ವಿಜಯಪುರ: ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರದೇ ಇರುವುದು ಇದಕ್ಕೆ ಸೂಕ್ತ ಮದ್ದು ಎಂದು ರಾಜ್ಯದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ನೂತನ ಪ್ರವಾಸಿ ಮಂದಿರಕ್ಕೆ ಭಾನುವಾರ ಭೇಟಿ ನೀಡಿದ ಅವರು, ವಿಶ್ವದಾದ್ಯಂತ ಮಹಾಮಾರಿ ಕರೊನಾದಿಂದಾಗಿ ಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. 17 ಲಕ್ಷಕ್ಕೂ ಹೆಚ್ಚು ಜನ ಕೋವಿಡ್-19 ಸೋಂಕಿತರಾಗಿದ್ದಾರೆ. ಅದರಂತೆ ರಾಜ್ಯದಲ್ಲಿಯೂ 250 ಸೋಂಕಿತರು ಇದ್ದು, 6 ಜನ ಸಾವನ್ನಪ್ಪಿದ್ದಾರೆ. ದಿನೆ ದಿನೇ ಕರೊನಾ ವೈರಸ್‌ನ ವಿಸ್ತಾರ ಹೆಚ್ಚಾಗುತ್ತಿದ್ದು, ಇದರ ಸಂಪೂರ್ಣ ನಿಯಂತ್ರಣಕ್ಕೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಿಂದ ಹೊರಗೆ ಬರದೇ ಇರುವುದು ಇದಕ್ಕೆ ಸೂಕ್ತ ಮದ್ದು ಎಂದು ತಿಳಿಸಿದ್ದಾರೆ.
ಅಧಿಕಾರಿ-ಸಿಬ್ಬಂದಿಯೊಂದಿಗೆ ಸಹಕರಿಸಿ
ಜಿಲ್ಲೆಗೆ ವಿದೇಶ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಅನೇಕ ಜನ ಬಂದಿದ್ದು, ಅವರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು ತಮ್ಮ ಪ್ರಾಣದ ಹಂಗು ತೊರೆದು ಸಾರ್ವಜನಿಕರ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಂತಹ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ದುರ್ನಡತೆಯಿಂದ ನಡೆದುಕೊಳ್ಳದೆ, ಎಲ್ಲ ರೀತಿಯಿಂದ ಸಹಕಾರ ನೀಡಬೇಕು. ಲಾಕ್‌ಡೌನ್ ನಿಯಮ ಪಾಲಿಸಿ ಮನೆಯಿಂದ ಹೊರಬರದಂತೆ ಮನವಿ ಮಾಡಿದ ಅವರು, ಹೆಚ್ಚಿನ ಕಣ್ಗಾವಲು ವಹಿಸುವ ಉದ್ದೇಶದೊಂದಿಗೆ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಮುಜುಗರ ಬೇಡ
ಕರೊನಾ ತೀವ್ರ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ರಾಜ್ಯಗಳಿಂದ ಆಗಮಿಸಿದವರು ತಮ್ಮ ತಮ್ಮ ಕುಟುಂಬದ ಹಾಗೂ ಸಮಾಜದ ಹಿತದೃಷ್ಟಿಯಿಂದ ಬಂದಿರುವ ಬಗ್ಗೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿದ ಡಿಸಿಎಂ ಕಾರಜೋಳ ಅವರು, ಯಾವುದೇ ರೀತಿಯಲ್ಲಿ ಮುಜುಗರ ಪಡದೇ ಸ್ವಯಂ ಪ್ರೇರಣೆಯಿಂದ ವರದಿ ಮಾಡಿಕೊಳ್ಳುವುದರ ಜೊತೆಗೆ ವೈದ್ಯಕೀಯ ತಪಾಸಣೆಗೂ ಮುಂದೆ ಬರುವಂತೆ ಮನವಿ ಮಾಡಿದ್ದಾರೆ.
ದಾನಿಗಳಿಗೆ ಅಭಿನಂದನೆ
ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎಲ್ಲರೂ ಎದುರಿಸುತ್ತಿದ್ದು, ಕರೊನಾ ನಿಯಂತ್ರಣ ದಿಸೆಯಲ್ಲಿ ಹೆಚ್ಚು ಹೆಚ್ಚು ದಾನಿಗಳು ಮುಂದೆ ಬರುವಂತೆ ಮನವಿ ಮಾಡಿದ ಕಾರಜೋಳ ಅವರು, ಲೋಕೋಪಯೋಗಿ ಗುತ್ತಿಗೆದಾರರು 50.7 ಲಕ್ಷ ರೂ.ಗಳ ದೇಣಿಗೆಯನ್ನು ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒದಗಿಸಿರುವುದಕ್ಕಾಗಿ ಎಲ್ಲ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಅದರಂತೆ ಜೈನ ಸಮುದಾಯದವರು ಆಹಾರ ಧಾನ್ಯ ಮತ್ತು ವಿವಿಧ ದಾನಿಗಳು ವಾಹನಗಳಿಗಾಗಿ ಇಂಧನ ವೆಚ್ಚದ ದೇಣಿಗೆಯನ್ನೂ ನೀಡಿ ಸಹಕರಿಸಿದ್ದಕ್ಕೆ ವಯಕ್ತಿಕವಾಗಿ ಮತ್ತು ಸರ್ಕಾರದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಗುತ್ತಿಗೆದಾರರಿಂದ ಚೆಕ್‌ನ್ನು ಸ್ವೀಕರಿಸಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಹಸ್ತಾಂತರಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ್ ಅರಿಸಿದ್ಧಿ ಮತ್ತಿತರರಿದ್ದರು.