರಿಗೆ, ವಯೋವೃದ್ಧರಿಗೆ, ನಾನಾ ರಂಗಗಳಲ್ಲಿ ಸಾಧನೆಗೈದವರಿಗೆ ಕಾನೂನು ರಚನೆ ಅವಕಾಶ ಸಿಗಬೇಕು ಮತ್ತು ಇತರರಿಗೆ ಮಾರ್ಗದರ್ಶನ ಸಿಗಬೇಕು ಎಂಬ ಉದ್ದೇಶದಿಂದಲೇ ಮೇಲ್ಮನೆಯ ಪರಿಕಲ್ಪನೆ ನಮ್ಮಲ್ಲಿದೆ. ಕೇಂದ್ರದಲ್ಲಿ ರಾಜ್ಯಸಭೆ ಇದ್ದರೆ, ರಾಜ್ಯಗಳಲ್ಲಿ ವಿಧಾನಪರಿಷತ್ ಇದೆ. ಆದರೆ ಈಚಿನ ವರ್ಷಗಳಲ್ಲಿ ಈ ಆಶಯ, ಆದರ್ಶ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎಂಬುದು ಬೇರೆ ವಿಚಾರ.

    ಸದನ ಯಾವುದೇ ಇರಲಿ, ಹಿರಿಯರು ಮತ್ತು ಕಿರಿಯರು ಹೊಂದಾಣಿಕೆಯಿಂದ, ಸಾರ್ವಜನಿಕ ಒಳಿತಿಗಾಗಿ ಸಾಮರಸ್ಯದಿಂದ ನಡೆದರೆ ಅಲ್ಲಿ ನೆಮ್ಮದಿ ಸಾಧ್ಯ. ಕಿರಿಯರ ಉತ್ಸಾಹ ಮತ್ತು ಹಿರಿಯರ ಅನುಭವ ಒಟ್ಟಿಗೆ ಸೇರಿದರೆ ಅದ್ಭುತವನ್ನೇ ಸಾಧಿಸಬಹುದು. ಆದರೆ, ಇದು ಸಾಧಿತವಾಗಬೇಕಿದ್ದರೆ ತ್ಯಾಗ, ರಾಜೀ ಮನೋಭಾವ, ಹೃದಯವೈಶಾಲ್ಯ, ಕೊಡುಕೊಳ್ಳುವಿಕೆ ಎಲ್ಲವೂ ಬೇಕಾಗುತ್ತವೆ. ನಾಲ್ಕು ದಿನಗಳ ಬಾಳಿನಲ್ಲಿ ಹೊಂದಾಣಿಕೆಯೆಂಬುದು ಅಷ್ಟು ಸುಲಭವೇ?

    ಈ ಮಾತು ಮಾನವನ ವ್ಯಕ್ತಿಗತ ಜೀವನಕ್ಕೂ ಅನ್ವಯ. ತಂದೆ ಮನೆಯ ಯಜಮಾನಿಕೆಯನ್ನು ಮಗನಿಗೆ ವಹಿಸುವಾಗ, ತಾಯಿ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ… ಎಲ್ಲದರಲ್ಲಿಯೂ ಹಿರಿಯರಿಂದ ಕಿರಿಯರಿಗೆ ಅನುಭವಧಾರೆ ಹರಿಯಬೇಕು.

    ಬೇರು-ಚಿಗುರು, ಒಣ ಎಲೆ-ಹಸಿರೆಲೆ, ಕಾಯಿ-ಹಣ್ಣು ಎಲ್ಲವನ್ನೂ ಏಕಕಾಲಕ್ಕೆ ಹೊಂದಿರುವ ಮರವು ನಮಗೆ ಹೊಂದಾಣಿಕೆ ಮತ್ತು ಸಮತೋಲನದ ವಿಷಯದಲ್ಲಿ ಬಹುದೊಡ್ಡ ಆದರ್ಶವಾಗಬಲ್ಲದು. ಆದರೆ ತಲೆಯೆತ್ತಿ ಮರವನ್ನು ನೋಡುವ ಮತ್ತು ಮುಖ ಕೆಳಗೆ ಮಾಡಿ ಬೇರನ್ನು ಹುಡುಕುವ ವ್ಯವಧಾನ ಮತ್ತು ತಾಳ್ಮೆ ಇರಬೇಕಷ್ಟೆ…

    ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು

    ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ

    ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ

    ಜಸವು ಜನಜೀವನಕೆ-ಮಂಕುತಿಮ್ಮ

    ಕೊನೇ ಮಾತು: ಮನೆಯಲ್ಲಿ ಹಿರಿಯರಿದ್ದರೆ ಅದೇ ಒಂದು ಚೆಂದ. ಕೆಲವೊಮ್ಮೆ ಅವರ ಹಲುಬಾಟ, ಕೂಗಾಟ, ಬುದ್ಧಿಮಾತು ಇವೆಲ್ಲ ಕಿರಿಯರಿಗೆ ಕಿರಿಕಿರಿ ಎನಿಸುವುದುಂಟು. ಅದೆಲ್ಲ ಮನೆಯ ಒಳಿತಿಗೆ ವಿನಾ ಬೇರೆ ಏನಿರುವುದಿಲ್ಲ. ಆದರೆ ಮನೆಯಲ್ಲೊಂದು ಹಿರಿಜೀವ ಇಲ್ಲದಿದ್ದರೆ

    ಆಗುವ ನಿರ್ವಾತ ಇದೆಯಲ್ಲ ಅದು ಭರಿಸಲಸಾಧ್ಯ… ಹಾಗೇ ಮಕ್ಕಳ ಕಲರವ, ತುಂಟಾಟ, ಗದ್ದಲ ಇವೂ ಇರಬೇಕು. ಆಗಲೇ ಬದುಕಿಗೊಂದು

    ಲಯ-ಲಾಸ್ಯ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts