More

    ಆರೋಗ್ಯದ ವಿಚಾರ| ವೃದ್ಧಾಪ್ಯದ ರುಚಿ ಅರಿತರೇ ಬದುಕು ಪರಿಪೂರ್ಣ!

    ಪೂರ್ಣ ಬದುಕನ್ನು ಸವಿಯುವ ಪ್ರತಿಯೊಬ್ಬ ವ್ಯಕ್ತಿಯೂ ವೃದ್ಧಾಪ್ಯದ ರುಚಿಯನ್ನು ನೋಡಲೇಬೇಕಾಗುತ್ತದೆ. ವೃದ್ಧತ್ವದ ಬಗೆಗಿನ ವಿಚಾರಗಳಿಗೆ ‘ಸ್ಥವಿರಂ’ ಎಂದಿದೆ ಆಯುರ್ವೆದ. ವಯಸ್ಸಿನಿಂದಾಗಿ ಮಾಂಸಾದಿ ಧಾತುಗಳು ಶಿಥಿಲವಾಗಿ ಅಂಗಗಳಿಗೆ ಹಾನಿಯಾಗುವುದೆಂಬ ಅರ್ಥದಲ್ಲಿ ‘ಜರಾ’ ಶಬ್ದವು ಹುಟ್ಟಿಕೊಂಡಿದೆ. ವೃದ್ಧಿಯನ್ನು ಈಗಾಗಲೇ ಕಂಡವರು ಎಂಬರ್ಥದಲ್ಲಿ ‘ವೃದ್ಧ’ ಎಂಬ ಪದ ಬಳಕೆಗೆ ಬರುತ್ತದೆ. ಶರೀರದ ಸವಕಳಿಗೆ ‘ವಿಸ್ರಸಾ’ ಎನ್ನಲಾಗಿದೆ. ಯೌವನವನ್ನು ದಾಟಿದವರು ಎನ್ನಲು ‘ಪ್ರವಯ’, ಬಹುಕಾಲ ಇದ್ದವರೆನ್ನಲು ‘ಸ್ಥವಿರ’ ಶಬ್ದಗಳ ಪ್ರಯೋಗವಿದೆ. ಕ್ಷಯಿಸುತ್ತ ಇರುವುದರಿಂದ ‘ಜೀನ’, ಇಳಿಗುಂದುವುದರಿಂದ ‘ಜೀರ್ಣ’, ‘ಜರನ್’ ಎಂದೂ ಬಳಸುವುದಿದೆ. ಶರೀರವು ಹದಗೆಡುತ್ತ ಸಾಗುವ ಕಾಲವಾದ್ದರಿಂದ ‘ಜರಿತ’ ಎನ್ನಲಾಗುತ್ತದೆ. ತೊಂಬತ್ತು ವರ್ಷಗಳನ್ನು ದಾಟಿದವರಿಗೆ ‘ಜ್ಯಾಯನ್’ ಶಬ್ದ ಪ್ರಯೋಗವಿದೆ. ಅನುಕೂಲದ ದೃಷ್ಟಿಯಿಂದ ಪ್ರಾಯ ಅರವತ್ತು ದಾಟಿದಾಗ ‘ವೃದ್ಧ’, ಎಪ್ಪತ್ತೆ ೖದು ಕಳೆದ ಮೇಲೆ ‘ಪ್ರವೃದ್ಧ’, ಎಂಬತ್ತೈದು ವರ್ಷ ಮೀರಿದಾಗ ‘ಜೀರ್ಣವೃದ್ಧ’ ಎಂದೂ ವಿಭಜಿಸಿಕೊಳ್ಳಲಾಗಿದೆ.

    ಆರೋಗ್ಯದ ವಿಚಾರ| ವೃದ್ಧಾಪ್ಯದ ರುಚಿ ಅರಿತರೇ ಬದುಕು ಪರಿಪೂರ್ಣ!ಒಮ್ಮೆ ಆಗಿರುವ ವಯಸ್ಸನ್ನು ಮತ್ತೆ ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಚರಕಸಂಹಿತೆಯಲ್ಲಿ ಧಾತುಪಾಕವನ್ನು ವಿವರಿಸುವಾಗ ಸಂದರ್ಭದಲ್ಲಿ ಪ್ರತಿ ನಿಮೇಷಕಾಲದಲ್ಲೂ ಶೀಘ್ರವಾಗಿ ಭಗ್ನ ಪ್ರಕ್ರಿಯೆ ನಡೆಯುತ್ತಲಿದ್ದು ‘ನ ಪುನರ್ಭವ’ ಎಂಬ ಸ್ಪಷ್ಟೋಕ್ತಿಯಿದೆ. ಬದಲಾವಣೆ ಜಗದ ನಿಯಮ. ಕಾಲದ ಪರಿಣಾಮದಿಂದ ವೃದ್ಧತೆಯೆಂಬ ಬದಲಾವಣೆಗೆ ದೇಹವೂ ಒಡ್ಡಿಕೊಳ್ಳುತ್ತದೆ. ಜೀವನದಲ್ಲಿ ಬಾಲ್ಯ, ತಾರುಣ್ಯ, ಯೌವನ, ಪ್ರೌಢ, ವಾರ್ಧಕ್ಯಗಳೆಂಬ ಹಂತಗಳೆಲ್ಲ ಕಾಲದ ಪರಿಣಾಮವೇ. ಈ ಕಾಲದ ಪರಿಣಾಮದಿಂದಲೇ ಸ್ವಾಭಾವಿಕವಾಗಿ ರೋಗಗಳೂ ಕಂಡುಬಂದು ಇದನ್ನು ಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿರುವುದೂ ಸ್ವಾಭಾವಿಕವೇ! ‘ನಿಷ್ಪ್ರತಿಕ್ರಿಯಾ’ ಎಂಬುದೂ ಶರೀರ ಸ್ವಭಾವ ಎಂದಿದೆ ಆಯುರ್ವೆದ. ಹಾಗಿದ್ದರೂ ಕೈಕಟ್ಟಿ ಕುಳಿತು ರೋಗಗಳಿಗೆ ಶರಣಾಗುವುದು ನಮ್ಮ ಸ್ವಭಾವವಾಗಬಾರದು.

    ‘ಚಕ್ರಪಾಣಿಟೀಕಾ’ ಗ್ರಂಥದಲ್ಲಿ ಶರೀರವನ್ನು ರಥಕ್ಕೆ ಹೋಲಿಸಲಾಗಿದೆ. ದೀರ್ಘಕಾಲದವರೆಗೂ ಬಾಳಿಕೆಯಾಗಬೇಕಾದರೆ ರಥದ ಸರಿಯಾದ ನಿರ್ವಹಣೆ, ಸಮರ್ಪಕವಾಗಿ ಕೀಲೆಣ್ಣೆಗಳ ಬಳಕೆ, ಅದು ಚಲಿಸುವ ಮಾರ್ಗದ ಸ್ಥಿತಿಗಳು ಚೆನ್ನಾಗಿರಬೇಕಾಗುತ್ತದೆ. ಅದಿಲ್ಲದಿದ್ದರೆ ರಥವು ಬೇಗನೆ ಹಾಳಾಗುವುದು. ಇದರಂತೆ ನಮ್ಮ ಆಯುಷ್ಯವೂ ಆಹಾರ, ವಿಹಾರ, ಮಾನಸಿಕ ಸ್ಥಿತಿ, ಕಾರ್ಯವಿಧಾನಗಳನ್ನೆಲ್ಲ ಅವಲಂಬಿಸಿರುತ್ತದೆ. ಸ್ವಪ್ರಯತ್ನದಿಂದ ಬದುಕನ್ನು ಸಾಧ್ಯವಾದಷ್ಟು ಹಸನುಗೊಳಿಸುವುದು ಆದ್ಯ ಕರ್ತವ್ಯ. ಬದುಕಿನ ಆರಂಭದಲ್ಲಿ ಕಾಯಿಲೆಗಳು ಅಷ್ಟಾಗಿ ಬಾಧಿಸುವುದಿಲ್ಲ. ಹೊಸ ಕಾರು ಏನೂ ತೊಂದರೆ ಕೊಡುವುದಿಲ್ಲ. ಆರೇಳು ವರ್ಷ ಕಳೆದರೆ ತೊಂದರೆಗಳು ಒಂದರ ಹಿಂದೆ ಒಂದರಂತೆ ಬರಲಾರಂಭಿಸುತ್ತವೆ. ಮನುಷ್ಯರಿಗೂ ಪ್ರಾಯ ಹೆಚ್ಚಾದಂತೆ ರೋಗಗಳೂ ಹೆಚ್ಚಾಗತೊಡಗುತ್ತದೆ. ವೃದ್ಧರಾಗುವುದು ಅನಿವಾರ್ಯ. ಹಾಗೆಂದು ವೃದ್ಧಾಪ್ಯದಲ್ಲಿ ದೇಹವು ರೋಗಗಳ ಗೂಡಾಗಬೇಕಿಲ್ಲವಲ್ಲ. ವೃದ್ಧರನ್ನು ಉದಾಸೀನದಿಂದ ನೋಡುವುದೆಂದರೆ ನಮ್ಮ ಭವಿಷ್ಯಕ್ಕೇ ಕಲ್ಲೆಳೆದಂತೆ. ವೃದ್ಧಾಪ್ಯವನ್ನು ಬಲಿಷ್ಠಗೊಳಿಸಲು ಹಲವಾರು ದಾರಿ ತೋರಿದ ಕೀರ್ತಿ ಆಯುರ್ವೆದಕ್ಕೆ ಸಲ್ಲುತ್ತದೆ. ಬಲಾಢ್ಯವಾಗಿಸುವುದು ಅತ್ಯವಶ್ಯ. ಏಕೆಂದರೆ ವೃದ್ಧರೇ ಕುಟುಂಬ ವ್ಯವಸ್ಥೆಯ ಜೀವ. ವೃದ್ಧರೇ ಮನೆತನದ ಜೀವಾಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts