More

    ಮೊದಲ ದಿನವೇ ಬೇಕಾಬಿಟ್ಟಿ ಓಡಾಟ!

    ವಿಜಯಪುರ: ರಾಜ್ಯ ಸರ್ಕಾರ ಲಾಕ್‌ಡೌನ್ ಭಾಗಶಃ ಸಡಿಲಿಕೆ ಮಾಡಿ ಆದೇಶಿಸಿದ ಮೊದಲ ದಿನವೇ ಗುಮ್ಮಟ ನಗರಿಯಲ್ಲಿ ಜನರ ಬೇಕಾಬಿಟ್ಟಿ ಓಡಾಟ ಹೆಚ್ಚಿತಲ್ಲದೆ ಮಾಸ್ಕ್ ಮತ್ತು ಸಾಮಾಜಿಕ ಅಂತರದಂಥ ಮಾರ್ಗಸೂಚಿಗಳು ಸಂಪೂರ್ಣ ಮಾಯವಾಗಿದ್ದವು.

    ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನ ಬೆಳಗ್ಗೆಯಿಂದಲೇ ದೈನಂದಿನ ಕಾರ್ಯಗಳಿಗಾಗಿ ರಸ್ತೆಗಿಳಿದಿದ್ದರು. ಅಂಗಡಿ ಮುಂಗಟ್ಟುಗಳ ಮುಂದೆ ಜನದಟ್ಟಣೆ ಹೆಚ್ಚಾಗಿತ್ತು. ತರಕಾರಿ, ಹಣ್ಣು-ಹಂಪಲು, ಮೀನು ಮತ್ತು ಮಾಂಸ ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಕಂಡು ಬಂತು. ಮದ್ಯ ಮಾರಾಟ, ದಿನಸಿ ವಹಿವಾಟು ಜೋರಾಗಿತ್ತು.

    ಮಾರುಕಟ್ಟೆಯಲ್ಲಿ ಜನದಟ್ಟಣೆ
    ನಗರದ ಹೃದಯ ಭಾಗದಲ್ಲಿರುವ ಕೆಸಿ ಮಾರುಕಟ್ಟೆ, ಲಾಲಬಹಾದ್ದೂರ್ ಶಾಸ್ತ್ರೀ ಮಾರುಕಟ್ಟೆ, ಆಶ್ರಮ ರಸ್ತೆ, ರಾಮಮಂದಿರ ರಸ್ತೆ, ಬಾಗಲಕೋಟೆ ರಸ್ತೆ, ಸ್ಟೇಶನ್ ರಸ್ತೆ, ಇಂಡಿ ರಸ್ತೆ, ಇಟಗಿ ಪೆಟ್ರೋಲ್ ಪಂಪ್, ವಜ್ರಹನುಮಾನ ದೇವಸ್ಥಾನ, ಇಬ್ರಾಹಿಂಪುರ ರೈಲ್ವೆ ಗೇಟ್ ಸೇರಿ ವಿವಿಧ ಕಡೆಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಹೋಟೆಲ್‌ಗಳು, ಮಾಲ್‌ಗಳು, ರೇಷನ್ ಅಂಗಡಿ, ಪೆಟ್ರೋಲ್ ಬಂಕ್‌ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

    ನವಬಾಗ್ ರಸ್ತೆಯಲ್ಲಿ ಕಾಯಿಪಲ್ಲೆ, ಹೂ, ಹಣ್ಣು ಹಾಗೂ ಮಾಂಸದ ಮಾರಾಟ ಜೋರಾಗಿದ್ದು ಜಾತ್ರೆ ವಾತಾವರಣದಂತೆ ಕಂಗೊಳಿಸಿತು. ರಸ್ತೆ ಇಕ್ಕೆಲಗಳನ್ನು ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

    ನಿಯಮ ಉಲ್ಲಂಘನೆ
    ಆಟೋಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಇದ್ದರೂ ನಾಲ್ಕೈದು ಜನರನ್ನು ಕೂರಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬೈಕ್ ಸವಾರರು, ಪಾದಚಾರಿಗಳು ಮಾಸ್ಕ್ ಧರಿಸದೇ ಓಡಾಡುತ್ತಿದ್ದರೂ ಪೊಲೀಸರು ಕಂಡು ಕಾಣದಂತಿದ್ದರು. ಅಲ್ಲೊಂದು ಇಲ್ಲೊಂದು ದಂಡ ವಿಧಿಸುವ ಪ್ರಕ್ರಿಯೆ ಮಾಮೂಲಾಗಿತ್ತಲ್ಲದೆ, ಜಾಗೃತಿ ಮೂಡಿಸುವ ಕಾರ್ಯವಾಗಲಿಲ್ಲ. ಇನ್ನು ಪರಸ್ಪರ ಅಂತರ ಎಂಬ ಪದಕ್ಕೆ ಅರ್ಥವೇ ಇರಲಿಲ್ಲ. ಮಧ್ಯಾಹ್ನ 2 ಗಂಟೆಯ ನಂತರೂ ಕೆಲವು ಅಂಗಡಿ ಮುಂಗಟ್ಟುಗಳು ತೆರೆದುಕೊಂಡೇ ಇದ್ದವು.

    ಇನ್ನು ಅಂತರ ಜಿಲ್ಲೆಗಳಿಗೆ ತೆರಳಲು ಅವಕಾಶ ಕಲ್ಪಿಸಿದ ಹಿನ್ನೆಲೆ ಖಾಸಗಿ ವಾಹನಗಳ ಸಂಚಾರ ಅಧಿಕವಾಗಿತ್ತು. ನಿಗದಿತ ಪ್ರಯಾಣಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಕಂಡು ಬಂತು.

    ಒಟ್ಟಿನಲ್ಲಿ ಗುಮ್ಮಟ ನಗರಿಯಲ್ಲಿ ಮೊದಲ ದಿನವೇ ಲಾಕ್ ಡೌನ್ ಸಂಪೂರ್ಣ ತೆರವಾದ ವಾತಾವರಣ ಸೃಷ್ಟಿಯಾಗಿದ್ದು ಜನ ಮಾನಸಿಕವಾಗಿ ಅನ್‌ಲಾಕ್ ಸ್ಥಿತಿಗೆ ತೆರೆದುಕೊಂಡಂತಿತ್ತು.

    ಕ್ಷೌರದಂಗಡಿಗೆ ದಾಂಗುಡಿ
    ಕಳೆದ ಒಂದೂವರೆ ತಿಂಗಳಿಂದ ಕ್ಷೌರದಂಗಡಿಗಳು ಬಂದ್ ಇದ್ದ ಕಾರಣ ಗಡ್ಡ ಹಾಗೂ ಜಟಾಧಾರಿಗಳ ಸಂಖ್ಯೆ ಹೆಚ್ಚಾಗಿತ್ತು. ಹೀಗಾಗಿ ಲಾಕ್‌ಡೌನ್ ಸಡಿಲಿಕೆಯಾದ ಮೊದಲ ದಿನವೇ ಕ್ಷೌರದಂಗಡಿಗಳಿಗೆ ಜನ ದಾಂಗುಡಿ ಇಟ್ಟರು. ಬೆಳಗ್ಗೆಯಿಂದಲೇ ಕ್ಷೌರದಂಗಡಿಗಳ ಮುಂದೆ ಪಾಳಿ ಇತ್ತು. ಮಧ್ಯಾಹ್ನ 2 ರ ನಂತರವೂ ಕೆಲ ಅಂಗಡಿಗಳಲ್ಲಿ ಹೊರಗಿನ ಬಾಗಿಲು ಬಂದ್ ಮಾಡಿ ಒಳಗಡೆ ಕ್ಷೌರ ಮಾಡುತ್ತಿರುವುದು ಕಂಡು ಬಂತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts