More

    ಹೊಲದಲ್ಲೇ ಕೊಳೆಯುತ್ತಿದೆ ಈರುಳ್ಳಿ..!

    ಹೀರಾನಾಯ್ಕ ಟಿ.
    ವಿಜಯಪುರ: ಕಳೆದ ಎರಡು ವರ್ಷಗಳ ಹಿಂದೆ ಉತ್ತಮ ದರ ಪಡೆದಿದ್ದ ಈರುಳ್ಳಿ ಬೆಳೆಗಾರರು ಒಂದೆಡೆ ಲಕ್ಷಾಧಿಪತಿಗಳಾದರೆ, ಈ ಬಾರಿ ಹಾಕಿದ ಬಂಡವಾಳ ಕೈಗೆ ಸೇರದೆ ಇರುವುದರಿಂದ ರೈತರು ಕಣ್ಣೀರು ಹಾಕುವಂತಾಗಿದೆ.

    ರಾಜ್ಯದ ವಿವಿಧೆಡೆ ಕಳೆದ ಸತತ ಮಳೆಯಿಂದಾಗಿ ಹೊಲದಲ್ಲಿರುವ ಈರುಳ್ಳಿ ಕೊಳೆಯುತ್ತಿದೆ. ರೋಗಬಾಧೆ ಹೆಚ್ಚಿದ ಪರಿಣಾಮ ರೈತರು ಈರುಳ್ಳಿ ಕಟಾವು ಮಾಡಲು ಆಗುತ್ತಿಲ್ಲ.

    ನೆಲದಲ್ಲೇ ಕಚ್ಚಿದ ಬೆಳೆ
    ಒಂದೆಡೆ ಸತತ ಮಳೆಗೆ ಈರುಳ್ಳಿಗೆ ರೋಗಬಾಧೆ ಹೆಚ್ಚಾದರೆ ಮತ್ತೊಂದೆಡೆ ಸೂಕ್ತ ಬೆಲೆ ಸಿಗದೆ ಈರುಳ್ಳಿ ನೆಲದಲ್ಲೇ ಕಚ್ಚಿದೆ. ಇನ್ನು ಕೆಲವರು ಈರುಳ್ಳಿ ಕಟಾವು ಮಾಡಿದ್ದರೂ ಮಾರಾಟ ಮಾಡಲಾಗದೇ ಪರಿತಪಿಸುತ್ತಿದ್ದಾರೆ. ಕಳೆದ ವರ್ಷವೂ ಲಾಕ್‌ಡೌನ್‌ನಿಂದಾಗಿ ರೈತರಿಗೆ ಸರಿಯಾದ ದರ ಸಿಗಲಿಲ್ಲ. ಈ ಬಾರಿಯೂ ಅದೇ ಗತಿ ಆಗಿದೆ. ಉತ್ತಮ ದರ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದ ರೈತರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಹಾಕಿದ ಈರುಳ್ಳಿ ಬೆಳೆ ಇನ್ನು ಕಟಾವು ಮಾಡದೆ ಹಾಗೇ ಬಿಟ್ಟಿದ್ದಾರೆ.

    ಆದಾಯಕ್ಕಿಂತ ಖರ್ಚು ಅಧಿಕ
    ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿ, ಅದನ್ನು ಕಟಾವು ಮಾಡುವುವಷ್ಟರಲ್ಲಿ 45 ಸಾವಿರ ರೂ. ಖರ್ಚು ಬರುತ್ತದೆ. ಕೆಜಿ ಈರುಳ್ಳಿ ಬಿತ್ತನೆ ಬೀಜ 1400 ರೂ. ಇದೆ. ಒಂದು ಚೀಲ ಈರುಳ್ಳಿ ಬೆಳೆಯಲು 800 ರೂ. ವರೆಗೆ ಖರ್ಚು ಆಗುತ್ತದೆ. ಆದರೆ ಇದೀಗ ಕ್ವಿಂಟಾಲ್ ಈರುಳ್ಳಿಗೆ 800 ರೂ. ದರ ಇದೆ. ಇದರಿಂದಾಗಿ ರೈತರಿಗೆ ಸಂಕಷ್ಟ ಎದುರಾಗಿದೆ. ಇನ್ನು ಲಾಕ್‌ಡೌನ್‌ನಿಂದ ಅಗಿ ಕಟಾವು ಮಾಡಲು ಕೂಲಿಯಾಳುಗಳೇ ಬರುತ್ತಿಲ್ಲ. ಇನ್ನು ಸೂಕ್ತ ಬೆಲೆಯೂ ಇಲ್ಲದೆ ಇರುವುದರಿಂದ ಕಟಾವು ಮಾಡಲಾಗದೆ ಹೊಲದಲ್ಲೇ ಈರುಳ್ಳಿ ನೆಲ ಕಚ್ಚಿದೆ.

    ಬಾರದ ಖರೀದಿದಾರರು
    ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 200 ರೂ. ನಿಂದ 1200 ರೂ. ವರೆಗೆ ದರ ಇದೆ. ಮಹಾರಾಷ್ಟ್ರದ ಜತ್ತ್, ಸಾಂಗ್ಲಿ, ಮಿರಜ್ ಇತರ ಕಡೆಗಳಿಂದ ಖರೀದಿದಾರರು ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಈರುಳ್ಳಿ ಖರೀದಿಗೆ ಬರುತ್ತಾರೆ. ಆದರೆ ಲಾಕ್‌ಡೌನ್‌ನಿಂದ ಇನ್ನೂ ಚೇತರಿಸಿಕೊಳ್ಳದ ಖರೀದಿದಾರರು ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ಆದರೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ದಲ್ಲಾಳಿಗಳು ಕೆಜಿಗೆ 25 ರೂ. ನಿಂದ 30 ರೂ. ವರೆಗೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

    ದಾಖಲೆ ಬರೆದಿದ್ದ ವಿಜಯಪುರ ಎಪಿಎಂಸಿ
    ಕಳೆದ ಎರಡು ವರ್ಷಗಳ ಹಿಂದೆ ಈರುಳ್ಳಿ ದರ ಗಗನಕ್ಕೇರಿತ್ತು. ವಿಜಯಪುರ ಎಪಿಎಂಸಿಯಲ್ಲಿ ಕ್ವಿಂಟಾಲ್ ಈರುಳ್ಳಿಗೆ 20 ಸಾವಿರ ರೂ. ದರ ದಾಟಿತ್ತು. ಕೆಜಿಗೆ 200 ರೂ. ವರೆಗೆ ಮಾರಾಟವಾಗಿತ್ತು. ರಾಜ್ಯದಲ್ಲೇ ವಿಜಯಪುರ ಸಾರ್ವಕಾಲಿಕ ದಾಖಲೆ ಬರೆದಿತ್ತು. ಕಳೆದ ವಾರವಷ್ಟೇ ಕೆಜಿ ಈರುಳ್ಳಿ 15 ರೂ. ನಿಂದ 20 ರೂ. ದರ ಇತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 25-30 ರೂ. ದರ ಇದೆ. ಆದರೆ ಅದರು ನೇರವಾಗಿ ರೈತರಿಗೆ ಲಾಭ ಆಗುತ್ತಿಲ್ಲ.

    ರೋಗ ನಿಯಂತ್ರಣ ಹೇಗೆ ?
    ಮಳೆಯಿಂದಾಗಿ ಈರುಳ್ಳಿ ಬೆಳೆಗಳಿಗೆ ರೋಗಬಾಧೆ ಹೆಚ್ಚಾಗಿ ನೆಲಕಚ್ಚಿದೆ. ಅದಕ್ಕೆ ಕೃಷಿ ವಿಜ್ಞಾನಿಗಳ ತಂಡ ವಿಜಯಪುರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ರೋಗ ತಡೆಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.

    ರೋಗ ಹತೋಟಿಗೆ ಪ್ರೊಫಿಕೊನಜೋಲ್ ಮತ್ತು ಡೈೆನ್‌ಕೊನಜೋಲ್ ಅಥವಾ ಡೈಫಿನ್‌ಕೊನಜೋಲ್ ಶಿಲೀಂದ್ರನಾಶಕ ಅಥವಾ ಹೆಕ್ಜಾಕೊನ್‌ಜೋಲ್ ಔಷಧವನ್ನು ಪ್ರತಿ ಲೀಟರ್ ನೀರಿಗೆ 1 ಮಿ.ಲೀ ನಂತೆ ಹಾಕಿ ಸಸಿ ಚೆನ್ನಾಗಿ ತೊಯ್ಯುವಂತೆ ಸಿಂಪಡಣೆ ಮಾಡಬೇಕು. ಶೇ 1.0 ರ ಪೊಟ್ಯಾಸಿಯಂ ನೈಟ್ರೇಟ್ ನೀಡಬೇಕು ಅಥವಾ ಶೇ. 1 ರ 19:19:19 ಸಿಂಪಡಿಸಬೇಕು ಎಂದು ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸುತ್ತಾರೆ.

    ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಬೆಲೆ ಇಲ್ಲದೆ ರೈತರು ಪರಿತಪಿಸಿದ್ದರು. ಈ ಬಾರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸತತ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ರೋಗಬಾಧೆ ಕಾಡುತ್ತಿದೆ.
    ರಾಜಶೇಖರ ಚನ್ನಬಸಪ್ಪ ಗಂಗಶೆಟ್ಟಿ, ಹಡಗಲಿ ರೈತ
    ವಿಜಯಪುರ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts