More

    ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿ

    ವಿಜಯಪುರ : ಜಿಲ್ಲೆಯ ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸಬೇಕು. ರೋಗಿಗಳನ್ನು ನಿರಾಕರಿಸಿದ ಯಾವುದೇ ದೂರುಗಳು ಬಂದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಎಚ್ಚರಿಕೆ ನೀಡಿದ್ದಾರೆ.
    ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಗೆ ಒಳಗಾಗಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈಗಾಗಲೇ ಇಂತಹ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಸೂಕ್ತ ಮಾರ್ಗಸೂಚಿ ಪ್ರಕಟಿಸಿ ಚಿಕಿತ್ಸೆಗೆ ದರ ಸಹ ನಿಗದಿಪಡಿಸಿದೆ. ಅದಾಗ್ಯೂ ಕೆಲ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನಿರಾಕರಿಸುತ್ತಿರುವ ಮತ್ತು ಹೆಚ್ಚಿನ ದರ ಆಕರಿಸುತ್ತಿರುವಂತಹ ಬಗ್ಗೆ ಗಮನಕ್ಕೆ ಬಂದಿದ್ದು, ಇಂತಹ ಕಿರುಕುಳ, ದೂರು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗುರುವಾರ ಸುದ್ದಿಗಾರರೊಂದಿಗೆ ಮಾಹಿತಿ ತಿಳಿಸಿದರು.
    ಜಿಲ್ಲೆಯಲ್ಲಿ ಈವರೆಗೆ 620 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಬುಧವಾರ ವಿಡಿಎ ಅಧ್ಯಕ್ಷರಿಗೆ ಮತ್ತು ಖಾಸಗಿ ವೈದ್ಯರೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಇವರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರನ್ನು ಗುರುತಿಸಲಾಗಿದೆ. ಅದರಂತೆ ಕಂಟೆನ್ಮೆಂಟ್ ವಲಯಕ್ಕೂ ಕ್ರಮಕೈಗೊಂಡಿದೆ ಎಂದು ತಿಳಿಸಿದ್ದಾರೆ.

    ಸರ್ಕಾರಿ ಕಚೇರಿಗಳಲ್ಲಿ ಸೋಂಕು

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಾಟರ್‌ಬೋರ್ಡ್, ಹೆಸ್ಕಾಂ ಕಚೇರಿಯಲ್ಲಿ ತಲಾ ಒಬ್ಬರು ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದ್ದು, ಸರ್ಕಾರಿ ಕಚೇರಿಗಳನ್ನು ಸರ್ಕಾರದ ನಿರ್ದೇಶನದಂತೆ 24 ಗಂಟೆಯೊಳಗೆ ಶುದ್ಧಿ ಹಾಗೂ ಶುಚಿಗೊಳಿಸಿ ಕ್ರಮಕೈಗೊಂಡಿದ್ದು, ಕಚೇರಿ ಬಂದ್‌ಗೆ ಅವಕಾಶ ಇರುವುದಿಲ್ಲ. ಅದರಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡ ಸರ್ಕಾರದ ನಿಯಮಾವಳಿಯಂತೆ ಅವಶ್ಯಕ ಕ್ರಮಕೈಗೊಳ್ಳುವುದರ ಜತೆಗೆ ಸೂಕ್ತ ಮುಂಜಾಗ್ರತೆಯೊಂದಿಗೆ ಹೆಚ್ಚಿನ ಸಮಯಕ್ಕೆ ಕಚೇರಿಗಳನ್ನು ಬಂದ್ ಮಾಡದೆ ಎಂದಿನಂತೆ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

    ಲಕ್ಷಣಗಳಿಲ್ಲದಿದ್ದರೂ ದೃಢ

    ಜಿಲ್ಲೆಯ ಸರ್ಕಾರಿ ಇಬ್ಬರು ಮತ್ತು ಖಾಸಗಿ ಆಸ್ಪತ್ರೆಯ 7 ವೈದ್ಯರಿಗೂ ಸೋಂಕು ತಗುಲಿದ್ದು, ಅವರಿಗೆ ಯಾವುದೇ ರೀತಿಯ ಲಕ್ಷಣವಿಲ್ಲ. ಕಂಟೇನ್ಮೆಂಟ್ ವಲಯದಿಂದ ಸೋಂಕು ತಗುಲಿರಬಹುದೆಂದು ತಿಳಿಸಿರುವ ಅವರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಗುರುತಿಸುವ ಕಾರ್ಯ ಆಯಾ ತಂಡಗಳಿಂದ ನಡೆಯುತ್ತಿದೆ. ವೈದ್ಯರು ಕೂಡ ನಿರ್ಲಕ್ಷೃವಹಿಸದೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಪಿಪಿಇ ಕಿಟ್, ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್‌ಗಳನ್ನು ಕಡ್ಡಾಯವಾಗಿ ರೋಗಿಗಳ ಚಿಕಿತ್ಸೆ ವೇಳೆಗೆ ಬಳಸುವಂತೆ ಸಲಹೆ ನೀಡಿದ್ದಾರೆ.

    ಪೊಲೀಸರಿಗೂ ಕರೊನಾಂತಕ

    ಜಿಲ್ಲೆಯ ಕಂಟೇನ್ಮೆಂಟ್ ವಲಯ ಮತ್ತು ಅಪರಾಧಿತ ಚಟುವಟಿಕೆಯಲ್ಲಿ ತೊಡಗಿರುವವರನ್ನು ಬಂಧನ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ 8-10 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಅವರೆಲ್ಲರ ಸಂಪರ್ಕದಲ್ಲಿರುವ 800-900 ಜನರ ಸ್ವ್ಯಾಬ್ಗಳನ್ನು ಸಂಗ್ರಹಿಸಿದ್ದು ಕೋವಿಡ್ ಲಕ್ಷಣ ಇದ್ದವರಿಗೆ ನಿಗದಿತ ಆಸ್ಪತ್ರೆ ಮತ್ತು ಲಕ್ಷಣ ಇಲ್ಲದವರಿಗೆ ಹೋಂ ಐಸೊಲೇಷನ್‌ಗೆ ಒಳಪಡಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಗುರುತಿಸುವ ಕಾರ್ಯವನ್ನು ವೈದ್ಯರ ತಂಡಗಳು ಪರಿಣಾಮಕಾರಿಯಾಗಿ ಮಾಡುತ್ತಿವೆ. ಈಗಾಗಲೇ ವಿಜಯಪುರದಲ್ಲಿ ನಾಲ್ಕು ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕಂಟೇನ್ಮೆಂಟ್ ಜೋನ್‌ಗಳಲ್ಲಿ ಕಟ್ಟೆಚ್ಚರ

    ಜಿಲ್ಲೆಯಲ್ಲಿ ಒಟ್ಟು 189 ಕಂಟೇನ್ಮೆಂಟ್ ಜೋನ್‌ಗಳನ್ನು ಗುರುತಿಸಿದ್ದು, ಅದರಲ್ಲಿ ಪ್ರಸ್ತುತ 117 ಕಂಟೇನ್ಮೆಂಟ್ ಜೋನ್‌ಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿ ವಿಜಯಪುರ ನಗರದಲ್ಲಿ 74, ವಿಜಯಪುರ ಗ್ರಾಮೀಣ 3, ಬಬಲೇಶ್ವರ 2, ತಿಕೋಟಾ 1, ಬಸವನ ಬಾಗೇವಾಡಿ 10, ನಿಡಗುಂದಿ 1, ಕೊಲ್ಹಾರ 5, ಇಂಡಿ 5, ಮುದ್ದೇಬಿಹಾಳ 6, ತಾಳಿಕೋಟೆ 4, ಸಿಂದಗಿ 4, ದೇವರ ಹಿಪ್ಪರಗಿ ತಾಲೂಕು ವ್ಯಾಪ್ತಿ 2 ಕಂಟೇನ್ಮೆಂಟ್ ಜೋನ್‌ಗಳಿದ್ದು, ಅಲ್ಲಿ ಕಟ್ಟೆಚ್ಚರವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts