More

    ಆಲಿಸುವವರಿಲ್ಲ ಸೋಂಕಿತರ ಆರ್ತನಾದ

    ಪರಶುರಾಮ ಭಾಸಗಿ
    ವಿಜಯಪುರ: ರಾಜ್ಯದಲ್ಲೇ ಮಾದರಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊತ್ತು ಕಾಯಕಲ್ಪ ಪ್ರಶಸ್ತಿ ಕಂಡ ಜಿಲ್ಲಾಸ್ಪತ್ರೆಯೀಗ ಕರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿದ್ದು, ಹಾಸಿಗೆ ಹೊಂದಿಸಲು ವೈದ್ಯಾಧಿಕಾರಿಗಳು ಹೆಣಗುತ್ತಿದ್ದಾರೆ !

    ಬಹುಶಃ ಆಸ್ಪತ್ರೆ ಇತಿಹಾಸದಲ್ಲೇ ಇಂಥದ್ದೊಂದು ಸನ್ನಿವೇಶ ಎದುರಾಗಿರಲಿಲ್ಲ ಎನ್ನುತ್ತಿದ್ದಾರೆ ಅಲ್ಲಿನ ಸಿಬ್ಬಂದಿ. ಕಳೆದೊಂದು ವಾರದಿಂದ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆ ಸಮಸ್ಯೆ ತೀವ್ರವಾಗಿದೆ. ದಿನಂಪ್ರತಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಸೋಂಕಿತರು ಆಗಮಿಸುತ್ತಿದ್ದಾರೆ. ಹೀಗಾಗಿ ಹಾಸಿಗೆ ಹೈರಾಣ ತಾಳದೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.

    ಹಾಸಿಗೆ ವಿವರ
    ಮೇ 11ರ ಅಂಕಿ ಅಂಶಗಳ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ ಹಂಚಿಕೆ ಮಾಡಲಾಗಿದ್ದ 208 ಹಾಸಿಗೆಗಳು ಭರ್ತಿಯಾಗಿದ್ದವು. 184 ಸಾಮಾನ್ಯ ಹಾಸಿಗೆ, 184 ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆ ಹಾಗೂ 24 ಐಸಿಯು ಸಹಿತ, 10 ನಾನ್ ವೆಂಟಿಲೇಟರ್ ಮತ್ತು 14 ವೆಂಟಿಲೇಟರ್ ಸೌಲಭ್ಯಗಳುಳ್ಳ ಹಾಸಿಗೆಗಳಿದ್ದು ಎಲ್ಲವೂ ಭರ್ತಿಯಾಗಿದ್ದವು. ಕಳೆದೊಂದು ವಾರದಿಂದ ಇದೇ ಚಿತ್ರಣ ಕಂಡು ಬರುತ್ತಿದ್ದು, ಸೋಂಕಿತರ ಸಂಬಂಧಿಗಳು ಹಾಸಿಗೆಗಾಗಿ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹಾಸಿಗೆ ಖಾಲಿಯಾಗುತ್ತಿದ್ದಂತೆ ತಮಗೆ ಅವಕಾಶ ಕಲ್ಪಿಸುವಂತೆ ದುಂಬಾಲು ಬೀಳುತ್ತಿದ್ದಾರದಲ್ಲದೆ, ಅದಕ್ಕಾಗಿ ಗಣ್ಯರಿಂದ ಶಿಫಾರಸು ಮಾಡಿಸುತ್ತಿದ್ದಾರೆ.

    ಖಾಸಗಿಗೆ ಶಿಫಾರಸು
    ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದ್ದು, ಇತ್ತ ಖಾಸಗಿ ಆಸ್ಪತ್ರೆಯವರು ಶಿಫಾರಸು ಪಡೆದು ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ತಮ್ಮಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿಲ್ಲ ವೆಂದು ನೆಪ ಹೇಳಿ ಸಾಗಹಾಕುತ್ತಿರುವುದು ಕಂಡು ಬಂದಿದೆ. ಹೀಗಾಗಿ ರೋಗಿಗಳಿಗೆ ಹಾಸಿಗೆ ಸಿಕ್ಕರೆ ವೆಂಟಿಲೇಟರ್ ಇಲ್ಲ, ವೆಂಟಿಲೇಟರ್ ಸಿಕ್ಕರೆ ಹಾಸಿಗೆ ಸೌಲಭ್ಯವಿಲ್ಲ ಎಂಬಂತಾಗಿದೆ. ಹಣ ಕೊಟ್ಟರೂ ವೆಂಟಿಲೇಟರ್ ಸೌಲಭ್ಯ ಸಿಗುತ್ತಿಲ್ಲವೆಂದು ಹಿರೇಮಸಳಿ ಗ್ರಾಮದ ಶ್ರೀಶೈಲ ಚಾಂದಕವಟೆ ಅಲವತ್ತುಕೊಳ್ಳುತ್ತಾರೆ.

    ಕರೆ ಸ್ವೀಕರಿಸದ ಅಧಿಕಾರಿಗಳು
    ಜಿಲ್ಲಾಡಳಿತ 1077 ಸಹಾಯವಾಣಿ ಸ್ಥಾಪಿಸಿದ್ದು, ಕರೆ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ ನಾಲ್ವರು ಅಧಿಕಾರಿಗಳ ತಂಡ ರಚಿಸಿದ್ದಾರೆ. ಅದರಲ್ಲಿ ಡಾ.ಈರಣ್ಣ ಧಾರವಾಡಕರ (ಮೊ.9480312394), ಡಾ.ರಾಜೇಶ್ವರಿ ಗೋಲಗೇರಿ (ಮೊ.9902036333), ಡಾ.ವಿಜಯಕುಮಾರ ಆಜೂರ (ಮೊ.9686885762) ಹಾಗೂ ರಾಕೇಶ ಎಚ್.ಡಿ (ಮೊ.8971221368) ಅವರಿದ್ದು, ಹಾಸಿಗೆ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆದರೆ, ಸದರಿ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲವೆಂದು ಸಾಮಾಜಿಕ ಹೋರಾಟಗಾರ ರಮೇಶ ಬಿದನೂರ ಆರೋಪಿಸುತ್ತಾರೆ.

    ಒಟ್ಟಿನಲ್ಲಿ ಜಿಲ್ಲಾಸ್ಪತ್ರೆಯೂ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹೈರಾಣ ಹೆಚ್ಚಾಗಿದ್ದು, ಸೋಂಕಿತರು ನರಕಯಾತನೆ ಅನುಭವಿಸುವಂತಾಗಿದೆ.

    ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಗುಣಮುಖರಾದರೂ ಕೆಲವರು ಮನೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗಿಯ ಸ್ಥಿತಿಗತಿ ಪರಿಶೀಲಿಸಿ ಗುಣಮುಖರಾದವರನ್ನು ಮನೆಗೆ ಹೋಗುವಂತೆ ವೈದ್ಯರು ಮನವೊಲಿಸುತ್ತಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರಿಗೆ ಅನುಕೂಲ ಮಾಡಿಕೊಡಲು ಮನವರಿಕೆ ಮಾಡಲಾಗುತ್ತಿದೆ.
    ಪಿ.ಸುನೀಲ್‌ಕುಮಾರ್, ಜಿಲ್ಲಾಧಿಕಾರಿ

    ಹಾಸಿಗೆ ನಿರ್ವಹಣೆ ತಂಡದಲ್ಲಿರುವ ಅಧಿಕಾರಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ಸಿಗುತ್ತಿಲ್ಲ. ಬೆಡ್ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ದೂರವಾಣಿ ಕರೆಗೂ ಸ್ಪಂದಿಸಲ್ಲ. ಹೀಗಾಗಿ ಜಿಲ್ಲಾಡಳಿತ ಕಾಲ್ ಸೆಂಟರ್ ಸ್ಥಾಪಿಸಿ ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು. ಪ್ರತಿ ದಿನ ಬೆಡ್ ಮತ್ತು ರೋಗಿಗಳ ವಿವರ ಪ್ರಕಟಪಡಿಸಬೇಕು.
    ರಮೇಶ ಬಿದನೂರ, ರಾಜಕೀಯ ಧುರೀಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts