More

    ಬೂತ್‌ಮಟ್ಟದ ಏಜೆಂಟರನ್ನು ಹೆಚ್ಚು ನೇಮಿಸಿಕೊಳ್ಳಿ

    ವಿಜಯಪುರ: ಜಿಲ್ಲೆಯ ರಾಜಕೀಯ ಪಕ್ಷಗಳು ಬೂತ್ ಮಟ್ಟದ ಏಜೆಂಟ(ಬಿಎಲ್‌ಎ)ರನ್ನು ತಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವಂತೆ ಬೆಂಗಳೂರು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಶೇಷ ಆಯುಕ್ತರೂ ಹಾಗೂ ವಿಜಯಪುರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಡಿ. ರಂದೀಪ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಬಿಎಲ್‌ಎ ನೇಮಕಾತಿಗೆ ಸಂಬಂಧಪಟ್ಟಂತೆ ಇರುವಂತಹ ಮಾರ್ಗಸೂಚಿಗಳನ್ನು ರಾಜಕೀಯ ಪಕ್ಷಗಳ ಪ್ರತಿಧಿನಿಧಿಗಳಿಗೆ ಪೂರೈಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

    ಲೋಪ ಕಂಡಲ್ಲಿ ಸರಿಪಡಿಸಿ
    ಈಗಾಗಲೇ ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟಿಸಲಾಗಿದೆ. ಈ ಮತದಾರರ ಪಟ್ಟಿಯಲ್ಲಿ ಯಾವುದೆ ಲೋಪ ಇದ್ದಲ್ಲಿ ಅಥವಾ ಪುನರಾವರ್ತಿತ ಮತದಾರರು ಇದ್ದಲ್ಲಿ ತಕ್ಷಣ ಸರಿಪಡಿಸಬೇಕು. ನಗರದ ಭಾಗ ಸಂಖ್ಯೆ 216ರಲ್ಲಿ ನಾಗಠಾಣ ಕ್ಷೇತ್ರದ ಮತದಾರರು ಹೆಚ್ಚಿನ ರೀತಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಿಂದ ದೂರು ಬಂದ ಹಿನ್ನೆಲೆ ಈ ಕುರಿತಂತೆ ಅಪರ ಜಿಲ್ಲಾಧಿಕಾರಿಗಳು ಸ್ಥಳ ಭೇಟಿ, ಪರಿಶೀಲನೆ ಜತೆಗೆ ಡ್ಯುಪ್ಲಿಕೇಟ್ ಮತದಾರರನ್ನು ಗುರುತಿಸಲು ಮತ್ತು ಈ ಕುರಿತು ಮತದಾರರ ಪಟ್ಟಿಯಲ್ಲಿ ಸರಿಪಡಿಸುವಂತೆ ಅವರು ಸೂಚಿಸಿದರು.

    ಮಹಿಳಾ ಮತದಾರರ ವಿವರ
    ಜಿಲ್ಲೆಯಲ್ಲಿ ಲಿಂಗಾನುಪಾತ ನೋಡಿದಾಗ ಪ್ರತಿ 1000 ಪುರುಷರಿಗೆ 956 ಮಹಿಳೆಯರು ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಮಹಿಳಾ ಮತದಾರರು ಪಟ್ಟಿಯಿಂದ ಹೊರಗುಳಿದ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವ ಜತೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮತ್ತು ತೆಗೆದುಹಾಕಲು ಡಿ. 17 ರವರೆಗೆ ಅವಕಾಶವಿರುವುದರಿಂದ ವಿವಿಧ ಪಕ್ಷಗಳ ಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕೆಂದರು.

    ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್ ಮಾತನಾಡಿ, ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಈಗ ಪ್ರಕಟವಾದ ಮತದಾರರ ಪಟ್ಟಿಯನ್ವಯ ಒಟ್ಟು 18 ಲಕ್ಷಕ್ಕೂ ಹೆಚ್ಚು ಮತದಾರರಿದ್ದು, ನೂತನ ಕರಡು ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ರಾಜಕೀಯ ಪ್ರತಿನಿಧಿಗಳು ಕೂಲಂಕಷವಾಗಿ ಪರಿಶೀಲಿಸಿ ದೂರು ಸಲ್ಲಿಸಬಹುದಾಗಿದೆ ಎಂದರು.

    ಸಿಬ್ಬಂದಿ ವಿವರ
    ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಮಾತನಾಡಿ, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನ ಕರಡು ಮತದಾರರ ಪಟ್ಟಿಯನ್ವಯ 18.20 ಲಕ್ಷ ಮತದಾರರಿದ್ದು, 2102 ಮತಗಟ್ಟೆಗಳಿವೆ. 1047 ಬಿಎಲ್‌ಎಗಳನ್ನು ವಿವಿಧ ರಾಜಕೀಯ ಪಕ್ಷಗಳು ನೇಮಿಸಿದ್ದು, ಇದರಲ್ಲಿ 139 ಮುದ್ದೇಬಿಹಾಳ, 272 ವಿಜಯಪುರ ನಗರ, 65 ನಾಗಠಾಣ, 274 ಇಂಡಿ, 297 ಸಿಂದಗಿಗಳಲ್ಲಿ ನೇಮಿಸಲಾಗಿದೆ. 174 ಬಿಎಲ್‌ಒ ಮೇಲ್ವಿಚಾರಕರನ್ನು, 2101 ಬಿಎಲ್‌ಒಗಳನ್ನು, 1562 ಶಿಕ್ಷಕರು ಮತ್ತು ಇತರೆ ಸಿಬ್ಬಂದಿಯನ್ನು ಗುರುತಿಸಿದೆ ಎಂದರು.

    ಅರ್ಹ ಮತದಾರರನ್ನು ನೋಂದಾಯಿಸಿಕೊಳ್ಳಲು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿ.17ರ ವರೆಗೆ ಕಾಲಾವಕಾಶ ಕಲ್ಪಸಲಾಗಿದೆ. ಈಗಾಗಲೇ 2020ರ ನ. 22 ರಂದು, ನ. 29ರಂದು, ಡಿ.6 ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಡಿ.13 ರಂದು ಸಹ ಹಮ್ಮಿಕೊಂಡಿದೆ. ಪಾರದರ್ಶಕ ಮತದಾರರ ಪಟ್ಟಿ ಸಿದ್ಧಗೊಳಿಸಲಾಗುವುದೆಂದು ತಿಳಿಸಿದರು. ಜಿಪಂ ಸಿಇಒ ಲಕ್ಷ್ಮಿಕಾಂತ ರೆಡ್ಡಿ, ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts