More

    ಮುಂಗಾರು ಬಿತ್ತನೆ ಬೀಜಕ್ಕೆ 10 ಸಾವಿರ ಕೋಟಿ ಮೀಸಲು- ಬಿ.ಎಸ್. ಯಡಿಯೂರಪ್ಪ.

    ವಿಜಯವಾಣಿ ಸುದ್ದಿಜಾಲ ಗದಗ,

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಬುಧವಾರ ಜರುಗಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಹಿಳೆ, ಕೃಷಿ, ಶಿಕ್ಷಣ, ರೈತ, ಬಿತ್ತನೆ ಬೀಜಕ್ಕೆ 10 ಸಾವಿರ ಕೋಟಿ ಮೀಸಲು ಹೀಗೆ ಬಡ ಮತ್ತು ಮದ್ಯಮ ವರ್ಗದ ಕುರಿತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದರು. 

    ವಿಜಯಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ರೂ. ನೀಡುವ ಯೋಜನೆ ಬಿಜೆಪಿ ಸರ್ಕಾರ ಘೋಷಿಸಿದ್ದು, ಈ ಹಿಂದೆಯೂ ಹತ್ತಾರು ಮಹಿಳೆ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಂಗಾರು ಬಿತ್ತನೆ ಬೀಜಕ್ಕೆ ಸಾಲ ಮಾಡುವ ರೈತರ ಕಷ್ಟ ತಪ್ಪಿಸಲು ರಾಜ್ಯ ಸರ್ಕಾರ 10 ಸಾವಿರ ಕೋಟಿ ಮೀಸಲಿಟ್ಟಿದೆ. ದೇಶದಲ್ಲೇ ಮೊದಲ ಬಾರಿಗೆ ರೈತ ಜೀವವಿಮೆ ಯೋಜನೆ ಜಾರಿ ತರಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದರು. ತಮ್ಮ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆಗಳನ್ನು ಪ್ರಸ್ತಾಪಿಸಿದರು.

    ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಕ್ಷೇತ್ರದಲ್ಲಿ ಈ ಮೊದಲು ಮರಳು ಸಮಸ್ಯೆ ಇತ್ತು. ಆದರೆ ನಾನೂ ಶಾಸಕನಾದ ನಂತರ ಇಲ್ಲಿನ ಮರಳು ಸಮಸ್ಯೆ ಬಗೆಹರಿಸಿ ಬಡವರು ಮನೆ ಕಟ್ಟಿಕೊಳ್ಳುಲು ಅನುಕೂಲ ಮಾಡಿದ್ದೇನೆ. ಕ್ಷೇತ್ರದಲ್ಲಿ 700 ಕೋಟಿಗೂ ಅಧಿಕ ರಸ್ತೆ ಅಭಿವೃದ್ಧಿ ಕೆಲಸವಾಗಿದೆ. ರೋಣ ಭಾಗದಲ್ಲಿ ನೆಲ್ಲೂರು, ಶಾಂತಗೇರಿ ಗ್ರಾಮಗಳಲ್ಲಿ ನೀರು ತುಂಬುವ ಕೆಲಸ ಪ್ರಗತಿಯಲ್ಲಿದೆ. ಗದಗ ತಾಲೂಕಿನ ಹಲವು ಹಳ್ಳಿಗಳ ಕೆರೆ ತುಂಬುವ ಕೆಲಸಕ್ಕೆ 192 ಕೋಟಿ ವೆಚ್ಚದ ಕಾಮಗಾರಿ ಗುದ್ದಲಿ ಪೂಜೆ ನಡೆಯಲಿದೆ ಎಂದರು.

    ಇತ್ತೀಚೆಗೆ ರೋಣದಲ್ಲಿ ಪ್ರತಿಭಟನೆ ಕಾರಣವಾಗಿದ್ದ ಜಿಗಳೂರು ಕೆರೆ ಉದ್ಘಾಟನೆ ವಿವಾವದವನ್ನು ಪ್ರಸ್ತಾಪಿಸಿದ ಕಳಕಪ್ಪ ಬಂಡಿ, ಕೆರೆ ಕಾಮಗಾರಿ 12 ತಿಂಗಳ ಒಳಗಾಗಿ ಪೂರ್ಣಗೊಳ್ಳಬೇಕಿತ್ತು. ಆದರೆ 20 ವರ್ಷಗಳಿಂದಲೂ ಅಧಿಕ ಅವಧಿ ವಿಳಂಭವಾಯಿತು. ಅದಕ್ಕೆ ನೇರ ಹೊಣೆ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕೆರೆ ಅಭಿವೃದ್ಧಿ ಕಾರ್ಯವನ್ನು ನಿರ್ಲಕ್ಷ್ಯ ವಹಿಸಿ ಜನರಿಗೆ ಮೋಸ ಮಾಡಿದೆ ಎಂದು ಕಳಕಪ್ಪ ಬಂಡಿ ಆರೋಪಿಸಿದರು.

    ಸಂಸದ ಸಿಎಂ ಉದಾಸಿ ಮಾತನಾಡಿ, ಗದಗ ನಗರದ ವರ್ತೂಳ ರಸ್ತೆಗೆ 210 ಕೋಟಿ ಮಂಜೂರು ನೀಡುವ ಕೆಲಸವನ್ನು ಸಿ.ಸಿ. ಪಾಟೀಲ ಮಾಡಿದ್ದಾರೆ. ದೇಶದಲ್ಲಿ ಇಂಧನ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಗದಗ ಜಿಲ್ಲೆಯಲ್ಲೂ ಇಂಧನ ಶಕ್ತಿ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

    ಸಿ.ಸಿ. ಪಾಟೀಲ, ಸಿದ್ದಪ್ಪ ಬಂಡಿ, ರವಿ ದಂಡಿನ, ಹೇಮಗಿರಿಶ್ ಹಾವನಾಳ, ಅಂದಪ್ಪ ಸಂಕನೂರು, ಎಸ್.ವಿ. ಸಂಕನೂರು, ಅಶೋಕ ವನ್ನಾಲ, ಬಿ.ಎಂ.ಸಜ್ಜನರ, ರಾಜೇಂದ್ರ ಘೋರ್ಪಡೆ, ವೀರಪ್ಪ ಪಟ್ಟಣಶೆಟ್ಟಿ, ಉಮೇಶ ಮಲ್ಲಾಪುರ ಇತರರು ಇದ್ದರು

    ಕೋಟ್ 

    ಕಾಂಗ್ರೆಸ್ ಜಾತಿ ಆಧಾರಿತ ಯೋಜನೆಗಳನ್ನು ಜಾರಿಗೆ ತಂದರು. ಆದರೆ, ಸರ್ವರಿಗೂ ಸಮಪಾಲು ಎಂಬಂತೆ ಬಿಜೆಪಿ ಯೋಜನೆಗಳನ್ನು ರೂಪಿಸಿತು. ಉತ್ತರ ಕರ್ನಾಟಕಕ್ಕೆ ಹೆಚ್ಚು ಒತ್ತು ಕೊಟ್ಟು ಉತ್ತಮ ರಸ್ತೆಗಳನ್ನು ನಿರ್ಮಿಸಿದ್ದೇವೆ.

    – ಸಿ.ಸಿ. ಪಾಟೀಲ, ಸಚಿವ

    ಕೋಟ್: 

    ರಾಜಸ್ಥಾನದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದು ಅಲ್ಲಿನ ಜನರಿಗೆ ಕಾಂಗ್ರೆಸ್ ಭರವಸೆ ಈಡೇರಿಸಿಲ್ಲ. ಜನರು ಇಂತಹ ಸುಳ್ಳು ಭರವಸೆಗಳನ್ನು ನಂಬದೇ

    ಬಿಜೆಪಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅರಿತು ಮತ ನೀಡಬೇಕು.

    – ಎಸ್.ವಿ. ಸಂಕನೂರು, ವಿಪ ಸದಸ್ಯ. 

    *ರಾಹುಲ್ ಗಾಂಧಿ ವಿರುದ್ಧ ಉದಾಸಿ ಗುಡುಗು:* 

    ಗ್ಯಾರಂಟಿ, ವಾರಂಟಿ ಕಾರ್ಡ ಹಿಡಿದು ಬಂದಿರುವ ಕಾಂಗ್ರೆಸ್ ಪಕ್ಷ ಸಂಪೂರ್ಣ ಸವಕಳಿ ಹಿಡಿದಿದೆ. ಭಾರತ ದೇಶದ ಬಗ್ಗೆ ಹೊರ ದೇಶಗಳಲ್ಲಿ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ಇದೇ ರೀತಿ 30 ವರ್ಷಗಳ ಹಿಂದೆ ನಡೆದ ಘಟನೆಯಲ್ಲಿ ಸುಬ್ರಹ್ಮಣಿಯಂ ಸ್ವಾಮೀ ಅವರನ್ನು ಕಾಂಗ್ರೆಸ್ ರಾಜ್ಯಸಭೆಯಿಂದ ಉಚ್ಚಾಟಿಸಿತ್ತು. ಈದ ಅದೇ ರೀತಿ ರಾಹುಲ್ ಗಾಂಧಿ ಹೊರ ದೇಶದಲ್ಲಿ ಭಾರತದ ಅಪಾಮಾನ ಮಾಡಿದಕ್ಕೆ ಏನು ಮಾಡಬೇಕು ನಿವೇ ಹೇಳಿ. ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ. ಮುಂಬರುವ ಕಾಂಗ್ರೆಸ್ ಪಕ್ಷಕ್ಕೆ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ.

    250 ಕ್ವಿಂಟಾಲ್ ಕಡಲೆ ದಾನ: 

    ಗಜೇಂದ್ರಗಡ ತಾಲೂಕಿನ ಹಾಲಕೇರಿ ಗ್ರಾಮಸ್ಥರು ಶಾಸಕ ಕಳಕಪ್ಪ ಬಂಡಿ  ಚುನಾವಣೆ ವೆಚ್ಚಕ್ಕಾಗಿ 250 ಕ್ವಿಂಟಾಲ್ ಕಡಲೆ ದಾನಮಾಡಿದರು.

     *ಬೈಕ್ ರ್ಯಾಲಿ:* 

    ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಜರುಗಿದ ಬೈಕ್ ರ್ಯಾಲಿಗೆ ಶಾಸಕ ಕಳಕಪ್ಪ ಬಂಡಿ ಚಾಲನೆ ನೀಡಿದರು. ರ್ಯಾಲಿಯು ಎಪಿಎಂಸಿ ಮುಂಭಾಗದಿಂದ ಪ್ರಾರಂಭವಾಗಿ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ದುರ್ಗಾ ವೃತ್ತ, ಹಿರೇಬಜಾರ, ಕಟ್ಟಿಬಸವೇಶ್ವರ ರಂಗಮಂದಿರ, ಕೊಳ್ಳಿಯವರ ಖಾತ್ರಿ ಮೂಲಕ ಚನ್ನಮ್ಮ ವೃತ್ತದ ಮೂಲಕ ಉನಚಗೇರಿ ತಲುಪಿ ಮರಳಿ ಕಾರ್ಯಕ್ರಮ ಸ್ಥಳಕ್ಕೆ ತಲುಪಿತು. ಬೈಕ್ ರ್ಯಾಲಿ ಜೊತೆಗೆ ಆಟೋ ಚಾಲಕರು ತಮ್ಮ ಆಟೋಗಳ ಮೇಲೆ ಸಿದ್ದೇಶ್ವರ ಶ್ರೀಗಳು, ಬಸವೇಶ್ವರ, ಶಿವಾಜಿ ಹಾಗೂ ದೇವರ ಭಾವಚಿತ್ರಗಳನ್ನು ಹಾಗೂ ದೇಶಪ್ರೇಮಿಗಳ ಭಾವಚಿತ್ರಗಳ ಬ್ಯಾನರ್ ಗಳನ್ನು ಅಳವಡಿಸಿಕೊಂಡು ಬೈಕ್ ರ್ಯಾಲಿ ಗೆ ಸಾಥ್ ನೀಡಿದರು.

    ಊಟದ ವ್ಯವಸ್ಥೆ:

    ವಿಜಯ ಸಂಕಲ್ಪ ಯಾತ್ರೆಗೆ ಬರುವ ಕಾರ್ಯಕರ್ತರಿಗೆ  ಸಿರಾ, ಬದನೆಕಾಯಿ ಪಲ್ಲೆ, ಅನ್ನ, ಮೊಸರನ್ನ, ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts