More

    ಬಿಎಸ್​ವೈರಿಂದಲೇ ಉತ್ತರಾಧಿಕಾರಿ ಆಯ್ಕೆ | ಸಮುದಾಯ ಹಿಡಿದಿಡುವ ಪ್ರಯತ್ನ, ಸರ್ಕಾರ ಉಳಿಸಿಕೊಳ್ಳಲು ವರಿಷ್ಠರ ಕಸರತ್ತು..

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಬಿಎಸ್​ವೈರಿಂದಲೇ ಉತ್ತರಾಧಿಕಾರಿ ಆಯ್ಕೆ | ಸಮುದಾಯ ಹಿಡಿದಿಡುವ ಪ್ರಯತ್ನ, ಸರ್ಕಾರ ಉಳಿಸಿಕೊಳ್ಳಲು ವರಿಷ್ಠರ ಕಸರತ್ತು..ಯಡಿಯೂರಪ್ಪ ಅವರ ಉತ್ತರಾಧಿಕಾರಿಯನ್ನು ಯಡಿಯೂರಪ್ಪ ಮೂಲಕವೇ ಆಯ್ಕೆ ಮಾಡಿಸುವ ಮೂಲಕ ಸರ್ಕಾರವನ್ನು ಸುಭದ್ರವಾಗಿಸಲು ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದ್ದರೆ, ಬಿಎಸ್​ವೈ ಸಹ ತಮ್ಮ ಎದುರಾಳಿಗಳಿಗೆ ಮೊದಲ ಹಂತದಲ್ಲಿಯೇ ಸೋಲಿನ ರುಚಿ ತೋರಿಸಿದ್ದಾರೆ. ಯಡಿಯೂರಪ್ಪ ಅವರಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಸಾಕಷ್ಟು ಹೆಸರು ಹರಿದಾಡಿದರೂ ಕೊನೆಗೆ ಬಸವರಾಜ ಬೊಮ್ಮಾಯಿ ಅವರೇ ಆಯ್ಕೆಯಾಗುವ ಮೂಲಕ ಹೈಕಮಾಂಡ್ ಯಡಿಯೂರಪ್ಪರಿಗೆ ಮನ್ನಣೆ ನೀಡಿದೆ. ಬಿಎಸ್​ವೈ ಅವರಿಲ್ಲದೇ ರಾಜ್ಯದಲ್ಲಿ ಬಿಜೆಪಿ ಇಲ್ಲ ಎಂಬ ಸಂದೇಶವನ್ನೂ ರವಾನಿಸಿದೆ.

    ಬಿಜೆಪಿಯಲ್ಲಿ ಯಡಿಯೂರಪ್ಪ ನಿರ್ಗಮನದಿಂದ ಸೃಷ್ಠಿಯಾಗಿರುವ ನಿರ್ವಾತವನ್ನು ಹೋಗಲಾಡಿಸುವುದು ಅಷ್ಟು ಸುಲಭವಾಗಿರಲಿಲ್ಲ. ಯಾವುದೇ ಹೊಸ ಪ್ರಯೋಗಗಳಿಗೆ ಅವಕಾಶವಿಲ್ಲದಂತೆ ಯಡಿಯೂರಪ್ಪ ಉರುಳಿಸಿದ ದಾಳಕ್ಕೆ ಬಿಜೆಪಿ ವರಿಷ್ಠರು ಸಮ್ಮತಿಸದೆ ಬೇರೆ ದಾರಿಯೇ ಇರಲಿಲ್ಲ. ವರಿಷ್ಠರು ಸ್ವಲ್ಪ ಎಚ್ಚರ ತಪ್ಪಿದರೂ ಸರ್ಕಾರವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತಿತ್ತು. ಅದೇ ಕಾರಣಕ್ಕೆ ಉತ್ತರಾಧಿಕಾರಿ ಆಯ್ಕೆಯನ್ನು ಯಡಿಯೂರಪ್ಪರಿಗೆ ಬಿಟ್ಟಿದ್ದಾರೆ.

    ರಾಜ್ಯದ ಇತಿಹಾಸವನ್ನು ಗಮನಿಸಿದಾಗ ಲಿಂಗಾಯತ ಮತದಾರರು ಅತ್ಯಂತ ಸೂಕ್ಷ್ಮ ಮನಸ್ಥಿತಿಯವರು ಎಂಬುದು ಅರ್ಥವಾಗುತ್ತದೆ. ಸಮುದಾಯದ ನಾಯಕನ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಾರೆ. ಅದು ಸಾಕಷ್ಟು ಬಾರಿ ಸಾಬೀತಾಗಿದೆ. ಹಿಂದೆ ಲಿಂಗಾಯತ ಸಮುದಾಯಕ್ಕೆ ಎಸ್.ನಿಜಲಿಂಗಪ್ಪ ನಾಯಕರಾಗಿದ್ದರು. ಅವರು ರಾಮಕೃಷ್ಣ ಹೆಗಡೆ ಅವರನ್ನು ಉತ್ತರಾಧಿಕಾರಿಯಾಗಿ ಘೋಷಣೆ ಮಾಡಿದ್ದರಿಂದ ಸಮುದಾಯ ಕಣ್ಣು ಮುಚ್ಚಿ ಹೆಗಡೆ ಒಪ್ಪಿಕೊಂಡಿತು. 1989ರಲ್ಲಿ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಅವರನ್ನು ಬೆಂಬಲಿಸಿತು. 1994ರಲ್ಲಿ ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್ ಇದ್ದಾರೆಂಬ ಕಾರಣಕ್ಕೆ ಆ ಪಕ್ಷಕ್ಕೆ ಒಲಿಯಿತು. ಆನಂತರ ಬಿ.ಎಸ್.ಯಡಿಯೂರಪ್ಪ ಹೋರಾಟಗಳ ಮೂಲಕ ನಾಯಕತ್ವ ರೂಪಿಸಿಕೊಂಡಿದ್ದರಿಂದ ಅವರಲ್ಲಿ ಭರವಸೆಯನ್ನಿಟ್ಟು ಒಪ್ಪಿಕೊಂಡಿತು. ಇವತ್ತಿಗೂ ಯಡಿಯೂರಪ್ಪರೇ ಆ ಸಮುದಾಯದ ಪ್ರಶ್ನಾತೀತ ನಾಯಕರು. ಅದರಿಂದಲೇ ಬಿಜೆಪಿಗೆ ಇಡೀಗಂಟು ಇದೆ. 2011ರಲ್ಲಿಯೂ ತಮ್ಮ ಉತ್ತರಾಧಿಕಾರಿಯಾಗಿ ಸದಾನಂದಗೌಡರನ್ನು ಯಡಿಯೂರಪ್ಪರೇ ಆಯ್ಕೆ ಮಾಡಿದ್ದರು. ನಂತರ ಜಗದೀಶ ಶೆಟ್ಟರ್ ಅವರನ್ನು ಸಹ ಯಡಿಯೂರಪ್ಪರೇ ಆಯ್ಕೆ ಮಾಡಬೇಕಾಯಿತು.

    ಬಿಎಸ್​ವೈರಿಂದಲೇ ಉತ್ತರಾಧಿಕಾರಿ ಆಯ್ಕೆ | ಸಮುದಾಯ ಹಿಡಿದಿಡುವ ಪ್ರಯತ್ನ, ಸರ್ಕಾರ ಉಳಿಸಿಕೊಳ್ಳಲು ವರಿಷ್ಠರ ಕಸರತ್ತು..ಬಿಎಸ್​ವೈ ಮೇಲುಗೈ: ಸಿಎಂ ಆಯ್ಕೆ ಗೊಂದಲವನ್ನು ಹೈಕಮಾಂಡ್ ಅತ್ಯಂತ ಚಾಕಚಕ್ಯತೆಯಿಂದ ನಿರ್ವಹಿಸಿದೆ. ಆ ಮೂಲಕ ಯಡಿಯೂರಪ್ಪ ರಾಜೀನಾಮೆ ನಂತರ ರಾಜ್ಯದಲ್ಲಿ ಉಂಟಾದ ಬಿಕ್ಕಟ್ಟು ಬಹುತೇಕ ಶಮನ ಮಾಡಿದೆ. ಬಸವರಾಜ ಬೊಮ್ಮಾಯಿ ಆಯ್ಕೆ ಮತ್ತು ಡಿಸಿಎಂಗಳಾಗಿ ಗೋವಿಂದ ಕಾರಜೋಳ ಮತ್ತು ಆರ್. ಅಶೋಕ್ ಆಯ್ಕೆಯಲ್ಲೂ ಯಡಿಯೂರಪ್ಪ ಕೈ ಮೇಲಾಗಿದೆ. ಯಡಿಯೂರಪ್ಪ ಅವರನ್ನೇ ಮುಂದಿಟ್ಟುಕೊಂಡು ಹೊಸ ಸರ್ಕಾರ ರಚನೆ ಮಾಡುವ ಮೂಲಕ ಬಿಜೆಪಿ ಹೈ ಕಮಾಂಡ್ ವೀರಶೈವ ಲಿಂಗಾಯತ ಸಮಾಜವನ್ನು ಸಮಾಧಾನಗೊಳಿಸಿದೆ.

    ಯಡಿಯೂರಪ್ಪ ಮೇಲೆ ಹೆಚ್ಚಿದ ಹೊಣೆ: ಉತ್ತರಾಧಿಕಾರಿ ಆಯ್ಕೆಯಲ್ಲಿ ಯಡಿಯೂರಪ್ಪ ಮಾತಿಗೆ ಮನ್ನಣೆ ಸಿಕ್ಕಿರುವುದರಿಂದ ಈಗ ಅವರ ಮೇಲೆ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ಸೋಮವಾರ ನಿರ್ಗಮನದ ವೇಳೆ ಇನ್ನೂ 15 ವರ್ಷ ರಾಜಕೀಯ ಮಾಡುವುದಾಗಿ ಘೋಷಣೆ ಮಾಡಿದ್ದರು. ಈಗ ಇನ್ನೂ 22 ತಿಂಗಳು ಸರ್ಕಾರ ಸುಭದ್ರವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಹೆಜ್ಜೆ ಹೆಜ್ಜೆಗೂ ಕಾಡುವ ತಮ್ಮ ವಿರೋಧಿಗಳು ಮತ್ತೆ ಬಾಲ ಬಿಚ್ಚದಂತೆ ಸರ್ಕಾರವನ್ನು ಕಾಪಾಡಿಕೊಳ್ಳಬೇಕಾಗಿದೆ. ಅದೆಲ್ಲದಕ್ಕಿಂತ ಮುಖ್ಯವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕಾಗಿದೆ. ಪಕ್ಷ ಹಾಗೂ ಸರ್ಕಾರ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮಾಡುವ ಜವಾಬ್ದಾರಿಯೂ ಅವರ ಹೆಗಲೇರಿದೆ.

    ಎಚ್ಚರಿಕೆ ಹೆಜ್ಜೆಯನ್ನಿಟ್ಟ ವರಿಷ್ಠರು: ಬೇರೆ ರಾಜ್ಯಗಳ ರೀತಿಯಲ್ಲಿ ಹೊಸ ಪ್ರಯೋಗ ಮಾಡಬೇಕೆಂದು ಬಿಜೆಪಿಯ ಕೆಲವರು ಉದ್ದೇಶಿಸಿದ್ದರು. ಕೆಲ ಯುವ ಮುಖಗಳಿಗೆ ಪಟ್ಟ ಕಟ್ಟುವ ಮೂಲಕ ಪಕ್ಷ ಹಿಡಿತಕ್ಕೆ ತೆಗೆದುಕೊಂಡಿರುವವರು ಸರ್ಕಾರದ ಮೇಲೂ ಹಿಡಿತ ಸಾಧಿಸುವ ಉದ್ದೇಶ ಹೊಂದಿದ್ದರು. ಆದರೆ ಇಲ್ಲಿನ ಮತದಾರರ ಮನದಾಳವನ್ನು ತಮ್ಮದೇ ಮೂಲಗಳಿಂದ ಅಧ್ಯಯನ ಮಾಡಿರುವ ವರಿಷ್ಠರು, ಯಡಿಯೂರಪ್ಪ ಉತ್ತರಾಧಿಕಾರಿ ಆಯ್ಕೆಯನ್ನು ಅವರಿಗೆ ಬಿಟ್ಟು ಹೊಸ ಪ್ರಯೋಗದಿಂದ ಹಿಂದೆ ಸರಿದರು. ಯಡಿಯೂರಪ್ಪ ಹೇಳಿದವರನ್ನು ಬಿಟ್ಟು ಬೇರೆಯವರಿಗೆ ಪಟ್ಟ ಕಟ್ಟಿದರೆ ಸರ್ಕಾರ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಯಡಿಯೂರಪ್ಪ ಹೇಳಿದವರು ಇದ್ದರೆ ಮಾತ್ರ ಸರ್ಕಾರ ಉಳಿಸಿಕೊಳ್ಳಬಹುದು ಎಂಬುದು ಬಿಜೆಪಿ ವರಿಷ್ಠರ ಉದ್ದೇಶವಾಗಿದೆ. ಯಡಿಯೂರಪ್ಪರನ್ನು ನಿರ್ಲಕ್ಷಿಸಲಾಗಿದೆ ಎಂಬ ಸಂದೇಶ ಈಗಾಗಲೆ ರಾಜ್ಯದಲ್ಲಿ ಹರಿದಾಡಿದೆ. ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುವ ಎಲ್ಲ ಸಾಧ್ಯತೆಗಳು ಇವೆ. ಅದನ್ನು ತಡೆದು ಲಿಂಗಾಯತ ಸಮುದಾಯದ ಮಹಾವಲಸೆ ಆಗದಿರುವಂತೆ ನೋಡಿಕೊಳ್ಳಬೇಕಾಗಿತ್ತು. ಆದ್ದರಿಂದಲೇ ಬಿಎಸ್​ವೈ ನಿರ್ಲಕ್ಷಿಸಿ ಹೊಸ ನಾಯಕನ ಆಯ್ಕೆಗೆ ಬಿಜೆಪಿ ಮುಂದಾಗಲಿಲ್ಲ.

    ಬಿಎಸ್​ವೈರಿಂದಲೇ ಉತ್ತರಾಧಿಕಾರಿ ಆಯ್ಕೆ | ಸಮುದಾಯ ಹಿಡಿದಿಡುವ ಪ್ರಯತ್ನ, ಸರ್ಕಾರ ಉಳಿಸಿಕೊಳ್ಳಲು ವರಿಷ್ಠರ ಕಸರತ್ತು..

    ಹುಬ್ಬಳ್ಳಿಯಿಂದ ಮೂರನೇ ಮುಖ್ಯಮಂತ್ರಿ

    ಹುಬ್ಬಳ್ಳಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಗಾದಿಗೆ ಏರಿದ ಹುಬ್ಬಳ್ಳಿಯ ರಾಜಕಾರಣಿಗಳಲ್ಲಿ ಮೂರನೆಯವರು. ಜನತಾ ಪಕ್ಷದಿಂದ ಹುಬ್ಬಳ್ಳಿ ಗ್ರಾಮೀಣ (ಇಂದಿನ ಸೆಂಟ್ರಲ್) ಕ್ಷೇತ್ರದ ಶಾಸಕರಾಗಿದ್ದ ಎಸ್.ಆರ್. ಬೊಮ್ಮಾಯಿ ಧಾರವಾಡ ಜಿಲ್ಲೆಯಿಂದ ಮುಖ್ಯಮಂತ್ರಿಯಾದವರಲ್ಲಿ ಮೊದಲಿಗರು. 1988ರ ಆಗಸ್ಟ್ 13ರಂದು ಅವರಿಗೆ ಅವಕಾಶ ಒಲಿದು ಬಂದಿತ್ತು. ಸೆಂಟ್ರಲ್ ಕ್ಷೇತ್ರದ ಬಿಜೆಪಿ ಶಾಸಕ ಜಗದೀಶ ಶೆಟ್ಟರ್ 2012ರ ಜುಲೈ 12ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಹುಬ್ಬಳ್ಳಿಗೆ ಎರಡನೇ ಸಲ ಅದೃಷ್ಟ ಸಿಕ್ಕಿತ್ತು. ಇದೀಗ ಬಸವರಾಜ ಬೊಮ್ಮಾಯಿ ಸರದಿ. ಮೂರೂ ಸಲ ಹುಬ್ಬಳ್ಳಿಯವರಿಗೆ ಮಧ್ಯಂತರದಲ್ಲೇ ಅವಕಾಶ ಪ್ರಾಪ್ತವಾಗಿರುವುದು ಕಾಕತಾಳೀಯ. ಬಸವರಾಜ ಬೊಮ್ಮಾಯಿ ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು ಕಮಡೊಳ್ಳಿ ಗ್ರಾಮದವರು. ಆದರೆ ಅವರು ಬಿಜೆಪಿ ಸೇರಿದ ಮೇಲೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು ಎಂಬ ಪ್ರಶ್ನೆ ಉದ್ಭವಿಸಿತ್ತು. ಅವರ ತಂದೆ ಎಸ್.ಆರ್. ಬೊಮ್ಮಾಯಿ ಸ್ಪರ್ಧಿಸಿ ಗೆಲ್ಲುತ್ತಿದ್ದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಕಣಕ್ಕಿಳಿದು ಜಗದೀಶ ಶೆಟ್ಟರ್ ವಿರುದ್ಧ ಬೊಮ್ಮಾಯಿ ಸೋತಿದ್ದರು. ಹೀಗಾಗಿ, 2008ರ ಚುನಾವಣೆ ವೇಳೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಹಾಗೂ ಹು-ಧಾ ಪಶ್ಚಿಮ ಕ್ಷೇತ್ರದಿಂದ ಚಂದ್ರಕಾಂತ ಬೆಲ್ಲದ ಮರು ಆಯ್ಕೆ ಬಯಸಿದ್ದರು. ಆ ಸಂದರ್ಭದಲ್ಲಿ ಶಿಗ್ಗಾಂವಿ ಕ್ಷೇತ್ರವನ್ನು ಬೊಮ್ಮಾಯಿ ಅವರಿಗೆ ನೀಡಲಾಯಿತು. ಧಾರವಾಡ ಜಿಲ್ಲೆಯ ನಿವಾಸಿಯಾಗಿರುವ ಹಾವೇರಿ ಜಿಲ್ಲೆ ಶಾಸಕ ಮುಖ್ಯಮಂತ್ರಿ ಗಾದಿಗೆ ಏರುತ್ತಿದ್ದು, ಉಭಯ ಜಿಲ್ಲೆಗಳಲ್ಲೂ ವಿಶೇಷ ಸಂಭ್ರಮಕ್ಕೆ ಕಾರಣವಾಗಿದೆ.

    33 ವರ್ಷ ನಂತರ ಮಗನಿಗೆ ಯೋಗ: ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಿ (1989) ಅವರನ್ನು ಕುರ್ಚಿಯಿಂದ ಕೆಳಗಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬೊಮ್ಮಾಯಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 1994 ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ಬೊಮ್ಮಾಯಿ ಪರವಾಗಿ ಐತಿಹಾಸಿಕ ತೀರ್ಪು ನೀಡಿತು. ಆದರೆ, 5 ವರ್ಷದ ನಂತರ ತೀರ್ಪು ಬಂದ ಕಾರಣ ಮತ್ತೆ ಅವರು ಮುಖ್ಯಮಂತ್ರಿ ಆಗಲಿಲ್ಲ. ಆದರೆ, ಅಪೂರ್ಣಗೊಂಡ ಅವರ ಅವಧಿಯನ್ನು ತುಂಬಲೆಂದೇ ಈಗ ಅವರ ಮಗ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಯೋಗ ಒಲಿದು ಬಂದಂತಿದೆ.

    ತಂದೆ-ಮಗನ ಸರದಿ: ರಾಜ್ಯದಲ್ಲಿ ಎಚ್.ಡಿ. ದೇವೇಗೌಡ- ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗಾದಿ ಏರಿದ ತಂದೆ-ಮಗನ ಮೊದಲ ಜೋಡಿ. ದಿ. ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಸಿಎಂ ಗಾದಿಗೆ ಏರುತ್ತಿದ್ದು, ತಂದೆ-ಮಗನ ಯಾದಿಯಲ್ಲಿ ಎರಡನೆ ಜೋಡಿಯಾಗಿದೆ.

    ಉತ್ತರ ಕರ್ನಾಟಕದಿಂದ 9ನೆಯವರು: ಉತ್ತರ ಕರ್ನಾಟಕದವರಾದ ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ಎನ್. ಧರ್ಮಸಿಂಗ್, ಜಗದೀಶ ಶೆಟ್ಟರ್ ಇದುವರೆಗೆ ಮುಖ್ಯಮಂತ್ರಿಯಾಗಿದ್ದರು. ಬಸವರಾಜ ಬೊಮ್ಮಾಯಿ 9ನೆಯವರಾಗಿದ್ದಾರೆ.

    ಗೆದ್ದು ಬೀಗಿದ ಯಡಿಯೂರಪ್ಪ: ಪಕ್ಷದ ವರಿಷ್ಠರು ನಾನಾ ಕಾರಣಗಳಿಗೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿರಬಹುದು. ಆದರೆ ಉತ್ತರಾಧಿಕಾರಿ ಆಯ್ಕೆಯೊಂದರಲ್ಲಿಯೇ ತನ್ನ ಎದುರಾಳಿಗಳಿಗೆ ತಕ್ಕ ಉತ್ತರ ರವಾನಿಸಿದ್ದಾರೆ. ತಮ್ಮನ್ನು ಮೂಲೆ ಗುಂಪು ಮಾಡಲು ಸಾಧ್ಯವಿಲ್ಲವೆಂಬುದನ್ನು ಎದುರಾಳಿ ಗುಂಪಿಗೆ ತಿಳಿಸಿದ್ದಾರೆ.

    ಕರ್ನಾಟಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಒಬ್ಬ ನುರಿತ ರಾಜಕಾರಣಿ ಹಾಗೂ ಆಡಳಿತದಲ್ಲಿ ಹಳೆಯ ಕೈ. ಅವರು ರಾಜ್ಯವನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ.

    | ಬಿ.ಎಲ್.ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ

    ಕರ್ನಾಟಕದ ನೂತನ ಮುಖ್ಯಮಂತ್ರಿ ಯಾಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳು. ಆಡಳಿತದ ಮೇಲೆ ಮರಳಿ ಗಮನಹರಿಸಲಾಗುವುದು ಎಂದು ಕಾಂಗ್ರೆಸ್ ಹಾಗೂ ರಾಜ್ಯ ಭರವಸೆ ಇರಿಸಿದೆ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ರಾಜ್ಯದ ಮುಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಕಾಮನೆಗಳು. ಶಾಸಕ ರಾಗಿ, ಸಚಿವರಾಗಿ ಅಪಾರ ಅನುಭವ ಹೊಂದಿರುವ ಅವರ ನೇತೃತ್ವದ ಸರ್ಕಾರ ಜನರ ಹಾಗೂ ಪಕ್ಷದ ಕಾರ್ಯಕರ್ತರ ನಿರೀಕ್ಷೆ ಯಂತೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಿ.

    | ಬಿ.ವೈ. ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷ

    ಬಸವರಾಜ ಬೊಮ್ಮಾಯಿ ಪಕ್ಷಕ್ಕೆ ಹೊಸ ಚೇತನ ಕೊಡಲಿ. ಅವರ ಕಾಲದಲ್ಲಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಕಾಣಲಿ. ಒಳ್ಳೆಯ ಕೆಲಸಗಳಾಗಲಿ. ಅವರು ನನಗೂ ತುಂಬಾ ಆತ್ಮೀಯರು. ಅವರ ಆಯ್ಕೆಯಿಂದ ನನಗೆ ಯಾವುದೇ ಬೇಸರವಿಲ್ಲ.

    | ಅರವಿಂದ ಬೆಲ್ಲದ್ ಶಾಸಕ

    ಬಸವರಾಜ ಬೊಮ್ಮಾಯಿ ನನಗೆ ಸಹೋದರ ಸಮಾನ. ಅವರ ಆಯ್ಕೆಯಿಂದ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ. ಗೃಹ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಂಪುಟದಲ್ಲಿ ಸ್ಥಾನ ಸಿಕ್ಕರೆ ಕಾರ್ಯ ನಿರ್ವಹಿಸುತ್ತೇನೆ. ಇಲ್ಲದಿದರೆ ಪಕ್ಷ ಸಂಘಟನೆ ಮಾಡುತ್ತೇನೆ.

    | ಮುರುಗೇಶ್ ನಿರಾಣಿ ಶಾಸಕ

    ಸಿಎಂ ಆದ ಇಂಜಿನಿಯರ್

    • ಜನನ: 28-1-1960
    • ಜನ್ಮಸ್ಥಳ: ಹುಬ್ಬಳ್ಳಿ
    • ತಂದೆ: ಎಸ್.ಆರ್. ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ)
    • ತಾಯಿ: ಗಂಗಮ್ಮ ಬೊಮ್ಮಾಯಿ
    • ಧರ್ಮಪತ್ನಿ: ಚನ್ನಮ್ಮ ಬೊಮ್ಮಾಯಿ
    • ಮಕ್ಕಳು: ಭರತ, ಅದಿತಿ
    • ಜಾತಿ: ಸಾದರ ಲಿಂಗಾಯತ
    • ಮೂಲ ಊರು: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿ
    • ವಿದ್ಯಾಭ್ಯಾಸ: ರೋಟರಿ ಆಂಗ್ಲ ಮಾಧ್ಯಮ ಶಾಲೆ ಹುಬ್ಬಳ್ಳಿ (ಪ್ರಾಥಮಿಕ-ಮಾಧ್ಯಮಿಕ ), ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ (ಪಿಯುಸಿ), ಬಿ.ವಿ. ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ.
    • ಪ್ರಾರಂಭದ ಉದ್ಯೋಗ: ಕೈಗಾರಿಕೋದ್ಯಮಿ ಹಾಗೂ 1983-85ರವರೆಗೆ ಪುಣೆಯ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ, ನಂತರ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸ್ವಂತ ಉದ್ಯೋಗ.
    • ಕಾಲೇಜು ವಿದ್ಯಾಭ್ಯಾಸ ದಿನದಿಂದಲೇ ಸಾಮಾಜಿಕ ಮತ್ತು ರಾಜಕೀಯ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ, ಸಂಘಟನೆಗಳಲ್ಲಿ ಸತತ ಪ್ರಯತ್ನ.
    • 1993ರಲ್ಲಿ ಹುಬ್ಬಳ್ಳಿಯಲ್ಲಿ ರಾಜ್ಯ ಯುವ ಜನತಾದಳದ ಐತಿಹಾಸಿಕ ರ‍್ಯಾಲಿ ಸಂಘಟನೆಯ ನೇತೃತ್ವ.
    • 1995ರಲ್ಲಿ ಈದ್ಗಾ ಮೈದಾನದ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ.
    • 1995ರಲ್ಲಿ ರಾಜ್ಯ ಜನತಾದಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ.
    • 2007 ಜುಲೈನಲ್ಲಿ ಧಾರವಾಡದಿಂದ ನರಗುಂದದವರೆಗೂ 232 ಕಿ.ಮೀ. 21 ದಿನಗಳ ಕಾಲ ರೈತರೊಂದಿಗೆ ಪಾದಯಾತ್ರೆ.
    • 1996ರಿಂದ 1997ರವರೆಗೆ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಜೆ.ಎಚ್.ಪಟೇಲ ಅವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ.
    • 31.12.1997 ಹಾಗೂ 4.12.2003ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಪ್ರತಿನಿಧಿಯಾಗಿ ವಿಧಾನಪರಿಷತ್ (ಧಾರವಾಡ, ಹಾವೇರಿ, ಗದಗ) ಚುನಾವಣೆಯಲ್ಲಿ ಸತತ ಎರಡು ಬಾರಿ ಆಯ್ಕೆ.
    • 2008ರಲ್ಲಿ ಬಿಜೆಪಿ ಸೇರಿ, ವಿಧಾನಸಭೆ ಚುನಾವಣೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದಿಂದ ಟಿಕೆಟ್ ಪಡೆದು ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ.
    • ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್ ಸಂಪುಟಗಳಲ್ಲಿ 5 ವರ್ಷಗಳ ಕಾಲ ಜಲಸಂಪನ್ಮೂಲ ಸಚಿವರಾಗಿ ಸೇವೆ.
    • 2013ರಲ್ಲಿ 2ನೇ ಬಾರಿಗೆ ಶಿಗ್ಗಾಂವಿ ಕ್ಷೇತ್ರದಿಂದ ಆಯ್ಕೆ. 2018ರಲ್ಲೂ ಗೆದ್ದು ಹ್ಯಾಟ್ರಿಕ್ ಸಾಧನೆ.
    • ಯಡಿಯೂರಪ್ಪ ಸಂಪುಟದಲ್ಲಿ ಗೃಹ, ಕಾನೂನು ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಸಚಿವರಾಗಿ ಕೆಲಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts