More

    ಐತಿಹಾಸಿಕ ನಗರಿ ಸಂಪೂರ್ಣ ಸ್ತಬ್ಧ

    ವಿಜಯಪುರ: ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಪ್ರಮುಖ ರಸ್ತೆಗಳು, ಮುಚ್ಚಿದ ಅಂಗಡಿ-ಮುಂಗಟ್ಟುಗಳು, ಪ್ರಯಾಣಿಕರಿಲ್ಲದೆ ಮೌನಕ್ಕೆ ಜಾರಿದ ಬಸ್ ತಂಗುದಾಣಗಳು, ಭಣಗುಡುತ್ತಿದ್ದ ಪ್ರಮುಖ ವೃತ್ತಗಳು, ಬೀದಿ ಬದಿ ವ್ಯಾಪಾರಿಗಳಿಲ್ಲದೆ ಖಾಲಿ ಹೊಡೆಯುತ್ತಿದ್ದ ಫುಟ್‌ಪಾತ್‌ಗಳು…..!
    ಸದಾ ಗಿಜಿಗುಡುತ್ತಿದ್ದ ಐತಿಹಾಸಿಕ ಗುಮ್ಮಟನಗರಿ ನಿದ್ರೆಗೆ ಜಾರಿದ್ದು, ಮಂಗಳವಾರ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಕರೊನಾ ನಿಯಂತ್ರಣ ಹಿನ್ನೆಲೆ ರಾಜ್ಯಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು, ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ವಾತಾವರಣವಿತ್ತು. ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇಡೀ ನಗರ ಪ್ರವಾಹ ಬಂದು ಹೋದ ಸ್ಥಿತಿಯಲ್ಲಿತ್ತು.

    ವಾಹನ ಸಂಚಾರ ಸ್ಥಗಿತ

    ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಬೆಳಗ್ಗೆಯಿಂದಲೇ ಯಾವುದೇ ಆಟೋ ಸಹ ರಸ್ತೆಗಿಳಿಯಲಿಲ್ಲ. ಬಿಸಿಲು ನೆತ್ತಿಗೇರುತ್ತಿದ್ದಂತೆ ಬೈಕ್ ಓಡಾಟಕ್ಕೂ ಬ್ರೇಕ್ ಹಾಕಲಾಯಿತು. ಅಲ್ಲಲ್ಲಿ ನಾಕಾಬಂದಿ ಮಾಡಿ ಬೈಕ್ ಸವಾರರನ್ನು ಮನೆಗೆ ಅಟ್ಟಲಾಯಿತು. ಅನವಶ್ಯಕವಾಗಿ ತಿರುಗುವವರಿಗೆ ಸಾವಿರ ರೂ. ದಂಡ ವಿಧಿಸಲಾಯಿತು. ಕೆಲವರಿಗೆ ಲಾಠಿ ರುಚಿ ತೋರಿಸಲಾಯಿತು. ದೂರದ ಊರಿಂದ ಬಂದವರಿಗೆ ತ್ವರಿತವಾಗಿ ಮನೆ ಸೇರುವಂತೆ ಮನವರಿಕೆ ಮಾಡಲಾಯಿತು. ಪೊಲೀಸರು ಮೈಕ್ ಬಳಸಿ ಸೂಚನೆಗಳನ್ನು ನೀಡುತ್ತಿದ್ದರು.

    ಬಿಕೋ ಎನ್ನುತ್ತಿದ್ದ ರಸ್ತೆಗಳು

    ನಗರ ಮಹಾತ್ಮ ಗಾಂಧಿ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಛತ್ರಪತಿ ಶಿವಾಜಿ ಮಹಾರಾಜ ವೃತ್ತಗಳು ಜನದಟ್ಟಣೆಯಿಲ್ಲದೆ ಬಿಕೋ ಎನ್ನುತ್ತಿದ್ದವು. ಪ್ರಮುಖ ರಸ್ತೆಗಳಾದ ಸಿದ್ಧೇಶ್ವರ ದೇವಸ್ಥಾನ ರಸ್ತೆ, ಗೋಳಗುಮ್ಮಟ ರಸ್ತೆ, ಅಥಣಿ ರಸ್ತೆ, ಬಾಗಲಕೋಟೆ ರಸ್ತೆ, ಸೊಲ್ಲಾಪುರ ರಸ್ತೆ, ಮನಗೂಳಿ ರಸ್ತೆ, ನವಭಾಗ ರಸ್ತೆ, ಇಂಡಿ ರಸ್ತೆಗಳು ಬಿಕೋ ಎನ್ನುತ್ತಿದ್ದವು.
    ಪ್ರತಿ ರಸ್ತೆಯಲ್ಲೂ ಪೊಲೀಸ್ ಪೆಟ್ರೊಲಿಂಗ್ ವ್ಯವಸ್ಥೆ ಇತ್ತು. ಅಲ್ಲಲ್ಲಿ ಠಿಕಾಣಿ ಹೂಡಿದ ಪೊಲೀಸರು ಮರಳಿ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು. ಕೆಲವರು ಬ್ಯಾಂಕ್‌ಗೆ ಹೋಗುವ ಕಾರಣ ಹೇಳಿ ಮುಂದುವರಿಯುತ್ತಿದ್ದರು.

    ಅಂಗಡಿ-ಮುಂಗಟ್ಟು ಬಂದ್

    ಅತ್ಯವಶ್ಯಕ ಸೌಲಭ್ಯ ಹೊರತುಪಡಿಸಿ ಇನ್ನುಳಿದವುಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿತ್ತು. ಆದರೆ, ವರ್ತಕರು ಎಲ್ಲ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದರು. ಕಿರಾಣಿ, ಹಾಲು, ಇಂಧನ, ತೈಲ, ಔಷಧ, ಆಹಾರ ಮಳಿಗೆಗಳಿಗೆ ಅವಕಾಶ ಇತ್ತಾದರೂ ಅವುಗಳನ್ನೂ ಬಂದ್ ಮಾಡಲಾಗಿತ್ತು. ಪೆಟ್ರೋಲ್ ಬಂಕ್‌ಗಳು ಬಂದ್ ಇದ್ದ ಕಾರಣ ಅನೇಕರು ಪರಿತಪಿಸಿದರು. ಆಹಾರ ಪಾರ್ಸಲ್‌ಗೆ ಅವಕಾಶವಿದ್ದರೂ ಯಾವೊಬ್ಬ ಹೋಟೆಲ್ ಮಾಲೀಕರು ಆಹಾರ ನೀಡುವ ಗೋಜಿಗೆ ಹೋಗಲಿಲ್ಲ. ಪ್ರಮುಖ ಬಡಾವಣೆಗಳಲ್ಲಿ ಕಿರಾಣಿ ಅಂಗಡಿ ಸಹ ಬಂದ್ ಮಾಡಲಾಗಿತ್ತು.

    ಐತಿಹಾಸಿಕ ನಗರಿ ಸಂಪೂರ್ಣ ಸ್ತಬ್ಧ
    ಐತಿಹಾಸಿಕ ನಗರಿ ಸಂಪೂರ್ಣ ಸ್ತಬ್ಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts