More

    ಕ್ರಯೊಜಿನ್ ಕಂಪನಿಗೆ ನೋಟಿಸ್ ಜಾರಿ

    ಪರಶುರಾಮ ಭಾಸಗಿ ವಿಜಯಪುರ

    ಗಡಿ ಜಿಲ್ಲೆಯಲ್ಲಿ ಅನಧಿಕೃತ ಗೊಬ್ಬರ ಹಾಗೂ ಕೀಟನಾಶಕಗಳ ಹಾವಳಿ ಹೆಚ್ಚಿದ್ದು, ಸಾವಯವ ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಾಟದ ಕಂಪನಿಯೊಂದರ ವಿರುದ್ಧ ಅಧಿಕಾರಿಗಳು ಚಾಟಿ ಬೀಸಿದ್ದಾರೆ.
    ಜಿಲ್ಲೆಯ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡು ಕನ್ನಾಳ ಕ್ರಾಸ್ ಬಳಿಯ ಕ್ರಯೋಜಿನ್ ಅಗ್ರಿ ಆಂಡ್ ಬಯೋಟೆಕ್ ಪ್ರೈವೆಟ್ ಲಿಮಿಟೆಡ್‌ನ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಗೊಬ್ಬರ ದೊರಕಿದೆ. ಕೆಲ ದಿನಗಳ ಹಿಂದೆ ಏಕಾಏಕಿ ದಾಳಿ ನಡೆಸಿದ ಕೃಷಿ ಅಧಿಕಾರಿಗಳ ತಂಡ ಅಲ್ಲಿನ ಗೊಬ್ಬರದ ಮಾದರಿ ಪರೀಕ್ಷಿಸಿದಾಗ ಗುಣಮಟ್ಟದ ಕೊರತೆ ಕಂಡು ಬಂದಿದೆ.

    ನೋಟಿಸ್ ಜಾರಿ

    ಗೋದಾಮಿನಲ್ಲಿ ಮೂರು ಗೊಬ್ಬರದ ಮಾದರಿ ಪಡೆದ ಅಧಿಕಾರಿಗಳು ಒಂದು ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು ಇನ್ನೊಂದು ಮಾದರಿಯನ್ನು ಬೆಂಗಳೂರಿನ ಮುಖ್ಯ ಕಚೇರಿಗೆ ರವಾನಿಸಿದ್ದಾಗಿ ತಿಳಿಸಿದ್ದಾರೆ. ಸದರಿ ಕಂಪನಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಮಧ್ಯದ ರಾಜ್ಯ ಹೆದ್ದಾರಿ ಸಂಖ್ಯೆ 74ರಲ್ಲಿ ಮುಖ್ಯ ಕಚೇರಿ ಹೊಂದಿದ್ದು ವಿಜಯಪುರದಲ್ಲಿ ಕೇವಲ ಗೋದಾಮು ಹೊಂದಿದೆ.
    ಸದರಿ ಗೋದಾಮಿನಿಂದ ಗದಗ, ಬಾಗಲಕೋಟೆ, ಚಿತ್ರದುರ್ಗ ಸೇರಿ ವಿವಿಧ ಭಾಗಗಳಿಗೆ ಗೊಬ್ಬರ ಮಾರಾಟವಾಗುತ್ತದೆ. ಜಿಲ್ಲೆಯಲ್ಲಿ ಮಾರಾಟಕ್ಕೆ ಅವಕಾಶವಿಲ್ಲವೆಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಸದರಿ ಗೋದಾಮು ಅನಧಿಕೃತ ವಹಿವಾಟು ನಡೆಸಿದ್ದಾಗಿ ಸ್ಥಳೀಯರು ಆರೋಪಿಸುತ್ತಾರೆ. ಹೀಗಾಗಿ ದಾಳಿ ನಡೆಸಿದ ಅಧಿಕಾರಿಗಳು ಸಮಗ್ರ ಪರಿಶೀಲನೆ ನಡೆಸಲಾಗಿ ಕಳಪೆಮಟ್ಟದ ಗೊಬ್ಬರ ದೊರೆತಿದ್ದು ನೋಟಿಸ್ ಜಾರಿ ಮಾಡಿದ್ದಾರೆ.

    ಪರವಾನಗಿ ಅವಧಿ ಮುಕ್ತಾಯ

    ಸದರಿ ಕಂಪನಿಯ ಪರವಾನಗಿ ಅವಧಿ ಜು. 28, 2020ಕ್ಕೆ ಮುಕ್ತಾಯವಾಗಿದೆ. ಆದರೂ, ಗೊಬ್ಬರ ಸಂಗ್ರಹ ಮತ್ತು ಸಾಗಾಟ ಮುಂದುವರಿದಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಲಾಗಿ ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಮಾಲೀಕರು ತನಿಖೆ ವೇಳೆ ತಿಳಿಸಿದ್ದಾರೆಂದು ಸಮಜಾಯಿಷಿ ನೀಡುತ್ತಾರೆ. ಆದರೆ, ಸಾವಯವದ ಹೆಸರಲ್ಲಿ ಕಳಪೆ ಗೊಬ್ಬರ ಮಾರುವ ಇಂಥ ಕಂಪನಿಗೆ ಪರವಾನಗಿ ನವೀಕರಿಸಬಾರದೆಂಬುದು ಸ್ಥಳೀಯರ ಆಗ್ರಹವಾಗಿದೆ.
    ಒಟ್ಟಿನಲ್ಲಿ ಕ್ರಯೊಜಿನ್ ಕಂಪನಿಯ ಗೊಬ್ಬರವಂತೂ ಕಳಪೆ ಎಂಬುದು ಅಧಿಕಾರಿಗಳಿಂದ ರುಜುವಾತಾಗಿದ್ದು, ಇನ್ನು ವ್ಯಾಪಾರ ವಹಿವಾಟು ಮತ್ತು ಪರವಾನಿಗೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳುವ ಅಗತ್ಯತೆ ಕಂಡು ಬಂದಿದೆ.

    ಜಿಲ್ಲೆಯಲ್ಲಿ 20 ಪ್ರಕರಣ ಪತ್ತೆ

    ಪ್ರಸಕ್ತ ಸಾಲಿನಲ್ಲಿ ಕಳಪೆ ಗೊಬ್ಬರ, ಅನಧಿಕೃತ ಕೀಟನಾಶಕಗಳ ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 20 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ 300ಕ್ಕೂ ಅಧಿಕ ಫರ್ಟಿಲೈಜರ್ಸ್ ಹಾಗೂ 400ಕ್ಕೂ ಅಧಿಕ ಕೀಟನಾಶಕಗಳ ಮಾರಾಟ ಮಳಿಗೆಗಳಿವೆ. ನಾಲ್ಕು ದಿನದಲ್ಲೇ ನಾಲ್ಕು ಅನಧಿಕೃತ ಗೊಬ್ಬರ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ದಾಸ್ತಾನು ವಶಕ್ಕೆ ಪಡೆಯಲಾಗಿದೆ. ನಕಲಿ ಗೊಬ್ಬರ ತಯಾರಿಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇನ್ನುಳಿದ ಮಳಿಗೆಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾಗಿ ಕೃಷಿ ಜಂಟಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ತಿಳಿಸುತ್ತಾರೆ.

    ಕ್ರಯೋಜಿನ್ ಕಂಪನಿ ಬಗ್ಗೆ ತನಿಖೆ ನಡೆಸಲು ಈ ಹಿಂದೆಯೇ ತಾಲೂಕು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ಬಗ್ಗೆ ಸಾಮಾನ್ಯ ಸಭೆಯಲ್ಲೂ ಚರ್ಚಿಸಲಾಗಿತ್ತು. ಆದರೆ ಅಧಿಕಾರಿಗಳು ಮಾತ್ರ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೇಳಿದರೆ ಸದರಿ ಕಂಪನಿ ನಮ್ಮ ಜಿಲ್ಲೆಯಲ್ಲಿ ಗೊಬ್ಬರ ಮಾರಾಟ ಮಾಡಲ್ಲ ಎನ್ನುತ್ತಾರೆ. ಆದರೆ, ಕಳಪೆ ಗೊಬ್ಬರ ಎಲ್ಲಿ ಮಾರಿದರೂ ಅದು ಅನ್ಯಾಯವೇ. ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿದ್ದಾರೆ.
    ಕಾಳಪ್ಪ ಬೆಳ್ಳುಂಡಗಿ, ತಾ.ಪಂ. ಅಧ್ಯಕ್ಷ ವಿಜಯಪುರ

    ದಾಳಿ ವೇಳೆ ಗೊಬ್ಬರ ಕಳಪೆ ಎಂಬುದು ಸಾಬೀತಾಗಿದೆ. ಈಗಾಗಲೇ ಕಂಪನಿಗೆ ನೋಟಿಸ್ ನೀಡಲಾಗಿದೆ. ಇನ್ನುಳಿದಂತೆ ಪರವಾನಗಿಗೆ ಸಂಬಂಧಿಸಿದಂತೆ ದಾಖಲೆಗಳಿವೆ. ಪರವಾನಗಿ ಅವಧಿ ಮುಗಿದಿದ್ದು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾಗಿ ಮಾಲೀಕರು ತಿಳಿಸಿದ್ದಾರೆ. ಒಂದು ಮಾದರಿ ಬೆಂಗಳೂರಿಗೆ ಕಳುಹಿಸಲಾಗಿದ್ದು ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    ರಾಜಶೇಖರ ವಿಲಿಯಮ್ಸ್, ಕೃಷಿ ಜಂಟಿ ನಿರ್ದೇಶಕ, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts