More

    ದಿಕ್ಸೂಚಿ ಅಂಕಣ| ನಾಯಕನಾರೊ ನಡೆಸುವನೆಲ್ಲೊ…

    ವೈರಿ ಸೈನಿಕರು ದಾಳಿಗೈದಾಗ, ಸೇನೆಯ ಕಮಾಂಡರ್ ಆದವನು ಸೈನಿಕರನ್ನು ಮುಂದೆ ಕಳಿಸಿ ತಾನು ಹಿಂದೆ ಉಳಿದರೆ ಅವರಲ್ಲಿ ಧೈರ್ಯ ಬರುವುದಾದರೂ ಹೇಗೆ? ಹೀಗಾಗಿಯೇ, ಸೇನೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವವರು ಯಾವುದೇ ಸನ್ನಿವೇಶ ಬಂದರೂ ತಾವೇ ಮುಂದೆ ನುಗ್ಗುತ್ತಾರೆ. ರಿಸ್ಕ್ ಅನ್ನು ಮೈಮೇಲೆಳೆದುಕೊಳ್ಳುತ್ತಾರೆ.

    ಮಹಾಭಾರತ ಯುದ್ಧದ ಸಂದರ್ಭ. ಪಾಂಡವರು ಮತ್ತು ಕೌರವರು ಇಬ್ಬರೂ ತಂತಮ್ಮ ಬಲಾಬಲ ಹೆಚ್ಚಿಸಿಕೊಳ್ಳಲು ಸಕಲ ಯತ್ನಗಳನ್ನೂ ನಡೆಸುತ್ತಿದ್ದರು. ಸಾಮಂತ ರಾಜರು, ಸ್ನೇಹಿತ ವಲಯದವರು, ಸಂಬಂಧಿ ದಿಕ್ಸೂಚಿ ಅಂಕಣ| ನಾಯಕನಾರೊ ನಡೆಸುವನೆಲ್ಲೊ...ರಾಜಮಹಾರಾಜರು… ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸೈನಿಕರನ್ನು ಗುಡ್ಡೆಹಾಕುತ್ತಿದ್ದರು. ಮತ್ತೆ, ಕುರುಕ್ಷೇತ್ರ ಸಮರ ಎಂದರೆ ಸಾಮಾನ್ಯವೇ! ಅಲ್ಲಿ ದಾಯಾದಿಗಳ ಪ್ರತಿಷ್ಠೆ, ಅಸ್ತಿತ್ವ, ಆಣೆಪ್ರಮಾಣ ಎಲ್ಲವೂ ಪಣಕ್ಕಿತ್ತು. ಅಂಥ ಸಮಯದಲ್ಲಿ ಒಂದು ದಿನ, ಭಗವಾನ್ ಕೃಷ್ಣನ ಭೇಟಿಗೆಂದು ದುರ್ಯೋಧನ ಮತ್ತು ಅರ್ಜುನ ತೆರಳುತ್ತಾರೆ. ಆಗ ಕೃಷ್ಣ ಶಯನದಲ್ಲಿ ಪವಡಿಸಿದ್ದ. ಕೆಲ ಕ್ಷಣ ಮೊದಲು ಬಂದ ಕೌರವ ಕೃಷ್ಣನ ಶಿರದ ಬಳಿ ನಿಂತುಕೊಂಡ. ಎಷ್ಟೆಂದರೂ ಸಾಮ್ರಾಜ್ಯಾಧಿಪನಲ್ಲವೆ? ಅಷ್ಟೂ ಅಹಂ ಇರದಿದ್ದರೆ ಹೇಗೆ! ನಂತರ ಬಂದ ಅರ್ಜುನ ಕೈಮುಗಿದುಕೊಂಡು ಕೃಷ್ಣನ ಕಾಲ ಬಳಿ ನಿಂತು ನಿರೀಕ್ಷಿಸತೊಡಗಿದ. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡ ಕೃಷ್ಣ ಮೊದಲು ಕಂಡಿದ್ದು ಅರ್ಜುನನನ್ನು. ವಿಚಾರಿಸಿದಾಗ ಇಬ್ಬರೂ ಬಂದ ವಿಷಯ ತಿಳಿಯಿತು. ಆಗ ಕೃಷ್ಣ ಅರ್ಜುನನಿಗೆ ಏನು ಬೇಕೆಂದು ಕೇಳಲು ಸೂಚಿಸುತ್ತಾನೆ. ಆಗ ದುರ್ಯೋಧನ , ‘ನಾನು ಮೊದಲು ಬಂದಿದ್ದರಿಂದ ನನಗೆ ಮುಂಚೆ ಕೇಳಲು ಅವಕಾಶ ಸಿಗಬೇಕು’ ಎಂದು ವಾದಿಸಿದ. ಕೃಷ್ಣ, ‘ನೀನು ಮೊದಲು ಬಂದಿರಬಹುದಾದರೂ ನಾನು ಎಚ್ಚರಗೊಂಡಾಗ ಪ್ರಥಮವಾಗಿ ಕಾಣಿಸಿದ್ದು ಅರ್ಜುನ. ಅದಲ್ಲದೆ, ಅವನು ನಿನಗಿಂತ ಕಿರಿಯ. ಹೀಗಾಗಿ ಅವನೇ ಮೊದಲು ಕೇಳುವುದು ಉಚಿತ’ ಎಂದು ಹೇಳುತ್ತಾನೆ. ಅರ್ಜುನ, ‘ಸ್ವಾಮಿ, ಕುರುಕ್ಷೇತ್ರ ಸಮರ ಸನ್ನಿಹಿತವಾಗಿರವುದು ನಿನಗೆ ಗೊತ್ತೇ ಇದೆ. ನಮ್ಮ ಪರವಾಗಿ ನೀನು ನಿಲ್ಲಬೇಕು’ ಎಂದು ಬಿನ್ನವಿಸಿಕೊಳ್ಳುತ್ತಾನೆ. ‘ನಾನಾ? ನಾನು ಯುದ್ಧ ಮಾಡುವುದಿಲ್ಲ. ಕೇವಲ ಸಾರಥಿಯಾಗಿ ಕಾರ್ಯಗೈಯುತ್ತೇನೆ. ನಿಮ್ಮಲ್ಲಿ ಒಬ್ಬರು ನನ್ನನ್ನು ಹೊಂದಬಹುದು. ಇನ್ನೊಬ್ಬರು ನನ್ನ ವಿಶಾಲವಾದ ಯಾದವ ಸೇನೆಯನ್ನು ಪಡೆಯಬಹುದು’ ಎಂದು ಕೃಷ್ಣ ಹೇಳುತ್ತಾನೆ. ‘ಅರ್ಜುನನದು ಎಂಥ ಬೇಡಿಕೆ? ಕೃಷ್ಣನೊಬ್ಬನನ್ನು ಪಡೆದು ಮಾಡುವುದೇನಿದೆ? ಅದೇ ಅವನ ದೊಡ್ಡ ಸೇನೆ ದಕ್ಕಿದರೆ ಯುದ್ಧರಂಗದಲ್ಲಿ ಅನುಕೂಲವಾಗುತ್ತದೆ’ಎಂದು ದುರ್ಯೋಧನ ಭಾವಿಸಿದ. ಆದರೆ ಅರ್ಜುನನ ದೃಷ್ಟಿ ಸ್ಪಷ್ಟವಾಗಿತ್ತು. ಕೃಷ್ಣನೊಬ್ಬನೇ ತಮಗೆ ಸಾಕೆಂದ. ಇದರಿಂದಾಗಿ ಯಾದವ ಸೇನೆ ಕೌರವರ ಪಕ್ಷ ಸೇರುವುದೆಂದಾಯಿತು.

    ಪಾಂಡವರಿಗೆ ಖಚಿತವಿತ್ತು. ಕೃಷ್ಣನೇ ತಮ್ಮ ನಿಜನಾಯಕ, ನಿಜಬಂಧು, ನಿಜಸಖ ಎಂದು. ಹೆಸರಿಗೆ ಬೇರೆಯವರಿಗೆ ಸೇನೆಯ ಸಾರಥ್ಯ ವಹಿಸಲಾಗಿತ್ತಷ್ಟೆ. ಕೃಷ್ಣ ಪಾಂಡವರ ಹೃದಯಸಿಂಹಾಸನದ ಮೇಲೆ ಪವಡಿಸಿದ ಮಹಾನಾಯಕನಾಗಿದ್ದ. ಕೃಷ್ಣನೊಬ್ಬನಿದ್ದರೆ ಏನು ಬೇಕಾದರೂ ಜಯಿಸಿಯೇವು ಎಂಬುದು ಪಾಂಡವರ ಅದಮ್ಯ ವಿಶ್ವಾಸ. ಕೃಷ್ಣನಿಲ್ಲದೆ ಅರ್ಜುನನ ಬಿಲ್ವಿದ್ಯೆ ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಕೃಷ್ಣ ಚಿಕ್ಕವನಿದ್ದಾಗ ವೃಂದಾವನದಲ್ಲಿಯೂ ಇಂತಹುದೇ ಭಾವನೆ, ವಿಶ್ವಾಸ ವ್ರಜವಾಸಿಗಳಲ್ಲಿ ಮನೆಮಾಡಿತ್ತು. ಹೀಗೆಂದೇ ಎಂತೆಂತಹ ಕಠಿಣ ಪ್ರಸಂಗಗಳಲ್ಲಿಯೂ ಅವರಿಗೊಂದು ಭರವಸೆಯ ಕಿರಣವಿತ್ತು, ನಮ್ಮ ಕೃಷ್ಣನಿದ್ದಾನೆ; ಏನೇ ಬಂದರೂ ಆತ ನೋಡಿಕೊಳ್ಳುತ್ತಾನೆ ಎಂದು. ವೃಂದಾವನವಾಸಿಗಳು ತನ್ನನ್ನು ಪೂಜಿಸದ್ದಕ್ಕೆ ಕೋಪಗೊಂಡ ಇಂದ್ರ, ಲೋಕವೇ ಮುಳುಗುವಂತೆ ಮಹಾಮಳೆ ಸುರಿಸಿದರೂ, ವೃಂದಾವನ ಜನರಿಗೆ ಚೂರೂ ತೊಂದರೆಯಾಗದಂತೆ ಕೃಷ್ಣ ಕಾಪಾಡಿದ, ಗೋವರ್ಧನಗಿರಿಧಾರಿಯಾದ. ಕೌರವರ ಆಸ್ಥಾನದಲ್ಲಿ ದುಶ್ಶಾಸನ ಸೀರೆಯನ್ನು ಸೆಳೆಯುವಾಗ, ದ್ರೌಪದಿ ಆರ್ತತೆಯಿಂದ ‘ಅಣ್ಣಾ…’ಎಂದು ಕರೆದದ್ದು ಕೃಷ್ಣನನ್ನೇ. ಆತ ತನ್ನನ್ನು ರಕ್ಷಿಸುತ್ತಾನೆ ಎಂಬ ಅಗಾಧ ಭರವಸೆ ಅವಳಿಗಿತ್ತು. ಆ ಭರವಸೆಗೆ ಚ್ಯುತಿ ಬರಲಿಲ್ಲ. ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…

    ಕೃಷ್ಣ ರಾಜನಾಗಿ ರಾಜ್ಯಭಾರ ಮಾಡುವ ಗೊಡವೆಗೆ ಹೋಗಲಿಲ್ಲ. ಆದರೆ ಧರ್ಮಸಂಸ್ಥಾಪನೆಯಲ್ಲಿ ಆತನದು ನಾಯಕನಪಾತ್ರವೇ ಆಗಿತ್ತು. ನಾಯಕ ಎಂದರೆ ಹಾಗೇ. ತನ್ನನ್ನು ನಂಬಿದವರನ್ನು ಆತ ಎಂದೂ ಕೈಬಿಡಬಾರದು, ಅವರಲ್ಲಿ ಸುರಕ್ಷೆಯ ಭರವಸೆ ತುಂಬಬೇಕು.

    ಸೇನೆಯಲ್ಲಿ‘ leading from the front’ ಎಂಬ ನುಡಿಗಟ್ಟಿದೆ. ಅಂದರೆ, ಎಂಥದೇ ಪರಿಸ್ಥಿತಿಯಿರಲಿ, ನಾಯಕನಾದವರು ತಾನು ಮೊದಲಾಗಿ ಹೋಗಿ ಎದುರಿಸಬೇಕು ಎಂದು. ವೈರಿ ಸೈನಿಕರು ದಾಳಿಗೈದಾಗ, ಕಮಾಂಡರ್ ಆದವನು ತನ್ನ ಸೈನಿಕರನ್ನು ಮುಂದೆ ಕಳಿಸಿ ತಾನು ಹಿಂದೆ ಉಳಿದರೆ ಅವರಲ್ಲಿ ಧೈರ್ಯ ಬರುವುದಾದರೂ ಹೇಗೆ? ಹೀಗಾಗಿಯೇ, ಸೇನೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವವರು ಯಾವುದೇ ಸನ್ನಿವೇಶ ಬಂದರೂ ತಾವೇ ಮುಂದೆ ನುಗ್ಗುತ್ತಾರೆ. ರಿಸ್ಕ್ ಅನ್ನು ಮೈಮೇಲೆಳೆದುಕೊಳ್ಳುತ್ತಾರೆ. ಹಾಗಿಲ್ಲದಿದ್ದಲ್ಲಿ, ಆ ತಂಡದಲ್ಲಿರುವ ಸೈನಿಕರು ನೈತಿಕ ಸ್ಥೈರ್ಯ ಕಳೆದುಕೊಂಡು ಸೋಲೆಂಬುದು ಕಟ್ಟಿಟ್ಟಬುತ್ತಿಯಾಗಿಬಿಡುತ್ತದೆ.

    ಅಮೆರಿಕದಲ್ಲಿ ನೂತನ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ರೋಚಕತೆಯ ಆಯಾಮದಲ್ಲಿ ಗಿರಕಿ ಹೊಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಎಲ್ಲ ಸಂಗತಿಗಳು ನೆನಪಾದವು. (ಈ ಬರಹ ಓದುವ ಹೊತ್ತಿಗೆ ಬಹುತೇಕ ಜೋ ಬಿಡೆನ್ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಆಗಿರಬಹುದು). ವಿಶ್ವದ ಪ್ರಬಲ ಅಧಿಕಾರಸ್ಥಾನವಾಗಿರುವುದರಿಂದ ಮತ್ತು ಅಮೆರಿಕ ಅಧ್ಯಕ್ಷರು ಕೈಗೊಳ್ಳುವ ನಿರ್ಣಯಗಳು ಜಾಗತಿಕವಾಗಿಯೂ ಪರಿಣಾಮ ಬೀರುವುದರಿಂದ ಸಹಜವಾಗಿಯೇ ಅಲ್ಲಿನ ಅಧ್ಯಕ್ಷೀಯ ಚುನಾವಣೆ ಬಗ್ಗೆ ವಿಶ್ವದೆಲ್ಲೆಡೆ ಕುತೂಹಲವಿರುತ್ತದೆ. ಫಲಿತಾಂಶ ಏನೇ ಬರಲಿ, ಕರೊನಾ ಎದುರಿಸುವಲ್ಲಿನ ಕಾರ್ಯತಂತ್ರ, ಆರ್ಥಿಕ ಸ್ಥಿತಿಗತಿ, ಉದ್ಯೋಗಸೃಷ್ಟಿ ಮುಂತಾದ ಸಂಗತಿಗಳಲ್ಲಿ ಟ್ರಂಪ್ ಜನರ ನಿರೀಕ್ಷೆ ತಲುಪಲು ಸಾಧ್ಯವಾಗಲಿಲ್ಲವಾ ಎಂಬ ಸಂದೇಹಕ್ಕಂತೂ ಆಸ್ಪದವಾಗುತ್ತದೆ. ಅಂದರೆ, ನಾಯಕನಾಗಿ ದೇಶದ ಜನರಲ್ಲಿ ಒಂದು ಅಚಲ ವಿಶ್ವಾಸ ತುಂಬುವಲ್ಲಿ ಅವರು ಎಡವಿದರೆನಿಸುತ್ತದೆ. ಅಷ್ಟಕ್ಕೂ ಹೊಸ ಅಧ್ಯಕ್ಷರ ಎದುರಿಗೆ ಬೆಟ್ಟದಷ್ಟು ಸವಾಲುಗಳಿವೆ. ಕರೊನೊತ್ತರ ಅಮೆರಿಕವನ್ನು ಕಟ್ಟುವುದು ಒಂದೆಡೆಯಾದರೆ, ಜಾಗತಿಕ ಸೂಪರ್​ಪವರ್ ಉಮೇದಿನಲ್ಲಿರುವ ಚೀನಾದ ರಣೋತ್ಸಾಹಕ್ಕೆ ಕಡಿವಾಣ ಹಾಕುವುದು ಮತ್ತೊಂದು ದೊಡ್ಡ ಚಾಲೆಂಜ್. ‘ನಾಯಕನಾದವನು ಜನರಲ್ಲಿ ಆಶಾವಾದ, ಭರವಸೆ ಮೂಡಿಸುವಂತಿರಬೇಕು’ಎನ್ನುತ್ತಾನೆ ನೆಪೋಲಿಯನ್ ಬೊನಾಪಾರ್ತ್.

    2014 ಮತ್ತು 2019ರಲ್ಲಿ ಭಾರತದಲ್ಲಿ ನಡೆದ ಲೋಕಸಭಾ ಚುನಾವಣೆಗಳು ಈ ಸಂದರ್ಭದಲ್ಲಿ ಅಯಾಚಿತವಾಗಿ ನೆನಪಾಗುತ್ತವೆ. ವಿಶೇಷವಾಗಿ, 2014ರಲ್ಲಿ ನರೇಂದ್ರ ಮೋದಿಯವರು ಆಗತಾನೆ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಿದ್ದರು. ಆಗ ಅವರಿಗೆ ಎದುರಾಳಿಯಾಗಿ, ಪ್ರಧಾನಿ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿ ಸವಾಲೊಡ್ಡಿದವರು ರಾಹುಲ್ ಗಾಂಧಿ. ವಯಸ್ಸಿನ ಲೆಕ್ಕದಲ್ಲಿ ನೋಡಿದರೆ ರಾಹುಲ್ ಮೋದಿಗಿಂತ ಚಿಕ್ಕವರು. ಯುವ ವಯಸ್ಸಿನ ಮತದಾರರು ದೊಡ್ಡ ಸಂಖ್ಯೆಯಲ್ಲಿರುವ ಭಾರತದಂತಹ ದೇಶದಲ್ಲಿ ಆ ವರ್ಗವನ್ನು ಸೆಳೆಯುವುದು ಅವರಿಗೆ ಸುಲಭವಾಗಬೇಕಿತ್ತು. ಆದರೆ ಆಗಿದ್ದು ಉಲ್ಟಾ. ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಮಾಡಿದ್ದ ಕೆಲಸಗಳನ್ನು ಜನರು ಗಮನಿಸಿದ್ದರು. ಆ ಭಾವನೆ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಿದ್ದರಿಂದಾಗಿ ಮೋದಿ ದೆಹಲಿ ಹಾದಿ ಸುಗಮವಾಯಿತು. 2019ರಲ್ಲಿ ಇದು ಪುನರಾವರ್ತನೆಯಾಯಿತು. ಮೋದಿ ಕೈಗೊಂಡ ನೀತಿನಿರ್ಣಯಗಳ ಬಗ್ಗೆ ಆಕ್ಷೇಪ ಇಲ್ಲವೆಂತಲ್ಲ. ಆದರೆ ಬಹಳ ಜನರಲ್ಲಿ ಒಂದು ವಿಶ್ವಾಸ-ದೇಶಕ್ಕೆ ಅಹಿತಕಾರಿಯಾದ ನಿರ್ಣಯವನ್ನು ಮೋದಿ ತೆಗೆದುಕೊಳ್ಳುವುದಿಲ್ಲ ಎಂದು. ಅದಿಲ್ಲವಾದಲ್ಲಿ, ನೋಟು ಅಮಾನ್ಯೀಕರಣದಂಥ ನಿರ್ಣಯವನ್ನು ದಿಢೀರಾಗಿ ತೆಗೆದುಕೊಳ್ಳುವುದು ಸುಲಭವಲ್ಲ. ಆಗ ಅನೇಕ ದಿನಗಳ ಕಾಲ ಬ್ಯಾಂಕು, ಎಟಿಎಂಗಳ ಎದುರು ಜನರು ಕ್ಯೂ ನಿಂತಿದ್ದು ಇನ್ನೂ ಮರೆತಿಲ್ಲ. ಅಂದಹಾಗೆ, ಆ ನಿರ್ಣಯದ ಬಗ್ಗೆ ಇವತ್ತಿಗೂ ಟೀಕೆಗಳು ನಿಂತಿಲ್ಲ ಎನ್ನಿ. ಹಾಗೇ, ಕರೊನಾ ನಿಯಂತ್ರಣಕ್ಕೆಂದು ದೇಶವ್ಯಾಪಿ ಲಾಕ್​ಡೌನ್ ಘೋಷಣೆ ಕೂಡಾ. ಭಾರತದಂತಹ ವಿಶಾಲವಾದ, ಪ್ರಾದೇಶಿಕ ಭಿನ್ನತೆಯ, ಅಗಾಧ ಜನಸಂಖ್ಯೆಯ ದೇಶದಲ್ಲಿ ಇಂಥದೊಂದು ದಿಢೀರ್ ಪ್ರಕಟಣೆಯನ್ನು ಊಹಿಸುವುದೂ ಕಷ್ಟ. ಆದರೆ, ಕರೊನಾ ಎಂಬುದು ಇನ್ನೂ ತನ್ನ ಚಹರೆ ಬಿಟ್ಟುಕೊಡದೆ, ಅಪರಿಚಿತ ವೈರಸ್ ಆಗಿ ಹೆದರಿಸಲು ಆರಂಭಿಸಿದಾಗ, ಬೇರೆ ಕೆಲ ದೇಶಗಳಲ್ಲಿ ತನ್ನ ಪ್ರತಾಪ ತೋರಿಸಲು ಶುರುಮಾಡಿದಾಗ, ಇಂಥ ಕ್ರಮ ಅನಿವಾರ್ಯ ಎಂಬುದನ್ನು ಜನರು ಅರ್ಥಮಾಡಿಕೊಂಡು ಲಾಕ್​ಡೌನ್ ಅನ್ನು ಬೆಂಬಲಿಸಿದರು. ಎಲ್ಲೋ ಅಲ್ಲಿಇಲ್ಲಿ ಇದರಲ್ಲಿ ಸ್ವಲ್ಪ ಏರುಪೇರು ಆಗಿರಬಹುದಷ್ಟೆ. ಭಾರತದಂತಹ ದೇಶದಲ್ಲಿ ತಿಂಗಳ ಕಾಲ ಇಂಥ ಲಾಕ್​ಡೌನ್ ಊಹಿಸುವುದೂ ಕಷ್ಟವೇ ಸರಿ. ಏಕೆಂದರೆ ಇದು ಚೀನಾದಂತಲ್ಲ. ಆದರೂ ಜನ ಸೈ ಎಂದರು. ಇಂಥ ಸಮಯದಲ್ಲಿ ಕೈಗೊಂಡ ನೀತಿನಿರ್ಣಯಗಳಿಗೆ ಟೀಕೆಟಿಪ್ಪಣಿ, ವಿಮರ್ಶೆ ಎದುರಾಗಬಹುದು. ಅದೆಲ್ಲವನ್ನೂ ಅರಗಿಸಿಕೊಂಡು ಸಾಗುವ ಎದೆಗಾರಿಕೆ ನಾಯಕನಾದವನಿಗೆ ಇರಬೇಕಾಗುತ್ತದೆ. ‘ನಿನ್ನ ಕಾರ್ಯಶೈಲಿಯ ವಿಷಯ ಬಂದಾಗ ಅಲೆಗಳೊಂದಿಗೆ ಸಾಗು; ಆದರೆ ತತ್ತ್ವಸಿದ್ಧಾಂತದ ವಿಚಾರದಲ್ಲಿ ಬಂಡೆಯಂತೆ ನಿಂತುಕೊ’ಎನ್ನುತ್ತಾರೆ, ಅಮೆರಿಕದ ಮಾಜಿ ಅಧ್ಯಕ್ಷ ಥಾಮಸ್ ಜೆಫರ್ಸನ್.

    ಬಿಹಾರದಲ್ಲಿ ಚುನಾವಣೆ ಈಗ ಕೊನೆಯ ಹಂತದಲ್ಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಜನತಾದಳ ಸಂಯುಕ್ತ (ಜೆಡಿಯು) ನಾಯಕ ನಿತೀಶ್ ಕುಮಾರ್ ಅವರಿಗೆ ಇದು ಮಹತ್ವಪೂರ್ಣ ಮತಸಮರ. ಇಲ್ಲೇನಾದರೂ ಸೋತರೆ ಅವರ ರಾಜಕೀಯ ಜೀವನದ ಭವಿಷ್ಯ ಮಸುಕಾಗುತ್ತದೆ. ನಿತೀಶ್ ಅವಕಾಶವಾದಿ ರಾಜಕಾರಣಿ, ಅನುಕೂಲಸಿಂಧುತ್ವ ಅವರ ಸಹಜಗುಣ ಎಂಬೆಲ್ಲ ಟೀಕೆಗಳಿವೆ. ಆದರೆ ಆಡಳಿತದ ವಿಚಾರದಲ್ಲಿ ಅವರನ್ನು ಟೀಕಿಸುವವರು ಕಡಿಮೆ. ಈ ಸಲ ಅವರಿಗೆ ಇಬ್ಬರು ಯುವ ನಾಯಕರು ಸವಾಲೊಡ್ಡಿದ್ದಾರೆ. ಅವರೆಂದರೆ- ಆರ್​ಜೆಡಿಯ ಲಾಲು ಪ್ರಸಾದ್ ಯಾದವರ ಪುತ್ರ ತೇಜಸ್ವಿ ಯಾದವ್ ಮತ್ತು ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್. ಉದ್ಯೋಗಸೃಷ್ಟಿ, ಶಿಕ್ಷಣ, ಆರ್ಥಿಕತೆ ವೃದ್ಧಿ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಕಣಕ್ಕಿಳಿದಿರುವ ತೇಜಸ್ವಿ ಯಾದವ್ ಯುವಜನರನ್ನು ಹೆಚ್ಚಾಗಿ ಸೆಳೆಯುತ್ತಿದ್ದಾರೆ ಎಂಬ ವರದಿಗಳಿವೆ. ಇವೇನಾದರೂ ಮತಗಳಾಗಿ ಪರಿವರ್ತನೆಯಾದರೆ ನಿತೀಶ್​ಗೆ ತೊಂದರೆ ಪಕ್ಕಾ. ತಂದೆ ಲಾಲು ಯಾದವ್ ಬಿಹಾರವನ್ನು ಒಂದೂವರೆ ದಶಕ ಆಳಿದರೂ, ಅವರ ಬಗ್ಗೆ ನಕಾರಾತ್ಮಕ ಇಮೇಜ್ ಇದೆ. ಇದನ್ನು ಅರಿತಿರುವ ತೇಜಸ್ವಿ ಯಾದವ್, ಈ ಬಗ್ಗೆ ಕ್ಷಮೆಯನ್ನೂ ಕೇಳುವ ವಿವೇಕ ಪ್ರದರ್ಶಿಸಿ, ಅಧಿಕಾರಕ್ಕೆ ಬಂದರೆ ಉತ್ತಮ ಆಡಳಿತದ ಭರವಸೆ ನೀಡುತ್ತಿದ್ದಾರೆ. ಇನ್ನೊಂದೆಡೆ, ಚಿರಾಗ್ ಪಾಸ್ವಾನ್ ನಿಲುವು ಬಿಹಾರದ ಮೈತ್ರಿ ರಾಜಕಾರಣದಲ್ಲಿ ವಿಚಿತ್ರ ಪರಿಸ್ಥಿತಿ ತಂದಿಟ್ಟಿದೆ. ಲೋಕಜನಶಕ್ತಿ ಪಕ್ಷ ಎನ್​ಡಿಎ ಮೈತ್ರಿಕೂಟದ ಭಾಗ. ಆದರೆ ಆ ಮೈತ್ರಿಕೂಟದ ಇನ್ನೊಂದು ಪಕ್ಷವಾದ ನಿತೀಶರ ಜೆಡಿಯು ವಿರುದ್ಧವೇ ಬಿಹಾರದಲ್ಲಿ ಅದು ಅಭ್ಯರ್ಥಿಗಳನ್ನು ಕಣ್ಕಕಿಳಿಸಿದೆ. ಇಂಥ ದ್ವಿ ಸವಾಲುಗಳನ್ನು ಎದುರಿಸಿ ನಿತೀಶ್ ಜಯಶಾಲಿಯಾಗುವರೆ ಎಂಬುದು ಸದ್ಯದ ಪ್ರಶ್ನೆ. ಒಟ್ಟಿನಲ್ಲಿ, ನಾಯಕನ ಹುಡುಕಾಟದಲ್ಲಿ ಜನರ ಒಲವು ನಿಲುವು ಏನೆಂಬುದು ನಿಗೂಢ. ‘ನೀನು ಯಾರೇ ಆಗಿರು, ಆದರೆ ಉತ್ತಮ ಮನುಜನಾಗಿರು’ಎನ್ನುವ ಮೂಲಕ, ನಾಯಕತ್ವದ ಗುಣವನ್ನು ಮಾನವೀಯತೆಯ ಎತ್ತರಕ್ಕೆ ಒಯ್ದುಬಿಡುತ್ತಾರೆ ಅಬ್ರಹಾಂ ಲಿಂಕನ್.

    ಕೊನೇ ಮಾತು: ‘ನಾಯಕನಾದವನು ಮಹತ್ಕಾರ್ಯಗಳನ್ನು ಮಾಡಲೇಬೇಕು ಎಂದಿಲ್ಲ. ಆದರೆ ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡುವಂತೆ ಜನರನ್ನು ಪ್ರೇರೇಪಿಸುವ ಕೆಲಸ ಅವನಿಂದಾಗಬೇಕು’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ರೋನಾಲ್ಡ್ ರೇಗನ್ ಹೇಳಿರುವುದು ಗಮನಾರ್ಹ. ಅಂದರೆ, ತಾನು ಬೆಳೆಯುವ ಜತೆಗೆ ಇತರರನ್ನೂ ಬೆಳೆಸುವ ಗುರುತರ ಜವಾಬ್ದಾರಿ ನಾಯಕನದು.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts